ADVERTISEMENT

ಲಲಿತ ಕಲೆಗಳ ಸಡಗರ

ಪ್ರೊ.ಮೈ.ವಿ.ಸು
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST
ಲಲಿತ ಕಲೆಗಳ ಸಡಗರ
ಲಲಿತ ಕಲೆಗಳ ಸಡಗರ   

ಬೆಂಗಳೂರು ಲಲಿತಕಲಾ ಪರಿಷತ್‌ನ 750ನೇ ಕಾರ್ಯಕ್ರಮದಲ್ಲಿ ಹಾಡಿದ ಆರ್.ಕೆ. ಪದ್ಮನಾಭ ಸುಪರಿಚಿತರು.  `ಸರಸೀ ವರ್ಣ~ದಿಂದ ಪ್ರಾರಂಭಿಸಿ, ಗಂಭೀರ ಕೃತಿ  ಶ್ರೀವರಲಕ್ಷ್ಮೀ ತೆಗೆದುಕೊಂಡರು. `ರಾಮ ಎಂಬ~ ಒಂದು ಅರ್ಥಪೂರ್ಣ ದೇವರನಾಮ. `ಮಾಕೇಲರಾ~  ಗತ ಮಧುರ ಸ್ಮೃತಿಗಳನ್ನು ತಂದಿತು. 

ಪ್ರಧಾನವಾಗಿ ವಿಸ್ತರಿಸಿದ ಕೋಸಲ 71ನೇ ಮೇಳಕರ್ತ ರಾಗ. ಮಂದ್ರದಿಂದ ಪ್ರಾರಂಭಿಸಿ, ಕ್ರಮೇಣ ಮಧ್ಯಸ್ಥಾಯಿಗೆ ಬಂದು, ತಾರಸ್ಥಾಯಿಯಲ್ಲಿ ಸಂಚರಿಸಿ, ರಾಗಕ್ಕೆ ಪೂರ್ಣತ್ವ ನೀಡಿದರು.

ತಮ್ಮ ಸ್ವಂತ ರಚನೆ `ವಿಶ್ವವೇ ವೀಣೆ~ಗೆ ನೆರವಲ್ (ವೀಣೆಯ ನುಡಿಸಿದರೆ), ಸ್ವರ ಸೇರಿಸಿ ಭರ್ಜರಿಯಾಗಿ ಹಾಡಿದರು. ನುರಿತ ಪಕ್ಕವಾದ್ಯಗಾರರಾದ ಆರ್.ಕೆ. ಶ್ರೀರಾಂಕುಮಾರ್ ಮತ್ತು ಅರುಣ ಪ್ರಕಾಶ್ ಅವರು ಪಿಟೀಲು, ಮೃದಂಗಗಳಲ್ಲಿ ಒತ್ತಾಸೆ ನೀಡಿದರೆ, ಖಂಜರಿಯಲ್ಲಿ ಜಿ. ಗುರುಪ್ರಸನ್ನ ನೆರವಾದರು.

ಲಾಲಿತ್ಯದ ಲಲಿತ ಸಂಗೀತ
ಮಲ್ಲೆೀಶ್ವರದ ಎಲ್ಲಪ್ಪನ ತೋಟದ ಯುವ ಗೆಳೆಯರ ಕೂಟ `ಗಾರ್ಡನ್ ಯೂತ್ ಫ್ರೆಂಡ್ಸ್ ಅಸೋಸಿಯೇಷನ್~  ತನ್ನ ಆರನೇ ವಾರ್ಷಿಕೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆ, ಧಾರ್ಮಿಕ ಪೂಜೆ, ಮೆರವಣಿಗೆ   ಮುಂತಾದ ವುಗಳನ್ನು ಸಡಗರ, ಸಂಭ್ರಮಗಳಿಂದ ಆಚರಿಸಿತು.

ಇಲ್ಲಿ ಲಲಿತ ಸಂಗೀತ ಹಾಡಿದ ಸ್ನೇಹಲತಾ ಅವರು ಕರ್ನಾಟಕದ ಹರಿದಾಸರುಗಳಲ್ಲದೆ ಸೂರ್‌ದಾಸ್ ಮುಂತಾದ ಸಂತರು ಹಾಗೂ ಕನ್ನಡದ ಪ್ರಸಿದ್ಧ ಕವಿಗಳ ಭಾವಗೀತೆಗಳಿಂದ ಕೇಳುಗರನ್ನು ಸಂತೋಷಗೊಳಿಸಿದರು.

ಜನಪ್ರಿಯ ಪದ  `ನಮ್ಮಮ್ಮ ಶಾರದೆ~ಯಿಂದ ಶುಭವಾಗಿ ಗಾಯನ ಪ್ರಾರಂಭಿಸಿ  `ಶ್ರೀಮನ್ ನಾರಾಯಣ~ದಿಂದ ಮುಂದುವರೆಸಿದರು.

