ADVERTISEMENT

ಶ್ರೀಧರ ಗಸ್ತಿ ಅವರ ಕಥೆ | ದೇವಸೂರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2023, 5:57 IST
Last Updated 11 ಜೂನ್ 2023, 5:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೈಗೆ ಕೋಳ ಹಾಕಿ ತನ್ನನ್ನು ಕರೆದೊಯ್ಯುತ್ತಿರುವವರು ಪೋಲೀಸರಲ್ಲ ಎಂದು ಗೊತ್ತಾಗುತಿದ್ದಂತೆಯೇ ಒಂದೇ ನೆಗೆತದಲ್ಲಿ ಅಲ್ಲಿದ್ದವರನ್ನು ಸದೆಬಡಿದು, ಓಡುತ್ತಿರುವ ಜೀಪಿನಿಂದ ನೆಗೆಯುತ್ತಾನೆ. ದಟ್ಟ ಕಾನನದ ಒಳಹೊಕ್ಕು ಬೆನ್ನು ಬಿದ್ದವರ ತಪ್ಪಿಸಿಕೊಳ್ಳುತ್ತ, ಹವಣಿಕೆಗಳ ಹೆಣೆಯುತ್ತ ವೀರಯೋಧನಂತೆ ಮುನ್ನುಗ್ಗುತಿದ್ದ ದೇವಸೂರನ ತಾಳ್ಮೆ ಕಟ್ಟೆಯೊಡದಿತ್ತು. ಅಮವಾಸ್ಯೆಯ ಕಗ್ಗತ್ತಲು ರಾತ್ರಿ ಭೂತ ಪ್ರೇತಗಳೇ ಹೆದರಿ ಓಡುವಂತೆ ಮುಖದಲ್ಲಿ ರೌದ್ರ ಕಳೆ ತಾಂಡವವಾಡುತಿತ್ತು. ಕಾಡುಮೇಡಿನ ನಡುವೆ ಯಾವುದೋ ತಮಗರಿವಿಲ್ಲದ ಪ್ರಾಣಿಯೊಂದು ದಾಳಿಮಾಡುತ್ತಿದೆ ಎಂಬ ಭಾವ, ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಧಾಪುಗಾಲಿನ ಸಪ್ಪಳಕೆ ನೀರಿನಲ್ಲಿ ಅಲೆಗಳ ಅಬ್ಬರ, ಜಲಚರ ಪ್ರಾಣಿಗಳಲ್ಲಿ ತಳಮಳ, ಇದಾವ ಶಕುನವೆಂದು. ಸರಿಸೃಪಗಳು ಹುಲಿ ಸಿಂಹ ಕರಡಿಗಳಾದಿಯಾಗಿ ದಾರಿ ಕೊಡುತಿದ್ದವೋ ಅಥವಾ ಹೆದರಿ ಪಲಾಯನಗೈದಿದ್ದವೋ ಎಂಬಂತೆ ಭಯಂಕರ ಭಿಬತ್ಸ ನೋಟ, ಹೆಜ್ಜೆಯ ಭಾರಕೆ ಭುವಿ ನಡುಗುತ್ತಿರುವ ರೋಧನ, ಧರೆಗುರುಳುತ್ತಿರುವ ಮರಗಳ ಲೆಕ್ಕಿಸದೇ ,ಮುನ್ನುಗ್ಗುತಿರುವ ಇತನ ಓಟದ ವೇಗ ಪ್ರವಾಹವನ್ನೇ ಹೆದರಿಸುವಷ್ಟು ವೈರುದ್ಧವಾಗಿತ್ತು. ಆತನ ದಾಳಿಯ ರಭಸಕ್ಕೆ ಮೈಮೇಲಿನ ಬಟ್ಟೆ ಬರಿಯೆಲ್ಲ ಮುಳ್ಳು ಕಂಟಿಗಳಿಗೆ ತರೆದು ರಕ್ತ ಸಿಕ್ತವಾಗಿವೆ. ದೇವಸೂರ ಊರಹೊರಗಿನ ಕೆರೆದಂಡೆ ಮರದಮ್ಮನ ಗುಡಿ ಹೊಕ್ಕವನೇ, ಆ ಕಗ್ಗತ್ತಲ ಮಧ್ಯ ರಾತ್ರಿಯಲ್ಲಿ ಊರಿಗೆ ಊರೇ ಬೆಚ್ಚಿಬೀಳುವಂತೆ ಗಂಟೆ ಬಾರಿಸಲು ಶುರುಮಾಡಿದ. ಆ ಗಂಟಾ ನಿನಾದ ಏನೋ ಅವಘಡ ಸಂಭವಿಸಿದೆ ಎಂಬ ಸೂಚನೆ ನೀಡುತಿತ್ತು.
ಸುರಪುರದ ಇತಿಹಾಸದಲ್ಲಿ ಚಿರಸ್ಮರಣೀಯವಾಗಿರುವ ಓ ತಾಯಿಯೇ ಅದೆಷ್ಟು ರಾಜ ಮಹಾರಾಜರ ದಿಗ್ವಿಜಯಕ್ಕೆ ಕಾರಣವಾಗಿರುವ ನೀನು ಕಾಲ ಭೈರವಿ. ಯುದ್ಧಗಳ ಮೆಟ್ಟಿ ನಿಂತು ಸಹೋದರ ಭಾವ ಬೆಸೆದ ಮಾನಿಣಿ. ಯುದ್ಧದಲಿ ತನ್ನ ಸೈನಿಕರು ಗೆಲ್ಲಲೆಂಬ ಸ್ಪೂರ್ತಿ ತುಂಬಿದ ಮಾಯೇ. ಗಂಡಂದಿರು ಯುದ್ಧಕೆ ತೆರಳುವಾಗ ಅವರ ವೀರ ದಿಗ್ವಿಜಯಕ್ಕಾಗಿ ಹೆಂಡಂದಿರ ತಾಳಿಯನ್ನು ಪಣಕ್ಕಿಟ್ಟು ರೋಷ ಆವೇಶದ ಕಿಚ್ಚು ಹೊತ್ತಿಸಿ ಮುತ್ತೈದೆಯರ ಭಾಗ್ಯ ಕರುಣಿಸಿ ಆಶೀರ್ವದಿಸುತಿದ್ದ ತಾಯೇ, ಅದೇಕೆ? ಇಂದು ಅನ್ಯಾಯದ ತೂಗುಗತ್ತಿಯೇ ನಿನ್ನ ಮೇಲೆ ಕಳಚಿ ಬೀಳುತ್ತಿರುವಾಗ ಮೌನ ತಾಳಿರುವೆ. ಅಳಿದು ಹೋದ ರಾಜ ಮಹಾರಾಜರ ಕೂಡ ನಿನ್ನೆಲ್ಲ ಶಕ್ತಿ ಸಾಮರ್ಥ್ಯ ಉಡುಗಿ ಹೋಯಿತೆ? ಹೇಳುತಾಯೇ ಹೇಳು. ಸರ್ವಧರ್ಮ ಸಮನ್ವಯತೆ ಸಾರಿದ ನಾಡು ನಮ್ಮದು, ಕುಲ ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂಬ ಕನಕವಾಣಿ, ಇವನಾರವ ಇವನಾರವ ಎಂದೆನಿಸದೇ ಎಲ್ಲರೂ ನಮ್ಮವರೇ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದ ನಾಡಿನಲ್ಲಿ ಅಸಮಾನತೆಯ ಬೆಂಕಿಜ್ವಾಲೆ ಧರ್ಮ ಧರ್ಮಗಳ ಮಧ್ಯೆ ಹೊಗಿ ಎಬ್ಬಿಸಿದೆ, ಜಾತಿಗೊಂದು ಸಂಘ, ಜಾತಿ-ಉಪಜಾತಿಗೊಬ್ಬ ದೇವರು, ಉಪದೇಶ ನೀಡಿದವರೆಲ್ಲ ಇವರ ದೇವರ ಮನೆ ಅಲಂಕರಿಸಿದ್ದಾರೆ. ಮಾಟ ಮಂತ್ರಗಳ ಮೊರೆ ಹೋದ ಮನುಜ ಮಾನವೀಯತೆ ಮರೆತಿದ್ದಾನೆ. ಮೌಢ್ಯತುಂಬಿದ ಈ ಸಮಾಜ ನನ್ನನ್ನು ನಡೆಸಿಕೊಳ್ಳುತ್ತಿರುವ ರೀತಿ ನಿನಗೆ ಒಪ್ಪಿಗೆಯಾಯ್ತಾ? ಹೇಳು ತಾಯೆ ಹೇಳು,ಎನ್ನುವಷ್ಟರಲ್ಲಿ ದೇವಸೂರನ ತಲೆಯ ಮೇಲೆ ಜೋರಾದ ಹೊಡೆತ, ಒಂದೇ ಕ್ಷಣದಲ್ಲಿ ಹಾ ಆಆಆಆ ಅಯ್ಯೋ ಯಾರಲೇ ಸೂ.....ಮಗನ ಎನ್ನುತ್ತ ಧರೆಗುರುಳಿದ ಮರದಂತೆ ದೇವಸೂರ ದೊಪ್ಪನೆ ಬೀಳುತ್ತಾನೆ.

