ADVERTISEMENT

ತೇಲಿ ಬಂದ ಪುಟಗಳು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 19:45 IST
Last Updated 8 ಡಿಸೆಂಬರ್ 2018, 19:45 IST
ಚಿತ್ರ: ಗುರು ನಾವಳ್ಳಿ
ಚಿತ್ರ: ಗುರು ನಾವಳ್ಳಿ   

ಪ್ರಪಂಚದ ಎಲ್ಲಾ ಸವಲತ್ತುಗಳು ಮೊಮ್ಮಗಳಿಗೆ ಸುಲಭವಾಗಿ ಸಿಗಲಿ ಎಂಬ ಅಭಿಲಾಷೆಯ ಅಜ್ಜಿ ಮತ್ತು ಅರ್ಹತೆಗಳಿಸಿಕೊಂಡು ತನಗೆ ಬೇಕಾದ್ದನ್ನು ಪಡೆದುಕೊಳ್ಳಲಿ ಎಂದು ಆಶಿಸುವ ಅಜ್ಜ... ಮಧ್ಯೆ ನಾನು ಬರೆಯಲು ಕಲಿತದ್ದು ಯಾವಾಗ? ಅಸಲಿಗೆ ನಾನು ಕಲಿತದ್ದಾ ಅಥವಾ ಬದುಕೇ ಕಲಿಸಿತಾ? ಯಾವ ದಿನ, ಯಾವ ಕ್ಷಣ ಬದುಕು, ಬರಹವನ್ನು ನನ್ನ ಜೊತೆಯಾಗಿಸಿತು? ಲೆಕ್ಕ ಹಾಕಿದರೆ ಎಲ್ಲಾ ಗೋಜಲು ಗೋಜಲು.

ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮ ಟೀಚರ್ ‘ಪರಿಸರ ಮಾಲಿನ್ಯ’ದ ಬಗ್ಗೆ ಅರ್ಧಪುಟ ಮೀರದಂತೆ ಪ್ರಬಂಧ ಬರೆದು ತರಲು ತಿಳಿಸಿದ್ದರು. ‘ರಿಟೈರ್ಡ್’ ಮೇಷ್ಟ್ರು ಮನೆಯಲ್ಲಿರಬೇಕಾದರೆ, ಅರ್ಧಪುಟ ಯಾಕೆ ಒಂದು ಪುಸ್ತಕ ಬೇಕಿದ್ದರೂ ಬರೆಯಬಲ್ಲೆ ಅನ್ನುವ ಧಿಮಾಕಿನಿಂದ ಮನೆಗೆ ಬಂದು ಅಜ್ಜನ ಕೈಗೆ ಪೆನ್ನು, ಪುಸ್ತಕ ಕೊಟ್ಟು ಸಲೀಸಾಗಿ ಆಟ ಆಡಲು ಹೋದೆ. ಆಡಿ ಬರುವಷ್ಟರಲ್ಲಿ ಪ್ರಬಂಧ ರೆಡಿಯಾಗಿರುತ್ತದೆ ಅನ್ನುವ ಅತಿ ನಂಬಿಕೆ ನನ್ನದು. ಆದರೆ, ಆಡಿ ಕೈಕಾಲು ಮುಖ ತೊಳೆದು ಬಂದಾಗ ಅಜ್ಜ, ನಾಲ್ಕು ಪಾಯಿಂಟ್ ಬರೆದಿಟ್ಟು ಗಂಭೀರವಾಗಿ ಉರ್ದು ಶಾಯರಿ ಓದುತ್ತಾ ಕುಳಿತಿದ್ದರು.

