ಉಸಿರಾಡುತ್ತಿರುವ
ಶ್ವಾಸಕೋಶಗಳ
ನಡುವೆ ಸಿಕ್ಕಿಕೊಂಡ
ಹೃದಯದಲ್ಲಿ
ಕೇಳುವವರಿಗೆ
ಸದ್ದಷ್ಟೇ
ಕೇಳಬಹುದು;
ನಾನು ಕಿವಿಗಳನ್ನು
ಕತ್ತರಿಸೆಸೆದು
ಕೇಳುವುದನ್ನು
ಹೃದಯದಿಂದಲೇ
ಅಭ್ಯಸಿಸಿಕೊಂಡ ಮೇಲೆ
ಪ್ರೀತಿಗಿರುವ ಕಿಟಕಿ
ಕಂಡುಕೊಂಡೆ.
ಆಮೇಲೇನಾಯ್ತೆಂದರೆ;
ವೀರ‍್ಯದ ಲಿಪಿ ಅರ್ಥವಾಗಿ,
ಅಂಡದ ಮೃದುತ್ವ ತಿಳಿದಂತಾಗಿ,
ಸಮುದ್ರಕ್ಕೆ ಉಪ್ಪಿನ ಸ್ವಭಾವ ತಾಗಿ,
ಅಮಾವಾಸ್ಯೆಯ ಭಾರಹೊತ್ತ
ಆಕಾಶ ನೋಡುವಂತಾಗಿ,
ಮೇಲಿಂದ ಸುರಿದ
ಮಳೆಗೆ ಭಾವಾವೇಶದಲ್ಲಿ ಬಾಗಿದಂತಾಗಿ,
ಹರಾಜು ಕಟ್ಟೆಯಲ್ಲಿ
ಹರಾಜಿಗೆ
ನಗ್ನ ನಿಂತೆ
ನೆರಳಿಗೇನು ಚಿಂತೆ?
ವಿಧಿವಿಲಾಸದ ರಮಣಿ
ಗರ್ಭ ಧರಿಸಿ
ತಳುಕಿ ಹಾಕಿಕೊಂಡಂತೆ ಬಳಗದೊಂದಿಗೆ
ಜುಳುಜುಳು ನಿನಾದ
ಹಗೆತನದ್ದು, ಜಾಗಟೆ ಬಾರಿಸಿದೆ ಬೆಂಕಿ
ಹೊಗೆತನದ್ದು:
ಪ್ರೀತಿಗೆ ಅಂಟಿರುವ ಕಥೆಗಳ
ದುರಸ್ತಿ ಕಾರ‍್ಯ
ಈಗೀಗ
ಕೈಗೆತ್ತಿಕೊಂಡಿದ್ದೇನೆ,
ಗರತಿಯಾಗುವ ಭಯ
ಕಲ್ಲಿಗೆ,
ಅದನ್ನು ಕೆತ್ತುವ ಚಾಣಕ್ಕೆ,
ಮನಸು ಬಾಣಕ್ಕೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.