ADVERTISEMENT

ವೆಂಕಟೇಶ ಪಾಟೀಲ ಕವನ: ನನ್ನ ಮೌನದ ಹಿಂದೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 19:31 IST
Last Updated 26 ಫೆಬ್ರುವರಿ 2022, 19:31 IST
ಸಾಂದರ್ಭಿಕ ಕಲೆಕಲೆ: ವಾಗೀಶ ಹೆಗಡೆ
ಸಾಂದರ್ಭಿಕ ಕಲೆಕಲೆ: ವಾಗೀಶ ಹೆಗಡೆ   

ನನ್ನ ಮೌನದ ಹಿಂದೆ ನೂರು ಮಾತುಗಳಿವೆ
ಸಾವಿರಾರು ಕನಸುಗಳಿವೆ
ಕೇಳುವರಾರು ಅವುಗಳನು?
ಹೇಳುವರಾರು ನನ್ನ ಪ್ರಶ್ನೆಗೆ ಉತ್ತರವ?
ಇಷ್ಟಕ್ಕೂ ನಾನಾರು?

ಹೇಳುವೆನು ಕೇಳಿರಿ ನಾನಾರೆಂದು.....

ಬೆಳಕಗರ್ಭದ ಬಸಿರಿನಿಂದುದಯಿಸಿದ
ಪ್ರತಿ ಉಸಿರಿನ ಪ್ರೀತಿ ನಾನು, ಮಮತೆ ನಾನು.
ಬೆಳಕಾಗಿ ಹುಟ್ಟಿ ಭಾವದಲಿ
ಕರಗುವವಳು
ಆರದ ಬೆಳಕು ನಾನು, ತೀರದ ತೈಲನಾನು
ದೇಶ-ಕಾಲಗಳ ಎಲ್ಲೆ ಮೀರಿದ ಬದುಕಿನ ಚೇತನಳು ನಾನು
ಅರಿತವನ ಅಂತರಂಗದಲಿ ಅನಂತ ಬಿಂಬಳು ನಾನು

ADVERTISEMENT

ಇಂತಹ ನಾನು ಈಗೀಗ
ನನ್ನ ಪರಿಚಯಿಸಿಕೊಳ್ಳುವ ಧಾಟಿಯ ಬದಲಿಸಿಕೊಂಡಿರುವೆ
ಈಗ ಹೇಳಿಕೊಳ್ಳುವೆ
ನಿನ್ನ ಸ್ವಾರ್ಥದ ಬಲೆಯಲಿ ಬಂಧಿಯಾದ ಜೀವಿಮಾತ್ರವೇ ಎಂದು
ನಿನ್ನ ಪರಿಭಾಷೆಯಲ್ಲಿ ವಸ್ತುಮಾತ್ರವೆಂದು

ಚರಿತ್ರೆಯುದ್ದಕ್ಕೂ ನೀನು ರಚಿಸಿದ ಸೂತ್ರಕ್ಕೆ ಪಾತ್ರವಾದೆ
ಚಿತ್ರವಾದೆ, ಕತೆಯಾದೆ, ಕಾವ್ಯವಾದೆ, ಕೊನೆಗೆ ಕಲ್ಲಾದೆ.

ಅಲ್ಲಿಗೂ ಮುಗಿಯಲಿಲ್ಲ ನಿನ್ನ ಹೊಗಳಿಕೆಯ ಮಾತುಗಳು
ಪರಾಶಕ್ತಿ ಎಂದೆ ನೀನು
ಗೋಡೆ ಮಂಟಪಗಳ ಮಧ್ಯೆ ಅಲುಗಾಡದ ಛಾಯೆಯಾದೆ ನಾನು

‌ಭೂಮಿ ತೂಕಕೆ ಸಮ ಎಂದೆ
ಅಲ್ಲಿಗೆ ಊರಮುಂದಿನ ಹೆಬ್ಬಾಗಿಲಿನಲಿ ಅರ್ಧಂಬರ್ಧ
ಹುದುಗಿದ್ದ ಮಾಸ್ತಿಗಲ್ಲು ನಾನು
ಹಾದಿಮೇಲಿನ ದೀಪ
ಅತ್ತ ಬೆಳಗಲೂ ಇಲ್ಲ
ಇತ್ತ ಆರಲೂ ಇಲ್ಲ

