ADVERTISEMENT

ಹುಡುಕುತ್ತಿದ್ದಾನೆ

​ಪ್ರಜಾವಾಣಿ ವಾರ್ತೆ
Published 12 ಮೇ 2018, 19:30 IST
Last Updated 12 ಮೇ 2018, 19:30 IST
ಚಿತ್ರ: ವೆಂಕಟ್ರಮಣ ಭಟ್‌
ಚಿತ್ರ: ವೆಂಕಟ್ರಮಣ ಭಟ್‌   

ಒಂದು ಮಧ್ಯರಾತ್ರಿಯ ಕತ್ತಲು
ಹೆದ್ದಾರಿಯ ಮಧ್ಯೆ ನಡೆಯುತ್ತಿದ್ದಾನೆ
ಮೊಬೈಲನ್ನು ಮನೆಯಲ್ಲೇ ಕೊಂದಿದ್ದಾನೆ
ಕೆರಗಳನ್ನು ಕದದ ಬದಿಗೆ ಬಿಸಾಡಿದ್ದಾನೆ
ಬಾಗಿಲನ್ನು ತೆರೆದೇ ಬಂದಿದ್ದಾನೆ
ಬೇಕಂತಲೇ ಮದ್ಯವನ್ನು ಹಾಗೇ ಇಟ್ಟಿದ್ದಾನೆ
'ತಟ್ಟುವ ಸಾವಿನ ಬಾಗಿಲಿಗೆ ನೂಕಿದವರಿಲ್ಲ'
ವೆಂದು ನಿಜವಲ್ಲದ ಪತ್ರ ಬರೆದಿಟ್ಟಿದ್ದಾನೆ

ಇಷ್ಟ ಪಟ್ಟವರು, ನೋವ ಕೊಟ್ಟವರು
ಲೆಕ್ಕವಿಟ್ಟವರು, ಮರೆತು ಬಿಟ್ಟವರು
ಬಿಟ್ಟು ನಡೆದವರು, ಬದುಕ ಬಿಡದವರು
ಕನಸ ಕಸಿದವರು, ಅಷ್ಟೇ ಏಕೆ
ಹೆಲ್ಮೆಟ್ಟು, ಕಾರಿನ ಸೀಟು ಬೆಲ್ಟು
ಜೀವವುಳಿಸಬಹುದರೆಲ್ಲದರ ಕಾಲ ಕೀಲಿಗಳಿಗೆ
ಜೋಮು ಹಿಡಿದ ಜೇಬುಗಳಲಿ ಜಾಣನಿದ್ರೆ
ಯೋಗನಿದ್ರೆಯ ದೇವರಗುಡಿಗೆ ಬೀಗಮುದ್ರೆ

ರಾತ್ರಿಯಲಿ ರಸ್ತೆಗೂ ಬಿಡುವಲ್ಲವೆ?
ಉರುಹೊಡೆವ ಮಕ್ಕಳೂ
ಉಸಿರೆಳೆದುಕೊಳ್ಳುವ ಹೊತ್ತು
ಸಾವ ಬಯಸಿ ನಡೆಯುತ್ತಿದ್ದವನೆದುರು
ಬಂದ ಲಾರಿಯವೆರಡು ಕಂಗಳ ಬೆಳಕು
ಇವನ ಕಂಗಳಲೇನೋ ಗುರುತಿಸಿ
ಗುದ್ದಿ, ಆದರೂ ಉಳಿಸಿಹೋಯಿತು ಬದುಕು

ತೀವ್ರ ನಿಗಾ ಘಟಕದಲ್ಲಿ ಪ್ರಜ್ಞೆ
ಬಂದಿತು; ಉಳಿದವರಿಗೂ! ಪ್ರಶ್ನೆ
ತಂದಿತು; ತಿಳಿದವರಿಗೂ!
ಭಯವಾಗಲಿಲ್ಲವೇ?
ನೋವಾಗಲಿಲ್ಲವೇ?
ಹೇಳಲಾಗಲಿಲ್ಲವೇ?
ಇಲ್ಲ. ಎಲ್ಲಾದ'ಕವನ'ದೊಂದೇ ಉತ್ತರ
ಎದೆಯೊಳಗಿನ ನೋವೇ ಎತ್ತರ
ವಾಗಿದ್ದವನು ಕೇಳುವವವರ ಕಂಗಳಲಿ
ಬದುಕಿಸಿದ ಬೆಳಕ ಹುಡುಕುತ್ತಿದ್ದಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.