ನುಡಿ ಬೆಳಗು
ತಡಕಿ ತಡಕಿ ತಡವರಿಸಿದೆ
ಕಣ್ಣು ಕಾಣುವಷ್ಟು ಬಯಲು ಬರಿ ಬಯಲು
ಬಯಲೆಂಬ ಬಯಲೊಳಗೆ
ಹುಡುಕಿದೆ ಬಾಯಾರಿಕೆಯ ತಂಪಿಗೆ
ಕಾಣಲೇ ಇಲ್ಲ ಕಡೆಗೂ ಒಂದು ಹನಿ
ಸಾಕಿತ್ತು ಬೇಕಿತ್ತು ಬೊಗಸೆಯಷ್ಟೇ ಪ್ರೀತಿ
ಬಿಸಿಲ ಜಳದಲ್ಲಿ ಉರಿದು ಸಿಕಾದ ಮನಕೆ
ಒಡಲ ಕೆಂಡ ದುಂಡೆಗಳ ತಣಿವಿಗೆ
ಮಲಯ ಮಾರುತದ ಮಿಳಿತಕೆ
ಕಡೆಗೆ ಶಾಂತತೆಗೆ
ಅತ್ತಲೋ ಇತ್ತಲೋ ಎತ್ತಲಾದರೂ
ಬರಬಹುದೇ ನನ್ನತ್ತ
ಹಿಡಿದು ಬೊಗಸೆ ತುಂಬಾ ಪ್ರೀತಿಯನು
ಕುಡಿಸಿ ಕುಣಿಸುವವನ ಕಾಣಲು
ಒಂದೇ ಉಸಿರಲಿ ತೊಡರ ಕಾಲಲ್ಲಿ ನಿಂತೆ
ತುದಿಗಾಲಾಗಿ ಉಸಿರ ಹಸಿರಲಿ
ಹರಸುತ್ತ ಜೀವನದಿಯಾಗಿ
ನೆತ್ತಿ ಹತ್ತಿದ ಸೂರ್ಯ
ಏರು ಏರುತ್ತಲೇ ಇದ್ದ ಒಳ ಬೆಂಕಿ
ಒಳ ಹೊರಗಿನ ತಾಪದ ಉರಿಯುವಿಕೆಗೆ
ಬಾಣಲೆಯ ಕುದಿಯ ಕುರುಕಲ ಕರಕಲಾಗಿದ್ದೆ .
ಇಳಿ ಹೊತ್ತ ಹೊತ್ತು ತರುವ ಚಂದಿರನೆ
ಕಾದೆ ಕಾದೆ ಬೋರ್ಗರೆವ ಕಡಲಾಗಿ
ಬೆಳದಿಂಗಳ ಬೆಳ್ಳನೆಯ ಬೆಳಕಾಗಿ
ಬುದ್ಧನಾಗಿ ಬಸವನಾಗಿ ನನಗೆ ನಾನಾಗಿ
ಕಂಡಿದ್ದೆ ಪ್ರೀತಿಯ ಬೊಗಸೆಯಲಿ
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.