ADVERTISEMENT

ಬುರುಡೆ ಕಥೆ

ಬುರುಡೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 19:45 IST
Last Updated 23 ಫೆಬ್ರುವರಿ 2019, 19:45 IST
   

ಒಂದು ಹಳ್ಳಿಯಲ್ಲಿ ಮಲ್ಲಯ್ಯ ಎಂಬ ವಯಸ್ಸಾದ ವ್ಯಕ್ತಿಯಿದ್ದ. ಮಲ್ಲಯ್ಯನಿಗೆ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ಇದ್ದರು. ಹೆಂಡತಿ ತೀರಿ ಹೋಗಿದ್ದಳು. ಮಲ್ಲಯ್ಯ ಮಕ್ಕಳು ತಂದುಹಾಕಿದ್ದನ್ನು ತಿಂದುಂಡು ಹಾಯಾಗಿ ಕಾಲ ಕಳೆಯುತ್ತಿದ್ದ. ದಿನವೂ ಕಟ್ಟೆಯ ಮೇಲೆ ಕುಳಿತುಕೊಂಡು ಅವರಿವರ ಬಗ್ಗೆ ಮಾತನಾಡುವುದು, ಹರಟೆ ಹೊಡೆಯುವುದು ಮಲ್ಲಯ್ಯನ ಹವ್ಯಾಸವಾಗಿತ್ತು. ಸ್ನೇಹಿತರ ಮಧ್ಯೆ, ಅತ್ತೆ– ಸೊಸೆಯಂದಿರ ಮಧ್ಯೆ, ಅಣ್ಣ– ತಮ್ಮಂದಿರ ಮಧ್ಯೆ, ಅಕ್ಕಪಕ್ಕದವರ ಮಧ್ಯೆ ಜಗಳ ತಂದಿಟ್ಟು ತಮಾಷೆ ನೋಡುವುದು ಮಲ್ಲಯ್ಯನ ಕೆಟ್ಟ ಚಾಳಿಯಾಗಿತ್ತು. ಒಮ್ಮೆ ಊರಿನವರೆಲ್ಲಾ ಸೇರಿ ಮಲ್ಲಯ್ಯನ ಮಕ್ಕಳ ಬಳಿ ಹೋಗಿ ಅವನ ಬಗ್ಗೆ ದೂರು ಹೇಳಿದರು. ಮಕ್ಕಳು ಬೇಸರದಿಂದ ‘ಅಯ್ಯೋ ಅವನೊಬ್ಬ ಹುಚ್ಚ, ಅವನ ಮಾತಿಗೆಲ್ಲ ತಲೆಕೆಡಿಸಕೊಳ್ಳಬೇಡಿ. ತಂದೆ ಎಂಬ ಗೌರವದಿಂದ ಅವನಿಗೆ ಮೂರು ಹೊತ್ತು ಊಟ ಹಾಕುತ್ತಿದ್ದೇವೆ. ದಯವಿಟ್ಟು ನೀವು ಯಾರೂ ಬೇಜಾರು ಮಾಡಿಕೊಳ್ಳಬೇಡಿ’ ಎಂದು ಸಮಾಧಾನ ಹೇಳಿ ಕಳುಹಿಸಿದರು.

ಊರಿನವರ ಕೃತ್ಯದಿಂದ ಸಿಟ್ಟಿಗೆದ್ದ ಮಲ್ಲಯ್ಯನು, ‘ನನ್ನ ಬಗ್ಗೆ ನನ್ನ ಮಕ್ಕಳ ಬಳಿ ಚಾಡಿ ಹೇಳುತ್ತೀರಾ, ನಾನು ಸಾಯುವುದರೊಳಗೆ ಈ ಹಳ್ಳಿಯ ನೂರು ಮನೆಗಳನ್ನಾದರೂ ಹಾಳು ಮಾಡುತ್ತೇನೆ’ ಎಂದು ಶಪಥ ಮಾಡುತ್ತಾನೆ. ಅಂತೆಯೆ ಅವರಿವರ ಮಧ್ಯೆ ತಂದಿಡುವುದು. ಯಾವುದಾದರು ಒಳ್ಳೆ ಕೆಲಸ ನಡೆಯುತ್ತಿದ್ದರೆ ಅದನ್ನು ಹಾಳು ಮಾಡುವುದು. ಇದೇ ರೀತಿ ತೊಂಬತ್ತೊಂಬತ್ತು ಮನೆಗಳನ್ನು ಹಾಳು ಮಾಡುತ್ತಾನೆ. ಅಷ್ಟರಲ್ಲಿ ಅವನ ಪಾಪದ ಕೊಡ ತುಂಬಿ ಅನಾರೋಗ್ಯದಿಂದ ಮಲ್ಲಯ್ಯ ಸತ್ತು ಹೋಗುತ್ತಾನೆ. ಊರಿನ ಜನರೆಲ್ಲಾ, ‘ಅಬ್ಬಾ, ಸದ್ಯ ಇನ್ನಾದರೂ ಊರಿನವರೆಲ್ಲ ನಿಶ್ಚಿಂತೆಯಿಂದ ಇರಬಹುದು’ ಎಂದು ನೆಮ್ಮದಿಯಿಂದ ಉಸಿರಾಡ ತೊಡಗಿದರು.

