ADVERTISEMENT

ಮೂರು ಬೆರಳುಗಳಲ್ಲಿವೆ ಮೂರು ಲೋಕ...

ಹುಬ್ಬಳ್ಳಿ–ಧಾರವಾಡ ಮೆಟ್ರೊ

ಎಸ್.ರಶ್ಮಿ
Published 26 ಜನವರಿ 2020, 11:30 IST
Last Updated 26 ಜನವರಿ 2020, 11:30 IST
ಪಂಡಿತ್ ರಾಜೀವ ತಾರಾನಾಥ
ಪಂಡಿತ್ ರಾಜೀವ ತಾರಾನಾಥ   

ಏನರೆ ಇದ್ರ, ಇವೆ ಮೂರು ಬೆರಳನಾಗಿದಾವ. ನನ್ನ ಗುರು ಇದ್ದಾನಿಲ್ಲಿ. ನನ್ನ ಜಗತ್ತದ ಇಲ್ಲಿ. ಸದ್ಯ ಹೃದಯದಾಗೂ ತಲಿಯೊಳಗೂ ಏನು ಉಳಿದಿಲ್ಲ. ಏನೈತಿ.. ಇವ ಮೂರು ಬೆರಳನಾಗದಾವ.. ಸರೋದ್‌ ಮಾಂತ್ರಿಕ ಪಂ.ರಾಜೀವ್‌ ತಾರಾನಾಥ ಮಾತಿನ ಲಹರಿಯಲ್ಲಿದ್ದರು. ಧಾರವಾಡದ ಕರ್ನಾಟಕ ಭವನದಲ್ಲಿ, ಪಾಚಿ ಹಸಿರು ಕುರ್ತಾ ತೊಟ್ಟು ಮಾತಿಗಿಳಿದಾಗ ಯಾವ ಸೀಮೆಯೂ ಅಡ್ಡ ಬರಲಿಲ್ಲ. ಯಾವ ಗಡಿಗಳ ಗೊಡವೆಯೂ ಇರಲಿಲ್ಲ. ಮಾತು.. ಮತ್ತು ಕತೆ...

ಧಾರವಾಡಕ್ಕ ಬರೂದಲ್ಲ.. ಧಾರವಾಡಕ್ಕ ಹಿಂದಿರುಗೂದು. ಈ ಊರು ನಂದು ಅಂತ ಆಗಿದ್ದು, ಬಿ.ಜಿ.ಜೋಷಿ ಅವರ ಮನಿಗೆ ಹೋದಾಗ. ಭಾಳ ಹಳಿಕತಿಯದು. ಅವರು ನಮ್ಮ ಅಪ್ಪಾರು ಪರಿಚಿತರು. ರಮಾಕಾಂತ ಜೋಷಿ ಅವರು ಕರದಾಗ ಅವರ ಮನಿಗೆ ಹೋಗಿದ್ದೆ. ಅಷ್ಟೇ.. ಆ ಮನಿ ನನ್ನದಾಯ್ತು. ಆ ಭಾಷೆ ನನ್ನದಾಯ್ತು. ಊರು ನನ್ನದಾಯ್ತು. ನಾ ಧಾರವಾಡಕ್ಕ ಬರೂದಿಲ್ಲ. ಹಿಂದಿರಗ್ತೀನಿ. ಜೋಷಿ ಬಿಟ್ರ, ಕೀರ್ತಿನಾಥ ಕುರ್ತಕೋಟಿ ಅಗ್ದಿ ಜೀವದ ಗೆಳೆಯ. ಇವರಿಬ್ಬರನ್ನ ಬಿಟ್ರ ನಮ್ಮ ಅಜ್ಜಪ್ಪ ಅಂತಿದ್ರು. ಮಲ್ಲಿಕಾರ್ಜುನ ಮನ್ಸೂರ್‌ ಅವರ ಅಳಿಯ. ಅವರೆಲ್ಲಾರೂ ನನ್ನ ಕಣ್ಮುಂದ ಬರ್ತಾರ. ಧಾರವಾಡದ ಮಳಿ ಬರುಮುಂದ ನಾನು ಅಜ್ಜಪ್ಪ ನಡದಾಡೂದ ಮಜಾ ಇತ್ತು. ಅವ ಗಿಡ್ಡ ಮನಶಾ. ಛತ್ರಿ ಹಿಡದ್ರ, ನನ್ನ ಕಣ್ಣೊಳಗ ಚುಚ್ಚೂಹಂಗ ಆಗ್ತಿತ್ತು. ನಾ ಛತ್ರಿ ಹಿಡದ್ರ ಅಂವಾ ಪೂರ್ತಿ ನೆನೀತಿದ್ದ..