ಯವ್ವಾಬೇ! ಈ ಸಲ ತಿಂಥನಿಗೆ ಹೋಗೋಣ ಅಲ್ಲಿ ಮೌನೇಶ್ವರನ ಜಾತ್ರಿ ಭಾಳ ಜೋರಾಗ್ತೈತ್ಯಂತ, ಅಲ್ಲಿ ಟೆಂಟ್ ಹಾಕಿದ್ರ ಬಹುಶಃ ನಮ್ಮ ಕಷ್ಟ ಎಲ್ಲಾ ದೂರಾಗ್ಬೌದೇನೋ, ಅಂದಾಗ ಅವ್ವ ಗೌಳ್ತಿ, ಹಾಂ ಮಗಾ ನಂದೇನ ದುಸರಾ ಮಾತಿಲ್ಲ ನಿಮ್ಮಪ್ಪಂಗೆ ಗೂರಲು, ನಡಿಯಾಕ್ಕಾಗಾಂಗಿಲ್ಲ ಏನ್ಮಾಡೋದು ತಿಳಿವಲ್ದು ಕನ್ಲಾ, ಮಗ ಸೂರನ ಧೈರ್ಯದ ಮಾತುಗಳಿಗೆ ಇಂಬುಗೊಟ್ಟಂತೆ, ಸೂರಾss ಕಷ್ಟಂಬೋದು ತ್ಯಪ್ಪಿದ್ದಲ್ಲ ಹೋಗೋಣ ಯಾವುರಾದ್ರೇನು? ನಿಮ್ಮಪ್ಪಂಗೆ ಬಸ್ಸಿಗೆ ಹತ್ಸೋಣ ನಾವಿಬ್ರು ಈ ಕತ್ತೆಗಳ ಜೊತೆ ನಾವು ಕತ್ತೆಯಾಗೋಣ. ಹಿಂಗs ಊರಿಂದೂರಿಗೆ ಅಲೆಮಾರಿ ಜೀವನ ನಡೆಸುವ ಗೊಲ್ಲರ ಗೌಳ್ತಿ ತನ್ನ ಕುಟುಂಬದ ಈ ಸಲದ ಬಿಡಾರವನ್ನು ತಿಂಥನಿ ಮೌನೇಶನ ಸೀಮೆಗೆ ಸ್ಥಳಾಂತರಿಸಿದ್ದಳು. ತಿಂಥನಿ ಹಿಂದೂ ಮುಸ್ಲಿಂ ಐಕ್ಯತೆ ಸಾರುವ ಧಾರ್ಮಿಕ ಪುಣ್ಯ ಕ್ಷೇತ್ರ. ಇಲ್ಲಿಯ ಮೌನೇಶ್ವರರು ಪವಾಡ ಪುರುಷರಾಗಿ ಇಡೀ ದೇಶಕ್ಕೆ ಸಾಮರಸ್ಯತೆಯನ್ನು ಸಾರಿ ಹೇಳಿದ್ದು ಐತಿಹ್ಯ. ಈ ಜಾತ್ರೆಗೆ ಎಲ್ಲ ಜನಾಂಗದ ಜನರು ಜಾತಿಮತ ಮರೆತು ಐಕ್ಯತೆ ಮೆರೆಯುತ್ತಾರೆ. ಇದೊಂದು ಪಾರಂಪರಿಕ ಐತಿಹಾಸಿಕ ಜಾತ್ರೆ.

ಗುಡಿಯ ಅಕ್ಕಪಕ್ಕದಲ್ಲಿ ಜಾತ್ರೆಯ ಎಲ್ಲ ತರದ ಅಂಗಡಿಗಳು ಜಮಾಯಿಸಿದ್ದವು. ಅಣತಿ ದೂರದಲ್ಲಿ ಗೊಲ್ಲರ ಗೌಳ್ತಿಯ ಅಂಗಡಿ ಆಕರ್ಷಣಿಯ ಕೇಂದ್ರ ಬಿಂದುವಾಗಿತ್ತು. ನಲ್ವತ್ತರ ಆಸುಪಾಸಿನ ಗೌಳ್ತಿಯ ಉಬ್ಬುತಗ್ಗಿನ ವೈಯಾರ ಅವಳ ಮಾತು ಎಲ್ಲರಿಗೆ ಆಕರ್ಷಣೀಯಾಗಿತ್ತು. ಅದರಲ್ಲೂ ಆಕೆಯ ಮಗನ ಗಟ್ಟಿಮುಟ್ಟಾದ ಮೈಕಟ್ಟು, ಅಜಾನುಬಾಹು ದೇಹ, ಎತ್ತರದ ನಿಲುವು, ದುಂಡನೆಯ ಮುಖ ಎಂತಹ ಹುಡುಗಿಯರನ್ನೂ ಕೆಣಕುವಂತೆ ಮಾದಕವಾಗಿತ್ತು. ಆಟಿಕೆಯ ಸಾಮಾನುಗಳ ಮಾರಾಟಕ್ಕೆ ಇವರ ಅಂಗಡಿ ಗಿಜಗುಡುವಂತೆ ಮಾರ್ಪಾಟಾಗಿತ್ತು. ದೇವರ ದರ್ಶನಕ್ಕೆ ಬಂದ ಎಷ್ಟೋ ಹುಡುಗ - ಹುಡುಗಿಯರ ದೃಷ್ಟಿ ಈ ಕಡೆ ವಾಲಿಯೇ ಇತ್ತು. ಜಾತ್ರೆಯಲ್ಲಿ ಪ್ರತಿವರ್ಷದಂತೆ ಕುದುರೆಓಡಿಸುವ, ಜಂಗಿ ಕುಸ್ತಿ, ಚಕ್ಕಡಿ ಓಟ, ಹೀಗೆ ನಾನಾ ತರದ ಸ್ಪರ್ಧೆಗಳ ಕಾಳಗ ಆರಂಭವಾಗಿದ್ದವು. ಇದರಲ್ಲಿ ಕುದುರೆ ಓಟಕ್ಕೆ ಐತಿಹ್ಯವಿದೆ. ಸ್ಥಳೀಯ ದೇವರ ಕುದುರೆಗೆ ಮೌನೇಶನ ಕುದುರೆ ಎಂಬ ಖ್ಯಾತಿ. ಇಲ್ಲಿಯವರೆಗೂ ಆ ಕುದುರೆಯನ್ನು ಸೋಲಿಸಲಾಗಿಲ್ಲ ಎಂಬುದು ದೈವಾನುಗ್ರಹ. ಯಾರು ಈ ಕುದುರೆಯನ್ನು ಸೋಲಿಸುವರೋ ಅವರೇ ದೈವದ ಕುದುರೆಯನ್ನು ಸವಾರಿ ಮಾಡುವುದು, ಮತ್ತು ದೈವದ ಕುದುರೆ ಎಂಬ ನಾಮಾಂಕಿತ ಹೊಂದಿ ದೈವ ಸನ್ನಿಧಿಯಲ್ಲಿ ಪ್ರೀತಿಪಾತ್ರರಾಗುತ್ತಾರೆ. ಆದರೆ ಇಲ್ಲಿಯವರೆಗೂ ಈ ಕುದುರೆ ಸೋತ ಉದಾಹರಣೆಯಿಲ್ಲ ಹೀಗಾಗಿ ಈ ಸಲವು ಆ ಕುದುರೆ ಮತ್ತು ಸವಾರ ಮಾದಯ್ಯ ರಾಜಮರ್ಯಾದೆಯೊಂದಿಗೆ ವೇದಿಕೆಗೆ ಬರುವುದೇ ಒಂದು ದೊಡ್ಡ ಹಬ್ಬ. ನೋಡಲು ಎರಡು ಕಣ್ಣು ಸಾಲದೆಂಬಂತೆ ರಸ್ತೆಯ ಇಕ್ಕೆಲಗಳಲ್ಲಿ ಜನಸ್ತೋಮ ಸ್ವತ: ಮೌನೇಶ್ವರರೇ ಕುದುರೆಯ ರೂಪದಲ್ಲಿ ಬರುತ್ತಿರುವರೆಂಬ ಸಂಭ್ರಮ. ಹಣ್ಣು ಕಾಯಿಗಳ ಪೂಜೆ ವೈಭವ, ತಮ್ಮ ಇಷ್ಟ ಸಿದ್ಧಿಗಳನ್ನು ವರ್ಷಕ್ಕೊಮ್ಮೆ ಭಕ್ತಿಯಿಂದ ಬೇಡಿಕೊಳ್ಳುವುದು ಪ್ರತೀತಿ. ಸ್ಪರ್ದಾಳುಗಳಾಗಿ ಬಂದವರೂ ಸಹ ನಮಗೆ ಗೆಲ್ಲುವ ಶಕ್ತಿ ಕೊಡು ಎಂದು ಬೇಡಿಕೊಳ್ಳುವ ಯೋಗಾನುಯೋಗ. ಇನ್ನೇನು ಕುದುರೆ ತನ್ನ ಲಾಯ ಬಿಟ್ಟು ಸ್ಪರ್ಧಾ ಕಣ ಮುಟ್ಟುವ ಹೊತ್ತಿಗೆ, ಕುದುರೆ ಸವಾರ ಮಾದಯ್ಯ ಕುಸಿದು ಕೆಳಕ್ಕೆ ಬಿದ್ದು ಅಕಾಲಿಕ ಮರಣ ಹೊಂದುತ್ತಾನೆ. ಜನ ಆಶ್ಚರ್ಯ ಮತ್ತು ಭಯದಿಂದ ಚಿತ್ಕರಿಸುತ್ತಾ ಅಯ್ಯೋ ದೇವರೇ ಮೌನೇಶಾ ಏನಪ್ಪಾ ಇದು, ಎಂದು ಗೋಗರೆಯುತ್ತಾರೆ, ಅಳುತ್ತಾರೆ, ದು:ಖಿಸುತ್ತಾರೆ. ಈ ಊರಿಗೆ ಏನೋ ಕಾದಿದೆ ಎಂಬುದು ಮತ್ತು ಮಾದಯ್ಯನ ಬಗ್ಗೆ ಹುಟ್ಟಿಕೊಂಡ ಗುಸುಗುಸು ಮಾತುಗಳು ಹಕ್ಕಿಗೆ ರೆಕ್ಕೆ ಪುಕ್ಕ ಬಂದು ಹಾರಿ, ಊರಿನ, ಅಕ್ಕಪಕ್ಕದೂರಿನ, ಅಷ್ಟೇ ಏಕೆ ಇಡೀ ರಾಜ್ಯದ ಮನೆಮಾತಾಗಿ ಬಿಡುತ್ತದೆ.
ಅಘಟಿತ ಘಟನೆಯ ನೆಪವೊಡ್ಡಿ ಆಡಳಿತ ಮಂಡಳಿಯು ಕುದುರೆ ಓಟವನ್ನು ಒಂದುದಿನ ಮುಂದೂಡಲ್ಪಡುತ್ತದೆ. ಜಾಹೀರಾತು ಮತ್ತು ಜಾಗಟೆ ಬಾರಿಸುವ ಮೂಲಕ ಒಳ್ಳೆಯ ಕುದುರೆ ಸವಾರನಿಗಾಗಿ ಪ್ರಕಟಣೆ ಹೊರಡಿಸಲಾಗುತ್ತದೆ. ದೇವರ ಕುದುರೆಯೆಂದು ಯಾರೂ ಸವಾರಿ ಮಾಡಲು ಮುಂದೆ ಬರಲು ಪ್ರಯತ್ನವನ್ನೇ ಮಾಡುವುದಿಲ್ಲ. ದೈವದ ಕುದುರೆ ಓಡಬೇಕು ಇಲ್ಲದಿದ್ದರೆ ಈ ಊರಿಗೆ, ನಾಡಿಗೆ, ಏನೋ ಕಾದಿದೆ ಎಂಬ ಗುಲ್ಲು ಗುಟ್ಟಾಗಿ ಉಳಿದಿರಲಿಲ್ಲ. ಕೊನೆಘಳಿಗೆಯ ಕೊನೆಕ್ಷಣದವರೆಗೂ ಯಾರೂ ಕದುರೆ ಸವಾರಿಗಾಗಿ ಬರದೇ ಇದ್ದಾಗ ತಾಯಿ ಗೌಳ್ತಿ, ಮಗ ಸೂರನಿಗೆ, ಈ ಊರ್ನಾಗೆ ಏನೋ ನಡೀತಿದೆ ಆ ಮೌನೇಶಾನೇ ನಮ್ಮನ್ನು ಕರಿಸಿಕೊಂಡವ್ನೆ ಅನಸ್ತೈತಿ, ನೀ ಹೆಂಗೂ ಕುದುರೆ ಓಡಸ್ತಿ, ಒಂದ್ಸಲ ಓಡಿಸಿ ಬಿಡ್ಲಾ. ಅಲ್ಬೆ ಯವ್ವಾ ನಾನ್ಯಾವಾಗ ಕುದುರೆ ಓಡ್ಸಿನ್ನಬೇ ಅಂದಾಗ, ಸೂರಾ ನೀ ಕುದುರಿ ಓಡ್ಸಿಲ್ಲ ಖರೆ, ಆದ್ರ ಈ ನನ್ಮಗಂದು ಕತ್ತಿನ ಕುದುರಿ ಜತೆ ಓಡಿಸಿ ಬಹುಮಾನ ತಂದ ಮಗಾ ನೀನು. ನನಗೆಲ್ಲ ಕತಿ ಹೇಳಬ್ಯಾಡಾ, ಈ ಊರಿಗೆ ಬಂದಿವಿ, ಆ ಊರಿನವರ ಮಾನ ಮರ್ವಾದಿ ಕಾಪಾಡು ಹೋಗು. ಯವ್ವಾ ಬ್ಯಾಡಬೇ...ಕುಂಡಿಗಿ ಕುರಾ ಆಗಿದೆ, ಏ ಸೂರಾ ಮಗನೇ, ಅದ ಕುರದ ಮ್ಯಾಲೆ ಬರಿಕೊಡ್ತಿನಿ ನಿಂಗ, ಹೋಗು. ಇಲ್ಲಾಂದ್ರೆ ನಿನ್ನ ಮುಸುಡಿ ತೋರ್ಸಬ್ಯಾಡಾ..