ದಾಸರ  `ರಂಗ ಬಂದ ಮನೆಗೆ~  ಮತ್ತು  `ಗೋವಿಂದ ನಿನ್ನಯ ನಾಮವೆ ಚೆಂದ~ ಎರಡೂ ಕೇಳುಗರಿಗೆ ಎಂದೂ ಪ್ರಿಯವಾದ ದೇವರನಾಮಗಳು. `ಹೇ ಗೋವಿಂದ, ಗೋವರ್ಧನ ಗಿರಿಧಾರಿ, ಬೃಂದಾವನಕೆ ಹಾಲನು ಮಾರಲು~   ಹೀಗೆ ಒಂದಾದ ಮೇಲೊಂದರಂತೆ ಕನ್ನಡ ಕೃತಿಗಳು ಸಭೆಯಲ್ಲಿ ಮಾರ್ದನಿಗೊಂಡವು.

ಪಿಟೀಲಿನಲ್ಲಿ ಟಿ.ಕೆ. ದ್ವಾರಕಾನಾಥ್, ಕೀ ಬೋರ್ಡ್‌ನಲ್ಲಿ ಶ್ರೀನಿವಾಸ್ ಹಾಗೂ ಮೃದಂಗದಲ್ಲಿ ಗಣೇಶ್ ನೆರವಾದರು. ಕಥಕ್‌ನ ಕಂಪು, ಒಡಿಸ್ಸಿಯ ಒನಪು
ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವದಲ್ಲಿ ನಡೆದ ಎರಡೂ ನೃತ್ಯ ಕಾರ್ಯಕ್ರಮಗಳು ಬೆಡಗಿನಿಂದ ಕೂಡಿದ್ದವು.

ಮೊದಲಿಗೆ ಒಡಿಸ್ಸಿ ನೃತ್ಯ ಮಾಡಿದ ಅರುಣಾ ಮೊಹಂತಿ ಅವರ ತಂಡ ಜಗನ್ನಾಥ ಉತ್ಸವವನ್ನು ಆಧರಿಸಿದ ನೃತ್ಯ ರೂಪಕ ಆರಿಸಿತು. ರಥೋತ್ಸವದ ಸಿದ್ಧತೆ, ವಿಧಿ-ವಿಧಾನ, ಸಂಭ್ರಮ-ಉತ್ಸಾಹಗಳ ವಿವಿಧ ಆಚರಣೆಗಳನ್ನು ನರ್ತಕರ ಒಂದು ದೊಡ್ಡ ತಂಡವೇ ಮಾಡಿತು. 

ವಂದೇ ಮಾತರಂ ನಲ್ಲಿ ಭಾರತ ಮಾತೆಯಿಂದ ಪ್ರಾರಂಭಿಸಿ ಉತ್ಕಲದ ವೈಭವವನ್ನು ಕಣ್ಣಿಗೆ ಕಟ್ಟಿದರು. ಧ್ವನಿಮುದ್ರಿತ ಸಂಗೀತ ಪದೇ ಪದೇ ಕೆಟ್ಟು ರಸಭಂಗವಾಗುತ್ತಿತ್ತು. ನೃತ್ಯಕ್ಕಿಂತ ನಾಟಕ, ಮೈಮ್‌ಗಳೇ ಮುಂದಾಗಿದ್ದವು!

ಎರಡನೆಯದಾಗಿ ಕಥಕ್ ಆಧರಿಸಿದ ನತ್ಯ ರೂಪಕಗಳನ್ನು ಮಾಡಿದ  ದೃಷ್ಟಿಕೋನ್ ಡಾನ್ಸ್ ಫೌಂಡೇಷನ್  ಹೊಸ ಆಯಾಮವನ್ನೇ ತೆರೆದಿಟ್ಟಿತು.

ಮನುಷ್ಯನ ಶೋಧ-ತಡಕಾಟಗಳು ನಿರಂತರ! ಈ ವಸ್ತುವಿನ ಕಾವ್ಯಕ್ಕೆ ಮೂರ್ತರೂಪ ಕೊಡುವ ಪ್ರಯತ್ನದಲ್ಲಿ ದೀಪ ಬೆಳಗುತ್ತಾ ಸಾಗಿದ ಕಲಾವಿದರು, ರಭಸದ ಚಕ್ಕರ್‌ಗಳನ್ನು ಹಾಕುತ್ತಾ ವಿವಿಧ ಭಾವಗಳನ್ನು ಬಿಂಬಿಸಿದರು.

ಉಡುಗೆ, ಬೆಳಕು, ಹೆಜ್ಜೆ, ಸಂಗೀತಗಳೆಲ್ಲವೂ ವಸ್ತುವಿಗೆ ಪೂರಕವಾಗಿ ಹೊಮ್ಮಿದ್ದು, ನಿರ್ದೇಶಕಿ ಅದಿತಿ ಮಂಗಳದಾಸ್ ಅವರ ಪ್ರತಿಭೆ, ಅನುಭವಗಳಿಗೆ ಸಾಕ್ಷಿಯಾಗಿತ್ತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.