ADVERTISEMENT

ನಾಳೆ ಪುಟ್ಟರಾಜ ಗವಾಯಿಗಳ ಸ್ಮರಣೋತ್ಸವ, ಸಂಗೀತ ಸಂಭ್ರಮ

puttaraja gavayi

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 19:45 IST
Last Updated 15 ಮಾರ್ಚ್ 2019, 19:45 IST
ಡಿ. ಕುಮಾರದಾಸ
ಡಿ. ಕುಮಾರದಾಸ   

ಅಖಿಲ ಕರ್ನಾಟಕ ಗಾನಯೋಗಿ ಸ್ವರಸಾನ್ನಿಧ್ಯ ಡಾ.ಪುಟ್ಟರಾಜ ಸಂಗೀತ ವಿದ್ಯಾಪೀಠ ಮಾರ್ಚ್ 17ರಂದು 11ನೇ ವಾರ್ಷಿಕ ಸಂಗೀತ ಸಂಭ್ರಮ ನಿಮಿತ್ತ ಪಂ. ಪುಟ್ಟರಾಜ ಕವಿ ಗವಾಯಿಗಳ 105ನೇ ಜಯಂತ್ಯುತ್ಸವ, ಸ್ವರ ಗಾನಯಾನ, ಸ್ವರಸಾನ್ನಿಧ್ಯ ಪ್ರಶಸ್ತಿ ಪ್ರದಾನ ಹಾಗೂ ಧ್ವನಿಸಾಂದ್ರಿಕೆ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಪ್ರಸಿದ್ಧ ಹಾರ್ಮೋನಿಯಂಕಲಾವಿದ ಪಂ.ಮರಿಸ್ವಾಮಿ ಮದರಿ, ಚೆನ್ನೈನ ಹಿರಿಯ ತಬಲಾ ವಾದಕ ಪಂ.ಎಂ.ಎನ್. ಮುನೀಶ್, ಹಿಂದೂಸ್ಥಾನಿ ಸಂಗೀತದ ಹಿರಿಯ ಗಾಯಕ ಪಂ.ಡಿ. ಕುಮಾರ ದಾಸ್ ಅವರಿಗೆ ಈ ಬಾರಿಯ ‘ಸ್ವರಸಾನ್ನಿಧ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಕವಯತ್ರಿ ಕಸ್ತೂರಿ ಡಿ. ಪತ್ತಾರ್ ರಚನೆಯ ‘ನಿನ್ನಂತೆ ನೀನಾಗು’ ಆಧುನಿಕ ವಚನಗಳ ಗಾನಕುಸುಮ ಧ್ವನಿಸಾಂದ್ರಿಕೆ ಲೋಕಾರ್ಪಣೆ ಮಾಡಲಾಗುವುದು.

ಡಿ. ಕುಮಾರದಾಸ: ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಚಿರಪರಿಚಿತರಾದ ಡಿ.ಕುಮಾರದಾಸ ಕಂಚಿನ ಕಂಠದ ಗಾಯಕ. ಬಾಲ್ಯದಲ್ಲೇ ಗದುಗಿನ ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಸೇರಿದ ಇವರು, 12 ವರ್ಷಗಳ ಸತತ ಪರಿಶ್ರಮದಿಂದ ವಿದ್ಯೆ ಸಂಪಾದಿಸಿ ಗುರುಗಳ ಕೃಪೆಗೆ ಪಾತ್ರರಾದರು.

ADVERTISEMENT

ಗದಗದಲ್ಲಿ ಜರುಗಿದ ಯಡಿಯೂರು ಸಿದ್ದಲಿಂಗೇಶ್ವರರ 5ನೇ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಇವರ ಗಾಯನಕ್ಕೆ ಸ್ವತಃ ಪುಟ್ಟರಾಜ ಗವಾಯಿಗಳವರು ಬಂಗಾರದ ಪದಕವನ್ನಿತ್ತು ಆಶೀರ್ವದಿಸಿದ್ದರು. ಸಂಗೀತ ವಿದ್ವತ್ ಪರೀಕ್ಷೆ, ವಿಶಾರದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಕುಮಾರದಾಸ, ಧಾರವಾಡ ಆಕಾಶವಾಣಿ ನಿಲಯದಲ್ಲಿ ‘ಎ’ ಶ್ರೇಣಿಯ ಕಲಾವಿದರಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಕರ್ನಾಟಕ ಕಲಾಶ್ರೀ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಎಂ.ಎನ್. ಮುನೀಶ್: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಜನಿಸಿದ ಎಂ.ಎನ್. ಮುನೀಶ್ ಅವರು, ಬಾಲ್ಯದಲ್ಲಿ ತಾಳವಾದ್ಯದಲ್ಲಿ ಆಸಕ್ತಿಯುಳ್ಳವರಾಗಿದ್ದರು. 1965ರಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಸೇರಿ ತಬಲಾ ಅಭ್ಯಾಸನಿರತರಾದರು. ಖ್ಯಾತ ತಬಲಾ ವಾದಕ ಉಸ್ತಾದ್ ಅಲ್ಲಾರಖಾ ಖಾನ್ ಅವರ ಮನೆಯಲ್ಲಿಯೇ ಉಳಿದು ಅವರ ಮಾರ್ಗದರ್ಶನದಂತೆ ಸಾಧನೆ ಮಾಡಿದ ಮುನೀಶ್, ಆಕಾಶವಾಣಿ ‘ಎ’ಶ್ರೇಣಿ ಕಲಾವಿದರಾಗಿ, ಮಹಾನ್ ಗಾಯಕರಿಗೆ ವಾದ್ಯ ಸಾಥ್ ನೀಡಿದ್ದಾರೆ. ಖ್ಯಾತ ಸಿನಿಮಾ ಸಂಗೀತ ನಿರ್ದೇಶಕರೊಂದಿಗೂ ಕೆಲಸ ಮಾಡಿರುವ ಮುನೀಶ್ ಅವರಿಗೆ ಹಲವು ಪ್ರಶಸ್ತಿಗಳು ಸಂದಿವೆ.