ADVERTISEMENT

ಕುದುರೆ ಸ್ಪರ್ಧೆಗಾಗಿ ಉಳಿದೆಲ್ಲರೂ ಈ ಸಲದ ಗೆಲುವಿನ ಭರಾಟೆಯಲ್ಲಿ ಸ್ಪರ್ಧೆಗಿಳಿದು, ಪ್ರತಿಷ್ಠೆಯ ದೈವದ ಕುದುರೆಯನ್ನು ತಮ್ಮದಾಗಿಸಿಕೊಳ್ಳುವ ಮಹಾದಾಸೆ ಸ್ಪರ್ಧಾಳುಗಳದಾಗಿತ್ತು. ದೈವದ ಕುದುರೆ ಮಾತ್ರ ಸವಾರನಿಲ್ಲದೇ ಏಕಾಂಗಿಯಾಗಿ ನಿಂತು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಆಡಳಿತ ಕಮೀಟಿ ಹೇಗಾದರೂ ಸರಿ ಕುದುರೆ ಒಂದನ್ನಾದರೂ ಓಡಿಸೋಣ ಆ ಮೌನೇಶನೇ ದಾರಿ ತೋರಿಸುತ್ತಾನೆ ಎಂಬ ನಿರ್ಣಯಕ್ಕೆ ಬಂದಿದ್ದರು. ಊರಸುತ್ತಮುತ್ತಲಿನ ಜನವಲ್ಲದೇ ಈ ಸಲ ಆಗಿರುವ ಅನಾಹುತಕ್ಕೆ ಏನಾಗ್ತದ ಅನ್ನೋದನ್ನ ನೋಡ್ಲಿಕ್ಕೆ ಇಡೀ ಜನಸಾಗರವೇ ಸೇರಿತ್ತು. ಭಕ್ತಿಯ ಆಗರವಾಗಿದ್ದ ಕ್ಷೇತ್ರದಲ್ಲಿ ಮೌನೇಶ ಏನಾದರೂ ದಾರಿ ತೋರಸ್ತಾನೆ ಅನ್ನೋ ನಂಬಿಕೆ ಜನರದಾಗಿತ್ತು. ಮಗ ಮಾತ ಕೇಳ್ಲಿಲ್ಲ ಪೆಕರಮುಂಡೇದು, ಅಂತ ಮಗ ಸೂರನನ್ನು ಬೈದುಕೊಳ್ಳುತ್ತ ಗೊಲ್ಲರ ಗೌಳ್ತಿಯೂ ಕುದುರೆ ಸವಾರಿ ನೋಡಲಿಕ್ಕೆ ನಿಂತಿದ್ದಾಳೆ. ಇನ್ನೇನು! ನಿರ್ಣಾಯಕ ಮಂಡಳಿ ಅಣತಿಯಂತೆ 21 ಕುದುರೆಗಳು ಏಕಕಾಲದಲ್ಲಿ ಓಡಲನುವಾಗಿವೆ.ಎಲ್ಲರಿಗೊಂದೇ ಚಿಂತೆ ದೈವದ ಕುದುರೆ ಈ ಸಲ ಏಕಾಂಗಿಯಾಯ್ತಲ್ಲ? ಓಡ್ತೈತೋ ಇಲ್ಲವೋ ಅಂತಾ ಜನಾ ತಮ್ಮ ಮಾತುಗಳಿಗೆ ಇಂಬುಕೊಟ್ಟಿದ್ದರು.

ವ್ಹಿಶಲ್ ಮಾಸ್ಟರ್, ಆನ್ ಯುವರ್ ಮಾರ್ಕ್ ಸೆಟ್ ಗೋ ಅನ್ನುತ್ತ ಹಸಿರು ವಸ್ತ್ರ ತೋರಿಸೋದೆ ತಡ, ಶರವೇಗದಲ್ಲಿ ಬಿಟ್ಟ ಬಾಣಗಳಂತೆ ಎಲ್ಲ ಕುದುರೆಗಳು ಓಡಲು ಶುರು ಮಾಡಿದವು, ತತತ್ ಕ್ಷಣದಲ್ಲಿ ಮಿಂಚು, ಮೋಡ ಸುಳಿಗಾಳಿ, ಅಪ್ಪಳಿಸಿ ರಪರಪನೇ ಮಳೆ ಸುರಿದಂತೆ ದೈತ್ಯಾಕಾರದ ಅನಾಮಿಕ ಆಕೃತಿಯೊಂದು ಓಡುತ್ತಿರುವ ದೈವಕುದುರೆಯನ್ನೇರಬೇಕಾದರೆ, ಆ ಮೌನೇಶ್ವರರೇ ಅವತರಿಸಿ ಬಂದರೆಂದು ಕೈಮುಗಿದರು. ಹರಹರ ಮಹಾದೇವ,ಹರ ಹರ ಮಹಾದೇವ ಎಂಬ ಘೋಷವಾಕ್ಯಗಳು ಮಾರ್ಧನಿಸಿದವು. ಇಡೀ ಊರ ಜನವೇ ಮೂಕಸ್ತಬ್ದರಾಗಿ ಅವರಿಗರಿವಿಲ್ಲದಂತೆ ಕೈ ಮುಗಿದು ನಿಂತರು. ಕುದುರೆಗಳು ಊರ ಅಗಸಿ ಬಾಗಿಲನ್ನು ದಾಟಿ ಸ್ಪರ್ಧಾ ಕಣಕ್ಕೆ ಹತ್ತಿರವಾಗುತಿದ್ದಂತೆ ದೈವದ ಕುದುರೆ ನಾಗಾಲೋಟದಲ್ಲಿ ಅಜಗಜಾಂತರ ಮುಂದಿರುವುದನ್ನು ಕಂಡು, ಕೈಮುಗಿದ ಕರಗಳು ಜೈಕಾರ ಹಾಕುತಿದ್ದವು. ಸದ್ದಿಲ್ಲದಂತೆ ಸುದ್ದಿಮಾಡಿದ ಆ ಕುವರ ಯಾರು? ಎಲ್ಲಿಯವ? ಹೇಗಿದ್ದಾನೆ? ಆ ಮೌನೇಶನೇ ಮತ್ತೆ ಅವತರಿಸಿದನೇ? ಹೀಗೆ ಹತ್ತು ಹಲವಾರು ಪ್ರಶ್ನೆಗಳ ಹೊತ್ತ ಜನ ಮತ್ತೇ ಗುಬುಗುಬು ಮುಕುರಿದ್ದರು.

