ADVERTISEMENT

ಕವಿತೆ: ಒಂದಾನೊಂದು ಕಾಲದಲ್ಲಿ

ರವೀಂದ್ರ ಭಟ್ಟ ಕುಳಿಬೀಡು
Published 4 ಡಿಸೆಂಬರ್ 2021, 19:30 IST
Last Updated 4 ಡಿಸೆಂಬರ್ 2021, 19:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಒಂದಾನೊಂದ ಕಾಲದಲ್ಲಿ, ಮಗನೆ
ಅವರು ಅವರ ಹೃದಯದಿಂದ ನಗುತ್ತಿದ್ದರು
ಮತ್ತವರ ನಯನಗಳಿಂದ ನಗುತ್ತಿದ್ದರು,
ಆದರೀಗವರು ಕೇವಲ ತಮ್ಮ ದಂತಗಳಿಂದ ನಗುತ್ತಾರೆ
ಅವರ ಭಾವರಹಿತ ನೇತ್ರಗಳು
ನನ್ನ ನೆರಳಿನ ಹಿಂದೆ ಹುಡುಕಾಡುತ್ತವೆ.

ಒಂದು ಕಾಲವಿತ್ತು - ಅಲ್ಲಿ
ಅವರು ಅವರ ಹೃದಯದಿಂದ ಹಸ್ತಲಾಘವ ನೀಡುತ್ತಿದ್ದರು
ಆದರದು ಹೋಯಿತು, ಮಗನೆ
ಈಗವರದ್ದು ಹೃದಯವಿರದ ಹಸ್ತಲಾಘವ,
ಆಗವರ ಎಡ ಹಸ್ತ ತಡಕಾಡುತ್ತದೆ
ನನ್ನ ಖಾಲಿ ಕಿಸೆಗಳನ್ನು.

‘ನಿಮ್ಮದೇ ಮನೆಯೆಂದು ಭಾವಿಸಿ!’, ‘ಮತ್ತೆ ಬನ್ನಿ’
ಎನ್ನುತ್ತಾರೆ ಮತ್ತು ನಾ ಬಂದರೆ
ಪುನಃ ಹಾಗೆ ಭಾವಿಸಿದರೆ ಮನೆಯಂತೆಂದು
ಒಮ್ಮೆ, ಇನ್ನೊಮ್ಮೆ,
ಅಲ್ಲಿ ಮಗದೊಮ್ಮೆ ಇರುವುದಿಲ್ಲ
ನನಗಲ್ಲಿ ಬಾಗಿಲುಗಳು ಬಂದಾಗಿದ್ದನ್ನು ಕಾಣುತ್ತೇನೆ.

ADVERTISEMENT

ಹೀಗೆ ಹಲವು ಸಂಗತಿಗಳನ್ನು ಕಲಿತೆ, ಮಗನೆ
ಅನೇಕ ಮುಖಗಳನ್ನು ಧರಿಸುವುದನ್ನು ಕಲಿತೆ ನಾನು
ವೇಷತೊಟ್ಟಂತೆ - ಮನೆಯ ಮುಖ
ಕಛೇರಿಯ ಮುಖ - ಹಾದಿ ವದನ - ಅತಿಥೇಯ ಮುಖ
ಕಾಕ್‌ಟೈಲ್ ಮುಖ, ಅವುಗಳಿಗೊಪ್ಪುವಂತೆ ನಗು
ಚಿತ್ರಪಟದ ನಿಶ್ಚಲ ನಗುವಿನಂತೆ.

ಮತ್ತೆ ನಾನೂ ಸಹ ಕಲಿತೆ,
ದಂತಪಂಕ್ತಿಗಳಿಂದಷ್ಟೇ ನಗುವುದನ್ನು
ಹಾಗೇ ಹೃದಯರಹಿತ ಹಸ್ತಲಾಘವ ನೀಡುವುದನ್ನು
‘ಶುಭ ವಿದಾಯ’ವೆನ್ನುವುದನ್ನು ಸಹ ಕಲಿತೆ
‘ಒಳ್ಳೆಯ ಬಿಡುಗಡೆ’ ಎಂದರ್ಥವಾದಾಗ.
‘ಭೇಟಿಯಾದದ್ದು ಸಂತೋಷ’ ಎನ್ನುವುದು
ಸಂತೋಷವಿರದಿದ್ದರೂ, ‘ನಿಮ್ಮೊಂದಿಗಿನ ಮಾತು ಹಿತವಾಗಿತ್ತು’
ಎನ್ನುವುದನ್ನು -ಬೇಸರಗೊಂಡ ಅನಂತರ.

ಆದರೆ ನನ್ನನ್ನು ನಂಬು, ಮಗನೆ,
ನಾನು ಹೇಗಿದ್ದೆನೋ ಹಾಗೇ ಇರಬೇಕು
ನಾನು, ನಿನ್ನಂತೆ ಇದ್ದಾಗ ಎಂದುಕೊಳ್ಳುತ್ತೇನೆ.
ನಾನು ಈ ಜಡ ಸಂಗತಿಗಳಿಂದ ಬಿಡುಗಡೆ
ಪಡೆಯಲಿಚ್ಛಿಸುತ್ತೇನೆ
ಬಹಳಷ್ಟು ಪುನಃ ಕಲಿಯಲು
ನಗುವುದು ಹೇಗೆಂದು, ನನ್ನ ನಗು ದರ್ಪಣದಲ್ಲಿ
ಕಾಣಿಸುತ್ತದೆ - ನನ್ನ ದಂತ ಕೇವಲ ಹಾವಿನ ನಗ್ನ ಹಲ್ಲುಗಳಂತೆ !

ಆದ್ದರಿಂದ ತೋರು ನನಗೆ, ಮಗನೆ
ನಗುವುದು ಹೇಗೆಂದು’ ತೋರು ನನಗೆ
ಹೇಗೆ ಹೇಗೆ ನಗುತ್ತಿದ್ದೆ ಹಾಗೆ ನಿನ್ನಂತಿದ್ದಾಗ ಹೇಗೆ
ಒಂದಾನೊಂದು ಕಾಲದಲ್ಲಿ ನಗುತ್ತಿದ್ದೆ ಎಂಬುದನ್ನು

ಮೂಲ: ಗೇಬ್ರಿಯಲ್ ಒಕಾರ, (ನೈಜೀರಿಯನ್ ಕವಿ) ಕನ್ನಡಕ್ಕೆ: ರವೀಂದ್ರ ಭಟ್ಟ ಕುಳಿಬೀಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.