ಈ ವ್ಯವಸ್ಥೆ ನನ್ನ ಕಣ್ಣು ಕಟ್ಟಿದೆ ಏನು ಮಾಡಲಿ
ಆ ಆವಸ್ಥೆ ನನ್ನ ನಾಲಿಗೆ ಸುಟ್ಟಿದೆ ಏನು ಮಾಡಲಿ
ಲೆಕ್ಕಣಿಕೆಗೆ ಕ್ರಾಂತಿಯ ಭಾಷೆ ಕಲಿಸಬೇಕಾದ ತುರ್ತು
ನೆತ್ತರು ಶಾಯಿಯಾಗಿ ಹೆಪ್ಪುಗಟ್ಟಿದೆ ಏನು ಮಾಡಲಿ
ಶಾಂತಿಯ ತೋಟದಲಿ ಸಾವಿನಾ ಆರ್ಭಟ ನೋಡು
ಆಕ್ರಂದನ ಮುಗಿಲು ಮುಟ್ಟಿದೆ ಏನು ಮಾಡಲಿ
ದೇಶ ಸುಡುವಾಗ ಪಿಟೀಲು ನುಡಿಸಿದ ರೋಮ ದೊರೆ
ಬಡಪ್ರಜೆಗಳ ಕಣ್ಣೀರು ಶಾಪ ತಟ್ಟಿದೆ ಏನು ಮಾಡಲಿ
ಸಾವಿನ ಸಂತೆಯಲಿ ಸೌದಾಗರ*ರದೆ ಅಧಿಪತ್ಯ
ಮಿಥ್ಯ ಮಾನವೀಯತೆ ಮೆಟ್ಟಿದೆ ಏನು ಮಾಡಲಿ
ಅನ್ನ ಹಾಕುವ ಪ್ರಭುಗೆ ಋಣಿಯಾಗಿರಬೇಕು ಪೀರ್
ಬೇಲಿಯೇ ಹೊಲಕೆ ಕೊಳ್ಳಿ ಇಟ್ಟಿದೆ ಏನು ಮಾಡಲಿ.
(* ವ್ಯಾಪಾರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.