ಮತ್ತೇ ದೈವದ ಕುದುರೆ ಗೆದ್ದಿದ್ದಕ್ಕೆ ಮೌನೇಶನೇ ಅವತರಿಸಿದನೆಂದೂ, ನಮ್ಮನೆಲ್ಲ ಕಾಪಾಡಿದನೆಂದು ಜನ ಆಡಿಕೊಳ್ಳುತಿರುವಾಗಲೇ, ಮುಖವಾಡ ಧರಿಸಿದ ವ್ಯಕ್ತಿ ವೇದಿಕೆಗೆ ಬಂದಾಕ್ಷಣ ಮತ್ತೇ ಕರತಾಡಣ, ಅದೇ ಘೋಷವಾಕ್ಯಗಳು. ಯಾರಪ್ಪ ನೀವು? ಯಾವುರು? ಮುಖವಾಡ ತಗಿಬಹುದಲ್ಲ? ಅಂದಾಗ, ಅಷ್ಟೊಂದು ಜನಸ್ತೋಮದ ಮಧ್ಯೆ, ಮುಖವಾಡ ತೆಗೆದಾಗ ಅದೇ ಸ್ಪುರದ್ರೂಪದ ಚೆಲುವ ಸೂರನಾಗಿದ್ದ. ನನ್ನೆಸರು ಸೂರ, ಊರು ದೇವನಳ್ಳಿ ಇಲ್ಲಿ ನಮದೊಂದು ಗೊಂಬಿ ಅಂಗಡಿ ಇಟ್ಕಂಡಿದಿವಿ, ನಾವು ಗೊಲ್ಲರು ಊರೂರು ತಿರುಗೋ ಅಲೆಮಾರಿಗಳು. ನೀವೆಲ್ಲ ವಿನಂತಿ ಮಾಡ್ಕೊಳ್ಳೋದು ಮತ್ತು ಯಾರುನೂ ಸವಾರಿ ಮಾಡಲು ಮುಂದೆ ಬರದೇ ಇರೋದು ನೋಡಿ ನಮ್ಮವ್ವ ನನಗ ಕುದುರಿ ಓಡ್ಸಲಿಕ್ಕೆ ಹೇಳಿದ್ಲು, ಆಗದಿದ್ರ ನಿನ್ನ ಮಸಡಿ ತೋರಸ್ ಬ್ಯಾಡಾ ಅಂದ್ಲು, ನಮ್ಮವ್ವನ ಸ್ಪೂರ್ತಿನೇ ಈ ಗೆಲುವು, ನೀ ಯಾರಾದ್ರು ಆಗಿರು, ಎಲ್ಲಿಯವನೇ ಆಗಿರು, ಯಾವ ಜಾತಿಯವನೇ ಆಗಿರು, ಮೌನೇಶನ ಸನ್ನಿಧಾನದಲ್ಲಿ ಎಲ್ಲರೂ ಸಮಾನರೆ, ನೀನು ಈ ಊರ ಮರ್ಯಾದೆ ಕಾಪಾಡಿದೆ. ಇದಕ್ಕಿಂತ ಇಲ್ಲಿಯ ದೈವಕುದುರೆಗೆ ಒಂದು ಇತಿಹಾಸ ಇದೆ, ಅದನ್ನು ನೀನು ಎತ್ತಿ ಹಿಡಿದೆ. ನಮ್ಮ ಸ್ವಾಮಿಯನ್ನು ನಮ್ಮಲ್ಲಿಯೇ ಉಳಿಸಿದ ಮಹಾತ್ಮ ನೀವು, ಪ್ರತಿವರ್ಷದ ಕುದುರೆ ಸವಾರಿ ಜವಾಬ್ದಾರಿಯ ಜೊತೆಗೆ, ಇನ್ಮೇಲೆ ಈ ದೇವಸ್ಥಾನದ ಪರಿಚಾರಕರಲ್ಲಿ ನೀವು ಒಬ್ಬರಾಗ್ತಿರಿ. ಎಂದು ಹೇಳುತ್ತಾ ಸನ್ಮಾನ ಪುರಸ್ಕಾರಗಳು ಸಿಕ್ಕಾಗ ಅಲ್ಲಿದ್ದ ಭಕ್ತಜನಾಂಗದಿಂದ ಮತ್ತೇ ಜೈಘೋಷಗಳು.

ಆ ಸ್ಪುರದ್ರೂಪಿ ಯುವಕ ಊರ ಹೆಂಗಳೆಯರ ನಿದ್ದೆಗೆಡಿಸಿದ್ದ, ಗಂಡಸು ಅಂದ್ರೆ ಹಿಂಗಿರಬೇಕು ಅಂತಾ ಬಾಯ್ಬಿಟ್ಟು ಹೇಳೋದು ಕೇಳಿ ತಂದೆತಾಯಂದಿರು ಗೊಂದಲಕ್ಕೀಡಾಗಿದ್ದರು. ಏನ್ ಅದಾನ್ಲೇ ಅಂವಾ, ಏನ್ ಕಟ್ ಮಸ್ತ್ ದೇಹ ಅದು. ದೇಹ ಬೆಳಸಿದ್ರ ಹಂಗ ಬೆಳೆಸಬೇಕು. ಅಂತಾ ಹೇಳೋ ಯುವಕರ ಮಾತುಗಳೇನು ಕಮ್ಮಿಯಿದ್ದಂತಿರಲಿಲ್ಲ, ಮಕ್ಕಳ್ನ ಬೆಳಸಿದ್ರ ಹಿಂಗ ಬೆಳಸಬೇಕು, ಅನ್ನೋ ತಂದೆ ತಾಯಿಯರೂ ಸಹ ಜಾಸ್ತಿನೇ ಇದ್ರು. ಒಟ್ಟಿನಲ್ಲಿ ಎಲ್ಲರ ಆಹಾರವಾಗಿ ಇಡೀ ಊರಿನ ಸುತ್ತಮುತ್ತ ಸೂರ, ದೇವಸೂರನಾಗಿದ್ದ. ಒಂದೇ ಗಳಿಗೊಪ್ಪತ್ತಿನಲ್ಲಿ ಜೀರೋ ಇದ್ದಂವ ಹೀರೋ ಆಗಿದ್ದ. ಮರುದಿನವೇ ಆತನ ಗೊಂಬೆ ಅಂಗಡಿಯ ಮುಂದೆ ವಸ್ತುಪ್ರದರ್ಶನಕ್ಕಿಟ್ಟ ವ್ಯಕ್ತಿಯಾಗಿದ್ದ. ಜಾತ್ರೆ ಮುಗಿಯುವ ದಿನಕ್ಕೆ ಅವನೊಬ್ಬ ದೈವಾನುಸಂಭೂತನಂತೆ ಗೋಚರವಾಗಿದ್ದ.

