ADVERTISEMENT

ಸರ್ವಾಧಿಕಾರದ ರಾಷ್ಟ್ರೀಯ ಶಿಕ್ಷಣ ಬೇಡ: ಪ್ರೊ.ಸಿದ್ದರಾಮಯ್ಯ ಸಲಹೆ

ನೇಸರ ಕಾಡನಕುಪ್ಪೆ
Published 24 ನವೆಂಬರ್ 2017, 19:30 IST
Last Updated 24 ನವೆಂಬರ್ 2017, 19:30 IST
ಪ್ರೊ.ಎಸ್‌.ಜಿ.ಸಿದ್ದರಾಮಯ್ಯ
ಪ್ರೊ.ಎಸ್‌.ಜಿ.ಸಿದ್ದರಾಮಯ್ಯ   

ಮೈಸೂರು: ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವಾಗ ಸರ್ವಾಧಿಕಾರದ ಛಾಯೆ ಬಾರದ ಹಾಗೆ ನೋಡಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಸಲಹೆ ನೀಡಿದರು.

‘ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವ ನೆಪದಲ್ಲಿ ದೇಶದ ಚರಿತ್ರೆಯನ್ನು ಮಾತ್ರ ಪಠ್ಯದಲ್ಲಿ ಸೇರಿಸಿ ರಾಜ್ಯದ ಚರಿತ್ರೆಯನ್ನು ಗೌಣ ಮಾಡಬಾರದು. ಇದರಿಂದ ರಾಜ್ಯದ ಅಸ್ತಿತ್ವವೇ ನಾಶವಾಗುತ್ತದೆ‘ ಎಂದವರು ‘ಶಿಕ್ಷಣ– ವರ್ತಮಾನದ ಸವಾಲುಗಳು’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಾಹಿತಿ ದೇವನೂರ ಮಹದೇವ ಸೇರಿದಂತೆ ಅನೇಕರು ಶಿಕ್ಷಣದ ರಾಷ್ಟ್ರೀಕರಣವನ್ನು ಬೆಂಬಲಿಸುತ್ತಿದ್ದಾರೆ. ಇದಕ್ಕೆ ನನ್ನ ಬೆಂಬಲವೂ ಇದೆ. ಆದರೆ, ಇದರಲ್ಲಿ ರಾಜ್ಯಗಳು ಸಾಕಷ್ಟು ಎಚ್ಚರಿಕೆ ವಹಿಸಬೇಕು. ರಾಷ್ಟ್ರೀಕರಣಗೊಂಡ ಕೂಡಲೇ ರಾಷ್ಟ್ರೀಯತೆಯನ್ನು ಹೇರುವ ಪ್ರಯತ್ನ ನಡೆಯುತ್ತದೆ. ಪಠ್ಯರಚನೆ ಆಗುವಾಗ ಪ್ರಾಥಮಿಕ ಶಿಕ್ಷಣದಿಂದ, ಉನ್ನತ ಶಿಕ್ಷಣದವರೆಗೂ ಜಾಗರೂಕವಾಗಿರಬೇಕು’ ಎಂದು ಹೇಳಿದರು.

ADVERTISEMENT

‘ಶಿಕ್ಷಣ ಈಗ ಉಳ್ಳವರು ಹಾಗೂ ಬಡವರ ಮಧ್ಯೆ ಕವಲಾಗಿ ಒಡೆದಿದೆ. ಬಡವರನ್ನು ಪ್ರತಿನಿಧಿಸುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಲಿಯುವಂತೆ ಇಲ್ಲ. ದುರಸ್ತಿ ಆಗಬೇಕಾದ, ಒಡೆದು ಹೊಸದಾಗಿ ಕಟ್ಟಬೇಕಾದ ಶಾಲೆಗಳು ಸಾವಿರಾರು ಸಂಖ್ಯೆಯಲ್ಲಿವೆ. ನಮ್ಮ ಮಕ್ಕಳು ಕುಳಿತು ಕಲಿಯುವ ಶಾಲೆಗಳು ಸುರಕ್ಷಿತವಾಗಿರಬೇಕು; ಮೂಲಸೌಕರ್ಯ ನೀಡಬೇಕು. ಇದನ್ನು ಸರ್ಕಾರ ಜವಾಬ್ದಾರಿಯಿಂದ ಮಾಡಿದಾಗ ಖಾಸಗಿ ಶಾಲೆಗಳು ಮೆರೆಯುವುದು ನಿಲ್ಲುತ್ತದೆ’ ಎಂದರು.