ನಾನು ಪ್ರಬಂಧ ಎಲ್ಲಿ ಎಂದು ಕೇಳಿದಾಗ, ಪುಸ್ತಕ ಕೈಗಿಟ್ಟು ‘ಈ ನಾಲ್ಕು ಪಾಯಿಂಟ್‌ಗಳನ್ನು ಆಧಾರವಾಗಿಟ್ಟುಕೊಂಡು ನೀನೇ ಬರಿ’ ಎಂದು ತಮ್ಮ ಓದು ಮುಂದುವರಿಸಿದರು. ನನ್ನ ಗೋಗರೆತ, ಅಳು ಯಾವುದೂ ಫಲ ನೀಡದಿದ್ದಾಗ ಅಜ್ಜಿ ಮೆತ್ತಗೆ ‘ಪಾಪ ಮಗು, ಅಷ್ಟು ಆಸೆಯಿಂದ ಕೇಳುತ್ತಿರುವಾಗ ಬರೆದು ಕೊಡಬಾರದಾ?’ ಎಂದು ಕಕ್ಕುಲಾತಿಯಿಂದ ಕೇಳಿದರು.

ADVERTISEMENT

ಅಜ್ಜ ಅಷ್ಟೇ ನಿರ್ಲಕ್ಷ್ಯದಿಂದ ‘ಬರೆದುಕೊಳ್ಳುತ್ತಾಳೆ ಬಿಡು’ ಎಂದು ಮತ್ತೆ ಜೋರಾಗಿ ಶಾಯರಿ ಓದತೊಡಗಿದರು. ಆ ಹೊತ್ತು ಅಜ್ಜನ ನಿರಾಕರಣೆ ನನ್ನ ಸ್ವಾಭಿಮಾನಕ್ಕೆ ದೊಡ್ಡ ಪೆಟ್ಟು ಕೊಟ್ಟಿತ್ತು ಮತ್ತು ಆ ತೀವ್ರತೆ ನನ್ನಿಂದ ಒಂದು ಪುಟದಷ್ಟಿದ್ದ ಪ್ರಬಂಧ ಬರೆಯಿಸಿತ್ತು. ಅಜ್ಜ ಆವತ್ತು ಮೀಸೆಯಡಿಯಲ್ಲಿಯೇ ನಕ್ಕಿದ್ದರಾ? ಗೊತ್ತಿಲ್ಲ. ಆ ಕ್ಷಣ ನಾನು ಬರೆಯಲು ಕಲಿತೆನಾ? ಅರ್ಥವಾಗುತ್ತಿಲ್ಲ. ನನಗೆ ಪುಸ್ತಕಗಳನ್ನು ಪರಿಚಯಿಸಿದ್ದು, ಓದಿನ ರುಚಿ ಹತ್ತಿಸಿದ್ದು ಅಜ್ಜನೇ.ಬದುಕಿದರೆ ‘ಹೀಗೆಯೇ’ ಬದುಕಬೇಕು ಎಂಬುವುದಕ್ಕೆ ಒಂದು ಮಾದರಿಯಂತಿದ್ದ ಅಜ್ಜ, ಒಂದು ದಿನ ಯಾವ ಅನಾರೋಗ್ಯವೂ ಇಲ್ಲದೆ, ಯಾವ ಮುನ್ಸೂಚನೆಯೂ ಇಲ್ಲದೆ ಮರಣವಪ್ಪಿದರು. ನನಗಾಗ ದೊಡ್ಡ ಆಘಾತ.

ಅಜ್ಜನೇ ಸರ್ವಸ್ವ ಆಗಿದ್ದ ನನ್ನ ಬದುಕೀಗ ಅಜ್ಜನಿಲ್ಲದ ವಾಸ್ತವವನ್ನು ಒಪ್ಪಿಕೊಳ್ಳಲಾಗದೆ ಲೇಖನಿಯ ಮೊರೆ ಹೋಗಿತ್ತು. ಆ ಆಘಾತ, ನೋವು, ಸಂಕಟ, ಕಠೋರತೆ ನನ್ನಿಂದ ಕವಿತೆ ಬರೆಯಿಸಿತು. ನಾನು ಬರೆದ ಮೊದಲ ಪದ್ಯ ಸಾವಿನ ಕುರಿತಾದ್ದು. ಪ್ರತಿ ಆರಂಭವೂ ಅಂತ್ಯವಾಗಲೇಬೇಕೇನೋ ಅಥವಾ ಪ್ರತಿ ಅಂತ್ಯವೂ ಮತ್ತೊಂದು ಆರಂಭವೇ ಏನೋ? ನಾನು ಡೈರಿ ಬರೆಯಲು ಪ್ರಾರಂಭಿಸಿದ್ದೂ ಆವತ್ತೇ.