ದಿನಕಳೆದಂತೆ ಜನ ಎಲ್ಲಾನೂ ಮರಿತಾರ ಖರೆ, ಇಲ್ಲಿ ಹಂಗಾಗಲಿಲ್ಲ. ಊರ ದೇವರ ಪರಿಚಾರಕನಾದವ ಊರಾಗೊಂದ ಸೂರ ಪಡ್ಶೋಳೋದ್ರಾಗ ಸಫಲನಾಗಿದ್ದ. ತನ್ನ ಕಸುಬು ಮಾಡೋದ್ರ ಜೊತೆಗೆ ತನಗೇನ ಸಾಧ್ಯ ಆಗ್ತದನೋ ಅದೆಲ್ಲವನ್ನೂ ಮಾಡ್ತಿದ್ದ. ತಿಂಗಳು ವರ್ಷದೊಳಗ ಕೊಡೆಕಲ್, ದೇವರ ಗೋನಾಳ, ಸುರಪುರ ಹಿಂಗ ಊರ ಸುತ್ತಲಿನ ಅನೇಕ ಹಳ್ಳಿಗಳಲ್ಲಿ ಹೆಸರುವಾಸಿಯಾಗಿದ್ದ. ಇವನ ತಾಯಿ ಗೊಲ್ಲರ ಗೌಳ್ತಿ ಬದಲಾಗಿ ಗೊಲ್ಲ ಗೌಡ್ತಿ ಆಗಿದ್ದಳು. ಆಕೆಯ ಸೌಂದರ್ಯ ಕಂಡ ಅನೇಕ ಮಧ್ಯ ವಯಸ್ಕರು, ಕಾಸಕೊಳ್ಳಾಕ ಹೋಗಿ ಕೈಸುಟಗೊಂಡಿದ್ದು, ಗೌಳ್ತಿಯ ಚಾರಿತ್ರ್ಯವನ್ನು ಇನ್ನೂ ಹೆಚ್ಚಿಸಿತ್ತು. ಗೊಲ್ಲರು ಅಂತೇಳಿ ಮಳ್ಳ ಮಾಡಾಕ ಬಂದಾವರಿಗೆಲ್ಲ ಸೂರ ಚೆಳ್ಳಿಹಣ್ಣ ತಿನಸಿದ್ದ. ದಿನದಿನಕ್ಕ ದೇವಸೂರ ಪ್ರತಿ ಹಳ್ಳಿಯೊಳಗ ಪ್ರಸಿದ್ಧಿ ಆಗೋದು ಕೆಲವರಿಗೆ ಸರಿ ಅನಿಸಿದ್ದಿಲ್ಲ. ಗೊಲ್ಲಗೌಡ್ತಿಯಾದವಳು ಊರಿನ ಪ್ರಮುಖ ಮಹಿಳಾ ಸಂಘ-ಸಂಸ್ಥೆಗಳಲ್ಲಿ ಮುಖ್ಯ ಸ್ಥಾನ ಪಡೆದು ಸ್ತ್ರೀ ಕುಲಕ್ಕೆ ಹೆಣ್ಣುಮಕ್ಕಳು ಹೊರಬರಲು ಪ್ರೇರಣೆಯಾಗಿದ್ದು, ಇದು ಗಂಡಸುಕುಲಕ್ಕೆ ಊಗಿಯಲಾರದ ಬಿಸಿತುಪ್ಪವಾಗಿತ್ತು. ದೇವಸೂರನ ಕಾಯಕನಿಷ್ಠೆ, ಸಹಾಯ ಮಾಡುವ ಗುಣಕ್ಕೆ ಅನೇಕ ಹೆಣ್ಣುಗಳು ತಾವಾಗಿಯೇ ಮದುವೆ ಮಾಡಿಕೊಳ್ಳಲು ಮುಂದೆ ಬಂದರೂ ನಿರಾಕರಿಸಿದ್ದ. ಜಾತಿ ಅಡ್ಡಗೋಡೆಯಾಗಿದ್ದು ಸುಮ್ಮನೆ ಎಲ್ಲಿಂದಲೋ ಬಂದ ನಮ್ಮಿಂದ ಕೆಡುಕಾಗದಿರಲಿ ಎಂಬುದು ಆತನ ಧೋರಣೆಯಾಗಿತ್ತು. ಇಲ್ಲೊಂದು ನೆಲೆ ಸಿಕ್ಕಿದೆಯೆಂದು, ಉಂಡ ಮನೆಗೆ ಎರಡು ಬಗೆಯದಿರುವ ಆತನ ಈ ಘಟ್ಟಿ ನಿರ್ಧಾರ, ಪ್ರತಿ ಊರಿನ ಜನರ ಮನಸ್ಸನ್ನು ಸೂರೆಗೊಂಡಿದ್ದ.

ಊರುರ ಸುತ್ತಿ ವ್ಯಾಪಾರ ಮಾಡುವ ಸಂದರ್ಭದಲ್ಲಿ ತಿಂಥನಿಯ ರೈತ ಬೆಳೆದ ಅವರೆಕಾಯಿಯನ್ನು ದಲ್ಲಾಳಿಗಳು ಮೋಸದಿಂದ ಲಪಟಾಯಿಸುವುದನ್ನು ತಪ್ಪಿಸಿದ್ದ. ಸುರಪುರದ ಆಸ್ಥಾನದ ಪಾರಂಪರಿಕ ವಸ್ತುಗಳ ಕಳ್ಳ ಮಾರಾಟದ ಜಾಲವನ್ನು ಪತ್ತೆ ಹಚ್ಚಿದ್ದ. ಪಕ್ಕದ ಊರಿನ ರೇಶನ್ ಅಕ್ಕಿಯನ್ನು ಸಣ್ಣಕ್ಕಿ ಮಾಡಿ ಮಾರಾಟ ಮಾಡುವ ದೊಡ್ಡ ಜಾಲವನ್ನು ಹುಡುಕಿಸಿ ಪೋಲೀಸರ ಪ್ರೀತಿಗೂ ಪಾತ್ರನಾಗಿದ್ದ. ಈತನ ಜನಪ್ರೀಯತೆಯಿಂದ ಸ್ಥಳೀಯ ವುಮೆನ್ ಕಾಲೇಜೊಂದರಲ್ಲಿ ಅತಿಥಿಯಾಗಿ ಪಾಲ್ಗೊಂಡಾಗ, ಅರ್ದಂಬರ್ದ ಕಲಿತಿದ್ದ ಸೂರ, ನಾಚಿಕೆಬುರುಕತನ ಪ್ರದರ್ಶಿಸುತ್ತ, ನೀವೆಲ್ಲ ಹೆಣ್ಮಕ್ಕಳು ಮಕ್ಕಳಾಗಿಯೇ ಇರಬೇಕು. ಅಪ್ಪ ಅವ್ವ ತೋರಿಸಿದವರನ್ನೇ ಲಗ್ನ ಆಗಬೇಕು, ಹಠ ಮಾಡಬಾರದು. ಎಂದು ಚಿಕ್ಕ ಮಕ್ಕಳಿಗೆ ಬೋಧಿಸುವಂತೆ ಮಾತಾಡಿದ್ದು, ಎಲ್ಲ ಹೆಂಗಳೆಯರಿಗೆ ಆತನ ಮುಗ್ದತೆ ನಗೆಪಾಟಲಿಯಾಗಿತ್ತು. ಆತನನ್ನು ತಿನ್ನುವಂತೆ ನೋಡಿದಾಗ, ಮಾತನಾಡಿಸಿದಾಗ, ಸಿಡಿಮಿಡಿಯಾಗ್ತಿದ್ದ.