ಇತ್ತ ಮಲ್ಲಯ್ಯನ ಮಕ್ಕಳು ಶಾಸ್ತ್ರಬದ್ಧವಾಗಿ ಮಲ್ಲಯ್ಯನ ಅಂತ್ಯ ಸಂಸ್ಕಾರವನ್ನೆಲ್ಲ ಮುಗಿಸಿದರು. ಆದರೆ ಮಲ್ಲಯ್ಯನ ಆತ್ಮಕ್ಕೆ ನೆಮ್ಮದಿ ಸಿಗಲಿಲ್ಲ. ‘ನೂರು ಮನೆಗಳನ್ನು ಹಾಳು ಮಾಡುವುದಾಗಿ ನಾನು ಊರವರ ಮುಂದೆ ಶಪಥ ಮಾಡಿದ್ದೆ. ಇನ್ನೊಂದು ಮನೆ ಬಾಕಿ ಉಳಿದು ಬಿಟ್ಟಿತಲ್ಲ’ ಎಂದು ಮಲ್ಲಯ್ಯನ ಆತ್ಮ ಕೊರಗುತ್ತಿತ್ತು. ಹೀಗೆಯೇ ಒಂದು ವರ್ಷ ಕಳೆದು ಹೋಯಿತು. ಮಲ್ಲಯ್ಯನ ಆತ್ಮಕ್ಕೆ ನೆಮ್ಮದಿಯೇ ಇರಲಿಲ್ಲ. ಮಲ್ಲಯ್ಯನನ್ನು ಅವನ ಹೊಲದಲ್ಲಿಯೇ ಮಣ್ಣು ಮಾಡಲಾಗಿತ್ತು. ಒಂದು ದಿನ ಸುರಿದ ಭಾರೀ ಮಳೆಯಿಂದಾಗಿ ಅವನನ್ನು ಮಣ್ಣು ಮಾಡಿದ್ದ ಜಾಗ ಸವೆದು, ಮಲ್ಲಯ್ಯನ ತಲೆ ಬುರುಡೆ ಹೊರಗೆ ಕಾಣಿಸಿಕೊಂಡಿತು. ಮಲ್ಲಯ್ಯನ ಆತ್ಮವು ‘ಹಾ... ಈಗ ನನ್ನ ಆಸೆ ನೆರವೇರುವ ಕಾಲ ಬಂತು’ ಎಂದು ಸಂತಸಪಟ್ಟಿತು. ಊರಿನವರು ಯಾರಾದರು ತನ್ನ ಬರುಡೆಯ ಕಡೆ ಬರುವುದನ್ನೇ ಕಾಯುತ್ತಿತ್ತು.

