ADVERTISEMENT

ಡ್ರ್ಯಾಗನ್ ಮೊಟ್ಟೆಗಳು

ಕೃಷ್ಣ ದೇವಾಂಗಮಠ
Published 30 ಮಾರ್ಚ್ 2019, 20:00 IST
Last Updated 30 ಮಾರ್ಚ್ 2019, 20:00 IST
ಚಿತ್ರ: ಗಣೇಶ ಅರಳಿಕಟ್ಟಿ
ಚಿತ್ರ: ಗಣೇಶ ಅರಳಿಕಟ್ಟಿ   

ಗುಬ್ಬಿಗೂಡಂಥದ್ದೊಂದು ಅಂಗೈ ಅಗಲದ
ಗುಡಿಸಲು ಕಟ್ಟಿಕೊಂಡು ಕೋಗಿಲೆಯಂತೆ
ಸದಾ ಇಂಪಾದ ರಾಗ ಗುಣುಗುತ್ತೆ
ಕಾಗೆಯ ಗೂಡಲ್ಲಿಟ್ಟ ಮೊಟ್ಟೆಗಳು
ಕೈಕಾಲು ಆಚೆ ತೂರುವಾಗ ಗುಳುಮ್ಮನೆ
ಹಾವೊಂದು ಗುಟುಕು ನುಂಗಿದೆ

ಗಾಳಿಗೆ ಸವಾಲೆಸೆದು ಬಂದ ಹದ್ದೊಂದು
ದೇಹದ ತುಂಬೆಲ್ಲಾ ಪರಚಿ ಹರಿದು
ಹೆಡೆಗೆ ಕುಕ್ಕಿದರೆ ಹರಿದ ರಕ್ತದ ಸುತ್ತಾ
ಜಿಗಣೆಗಳು ಮುತ್ತಿ ಅಸಂಖ್ಯ ಸೊಳ್ಳೆ
ನೊಣಗಳು ಮನೆ ಮಾಡಿ
ಡ್ರ್ಯಾಗನ್ ನ ತತ್ತಿಗಳಿಡುತ್ತವೆ

ತಿಪ್ಪೆ ಕೆದರುವ ಕೋಳಿ ಎರೆಹುಳವನೊಂದೊಯ್ದು
ನದಿಯ ಮೀನಿನೊಡಲಿಗೆ ದಾಟಿಸಿದೆ
ಚೂಪಾದ ಕೊಕ್ಕು ತೂರಿಸಿ ಹಿಡಿದು
ಕಿಂಗ್ ಫಿಷರ್ ಹಾರಲೆತ್ನಿಸುವಾಗ
ಏಡಿ ಕಾಲು ಹಿಡಿದೆಳೆದು ಮೀನ ಮತ್ತದೇ
ನೀರಿಗೆ ಜಾರಿಸಿಕೊಳ್ಳುವುದು

ADVERTISEMENT

ಬೇಟೆಯ ಅಟ್ಟಿಸಿಕೊಂಡು ಬರುತ್ತಿದೆ ಚಿರತೆ
ಓಟಕ್ಕೆ ನಿಂತ ಕುದುರೆಗೆ ತಾನೆ ಬೇಟೆ ಅಂತ
ತಿಳಿಯುವುದೇ ಇಲ್ಲ ಓಡುತ್ತಿದೆ
ಮದಗಜದ ಜೊತೆ ಮುದಿ ಸಿಂಹ ಸೆಣಸಾಡಿ
ಸೋಲೂ ಒಪ್ಪದೆ ಗೆಲ್ಲಲೂ ಆಗದೆ
ನರಿ ಬುದ್ಧಿ ಆವಾಹಿಸಿಕೊಂಡಿದೆ

ಕದ್ದು ಹಾಲು ಕುಡಿಯಲು ಬಂದ ಬೆಕ್ಕು
ಸದ್ದು ಮಾಡಿ ಇಲಿ ಹಿಡಿದು ಆಚೆ ಬಂದಿದೆ
ಮುಂಗುಸಿ ಗತಿ ಇಲ್ಲದ ಮನೆಯಲ್ಲಿ
ಹಾವಿನದೇ ದರಬಾರು ಕಾದಾರಿದ
ಕೆನೆಹಾಲು ವಿಷಯುಕ್ತಗೊಂಡು
ಅದನ್ನು ಬಟ್ಟಲಿಗೆ ಸುರಿವಾಗ ಗೋಡೆಯ
ಹಲ್ಲಿ ಲೊಚಗುಟ್ಟುತ್ತದೆ
ಕೊನೆಗೆ ಅಜಾನು ಗರಿಬಿಚ್ಚಿದ ನವಿಲೊಂದು
ಎಲ್ಲವನ್ನೂ ಇಲ್ಲವಾಗಿಸಿ ಕ್ರಾಂತಿ ಸತ್ತ
ಮನುಷ್ಯರೊಂದಿಗೆ ವೈರತ್ವ ಕಾರುತ್ತಲೇ
ತಾನೂ ಇಲ್ಲವಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.