ಇವೆಲ್ಲ ನೆನಪು ಅನ್ನಬ್ಯಾಡವಾ.. ನೆನಪು ಮರತಾಗಷ್ಟ ಬರೂದು. ಧಾರವಾಡ ಯಾವತ್ತಿದ್ದರೂ ನನ್ನ ವರ್ತಮಾನ. ನನ್ನ ಅಭಿಮಾನ. ಇಲ್ಲಿ ಮಂದಿ ಕರದಾಗಲೆಲ್ಲ ಕುಣಕೊಂತ ಬರಬೇಕನಸ್ತದ. ಕರಿ ಬೇಕಾದ್ರ.. ಮಕ್ಕಳ ಸಲ್ಯಾಗ ಬಂದು ಕುಣದ ಹೋಗ್ತೇನಿ. ಇದು ಧಾರವಾಡ.

ADVERTISEMENT

ಧಾರಾವಿ ಕವಿ ಹೇಳ್ತಾನ. ಅವಿವೇಕ ಮತ್ತು ದುಡುಕು ಇವೆರಡಕ್ಕಿಂತ ಪರಮ ವೈರಿ ಯಾರೂ ಇಲ್ಲಂತ. ನಮಗ ಮತ್ತ ಯಾರೂ ವೈರಿ ಇಲ್ಲ.. ಹೌದಲ್ಲೊ.. ಇವೆರಡೆ ವೈರಿಗಳು. ನಾವು ನಮ್ಮತನ ಕಳಕೊಂಡೇವಿ. ದಾಸ್ಯತ್ವ ನಮ್ಮ ಮನಸಿಗದ. ಬ್ರಾಹ್ಮಣ್ಯದ ದಾಸ್ಯತ್ವ.. ನೋಡಿ ಬೇಕಾದ್ರ ಎಲ್ಲಾರ ಹೆಸರೂ ಸಂಸ್ಕೃತಮಯ ಆಗ್ಯಾವ. ಸುರೇಶ, ಸತೀಷ.. ಸುರೇಂದ್ರ ಹಿಂಗ. ನಾವು ಕನ್ನಡದ ಹೆಸರೇ ಕಳಕೊಂಡೇವಿ. ಕನ್ನಡತನದ ಬಗ್ಗೆ ಏನು ಮಾತಾಡೂನು? ಇನ್ನೊಂದು ನಮ್ಮ ಸಣ್ಣತನ. ಈಗ ಜಪಾನಿ ದೇಶದ ವಿದ್ಯಾರ್ಥಿ ನಮ್ಮಲ್ಲಿ ಕಲಿಯಾಕ ಬಂದ್ರ ಅದು ಹೆಗ್ಗಳಿಕಿ. ಭಾರತೀಯ ಸಂಸ್ಕಾರದ ಹೆಗ್ಗಳಕಿ ಅಂತೇವಿ. ಭಾರತೀಯರು ಯಾಕ ಕಲಿಯವಲ್ರು? ಹಂಗಾರ...? ಇದೇ ಸಣ್ತನ. ನಮಗ ಬ್ಯಾಡಾಗೇದ. ನಮಗ ನಮ್ಮ ಬಗ್ಗೆನೆ ಹೆಮ್ಮೆ ಉಳದಿಲ್ಲ. ನಮ್ಮ ಬಾಜೂಕ ಇದ್ದಾರಲ್ಲ, ತಮಿಳರು.. ಅವರಿಂದ ಕಲಿಬೇಕ್ರಿ. ಭಾಷಾ ಉಳಿಸಿಕೊಳ್ಳೂದು.

