ಎಂದೂ ಹೊಟ್ಟೆ ತುಂಬದ
ಆ ಬಡಕಲು ಬಾಲ್ಯಕ್ಕೆ
ಅನ್ನ ಆಸರೆಯಾದ
ನನ್ನಪ್ಪ ನೆಟ್ಟ ತೆಂಗಿನ ಮರ
ನಾನು ಹುಟ್ಟಿದ ವರ್ಷವೇ ಫಲಗಟ್ಟಿತ್ತಂತೆ!
ಕಾಲೇಜು ಮಾಸ್ತರರು ಇತಿಹಾಸ ಕಲಿಸುವಾಗ,
ಕನ್ನಡ ಮಾಸ್ತರರು ಕವಿತೆ ಬಣ್ಣಿಸುವಾಗ
ಆ ಕಲ್ಪವೃಕ್ಷ ಕಣ್ಮುಂದೆ ಬಂದಿತ್ತು,
ಇಡೀ ಮನೆಯ ಕಷ್ಟ ಸುಖಗಳ
ನಡೆಸುವ ಆ ಮರ ಅಪ್ಪನಂತೆಯೂ
ಗಾಂಧಿ ತಾತನಂತೆಯೂ ಕಾಣುತ್ತಿತ್ತು!
ಇಂದು ಆ ನೆನಪುಗಳೂ
ಮೈನವಿರೇಳಿಸುತ್ತವೆ:
ತುಪಾಕಿಗೂ ಬಗ್ಗದ
ಬಡಕಲು ಮೈಯ ತೆಂಗಿನ ತೊಗಟೆ,
ಸ್ವಾರ್ಥ, ಸಣ್ಣತನಗಳ ಮೀರಿದ
ವಿಶಾಲತೆಯ ಕುರುಹಾದ
ಎತ್ತರೆತ್ತರ ಹರಡಿದ ಗರಿಗಳ ಘನತೆ.
ಸತ್ತ ಹಿರಿಯರಿಗೆ ಎಡೆ ಇಟ್ಟು
ಸ್ವರ್ಗದಲ್ಲೇ ತಂಪಾಗಿರಿಸುವ
ಮಹಾನವಮಿಯಲ್ಲಿ ಮಗ್ನರಾದ ಮಂದಿಗೆ
ನೀನು ಹಿರಿಯನೆನಿಸುವುದೇ ಇಲ್ಲ;
ನೀನು ಸತ್ತೆ ಎಂದು ಸ್ಮರಿಸುವ
ಭಾಗ್ಯವೂ ನಮ್ಮದಲ್ಲ;
ಕೊಂದ ಪಾಪಪ್ರಜ್ಞೆಯಂತೂ
ಇಲ್ಲವೇ ಇಲ್ಲ!
ಹೆಸರಿನ ಫಲವುಣ್ಣಲು
ಸ್ಪರ್ಧೆಗಿಳಿದವರೇ ಎಲ್ಲ
ನಿನ್ನುಸಿರ ನಾದವನು
ದಮನಿಗಳ ಮಿಡಿತವನು
ಕೇಳುವವರಿಲ್ಲ!
ನನ್ನಪ್ಪ ನೆಟ್ಟ ತೆಂಗಿನ ಮರಕ್ಕಾದರೂ
ವಾರಸುದಾರರಿದ್ದೇವೆ ಹಲವರು;
ನೀ ನೆಟ್ಟ ಸತ್ಯ, ಸರಳತೆಗಳ ಸಮೃದ್ಧ ವನಕ್ಕೆ
ಬಾಡಿಗೆ ಕಾವಲುಗಾರರೂ ಗತಿಯಿಲ್ಲ;
ಈ ಗಾಂಧೀವನದ ನಿರ್ಲಜ್ಜ ಒತ್ತುವರಿಗೆ
ನಿಂತವರೇ ಎಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.