ADVERTISEMENT

ಮಳೆಯಿಂದಾಗಿ ಭೂಮಿಯು ಹದವಾಗಿತ್ತು. ರೈತರೆಲ್ಲಾ ಹೆಗಲ ಮೇಲೆ ನೇಗಿಲುಗಳನ್ನು ಇಟ್ಟುಕೊಂಡು ಉಳಲು ತಮ್ಮ ಹೊಲಗಳತ್ತ ಹೊರಟರು. ಅದೇ ಹಳ್ಳಿಯಲ್ಲಿ ವಾಸವಾಗಿದ್ದ ರಂಗಣ್ಣನೂ ತನ್ನ ಹೊಲದತ್ತ ಹೊರಟಿದ್ದ. ದಾರಿಯ ಮಧ್ಯೆ ಅವನಿಗೆ ಮಲ್ಲಯ್ಯನ ಬುರುಡೆ ಕಾಣಿಸಿತು. ಮಲ್ಲಯ್ಯನ ಬುರುಡೆಯು, ‘ನನಗೆ ನೂರನೇ ಮಿಕ ಸಿಕ್ಕಿತು’ ಎಂದು ಖುಷಿಪಟ್ಟಿತು. ರಂಗಣ್ಣನನ್ನು ನೋಡಿದ ಕೂಡಲೇ ಮಲ್ಲಯ್ಯನ ಬುರುಡೆಯು, ‘ಏನಪ್ಪ, ಎಲ್ಲಿಗೆ ಹೊರಟೆ’ ಎಂದು ಕೇಳಿತು. ರಂಗಣ್ಣನಿಗೆ ಆಶ್ಚರ್ಯದ ಜೊತೆಗೆ ಭಯವೂ ಆಗಿ, ‘ಅಯ್ಯೊ ಬುರುಡೆ ಮಾತನಾಡುತ್ತಿದೆ’ ಎಂದು ಜೋರಾಗಿ ಕೂಗಲು ಪ್ರಾರಂಭಿಸಿದ. ಬುರುಡೆಯು, ‘ಹೆದರಬೇಡ ನಾನು ಒಬ್ಬ ಹಿರಿಯ. ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತೇನೆ. ನನ್ನ ಒಳ್ಳೆಯ ಗುಣಗಳನ್ನು ನೋಡಿ ದೇವರು, ಸತ್ತ ಮೇಲೂ ಮಾತನಾಡುವ ಶಕ್ತಿಯನ್ನು ನನಗೆ ಕೊಟ್ಟಿದ್ದಾನೆ. ನನ್ನ ಮಾತು ಒಳ್ಳೆಯವರಿಗೆ ಮಾತ್ರ ಕೇಳಿಸುವುದು. ನಿನಗೆ ಕೇಳಿಸುತ್ತಿದೆ ಎಂದರೆ ನೀನು ಒಳ್ಳೆಯವನೇ ಇರಬೇಕು’ ಎಂದಿತು. ರಂಗಣ್ಣನಿಗೆ ಸಮಾಧಾನವಾಯಿತು. ಆನಂತರ ‘ಹಾ... ಈಗ ಹೇಳು ಎಲ್ಲಿಗೆ ಹೊರಟಿರುವೆ’ ಎಂದಿತು ಬುರುಡೆ. ರಂಗಣ್ಣನು ‘ರಾತ್ರಿ ಚೆನ್ನಾಗಿ ಮಳೆ ಆಗಿದೆಯಲ್ಲ ಅದಕ್ಕೆ ಹೊಲ ಉಳಲು ಹೋಗುತ್ತಿದ್ದೇನೆ’ ಎಂದ. ಅದಕ್ಕೆ ಮಲ್ಲಯ್ಯನ ಬುರುಡೆ, ‘ಅಯ್ಯೋ ಮೂಢ, ಈ ಮಳೆಗೆಲ್ಲ ಉಳಲು ಹೋಗುತ್ತಿದ್ದೀಯಲ್ಲ. ಇದು ಒಂದು ದಿನದ ಮಳೆ ಅಷ್ಟೇ. ಮತ್ತೆ ಮಳೆ ಬರುವುದಿಲ್ಲ ಸುಮ್ಮನೆ ಶ್ರಮಪಡಬೇಡ ಮನೆಗೆ ಹೋಗು ಎಂದಿತು. ‘ಮತ್ತೆ, ಅವರೆಲ್ಲ ಉಳುತ್ತಿದ್ದಾರಲ್ಲ’ ಎಂದು ರಂಗಣ್ಣ ಪ್ರಶ್ನಿಸಿದ. ಅದಕ್ಕೆ ‘ಅವರೆಲ್ಲ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ನೀನು ಮಾತ್ರ ನನ್ನ ಮಾತು ಕೇಳು’ ಎಂದಿತು ಬುರುಡೆ. ಹಿರಿಯರು ಹೇಳಿದ್ದನ್ನು ಪಾಲಿಸುವುದೇ ಸರಿ ಎಂದು ರಂಗಣ್ಣ ಭೂಮಿಯನ್ನು ಉಳುಮೆ ಮಾಡದೆ ಮನೆಗೆ ಹಿಂದಿರುಗಿದ.

