ಕವಿತೆ: ನಾನೇ…
ಪಾಪುಗುರು,ದಾವಣಗೆರೆ
ಎದೆಗೆ ತೂಕದ ಕಲ್ಲುಗಳನ್ನು ತೂಗುಹಾಕಿದವರು
ಇಣುಕಿ ನೋಡುತ್ತಿದ್ದರು ಗೂಡೊಳಗೆ
ಅಲ್ಲಿ ಬರೀ ಪುಕ್ಕಗಳೇ ಹಾರಡುತ್ತಿದ್ದವು
ನನ್ನವಳು ಹೆಕ್ಕಿ ಹೆಕ್ಕಿ ಜೋಡಿಸುತ್ತಿದ್ದಳು
ಪುಟ್ಟ ಗುಬ್ಬಿಯ ಹಾಗೆ…..
ಬರೀ ನೋವುಗಳ ಲೆಕ್ಕಕ್ಕೆ
ನನ್ನೊಬ್ಬನಿಗೇ ಮಾರಿಕೊಂಡಿದ್ದಳು
ನಾನು ಚುಕ್ತ ಮಾಡಿದ್ದೆ
ಭಾವಗಳ ಹೊಕ್ಕು ಮೊಟ್ಟೆಯಿಟ್ಟಿದ್ದೆ
ಕೆಲವರ ಕದಲಿಕಿಗೆ ಕೆಟ್ಟವು
ಕೆಲವು ಬಿದ್ದು ಒಡೆದವು
ಅದರ ವಾಸನೆಗೆ ಮೂಗುಮುಚ್ಚಿಕೊಂಡಿದ್ದು
ಬೇರೆಯಾರಲ್ಲ ಅದು ನಾನೇ...
ನಾನು ಅನೇಕ ಸಲ
ಅಮಲಿಗೆ ಬಿದ್ದಿದ್ದೇನೆ ಅತ್ತಿದ್ದೇನೆ
ಆದರೂ ಎದೆತೂತನು ಮುಚ್ಚಲಾಗಿಲ್ಲ
ನನ್ನವಳ ಸಾಂತ್ವನಕ್ಕೆ
ಸಾಲಗಳು ಸರಿದು ನಿಂತಿವೆ
ಸಂಬಳ ಸಾಕಾಗಿಲ್ಲ
ಹಬ್ಬಕ್ಕೆ ಹಪ್ಪಳವಿಲ್ಲ
ಕುರಿಕೋಣಗಳ ನಾನೇ ಕಡಿದಿರುವೆ
ತಿನ್ನಲು ಊರೂರಿಗೆ ಬಾಯಿದ್ದರೂ
ಬೈಸಿಕೊಂಡಿದ್ದು ನಾನೇ ಊರಹೊಲೆಯನೆಂದು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.