ADVERTISEMENT

ಕವನ | ಬಲೆಯ ನೂಲಿನೊಳಗೆ

ನಾ ದಿವಾಕರ
Published 2 ಜುಲೈ 2022, 20:00 IST
Last Updated 2 ಜುಲೈ 2022, 20:00 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಬಣ್ಣ ಕಳಚಿದ ಪಿಂಗಾಣಿ ಕಪ್ಪು
ಹೀರಿ ಸವಿದಿದ್ದು ಚಹಾ ಇರಬೇಕು
ಮುಕ್ಕಾದ ಅಂಚಿಗೆ ಮೆತ್ತಿದ ಕೆನೆಯ
ಗುರುತು ಕೆನ್ನೆಯ ಮುಂಗುರುಳಿನಂತೆ
ಸುರುಳಿಯಾಗಿದೆ; ಸುತ್ತಲಾವರಿಸಿದ
ಜೇಡದ ನೂಲು ವಿನಿಮಯವಾದ
ಪ್ರೀತಿಗಿಂತಲೂ ಗಟ್ಟಿಯಾಗಿದೆ
ಗಗನ ಚುಕ್ಕಿಗಳಂತೆ ಮರಳಕಣಗಳು
ಬಾಸಿಂಗದಂತೆ ಮಿನುಗುತಿವೆ
ಆದರೂ ಏನೋ ಕಾಣದಾಗಿದೆ ;

ಆ ಗಳಿಗೆಯ ಮುದವೆಂತಹುದು,,,
ಅಬ್ಬಾ!! ರಸ್ತೆ ನಿರ್ಜನ ಭಾವ ನಿರ್ಜಲ
ಶಿಶಿರದ ಹೊಳಪೋ ಗಗನ ಚಿತ್ತಾರದ
ಕಳೆಯೋ ಕಣ್ಣೊಳಗೆ ಕಂಡುದಂತೂ ದಿವ್ಯ
ಚೈತನ್ಯದ ಹೊಂಬೆಳಕು;
ಮನದ ಮೌನ ಎದೆಯೊಳಗಣ ನಿರ್ವಾತ
ಮಾತು ಮೌನದ ಕರ್ಷಣೆಯಲಿ
ಕೆಲವೇ ಅಕ್ಷರಗಳ ನೃತ್ಯ
ಪ್ರವಹಿಸಿದುದು ಪ್ರೀತಿಯೋ
ಶೂನ್ಯಜನ್ಯ ಮಮತೆಯೋ ಕಾಣೆ ;

ನಡುರಾತ್ರಿಯ ಇಬ್ಬನಿ
ಚುಂಬಿಸಿದ್ದು ಸುಡು ಪೇಯವನಷ್ಟೇ ಅಲ್ಲ
ಮೌನ ಸೇತುವೆಯ ಮುರಿದ
ಮಧುರ ಮಾತುಗಳನ್ನೂ; ಎಲ್ಲವೂ
ಕಳೆದುಹೋದಂತಿತ್ತು,,, ಹೌದು ಎಲ್ಲವೂ
ಜೀವ ಭಾವ ನೋವು ನಲಿವು,,,,ಎಲ್ಲವೂ
ಬೆಸೆದ ಬೆರಳುಗಳ ನಡುವೆ ಹರಿದಾಡಿದ
ತಂತುಗಳು ಸದ್ದು ಮಾಡಿದಾಗ
ಎದೆಯೊಳಗಿನ ನಾದ ಸ್ವರಗೂಡಿತ್ತು
ನಿಘಂಟಿನಲಿ ಸ್ನೇಹ ಕಾಣದಾಗಿತ್ತು ;

ADVERTISEMENT

ಒಂದು ಜೇಡನ ಹೆಣಿಗೆ
ಏನೆಲ್ಲಾ ಮರೆಸಿಬಿಡುತ್ತದೆ ಏನೆಲ್ಲಾ
ನೆನಪಿಸುತ್ತದೆ ಅಟ್ಟಣಿಗೆಯ ಮೂಲೆಯಲಿ
ಕುಳಿತ ನೇಹದ ಕುರುಹಿಗೆ ತೋರಣ
ವಿಸ್ಮೃತಿಗೆ ಜಾರಿದುದೆಲ್ಲವೂ ಪಟಪಟನೆ
ಸಿಡಿದು ಸಂಭ್ರಮಿಸಿದರೂ
ಮಾತು ಪುನಃ ಮೌನವಾಗಿದೆ ಮೌನ
ನೆನಪುಗಳ ಸೆರೆಯಾಗಿದೆ
ಅಸ್ಪಷ್ಟ ಅಕ್ಷರಗಳ ಹೊತ್ತ ಪಿಂಗಾಣಿ ಕಪ್ಪು
ಬದುಕಿನ ಕನ್ನಡಿಯಾಗಿದೆ
ಆ ಬಿಂಬ ನಿನ್ನದೇ ಅಲ್ಲವೇ ????

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.