ಅಜ್ಜನಿಲ್ಲದ ಬದುಕಿನ ಖಾಲಿತನವನ್ನು ಬರಹ ಒಂದಿಷ್ಟಾದರೂ ತುಂಬುತ್ತಾ ಹೋಯಿತು. ವಯಸ್ಸು ಮಾಗುತ್ತಿದ್ದಂತೆ ತನ್ನಿಂತಾನಾಗೇ ಮನಸ್ಸು ಅವರಿಲ್ಲದ ನೋವನ್ನು ಭರಿಸುವುದನ್ನು ಕಲಿತುಕೊಂಡಿತು. ಲೇಖನ, ಕವಿತೆಗಳನ್ನು ಬರೆದಷ್ಟು ಸುಲಭವಾಗಿ ಕಥೆ ಬರೆಯಲಾರೆ, ಎಷ್ಟಾದರೂ ಕಥಾಪ್ರಪಂಚ ಸುಲಭವಾಗಿ‌ ನನಗೆ ದಕ್ಕುವಂತದಲ್ಲ.

ಹಾಗೆ ತೀರ್ಮಾನಿಸಿಕೊಂಡ ಹೊತ್ತಲ್ಲೇ ಹರೆಯ ಸದ್ದಿಲ್ಲದೆ ಬದುಕಿನೊಳಕ್ಕೆ ಕಾಲಿಟ್ಟಿತ್ತು. ಹರೆಯದ ಜೊತೆ ಜೊತೆಗೆ ಹೊಸ ಗೆಳೆತನ, ಸಂಬಂಧಗಳೂ, ಆಪ್ತತೆಗಳೂ ಬೆಳೆದಿದ್ದವು. ಅದರಲ್ಲೊಬ್ಬಳು ಜೀವದ ಗೆಳತಿ. ಬದುಕು ಸಂತೋಷದ ಉಯ್ಯಾಲೆಯಲ್ಲಿ ಜೀಕುತ್ತಿರಬೇಕಾದರೆ ಅವಳ ಬದುಕನ್ನು, ಅವಳ ಪ್ರೀತಿಯನ್ನು ಮೋಸವೊಂದು ನಡುಬೀದಿಯಲ್ಲಿ ತಂದು ನಿಲ್ಲಿಸಿತ್ತು. ಅವನಿಲ್ಲದೆ ಬದುಕುವುದು ಮತ್ತು ಅವನಿಗಾಗಿ ಸಾಯುವುದು, ತಕ್ಕಡಿಯಲ್ಲಿಟ್ಟು ತೂಗಿದಾಗ ಒಂದು ಬದಿ ಭಾರವಾಯಿತು. ಖಾಲಿತನದ ಭಾರ ಹೊರುವುದಕ್ಕಿಂತ ಸಾಯುವುದೇ ಮೇಲೆಂದು ಆತ್ಮಹತ್ಯೆಯ ಪ್ರಯತ್ನವೂ ನಡೆದುಹೋಯಿತು. ಆದರೆ ಬದುಕು ಅಷ್ಟು ಸುಲಭದಲ್ಲಿ ಮುಗಿಸಿಬಿಡುವಂಥದ್ದಲ್ಲ. ಅವಳು ಉಳಿದುಕೊಂಡಳು. ಹಾಗೆ ತಾನು ಸತ್ತಿಲ್ಲ ಅನ್ನುವುದು ಅವಳಿಗೆ ತಿಳಿದ ಮರುಕ್ಷಣ ನನ್ನ ಕರೆದು ‘ನನ್ನ ಬದುಕಿನ ಬಗ್ಗೆ ಒಂದು ಕಥೆ ಬರೆಯುತ್ತೀಯಾ?’ ಎಂದು ಕೇಳಿದಳು. ನಾನು ಹೂಂಗುಟ್ಟಿ, ಎರಡೇ ದಿನಗಳಲ್ಲಿ ಕಥೆ ಬರೆದು ಅವಳ ಕೈಗಿಟ್ಟೆ. ನಾನು ಕಥೆಗಾರ್ತಿಯಾದೆನಾ? ಊಹೂಂ, ಆಗಿರಲಿಲ್ಲ.

