ADVERTISEMENT

ದೀಪಾವಳಿ ವಿಶೇಷಾಂಕ–2022: ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ | ಬೆತ್ತ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 19:30 IST
Last Updated 29 ಅಕ್ಟೋಬರ್ 2022, 19:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಇದು ಬೆತ್ತ

ನಮ್ಮೆಲ್ಲರ ಮತ್ತಿನ ಆವಿಷ್ಕಾರ
ಬೆತ್ತವೆಂದರೆ ಹೀಗೇ ಇರುತ್ತದೆ...ಉದ್ದಕ್ಕೆ
ಬಾಸುಂಡೆ ಎಬ್ಬಿಸುವ ತಾಕತ್ತು ಇದಕ್ಕೆ.

ಯಾವ ಬೆತ್ತವಿದು? ಯಾವ ಜಾತಿಯ ಮರದ್ದು?
ಬಿದಿರು, ಹೊಂಗೆ, ಹುಣಸೆ ಆಥವಾ ಯೂಕಲಿಪ್ಟಸ್?
ತೀಳಿಯುವುದಿಲ್ಲ ಜಾತಿ ಅಷ್ಟು ಸಲೀಸಾಗಿ
ಬೆತ್ತದ ಜಾಣ್ಮೆ ಇರುವುದೆ ಅಲ್ಲಿ.

ADVERTISEMENT

ಯಾವ ಕಾರಣಿಕ, ಕಾಣ್ಕೆ ಅಥವಾ ಕಣ್ಕಟ್ಟು?
ಮರ್ಮ ಬಲ್ಲವರ‍್ಯಾರು
ದಂಡ ಸಂಹಿತೆ ಅದರ ಹೊಳಪು
ಮಿರಿಮಿರಿ ಮಿಂಚುವುದೆಂದರೆ ಹೊಗಳುಬಟ್ಟರಿಗೇನು ಕೊರತೆ
ಸುತ್ತ ಕೈಮುಗಿದು ಜಪಿಸುತ್ತಾ ಕೂತರೆ
ಹೊಳಪು ಮತ್ತಷ್ಟು ತೂಕ ದುಪ್ಪಟ್ಟು.

ಯಾವ ಕಾಲದ ಬೆತ್ತವಿದು?
ಕಾಡು ಮನುಷ್ಯನ ಕೈಗೆ ಸಿಕ್ಕ ಕೋಲು
ಬಿಲ್ಲು, ಕೊಳಲು, ತಾಳೆಗರಿ ಎಲ್ಲವೂ ಬೆತ್ತಗಳೆ
ಸಾಗಿ ಬಂದ ರೂಪಗಳು ಎಷ್ಟೊಂದು ಅವತಾರಗಳು
ಬೆತ್ತ ಬೆತ್ತವಷ್ಟೆ!

ಯಾರ ಕೈಯಿಂದ ಮತ್ಯಾರ ಕೈಗೆ
ಸಾಗಿ ಬಂತಿದರ ರಿಲೇ ಓಟ
ಅಪ್ಪ, ಮೇಷ್ಟ್ರು, ಪೊಲೀಸು, ಕೋರ್ಟು
ದಾಟಿಸುವವನ ಚಾಲಾಕಿತನ ಗುರಿ ಮುಟ್ಟಿಸುವವನ ವೇಗ
ಮೇಲೆ ಕೂತ ಮೇಲಾಟದವನೂ ಬೆತ್ತದಂತೇ ಕಾಣುತ್ತಾನೆ
ಅಂತಿಮವಾಗಿ ಓಟದ ಉದ್ದೇಶ ಗೆಲುವಷ್ಟೆ.

ಮಿರಮಿರಿ ಮಿಂಚುತ್ತಾ ಕ್ಯಾಮೆರಾ ಕಂಗಳಿಗೆ ಹಿಗ್ಗುತ್ತಾ
ಸಿಂಹಾಸನದಲ್ಲಿ ಲಂಬವಾಗಿ ನಿಂತಿರುವ
ಆ ಬೆತ್ತದ ತುದಿಗೆ ಓಟಿಗೊಂದು ಕೋಟು
ತಲೆಯ ಮೇಲೆ ಇರಿಯುವಂತೆ ನಿಲ್ಲುವ ಬೆತ್ತ
ಧರಿಸಲೇ ಬೇಕು ಧಗೆಯಿದ್ದರೂ ಕೋಟು
ಬೆತ್ತಕ್ಕೆ ದಂಡಿಸುವುದಷ್ಟೇ ಅಲ್ಲ ಹೆದರಿಸುವ ಕಲೆಯೂ ಗೊತ್ತು.

ಬೆಳೆ ತೆಗೆಯುವ ಕಲೆ ಗೊತ್ತು ಬೆತ್ತಕ್ಕೆ
ಕಾಲಕಾಲಕ್ಕೆ ಭರ್ಜರಿ ಬೇಟೆ
ಬೆನ್ನ ತುಂಬ ಕಲೆಯಂತೆ ಹರಡಿಕೊಂಡ ಬಾಸುಂಡೆ
ಅಂಗೈಯ ಕನ್ನಡಿಯಲ್ಲಿ ವೈರಲ್ಲಾಗುವ ವೀಡಿಯೋ
ಚಿತ್ರಕ್ಕೆ ಕೈಮುಗಿದು ತಲೆಬಾಗಿ ಮಂಡಿಯೂರುವ ಮಂದಿ.

ಎತ್ತ ಹೊರಟಿರುವೆ ಬೆತ್ತ? ಏನು ನಿನ್ನ ಚಿತ್ತ?
ಒಂಟಿ ದ್ವನಿ ಮೊಳಗಿತೋ
ನೇರ ಬಾಯೊಳಗೆ ತೂರಿ ಬರುವ ಬೆತ್ತ
ಗಿರಗಿರ ತಿರುಗಿ ಚಯಾಪಚಯ ಕ್ರಿಯೆಗಳನ್ನೆ ತಬ್ಬಿಬ್ಬುಗೊಳಿಸಿ
ಕಣ್ಣಗುಡ್ಡೆಗಳನ್ನು ಸೀಳಿಕೊಂಡು ಹಾರಿಹೋಗುತ್ತದೆ.

ಕೋತಿ, ಕರಡಿ, ಆನೆ, ಹುಲಿ, ಮನುಷ್ಯ
ಬೆತ್ತಕ್ಕೇನು? ಆಡಿಸುವುದೂ ಗೊತ್ತು ಕುಣಿಸುವುದೂ ಗೊತ್ತು
ಆಟ ನಿಂತರೆ ಬಾಸುಂಡೆಯ ಭಯ
ಬೆತ್ತ ಬೆತ್ತವಷ್ಟೆ?

ನಮ್ಮೊಳಗೊಂದು ನಾಜೂಕಿನ ಬೆತ್ತ
ಸದಾ ತಿವಿಯಲು ಸಜ್ಜಾಗಿರುವಂತೆ ನಿಂತಿರುತ್ತದೆ
ಬೆತ್ತವಿಲ್ಲದ ಚಿತ್ತವ ಬಿತ್ತುವುದಾದರು ಹೇಗೋ?
ನಾಜೂಕಿನ ಬೆತ್ತ ಕುಣಿಯುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.