ಎಷ್ಟೇ ಮಳೆ ಸುರಿದು
ನೆಲವ ತಂಪು ಮಾಡಿದರೂ
ಈ ನೋವು ಶಮನವಾಗದು
ಪ್ರಸವ ವೇದನೆಯಲ್ಲಿ
ಒಂಬತ್ತು ತಿಂಗಳು ಹೊತ್ತು ಹೆರುವ
ಸಹಜ ಹೆರಿಗೆಯ ನೋವಲ್ಲವಿದು
ಇದು ಬೇರೆ
ಮಳೆಯ ಆರ್ಭಟದೊಡನೆ
ಮುಳುಗುತ್ತಿರುವ ಬದುಕು
ಹುಲು ಮಾನವನ ತಾಕತ್ತೆಷ್ಟೆಂದು
ತೋರುತ್ತಿದೆ
ಬೇಕೋ ಬೇಡವೋ
ಅಂಕೆ ಮೀರಿ ಸುರಿವ ಮಳೆ
ಹೀರಿಕೊಳ್ಳುವ ನೆಲದ ಪಾತ್ರಕ್ಕಷ್ಟೇ
ಗೆಳೆಯ
ಒಂಟಿತನ ಕಾಡುವ ಈ ನೋವಿಗೆ
ತಾಯಿ ಮಡಿಲಿನ ಪ್ರೇಮ ಬೇಕು
ಮಳೆಯಂತೆ ದುಗುಡ ಕಳೆದು
ಹಗುರಾಗಲು
ತಾಯಿ ಮಡಿಲಿಲ್ಲದಿದ್ದರೇನಂತೆ
ನಮ್ಮೊಡಲೊಳಗೇ ಹೃದಯ ಕವಾಟದೊಳಗೇ
ನಮಗೆ ನಾವೇ ಒಂದು
ಮಡಿಲು ಸೃಷ್ಟಿ ಮಾಡಬೇಕು
ಕೊನೆಯ ಉಸಿರವರೆಗಿನ
ನೆಮ್ಮದಿಯ ತಾಣಕ್ಕೆ;
ಮೌನ ಉಸಿರಾಡುವ ನಮ್ಮತನದ
ಏಕಾಂತ ಧಾಮಕ್ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.