ಬರೆಯಲು ಕಲಿತ ನಾನು ಇಷ್ಟು ವರ್ಷಗಳ ಕಾಲ ನನ್ನ ಬರಹಗಳನ್ನು ಯಾಕೆ ಪ್ರಕಟಿಸುವ ಆಸ್ಥೆ ತೋರಲಿಲ್ಲ? ಯಾವ ಅನಿವಾರ್ಯತೆ ಹೆಸರು ಬದಲಾಯಿಸುವ, ಅರ್ಧ ಹೆಸರಿನಲ್ಲಷ್ಟೇ ಬರೆಯುವ ಪರಿಸ್ಥಿತಿಯನ್ನು ಸೃಷ್ಟಿಸಿತು? ಅಷ್ಟು ಮಾತ್ರದ ಸ್ವಾತಂತ್ರ್ಯ ನನಗಿರಲಿಲ್ಲ ಅನ್ನುವುದು ಶುದ್ಧ ಸುಳ್ಳಾಗುತ್ತದೆ.

ಪೋಷಕರು ನನ್ನ ಓದನ್ನೂ, ಬರಹವನ್ನೂ ನಿರಂತರವಾಗಿ ಪೋಷಿಸುತ್ತಾ ಬಂದಿದ್ದರೂ ಯಾಕೆ ಹೀಗಾಯಿತು? ಬಹುಶಃ ಈ ಸಮಾಜ ಹುಡುಗಿಯೊಬ್ಬಳು ಖುಲ್ಲಂಖುಲ್ಲಾ ಬರೆಯುವುದನ್ನು ಸ್ವೀಕರಿಸದು ಅನ್ನುವ ಅಂಜಿಕೆ ಕಾಡಿತು. ನನ್ನ ಹಾಗೆ ಎಷ್ಟು ಹುಡುಗಿಯರು ಚಿಪ್ಪೊಳಗೆ ಬಂದಿಯಾಗಿದ್ದಾರೆ? ಎಷ್ಟು ಬರಹಗಾರ್ತಿಯರು ತಮ್ಮ ಬರವಣಿಗೆಗಳನ್ನು ಮುಚ್ಚಿಟ್ಟಿದ್ದಾರೆ? ಕಲ್ಪನೆಗೂ ನಿಲುಕದು.

ಎಲ್ಲಾ ಸ್ವವಿಮರ್ಶೆಯ ನಂತರ ತಿಳಿಯುವುದಿಷ್ಟೇ- ಮಾಡುವ ಕೆಲಸದಲ್ಲಿ ತೃಪ್ತಿ ಮತ್ತು ಸರಿ- ತಪ್ಪುಗಳ ವಿವೇಚನೆಯಿದ್ದರೆ ಎಲ್ಲವನ್ನೂ ಸಮಾಜ ಮುಕ್ತವಾಗಿಯೇ ಸ್ವೀಕರಿಸುತ್ತದೆ. ಹಾಗೊಂದು ವೇಳೆ ಸ್ವೀಕರಿಸದಿದ್ದರೂ ನಾವು ತಪ್ಪು ಮಾಡುತ್ತಿಲ್ಲ ಅನ್ನುವ ಖಾತ್ರಿ ನಮಗಿರಬೇಕು ಅಷ್ಟೇ. ಯಾಕೆಂದರೆ ನಾವು ಸಮಾಜಕ್ಕಿಂತಲೂ ಮುಖ್ಯವಾಗಿ ತಲೆಬಾಗಬೇಕಿರುವುದು ನಮ್ಮ ಆತ್ಮಸಾಕ್ಷಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.