ಈ ಕೆಲಸವಾಗದೇ ಇದ್ದಲ್ಲಿ, 200 ವರ್ಷಗಳ ಹಿಂದೆ ಶಿಕ್ಷಣವು ಕೇವಲ ಒಂದು ವರ್ಗಕ್ಕೆ ಮಾತ್ರ ಮೀಸಲಿದ್ದಂತೆ, ಈಗ ಉಳ್ಳವರಿಗೆ ಮಾತ್ರ ಶಿಕ್ಷಣ ಮೀಸಲಾಗಿಬಿಡುತ್ತದೆ. ಪ್ರಜಾಪ್ರಭುತ್ವವನ್ನು ಗೌರವಿಸುವ ಮನಸುಗಳು ಶಿಕ್ಷಣ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಖಾಸಗಿ ವಿಶ್ವವಿದ್ಯಾಲಯಗಳು ಕನ್ನಡದ ಅನ್ನ ತಿಂದಿರುವ ಕನಿಷ್ಠ ಕೃತಜ್ಞತೆಯನ್ನೂ ಹೊಂದಿಲ್ಲ. ಕನ್ನಡ ಕಲಿಕೆಯನ್ನು ನಾಲ್ಕು ಸೆಮಿಸ್ಟರ್‌ಗಳಿಂದ ಎರಡಕ್ಕೆ ಇಳಿಸಿವೆ. ಕನ್ನಡ ಉಪನ್ಯಾಸಕರಿಗೆ ವೇತನ ತಾರತಮ್ಯ ಮಾಡುತ್ತಿವೆ ಎಂದು ಖಾರವಾಗಿ ಹೇಳಿದರು.

ಭಾಷಾ ಕಾಯ್ದೆ ಜಾರಿಯಾಗಿಲ್ಲ: ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡದ ಕಡ್ಡಾಯ ಕಲಿಕೆ ಇರಬೇಕು ಎಂಬ ಭಾಷಾ ಕಾಯ್ದೆ ಪರಿಪೂರ್ಣವಾಗಿ ಜಾರಿಯಾಗಿಲ್ಲ. ಕೇಂದ್ರ ಸರ್ಕಾರವು ಹಿಂದಿಯನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಒತ್ತಾಯ ಹೇರುತ್ತಿರುವುದು ಇದಕ್ಕೆ ಕಾರಣ, ಎಂದು ಶಿಕ್ಷಣ ಇಲಾಖೆ ಹೇಳಿ ಜಾರಿಕೊಳ್ಳುತ್ತಿದೆ. ಹಿಂದಿಯ ಹೇರಿಕೆ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂಬುದನ್ನು ಗಮನಿಸಬೇಕು ಎಂದು ಎಚ್ಚರಿಸಿದರು.

* ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ಅವಕಾಶ ಹೆಚ್ಚಬೇಕು. ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳಬೇಕು. 

– ಡಾ.ವಿಷ್ಣುಕಾಂತ ಚಟಪಲ್ಲಿ, ಕನ್ನಡ ಮಾಧ್ಯಮ– ಉದ್ಯೋಗಾವಕಾಶಗಳು ಕುರಿತು ವಿಚಾರ ಮಂಡನೆ 

* ಶಿಕ್ಷಣ ಹಕ್ಕು ಕಾಯ್ದೆ ಸರ್ಕಾರಿ ಶಾಲೆಗಳಿಗೆ ಮಾರಕವಾಗಿದೆ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿಕೊಳ್ಳುತ್ತಿರುವ ಕಾರಣ, ಸರ್ಕಾರಿ ಶಾಲೆಗಳು ದಿನೇ ದಿನೇ ಖಾಲಿ ಆಗುತ್ತಿವೆ. 

– ಟಿ.ಎಂ.ಕುಮಾರ, ಪ್ರಾಥಮಿಕ ಶಿಕ್ಷಣ– ದೂರವಾಗುತ್ತಿರುವ ಕನ್ನಡ ಕುರಿತು ವಿಚಾರ ಮಂಡನೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.