ಬೆಂಗಳೂರಾಗ ಹೋಗಿ ಅಡ್ರೆಸ್‌ ಕೇಳ್ರಿ. ಕನ್ನಡ ಕಣ್ಮರಿಯಾಗೇದ. ಜೊತಿಗೆ ಇಂಗ್ಲಿಷ್‌ ಸಹ ಹದಗೆಟ್ಟದ. ನಮ್ಮತನ ಉಳಿಸಿಕೊಳ್ಳೂದಂದ್ರ ಸನಾತನಿಗಳಾಗಬೇಕಾಗಿಲ್ಲ. ಹೆಸರು ಬದಲಿಯಾಗೂದ್ರಿಂದ ನಾವು, ನಮ್ಮ ಆಚರಣೆ ಬದಲಿಯಾಗೂದಿಲ್ಲ. ನಂಬಿಕಿ ಬದಲಾಗಬಹುದು. ಏನಾತು..? ಧರ್ಮ ಬ್ಯಾರೆ ಆದ್ರ ಏನಾತು? ಜಾತಿ ಬ್ಯಾರೆ ಆದ್ರ ಏನಾತು? ಮನಷಾರು ಹೌದಿಲ್ಲ? ಅಂತರ್ಧರ್ಮೀಯ ಮದಿವಿ ಆದಕೂಡಲೆ ಕೂಸು ಹುಟ್ಟೂದಿಲ್ಲ? ಹೆಗ್ಗಣ ಹುಟ್ತಾವ? ಮತ್ತ ಯಾಕಿಷ್ಟು ಅಸಹನೆ? ಯಾಕಿಷ್ಟು ಸಣ್ತನ. ನಾವು ಮನಷಾರನ್ನೂದು ಮರತಾಗ ಹಿಂಗ ದ್ವೇಷ ಹುಟ್ತದ. ಅದನ್ನೇ ರಾಜಕೀಯ ಚಾಂಡಾಲರು ಮಾಡೂದು. ಮನುಷ, ಮನುಷಾರ ನಡುವ ಗೋಡಿ ಕಟ್ಟುಕೆಲಸ, ಕೊಂದು ಹಾಕುವ ಕೆಲಸ.

ಚೀನಾ.. ಅದೂ ಹಿಂಗೇ ನಮ್ಮ ದೇಶದ ಗುಡ್ಡಗಾಡು ದಾಟಿದ್ರ ಚೀನಾ ದೇಶ. ನಮಗವರ ಭಾಷೆ ಗೊತ್ತಿಲ್ಲ. ಸಂಗೀತ ಗೊತ್ತಿಲ್ಲ. ಆಹಾರ ಗೊತ್ತಿಲ್ಲ. ಇಲ್ಲಿ ಈ ಕಡೆ ಬಾಜೂಕ ಪಾಕಿಸ್ತಾನ. ಭಾಷೆ ಗೊತ್ತು. ಸಂಗೀತ ಗೊತ್ತು. ಆಹಾರ ಗೊತ್ತು. ಮತ್ಯಾಕ ದ್ವೇಷ? ದ್ವೇಷ ಅನ್ನೂದು ಗಡಿಯೊಳಗಿಲ್ಲ. ತಲಿಯೊಳಗೈತಿ.

ರಾವಣ ಅಗ್ದಿ ಸ್ಟ್ರಾಂಗ್‌ ಮನುಷ. ಅಗ್ದಿ ಛೊಲೊ ಮನುಷಾ. ರಾಮ ಅಷ್ಟು ತ್ರಾಸ ಪಟ್ಟ ಬಂದ ಸೀತೆಗೆ ಅಗಸನ ಮಾತು ಕೇಳಿ ಕಾಡಿಗೆ ಅಟ್ಟಿದ. ಅದ್ಹೆಂಗ ಛೊಲೊ ಆಗ್ತಾನಂವಾ? ಬ್ಯಾಡ ಬಿಡ್ರಿ.. ಈ ಗಡಿ, ಧರ್ಮ ಬಿಟ್ಟು ಮಾತಾಡೂನು. ಏನರೆ ಅಂದ್ರ ಸಾಯಿಸುವ ದಿನಮಾನಗಳಿವು.

ಅಡಗಿ ಬಗ್ಗೆ ಮಾತಾಡೂನು. ಸಂಗೀತದ ಬಗ್ಗೆ ಮಾತಾಡೂನು. ರೊಟ್ಟಿ ಎಣ್ಣಿಗಾಯಿ ತಿಂದ್ರ ಅದೇ ನೋಡ್ರಿ ಸ್ವರ್ಗಸುಖ ಅನ್ನೂದು. ಬಿಸಿರೊಟ್ಟಿ, ಎಣ್ಣಗಾಯಿ ಇಲ್ಲೇ ಖಾನಾವಳಿದು ತರಿಸಿ ತಿಂದೆ.. ಏಕ್ದಮ್‌ ಮಸ್ತ್‌ ಅನಸ್ತದ. ಇನ್ನ ಹೊಗಿ, ಕುಡಿಯೂದು ಇವೆಲ್ಲ ನಮ್ಮ ನಮ್ಮ ಅನುಕೂಲ. ಯಾಕಿರಲ್ಯಾಕ. ಇದರಿಂದ ಇನ್ನೊಬ್ಬರಿಗೆ ತೊಂದರೆ ಏನು? ಇಷ್ಟು ಸಣ್ಣ ಮಾತು, ದೊಡ್ಡ ಮನಸು ಮಾಡಿದ್ರ ಏನೂ ಆಗೂದಿಲ್ಲ. ಒಬ್ಬ ವಿದೇಶಿಗ ದನದ ಮಾಂಸ ತಿಂದ್ರ ಆಹಾರ ಪದ್ಧತಿ. ಒಬ್ಬ ಬಡ ಮುಸ್ಲಿಂ ಅದನ್ನೇ ತಿಂದ್ರ ಅದ್ಹೆಂಗ ಬಡದು ಸಾಯಸ್ತಾರ? ಇದು ಆಹಾರದ ತಪ್ಪಲ್ರಿ. ನಾವು ದುರ್ಬಲರಿಗೆ ಆಳಬೇಕನ್ನುವ ಗುಣದ ತಪ್ಪು. ಇದನ್ನು ಮೀರಬೇಕು. ಸ್ವಾಮ್ಯ ಮತ್ತು ಲಾಭ ಒಟ್ಟೊಟ್ಟಿಗೆ ಬರ್ತಾವ. ಇನ್ನೊಬ್ಬರನ್ನು ತುಳದು ಆಳುವ ಮನಸು ಭಾಳ ಕೆಟ್ಟದ್ದು ನೋಡ್ರಿ. ಇರಲಿ.. ಯಾಕ ಇರವಲ್ದು. ಹಾಳಾಗಿ ಹೋಗಲಿ.

ನಾವು ಸಂಗೀತ ಮಾತಾಡೂನು. ಸಂಗೀತ ಶ್ರಮ ಕೇಳ್ತದ. ದೇಹ ದಂಡನೆ ಕೇಳ್ತದ. ದಂಡಿಸಿದಷ್ಟು ಸಂಗೀತ ಒಲೀತದ. ಪದಮಾಂತ್ರಿಕರಾಗೂದು ಬ್ಯಾಡ. ಭಾಳ ಚಂದನೆಯ ಶಬ್ದಗಳ ವರ್ಣನೆ ಮಾಡೂದು ಬ್ಯಾಡ. ಸಂಗೀತದ ಅಲಿಯೊಳಗ ಒಮ್ಮೆ ಮನಸು ‘ವಾಹ್‌’ ಅಂತ ಮೆಚ್ಚುಗೆ ಸೂಸಿದ್ರ.. ಅದು ಆಸ್ವಾದಿಸೂದು. ಆನಂದ ಯಾವಾಗ, ಯಾತರೊಳಗ ಸಿಗ್ತದ ಹೇಳಾಕ ಆಗೂದಿಲ್ಲ. ಆದ್ರ ಆನಂದಿಸಬೇಕು. ಮಗು ಹಾಲುಣ್ಣೂದು ಆನಂದಿಸ್ತದ. ಏನಪಾ ಆನಂದ ಅಂದ್ರ ಉಚ್ಚಿಹೊಯ್ತದ. ಹಂಗ ಯಾವುದೂ ಸ್ಥಾಯಿ ಅಲ್ಲ. ಯಾವುದಕ್ಕೂ ಅಂಟ್ಕೊಬಾರದು. ಅಲ್ಲಲ್ಲೇ ಆನಂದಿಸಬೇಕು. ಕೇಳಕಿ ಭಾಳ ಕಠಿಣದ. ಆನಂದಿಸೂದು, ಕೇಳಕಿ ಎರಡೂ ಒಂದೇ ಆದ್ರ ಒಂದು ಲಹರಿಯೊಳಗ ತೇಲಿ ಹೋಗ್ತೇವಿ.