ಒಂದು ವಾರದ ನಂತರ ಮತ್ತೆ ಮಳೆಯಾಯಿತು. ಹೊಲಗಳನ್ನು ಉತ್ತಿದ್ದ ರೈತರೆಲ್ಲ ರಾಗಿಯನ್ನು ಬಿತ್ತಲು ಹೊರಟರು. ರಂಗಣ್ಣನಿಗೆ ಕಳವಳ ಶುರುವಾಯಿತು. ನಾನು ಅಂದೇ ಹೊಲವನ್ನು ಉಳಬೇಕಿತ್ತು. ಈ ಬಾರಿಯಾದರೂ ಉಳೋಣವೆಂದು ಮತ್ತೆ ನೇಗಿಲು ಹಿಡಿದು ಹೊರಟ. ದಾರಿಯಲ್ಲಿ ಮಲ್ಲಯ್ಯನ ಬುರುಡೆ ಎದುರಾಯಿತು. ‘ಇದೇನಿದು ನೇಗಿಲು ಹಿಡಿದು ಹೊರಟೆ’ ಎಂದಿತು. ರಂಗಣ್ಣ, ‘ನಿನ್ನ ಮಾತು ಕೇಳಿ ಆವತ್ತು ಹೊಲ ಉಳದೆ ಮನೆಗೆ ಹೋದೆ. ಎಲ್ಲರೂ ಇವತ್ತು ರಾಗಿ ಬಿತ್ತಲು ಹೋಗುತ್ತಿದ್ದಾರೆ ನಾನು ಮಾತ್ರ ಇನ್ನು ಉತ್ತೇ ಇಲ್ಲ’ ಎಂದ. ಅದಕ್ಕೆ ಬುರುಡೆ, ‘ಅಯ್ಯೊ! ಹುಚ್ಚಪ್ಪ ಅವರು ಬಿತ್ತಲಿ. ಬೀಜವು ಮೊಳಕೆಯೊಡೆದು ಪೈರು ಬರಲು ಮಳೆ ಬೇಕಲ್ಲವೇ? ಬೇಕೆಂದರೆ ನೀನೇ ನೋಡು ಅವರೆಲ್ಲ ಮಳೆ ಬರದೆ ಅಯ್ಯೊ ಯಾಕಾದರೂ ಬಿತ್ತನೆ ಮಾಡಿದೆವೋ, ಮಳೆ ಇಲ್ಲದೆ ಎಲ್ಲ ಹಾಳಾಯಿತು ಎಂದುಕೊಂಡು ಗೋಳಾಡುತ್ತಾರೆ. ಆಗ ನೀನು ಅಬ್ಬ, ನಾನು ಬಚಾವಾದೆ ಎಂದುಕೊಳ್ಳುತ್ತೀಯಾ’ ಎಂದಿತು. ಬುರುಡೆಯ ಮಾತು ಕೇಳಿ ಈ ಬಾರಿಯೂ ರಂಗಣ್ಣ ಮನೆಗೆ ಹೋದ. ಮಿಕ್ಕವರೆಲ್ಲ ಬಿತ್ತನೆ ಮಾಡಿ ಬಂದರು.

ಹದಿನೈದು ದಿನಗಳ ನಂತರ ಮತ್ತೆ ಮಳೆಯಾಯಿತು. ಕೆಲ ದಿನಗಳ ನಂತರ ಎಲ್ಲರ ಹೊಲಗಳಲ್ಲೂ ರಾಗಿಯ ತೆನೆಗಳು ಹಸಿಹಸುರಾಗಿ ತೂಗಾಡಿದವು. ತೆನೆ ಬಲಿತು ಕೊಯಿಲಿಗೂ ಬಂತು. ಎಲ್ಲರೂ ಸಂತಸದಿಂದ ಬೆಳೆಯನ್ನು ಕಟಾವು ಮಾಡಲು ಕುಡುಗೋಲುಗಳನ್ನು ಹಿಡಿದು ಹೊರಟರು. ಪಾಪ! ರಂಗಣ್ಣ ಮಾತ್ರ, ‘ಅಯ್ಯೊ ಬುರುಡೆ ಮಾತು ನಂಬಿ ಕೆಟ್ಟೆನಲ್ಲಪ್ಪ’ ಎಂದು ತಲೆಯ ಮೇಲೆ ಕೈಇಟ್ಟು ಕುಳಿತ. ಮಲ್ಲಯ್ಯನ ಬುರುಡೆ ಉದ್ದೇಶ ನೂರು ಜನರನ್ನು ಹಾಳು ಮಾಡುವುದು. ಆ ನೂರನೆಯವನಾಗಿ ಈ ರಂಗಣ್ಣ ಬಲಿಯಾದ. ನೂರು ಮನೆಗಳನ್ನು ಹಾಳು ಮಾಡಿದ ತೃಪ್ತಿ ಮಲ್ಲಯ್ಯನ ಆತ್ಮಕ್ಕೆ ಲಭಿಸಿತು.

ಅವರಿವರ ಮಾತುಗಳನ್ನು ಹೇಳಿ ಕೆಡಬಾರದು, ತಮ್ಮ ಸ್ವಂತ ಬುದ್ಧಿಯನ್ನು ಬಳಸಿ ಜೀವನ ನಡೆಸಬೇಕೆಂಬ ಸತ್ಯವು ಈ ಘಟನೆಯಿಂದಾಗಿ ರಂಗಣ್ಣನಿಗೆ ಅರ್ಥವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.