ಮರಿಸ್ವಾಮಿ ಮದಿರೆ: 11 ವರ್ಷದ ಬಾಲಕನಾಗಿದ್ದಾಗಲೇ ಪುಟ್ಟರಾಜ ಗವಾಯಿಗಳ ಆಶೀರ್ವಾದ ಪಡೆದ ಮರಿಸ್ವಾಮಿ ಮದಿರೆ ಅವರು, 1951ರಲ್ಲಿ ಗುರುವಿನ ಸನ್ನಿಧಿಗೆ ಬಂದವರು. ಪುಟ್ಟರಾಜ ಗವಾಯಿಗಳೇ ಪ್ರಾಥಮಿಕ ಸಂಗೀತ ಶಿಕ್ಷಣ ನೀಡಿದರು. ತಜ್ಞ ಹಾರ್ಮೋನಿಯಂ ವಾದಕರಾಗಿ 6 ವರ್ಷ ಸತತವಾಗಿ ಕಲಿತ ನಂತರ, ಸ್ವತಃ ಗುರುಗಳೇ, ಇವರನ್ನು ಶ್ರೀಕುಮಾರೇಶ್ವರ ನಾಟ್ಯಸಂಘದ ಹಾರ್ಮೋನಿಯಂ ಮಾಸ್ತರರಾಗಿ ನೇಮಿಸಿದರು. ನಂತರ ಸುಳ್ಯದ ದೇಸಾಯಿಯವರ ಕಂಪನಿ ಸೇರಿ ಅಲ್ಲಿ ರಂಗಸಂಗೀತ ತಜ್ಞರಾದರು. ಹಿರಿಯ ರಂಗಕಲಾವಿದರಿಗೆ ಹಾರ್ಮೋನಿಯಂ ನುಡಿಸಿದ ಖ್ಯಾತಿ ಇವರದ್ದು.

ಗದುಗಿನ ಆಶ್ರಮದ ಪಂಚಾಕ್ಷರ ಗವಾಯಿಗಳ ಜಾತ್ರಾ ಸಂಗೀತೋತ್ಸವದಲ್ಲಿ ಇವರು ನಡೆಸುವ ಜುಗಲ್ ಬಂದಿಗಾಗಿ ಜನರು ಕಾತುರದಿಂದ ಕಾಯುತ್ತಿದ್ದರು. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಮರಿಸ್ವಾಮಿ ಭಾಜನರಾಗಿದ್ದಾರೆ.

ಸ್ಥಳ

ಅಖಿಲ ಕರ್ನಾಟಕ ಗಾನಯೋಗಿ ಸ್ವರಸಾನ್ನಿಧ್ಯ ಡಾ.ಪುಟ್ಟರಾಜ ಸಂಗೀತ ವಿದ್ಯಾಪೀಠ 11ನೇ ವಾರ್ಷಿಕ ಸಂಗೀತ ಸಂಭ್ರಮ: ಉದ್ಘಾಟನೆ–ಡಾ.ನಾಗೇಶ ವಿ. ಬೆಟ್ಟಕೋಟೆ. ಅತಿಥಿಗಳು–ರವೀಂದ್ರ ಯಾವಗಲ್, ಡಾ.ಅಪ್ಪಗೆರೆ ತಿಮ್ಮರಾಜು, ಎಸ್. ಪಿನಾಕಪಾಣಿ, ಡಾ.ಆಶೋಕ ಕುಮಾರ್, ಡಾ.ಅಶ್ವಿನಿ ಅಶೋಕಕುಮಾರ್, ಮೋಹನ್ ಗುರುಸ್ವಾಮಿ. ಸ್ವರಸಾನ್ನಿಧ್ಯ ಪ್ರಶಸ್ತಿ ಪುರಸ್ಕೃತರು–ಮರಿಸ್ವಾಮಿ ಮದರಿ, ಎಂ.ಎನ್. ಮುನೀಶ, ಡಿ.ಕುಮಾರದಾಸ. ಬಾಗೂರು ಮಾರ್ಕಂಡೇಯ ಅವರಿಂದ ಕಸ್ತೂರಿ ಡಿ. ಪತ್ತಾರ ಅವರ ‘ನಿನ್ನಂತೆ ನೀನಾಗು’ ಧ್ವನಿಸಾಂದ್ರಿಕೆ ಲೋಕಾರ್ಪಣೆ. ಸ್ಥಳ–ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಭಾನುವಾರ ಸಂಜೆ 4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.