ಕನ್ನಡದ ಪದಗಳನ್ನು ಬಳಸ್ರಿ. ನನ್ನ ಬೈಬಹುದು. ಹೊಡಿಬಹುದು. ಆದ್ರ ಅದ್ರಿಂದ ಖರೆಯನ್ನೂದು ಸುಳ್ಳಾಗೂದಿಲ್ಲ ಹೌದಿಲ್ಲೊ... ನಾಳೆ ಬರ್ರಿ. ಸಂಗೀತ ಕೇಳೂವಂತ್ರಿ..

ರಾಜೀವ್‌ ತಾರಾನಾಥ ಮಾತು ಕತೆಗಳಾಗಿದ್ದು ಅವರು ಸನ್ಮಾನ ಸ್ವೀಕರಿಸಲು ಧಾರವಾಡಕ್ಕ ಬಂದಾರ. ಅವರ ಬಗ್ಗೆ ಬುಧವಾರ ಕಾರ್ಯಕ್ರಮ ಅದ. ಅವರ ಜೀವದ ಗೆಳೆಯ ಡಾ.ರಮಾಕಾಂತ ಜೋಷಿ, ಕವಿ ಜಯಂತ್‌ ಕಾಯ್ಕಿಣಿ ಮಾತಾಡ್ತಾರ. ಕರ್ನಾಟಕ ರಾಜ್ಯ ಶಿಕ್ಷಣ ಅಕಾಡೆಮಿಯ ನಿರ್ದೇಶಕರಾದ ಪ್ರೊ.ಎಸ್‌.ಎಂ. ಶಿವಪ್ರಸಾದ ಅವರೂ ಇರ್ತಾರ. ನಿಶಾಂತ್ ಪಾಣಿಕರ್‌ ಅವರ ಹಿಂದೂಸ್ತಾನಿ ಸಂಗೀತ, ಭೀಮಾಶಂಕರ ಬಿದನೂರು ತಬಲಾ ಸಾಥ್‌ ನೀಡೋರು ಅದಾರ. ಆಮೇಲೆ ಆ ಮೂರು ಬೆರಳಿನಲ್ಲಿರುವ ಸರೋದ್‌ ಜಾದೂಗಾರಿಕೆಯನ್ನು ಸಾಕ್ಷಾತ್ಕಾರಗೊಳಿಸಲು ಒಮ್ಮೆ ಹೋಗಿಬನ್ನಿ. ಕಾರ್ಯಕ್ರಮ ಕೆ.ಸಿ.ಡಿ ಕಾಲೇಜಿನ ಡಾ. ಅಣ್ಣಾಜಿರಾವ್‌ ಶಿರೂರ ಸಭಾಂಗಣದಲ್ಲಿ ನಡೆಯಲಿದೆ. ಜ.22ರ ಸಂಜೆ 5.30ಕ್ಕ. ಬಿಡುವು ಮಾಡ್ಕೊಂಡು ಹೋಗಿಬನ್ನಿ. ಜೀವನದ ಅಪೂರ್ವ ಅನುಭವ ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.