ADVERTISEMENT

ಹೊಸ ಪ್ರಸ್ತಾವನೆ

ಸುಬ್ಬು ಹೊಲೆಯಾರ್
Published 6 ಜುಲೈ 2019, 11:29 IST
Last Updated 6 ಜುಲೈ 2019, 11:29 IST
ಕಲೆ: ಈಶ್ವರ ಬಡಿಗೇರ
ಕಲೆ: ಈಶ್ವರ ಬಡಿಗೇರ   

ನೆಲಕ್ಕಂಟಿದ ಪಾದ ಎಲುಬಿಗಂಟಿದ
ಹೃದಯ, ಚಿಪ್ಪಿಗಂಟಿದ ಮೆದುಳು
ನೆಲಮುಖವಾಗಿ ಬೆಳೆದ ಗರಿಕೆ ಕುಲದ
ಶಂಭೂಕನ ತಲೆಯನ್ನು ಏಕಲವ್ಯನ ಹೆಬ್ಬೆರಳನ್ನು
ಕತ್ತರಿಸಿಕೊಂಡವರನ್ನು ನಾನೆಂದು ಹೇಳಿದ್ದೇನೆ ಹಿಂಸಕರೆಂದು...

ಇವರುಗಳೇ ಸಾಕ್ಷಾತ್ ದೇವರೆಂದು
ಕಾಲು ಮುಗಿಯುತ್ತಿದ್ದಾಗ ಪುಟ್ಟ ಬಾಲಕನ ವೇಷದಲ್ಲಿ
ಬಂದು, ನನ್ನ ತಲೆಯ ಮೇಲಿಟ್ಟು
ತಳ್ಳಿ ಪಾತಾಳಕ್ಕೆ ಆಶೀರ್ವಾದ ಮಾಡಿದ
ಕುಲವೆಲ್ಲಾ ಸೇರಿಕೊಂಡು ತಮ್ಮೆದೆಯಿಂದ
ಅಮೃತವನ್ನೇ ಹಿಂಡಿ ಕುಡಿಸುವಂತೆ
ಹಾಡು ಪಾಡುತ್ತಿರುವಾಗ
ಕೇಳದೆ ಹೇಗಿರಲಿ ಗೆಳೆಯ...‌

ನನ್ನ ಶಪಿಸದಿದ್ದರೆ
ತಮಗೆ ಮುಕ್ತಿ ಇಲ್ಲವೆಂದು
ಮತ್ತೆ ಮತ್ತೆ ಮರೆಯಲ್ಲಿ ನಿಂತು
ವಾಲಿಯನ್ನು ಕೊಂದ ಕುವೆಂಪು ಬರೆದ
ನಾಟಕವನ್ನು ಮತ್ತೆ ಮತ್ತೆ ನೋಡಿದೆ
ಬಿಟ್ಟ ಬಾಣದೇಟಿಗೆ ನರಳಿ ಹೊರಳಿ
ಸಾಯುವಾಗ ನಮ್ಮಣ್ಣನೆ ನರಳುತ್ತಿರುವವನೆನ್ನಿಸಿ
ತಟಕ್ಕನೆ ಕಣ್ಣೀರು ಕೆನ್ನೆಯಲ್ಲಿ ಜಾರಿದಾಗ
ಮರೆಯಲ್ಲಿ ನಿಂತು ಕೊಂದವರು ದೇವರಾಗುತ್ತಾರೆ ಗೆಳೆಯ
ನೀನು ನೋಡಲೇಬೇಕು ಆ ನಾಟಕವನ್ನು...

ADVERTISEMENT

ಬತ್ತಲೆ ನೋಡುವಾಸೆ
ಈ ಶೂದ್ರ ಶೂರರಿಗೆ, ನಮ್ಮನ್ನು ಹೊಡೆದು
ಬಡಿಯುದೆಂದರೆ ಎಲ್ಲಿಲ್ಲದ ಪೌರುಷ
ಪುಲಕಿತರಾಗುತ್ತಾರೆ ಹೊಲೆ-ಮಾದಿಗರ ದೇಹ ನೋಡಿ
ಇನ್ನೇನಿದೆಯೆಂದು ಹಸಿದ ಕಂಗಳಿಂದ
ನೋಡಿ ಹಿರಿ ಹಿರಿ ಹಿಗ್ಗುತ್ತಾರೆ
ಯಾರಿಗೆ ಹೇಳುವುದು ಇದೆಲ್ಲವನ್ನು
ಕೂಡಲ ಸಂಗಮದೇವ
ನಿನಗಲ್ಲದೆ ಇನ್ನಾರಿಗೆ ವಿಜ್ಞಾಪಿಸಲಿ ಅಣ್ಣ
ನನ್ನುಸಿರಿನ ಪ್ರಸ್ತಾವನೆಯೊಂದುಳಿದಿದೆ

ಓ... ದೇವರೆ, ನೀನಿರುವ ಊರಲ್ಲಿ
ಅಸ್ಪೃಶ್ಯತೆ ಇಲ್ಲದ ಊರಾಗಿದ್ದರೆ
ನಿನ್ನ ಮಾತನಾಡಿಸಿ ನನ್ನ ಹೃದಯ
ಕಿರೀಟವನ್ನು ತೊಡಿಸಲು ಬರುವವನಿದ್ದೇನೆ...
ಆ ಗಳಿಗೆಗಾಗಿ ಕಾಯುತ್ತಿರುವೆ ಗೆಳೆಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.