ADVERTISEMENT

ಕಡಲು, ನದಿ ಮತ್ತು ಅಮ್ಮಿ

ಶಿ.ಜು.ಪಾಶ
Published 4 ಮೇ 2019, 19:30 IST
Last Updated 4 ಮೇ 2019, 19:30 IST
ಶಶಿಕಿರಣ ಬಿ.ದೇಸಾಯಿ
ಶಶಿಕಿರಣ ಬಿ.ದೇಸಾಯಿ   

ಯಾರೊಂದಿಗೆ ಮಾತಾಡದೆಯೂ ಕಡಲು
ಮಾತಾಡುತ್ತಿರುತ್ತದೆ; ಅಲೆ ಎಬ್ಬಿಸಿಯೋ
ಎದೆಯುಬ್ಬಿಸಿಯೋ, ಗಾಳಿಗೆ ಮೈ ಹರಿಸಿಯೋ-
ಕೇಳುವವನು ನಾನೇ ಆಗಿರುವಾಗ
ಎಲ್ಲ ಎಲ್ಲಾ ಮಾತು ಕೇಳುತ್ತಿರುತ್ತದೆ,
ಕಿವಿಗಿಂಪಾಗಿ ಬೀಳುತ್ತಿರುತ್ತದೆ- ಕೋಗಿಲೆಗಿಂತ ಚೆಂದವಾಗಿ,
ಗಿಣಿಗಿಂತ ಬಲು ಸೊಗಸಾಗಿ ಈ ಕಡಲು
ಮಾತಾಡುತ್ತಿರುತ್ತದೆ ಮಾತಾಡದೆಯೂ...

ನಾನು ವಾಸವಿದ್ದ ಆ ನದಿಯ
ಬಳಿಯೂ ಮಾತುಗಳಿದ್ದವು
ನನ್ನ ಕಾಣಲೆಂದೇ ಬರುತ್ತಿದ್ದವು
ಪಾದಕ್ಕೆ ತಾಗಿ, ಮೀನಂತೆ ಬಾಯಿಬಿಟ್ಟು
ನದಿ ಮಾತಾಡುವಾಗೆಲ್ಲ
ಮನೆಯೊಳಕ್ಕೆ ಕರೆದೊಯ್ಯುತ್ತಿದ್ದೆ
ತಿಳಿನೀರಿನಲ್ಲಿ ಕಣ್ಣುನೆಟ್ಟು ಅದು ಮಾತಾಡುತ್ತಿದ್ದರೆ
ನೀರು ತುಂಬಿದ ಕಣ್ಣುಬಿಟ್ಟು ಮಾತು ಕೇಳುತ್ತಿದ್ದೆ

ಕಡಲು, ನದಿಗಳೆಲ್ಲ ಹೀಗೆ ಮಾತಾಡುತ್ತಿದ್ದರೂ
ಆತಂಕ, ದುಗುಡ ಬಿಚ್ಚಿಟ್ಟು ನಿರಾಳರಾಗುತ್ತಿದ್ದರೂ
ಅಮ್ಮಿ ಏಕೋ ಶಿಲೆ, ಥೇಟು ಮನೆಯ ತೊಲೆ
ಪಕ್ಕಕ್ಕೆ ಕರೆದು ನಾನೂ ಕೇಳಬಹುದಿತ್ತು;
ಅಮ್ಮಿ ಹಗುರಾಗಿ ಬಿಡು, ಮಾತಾಡೋ ಇರುಳಾಗಿ ಬಿಡು!

ADVERTISEMENT

ಎದ್ದೇ ಇದ್ದಳು ಅಮ್ಮಿ ನೋವಿನೆದೆಯವರೆಗೆ;
ಹೊದ್ದೇ ಇದ್ದಳು ಅಮ್ಮಿ
ತನ್ನೊಡಲು ಬೇಯುವವರೆಗೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.