ಕ್ಷಮಯಾಧರಿತ್ರಿ ಎಂದೆ ನೀನು
ನಿನ್ನ ತಪ್ಪನ್ನೆಲ್ಲ ಮಾನ್ಯಮಾಡಲು ಹವಣಿಸುತ;
ನಿನ್ನ ತಪ್ಪುಗಳ ಸರಮಾಲೆ ಮಾಡಿ ನನ್ನ ಕೊರಳಿಗೆ ಹಾಕಿದೆ
ನಾನೇ ತಪ್ಪಿತಸ್ಥಳೆಂಬಂತೆ

ಇನ್ನು ಅನ್ನದಿರು ನನ್ನ ಕ್ಷಮಯಾಧರಿತ್ರಿ ಎಂದು
ನಾನಿನ್ನು ಕ್ಷಮಿಸಲಾರೆ

ಧರ್ಮದೇವತೆ ಎಂದೆ
ನನ್ನ ಕಣ್ ಕಟ್ಟಿ, ಕೈಬಿಟ್ಟೆ.
ಭಾರತದ ಗಾಂಧಾರಿಯಂತೆ
ಧರ್ಮಸಭೆಯಲಿ ಏನು ನಡೆದರೂ ಕಾಣದಿರುವಹಾಗೆ ಕುರುಡಾಗಿಸಿದೆ
ಸಭೆಯೊಳಗೆ ನನ್ನ ಮಾನಹೋದರೂ ಅದು ಧರ್ಮಸಭೆ....!

ದ್ಯೂತ ದಾಳದ ಆಟಕೆ ಪಣವಾದೆ
ನಿನ್ನ ಪಾರಮ್ಯದ ದಾರಿಯಲಿ ತೃಣವಾದೆ

ನನ್ನುಡಿಗೆಯ ನೇಯ್ಗೆಯಲೂ
ನಿನ್ನ ಸ್ವಾರ್ಥದ ದಾರ
ಸಾಲದೆಂಬಂತೆ ಧರ್ಮಸೂತ್ರದ ಚಿತ್ತಾರ
ಅದು ಕೆಂಪು, ಇದು ನೀಲಿ, ಅದು ಹಸಿರು, ಇದು ಬಿಳುಪು -ಹೀಗೆ ಬಟ್ಟೆಗೊಂದೊಂದು ಬಣ್ಣ
ಬಣ್ಣಕ್ಕೊಂದೊಂದು ಮತಧರ್ಮದ ಕಣ್ಣು

ಮೈ ನನ್ನದಾದರೂ ಮನಸ್ಸು ನಿನ್ನದಾಗಿತ್ತು
ಬೇಕಾದಾಗ ಮುಚ್ಚಿದೆ, ಬೇಡವಾದಾಗ ಬಿಚ್ಚಿದೆ.
ಮಸಣದ ಗೋರಿಯಮೇಲೆ ಹೂವದು ನಗುತಲೇ ಇತ್ತು
ಎಲ್ಲ ಹಂಗು ತೊರೆದು

ನಿನ್ನ ವಾದ -ಪ್ರತಿವಾದದ ಗದ್ದಲದಲಿ ಧರ್ಮಕಾರಣದ ಅಮಲು, ರಾಜಕಾರಣದ ತೆವಲು.
ನನ್ನ ಬಟ್ಟೆಯ ಚರಿತ್ರೆ ಬಿಚ್ಚಿಕೊಳ್ಳುತ್ತಲೇ ಇತ್ತು
ಕಾಮದಹನದ ಬೂದಿ ಬಣ್ಣದೋಕುಳಿಯಾಗಿ
ರಂಗುರಂಗಿನ ರೂಪಪಡೆಯುತಲೇ ಇತ್ತು
ಅಲ್ಲಿಗೆ ಅರ್ಥವಾಗಿತ್ತು; ನಿನ್ನ ಹುಡುಕಾಟದ ವಸ್ತು ಯಾವುದೆಂದು

ಇನ್ನು ಮಾತನಾಡಲಾರೆ ನಾನು
ಮೌನವೇ ಉತ್ತರ
ನನ್ನೆದೆಯ ಸುಧೆಗೆ ಒಳಗಣ್ಣಿನ ನುಡಿಯು
ನೀಡಬೇಕಿಲ್ಲ ಸಾಕ್ಷ ಅದು ಅಂತರಂಗದ ಗುಡಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.