ಗೂರಲುರೋಗ ದೇವಸೂರನ ತಂದೆಯನ್ನು ಕಸಿದುಕೊಂಡಿತ್ತು. ಹಾಸಿಗೆ ಹಿಡಿದಿದ್ದ ಗುರುನಾಥ ಮನೆಗೆ ಆದಾಯ ತರದಿದ್ದರೂ ಆಶ್ರಿತನಾಗಿದ್ದ. ಅದೇ ಬಲದಿಂದಲೇ ತಾಯಿ ಗೌಳ್ತಿ ಸುತ್ತಮುತ್ತಲಿನ ಮಹಿಳಾ ಸಂಘಸಂಸ್ಥೆಗಳ ಕೆಲಸ ಕಾರ್ಯಗಳಲ್ಲಿ ಸೇವೆ ಸಲ್ಲಿಸುತಿದ್ದಳು. ಇನ್ನೂ ಹರೆಯ ಕಾಡುತ್ತಿರುವಾಗಲೇ ಹಾಸಿಗೆ ಹಿಡಿದ ಪತಿಯಿಂದ ಯಾವ ಸುಖವಿರದಿದ್ದರೂ ಇಲ್ಲದ ಆಸೆಗೆ ಎಂದೂ ಮೈ ಒಡ್ಡಿರಲಿಲ್ಲ. ಹಣ, ಆಸ್ತಿ, ರಾಜಕಾರಣದ ಆಮೀಷವೆಲ್ಲ ನಿಷ್ಪ್ರಯೋಜಕವಾಗಿತ್ತು. ಅವೆಲ್ಲ ಅವಳು ಕೇಳದಿದ್ದರೂ ಒದಗಿ ಬಂದಿದ್ದವು. ಗ್ರಾಮಪಂಚಾಯತಿ ಚುನಾವಣೆಯಲ್ಲಿ ಒತ್ತಾಯದ ಅಭ್ಯರ್ಥಿಯಾಗಿ ಸ್ಥಳೀಯ ವಾರ್ಡ್ವೊಂದರಲ್ಲಿ ಇವಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.ಅದೇ ವರ್ಷ ಆ ಪಂಚಾಯ್ತಿಗೆ ಮಹಿಳಾ ಮೀಸಲಾತಿ ಹಿಂದುಳಿದ ವರ್ಗಕ್ಕೆ ಮೀಸಲಿಟ್ಟಿದ್ದು, ಏಕೈಕ ಅಭ್ಯರ್ಥಿಯಾದ ಗೊಲ್ಲರ ಗೌಡ್ತಿಗೆ ಅಧ್ಯಕ್ಷ ಪಟ್ಟ ಒದಗಿ ಬಂದಿತ್ತು. ಇದು ಕೆಲವರಿಗೆ ಸರಿ ಬಂದಿದ್ದಿಲ್ಲವೆಂಬುದು, ಅಧ್ಯಕ್ಷರ ಆಯ್ಕೆ ಗಲಾಟೆಯಲ್ಲಿ ಗೊತ್ತಾಗಿತ್ತು. ಹೀಗಾಗಿ ಪಕ್ಕದೂರಿನ ಗಿರಿಯಪ್ಪ, ಸ್ಥಳೀಯ ಮಾಂತಯ್ಯ ತಮಗೆ ಈ ಅವಕಾಶ ಒದಗಿ ಬಾರದಿದ್ದದ್ದಕ್ಕಾಗಿ ಪರಿತಪಿಸುವಂತಾಗಿತ್ತು. ಓದಲು ಬರೆಯಲು ಬಾರದ ಗೊಲ್ಲರ ಗೌಡ್ತಿ ಜನಮುಖಿಯಾಗಲು ಬಯಸಿದ್ದರಿಂದ ಅನೇಕ ಯುವ ಮುತ್ಸದ್ದಿಗಳು ಪದೆ ಪದೇ ಎಚ್ಚರಿಸುತಿದ್ದರು. ಯಾರೆಲ್ಲ ದಾರಿ ತಪ್ಪಿಸುತ್ತಾರೆ, ದುಡ್ಡು ಹೊಡೆಯುತ್ತಾರೆ, ಎಂಬುದನ್ನು ಹೇಳುತಿದ್ದರು. ತಾಯಿಯ ಪ್ರತಿ ಹೆಜ್ಜೆಯಲ್ಲಿ ಮಗ ಭಾಗಿಯಾಗಿದ್ದ ಆದರೆ ಎಲ್ಲಿಯೂ ನೇರವಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಆತನ ಭಯದಿಂದಲೇ ಎಷ್ಟೋ ಅಕ್ರಮ ವ್ಯವಹಾರಗಳು ನಿಂತು ಹೋಗಿದ್ದವು.
ದಿನದಿನಕ್ಕೆ ಗ್ರಾಮಪಂಚಾಯತಿ ಇಡೀ ರಾಜ್ಯದ ತುಂಬ ಹೆಸರು ಮಾಡಿತು. ಪಂಚಾಯತಿ ಅಧ್ಯಕ್ಷಗಿರಿ ಬಂದಾದ ಮೇಲೆ ಊರಿನ ಎಲ್ಲ ನಿರ್ಧಾರಗಳನ್ನು ಗೊಲ್ಲರ ಗೌಡ್ತಿಯೇ ತೆಗೆದುಕೊಳ್ಳಬೇಕಿತ್ತು. ತಲೆ ತಲಾಂತರದಿಂದ ಜಾತಿ- ವಿಜಾತಿಗಳ ಮುಖಂಡರೆನಿಸಿಕೊಂಡಿದ್ದವರ ಮೀಸೆ ಮಣ್ಣು ಮುಕ್ಕುವಂತಾಗಿದ್ದು, ಒಳ ಒಳಗೆ ಕತ್ತಿ ಗುರಾಣಿಗಳು ಮಸಿಯುತಿದ್ದವು, ರಕ್ತದರ್ಪಣಕ್ಕಾಗಿ ಝಳಪಿಸುತಿದ್ದವು. ಹೊಂಚು ಹಾಕಿದ ನರ ರಾಕ್ಷಸರು ಅವಕಾಶಕ್ಕಾಗಿ ಕಾಯುತಿದ್ದರು. ಎಂದಿನಂತೆ ಮನೆಗೆ ಬಂದ ಗೌಡ್ತಿ ಮತ್ತು ಸೂರನಿಗೆ ಮನೆಯ ಮುಂದೆ ಒಬ್ಬ ಹೆಣ್ಣು ಮಗಳು ನ್ಯಾಯ ಕೇಳುವ ಸಲುವಾಗಿ ಧರಣಿ ಹೂಡಿದ್ದಳು. ಯಾವಾಗಲೋ ಕ್ಲಿಕ್ಕಿಸಿದ ಒಂದು ಫೋಟೋ ತೋರಿಸಿ ನಿನ್ನ ಮಗ ನನಗೆ ಮದುವೆಯಾಗುತ್ತೇನೆಂದು ನಂಬಿಸಿ ಅನ್ಯಾಯ ಮಾಡಿದ್ದಾನೆ. ನ್ಯಾಯ ಸಿಗುವವರೆಗೆ ಇಲ್ಲಿಂದ ಕದಲುವುದಿಲ್ಲವೆಂದು ಹಟ ಹಿಡಿಯುತ್ತಾಳೆ. ದೇವಸೂರ ಯಾವುದನ್ನು ತಾನು ಮಾಡಿಲ್ಲವೆಂದು ಎಷ್ಟು ಬಾರಿ ಹೇಳಿದರೂ ಕೇಳದ ಆ ಮಹಿಳೆ ಹಟ ಹಿಡಿದಾಗ, ಸಿಟ್ಟಿನಲ್ಲಿ ಅವಳನ್ನು ಕೈ ತೋಳ ಹಿಡಿದು ಹೊರಹಾಕುವುದಕ್ಕೆ ಮುಂದಾಗುತ್ತಾನೆ. ಇದನ್ನೇ ಕಾಯುತಿದ್ದ ಆಕೆಯ ಸಹಪಾಠಿಗಳು, ದೌರ್ಜನ್ಯ ಮಾಡುತಿದ್ದಾರೆ, ನ್ಯಾಯ ಕೊಡಿಸಿ, ಎಂದು ಜನಕೂಡಿಸಿ ರಾದ್ಧಾಂತ ಮಾಡುತ್ತಾರೆ. ಇದನ್ನೇ ನೆಪವಾಗಿಸಿ ಕಂಪ್ಲೇಂಟ್ ಕೊಡುತ್ತಾರೆ. ಪೋಲೀಸ್ ಠಾಣೆಯಲ್ಲಿ ವಿಚಾರಣೆ ಆರಂಭವಾದಾಗ ಆ ಹುಡುಗಿ ಪಂಚಾಯತಿ ಮೇಂಬರ್ ಗಿರಿಯಪ್ಪನ ಮಗಳು ಮಧು ಎಂಬುದು ಗೊತ್ತಾಗಿ, ಏನೋ ಮಸಲತ್ತು ನಡೆದಿದೆ ಎಂದು ತಾಯಿ ಮಗನಿಗೆ ಅರಿವಾಗುತ್ತದೆ. ಗಿರಿಯಪ್ಪ ಕೋಪೋದ್ರಿಕ್ತನಾಗಿ ಠಾಣೆಗೆ ಬಂದವ್ನೆ ಅಯ್ಯೊಯ್ಯೋ ನಾವು ಅಯ್ನೋರು ಇವರು ಅಲೆಮಾರಿ ಬೇಬಾರ್ಸಿಗಳು, ಇಂತವರಿಗೆಲ್ಲ ಆಶ್ರಯ ಕೊಟ್ಟರss ಹಿಂಗss ಆಗೋದು, ಈಗ ನೋಡಿಂವ ನನ್ನ ಮಗಳನ್ನ ಹೊಡ್ಕೊಂದ ಬಿಟ್ಟಾಣ, ಎಂದು ಜೋರು ಬಾಯಿ ಮಾಡುತ್ತಾನೆ. ಏ ಸೂರ, ನಿನಗ ಗೊತ್ತಾಗಲಿಲ್ಲ ಏನಲೇ ಜಾತಿ ಗೀತಿ, ನನ್ನಂತಸ್ತೇನು ನಿಮ್ಮದೇನು ಥೂ ಕಚಡಾ ನನ್ನ ಮಕ್ಕಳಾ? ಸಾಬ್ರೇ ನನ್ನ ಮಗಳಿಗೆ ನ್ಯಾಯ ಕೊಡಿಸಿ. ಈ ತಾಯಿ ಮಗನ್ನ ಒಳಗ ಹಾಕ್ಸಿ , ಅಂದಾಗ ತಡಕೊಳ್ಳಿ ಸಾಮಿಗೊಳ ಅಂತಾ ಸಮಾಧಾನ ಮಾಡಿ, ದೇವಸೂರ ಮತ್ತು ತಾಯಿ ಗೌಡ್ತಿನ ಕರದು ಈಗ ನೀವು ಅವಳನ್ನು ನಿಮ್ಮ ಸೊಸಿ ಮಾಡ್ಕೋಲಿಲ್ಲ ಅಂದ್ರ ದಾಂದ್ಲೆ ಚಾಲು ಆಕ್ಕೈತಿ ನಿಮ್ಮ ಹೆಸರು ಕೆಟ್ಟ ಹೋಗತೈತಿ, ಎಂದು ಪೋಲೀಸರು ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾದಾಗ, ಮನಸ್ಸಿಲ್ಲದ ಮನಸ್ಸಿನಿಂದ ದೇವಸೂರ ಅದೇ ಕಚೇರಿಯಲ್ಲಿ ರಜಿಸ್ಟ್ರೇಶನ್ ಲಗ್ನ ಆಗುತ್ತಾನೆ. ಇದನ್ನು ನಿರೀಕ್ಷಿಸಿರದ ಗಿರಿಯಪ್ಪ ಶಾಕ್ ಆಗ್ತಾನೆ, ಅವನ ಉದ್ದೇಶ ಅವರನ್ನು ಊರ ಬಿಡಿಸುವುದು,ಮತ್ತು ಅಧಿಕಾರದಿಂದ ಕೆಳಗಿಳಿಸಲು ನಾಟಕವಾಡಿದ್ದನು. ಇದಕ್ಕೆ ತನ್ನ ಮಗಳನ್ನೇ ಬಳಸಿಕೊಂಡಿದ್ದ, ಒಳ ಒಳಗೆ ದೇವಸೂರನನ್ನು ಬಯಸಿದ್ದ ಮಧು ಅವನನ್ನು ತನ್ನವನನ್ನಾಗಿಸಿಕೊಳ್ಳಲು ಸಫಲಳಾಗಿದ್ದಳು. ಮೇಲ್ನೋಟಕ್ಕೆ ಅಪ್ಪನಿಗೂ ಇದು ನಾಟಕ ಅಂದಿದ್ದಳು. ನಡೆಯುತ್ತಿರುವುದು ಮದುವೆ ಎಂಬುದು ಜಗಜ್ಜಾಹಿರವಾಗಿತ್ತು.

ಮನಸ್ಸಿನ ಜೊತೆ ಆಟವಾಡಿದ್ದ ಮಧುವನ್ನು ದೇವಸೂರ ಮನಸಾರೆ ಸ್ವಿಕರಿಸಲೇ ಇಲ್ಲ. ದಿನಕಳೆದಂತೆ ಪ್ರೀತಿ ಮಮಕಾರದ ಬದಲು ದ್ವೇಷ ಕಾರುವಂತಹ ಸ್ಥಿತಿ ನಿರ್ಮಾಣವಾಗತೊಡಗಿತು. ದೇವಸೂರ, ಮಧು ಮನೆಗೆ ಬಂದ ಹೊಸತರಲ್ಲಿ ನೀನು ನನ್ನನ್ನು ಗೆದ್ದಿರಬಹುದು,ನನ್ನ ಮನಸನ್ನಲ್ಲ. ನಾನೆಂದಿಗೂ ನಿನ್ನವನಾಗಲೂ ಸಾಧ್ಯವೇ ಇಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದ. ತನ್ನ ಆಸೆ ಆಕಾಂಕ್ಷೆಗಳು ಕೈಗೂಡದೇ ಇರಲು ಮಧು ಪರಿತಪಿಸುತಿದ್ದಳು. ತಂದೆಯನ್ನು ಧಿಕ್ಕರಿಸಿ ದೇವಸೂರನೊಂದಿಗೆ ಬದುಕು ಸಾಗಿಸಲು ನಿರ್ಧರಿಸಿದ್ದವಳು ಮತ್ತೇ ತನ್ನ ದಾರಿಯನ್ನು ಬದಲಿಸಿದ್ದಳು. ತಾಯಿ ಮಗನ ದಿನಚರಿಯ ಎಲ್ಲ ರಹಸ್ಯವನ್ನು ತನ್ನ ತಂದೆಗೆ ತಿಳಿಸಲಾರಂಭಿಸಿದಳು. ದೇವಸೂರ ಅಲೆಮಾರಿ ಜೀವನ ನಡೆಸುವುದು ಮಧುವಿಗೆ ಇಷ್ಟವಿರಲಿಲ್ಲ. ನಿನಗೆ ಇಷ್ಟವಾದರೆಷ್ಟು ಬಿಟ್ಟರೆಷ್ಟು ನನ್ನ ಮೂಲ ಕಾಯಕವಿದು, ನಾನಿದನ್ನೇ ಮಾಡುವುದು ಎಂದು ಅದನ್ನೇ ಮುಂದುವರೆಸಿದ್ದ. ಪಕ್ಕದ ಎಲ್ಲ ಹಳ್ಳಿಯಲ್ಲೂ ಜನರ ಪ್ರೀತಿಗೆ ಪಾತ್ರವಾಗಿದ್ದ. ಈತನ ಬರುವಿಕೆಗೆ ಎಲ್ಲರೂ ಕಾಯುವವರೇ.
ಸುರಪುರದ ಕೆರೆದಂಡೆ ಮರದಮ್ಮನ ಅದ್ದೂರಿ ಜಾತ್ರೆಯಲ್ಲಿ ಅನೇಕ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಷಯ ಬಂದಾಗ ಹಿರಿಯರಿಗೆ ಪ್ರೀತಿಪಾತ್ರನಾಗಿದ್ದ. ಎಲ್ಲ ದೇವರುಗಳ ಇತಿಹಾಸ ತೆಗೆದುಕೊಂಡು ಕಥೆ ಕಟ್ಟಿ ಹಾಡುತಿದ್ದರೆ ಚಪ್ಪಾಳೆಯ ಸುರಿಮಳೆ ಆಗುತಿತ್ತು. ಹೀಗೆ ಹೊರಗೆ ಹೋದರೆ ವಾರಗಟ್ಟಲೇ ಹೊರಗುಳಿಯುತಿದ್ದ. ಹೀಗಿರುವಾಗ ಇದ್ದಕಿದ್ದಂತೆ ತಿಂಥನಿ ಪಂಚರಿಂದ ಬೇಗ ಬರುವಂತೆ ಫೋನ್ ರಿಂಗುಣಿಸುತ್ತದೆ. ಮರುಕ್ಷಣದಲ್ಲಿ ದಾರಿಸವೆಸಿ ಮನೆ ತಲುಪುತ್ತಾನೆ. ಮನೆಯ ಮುಂದೆ ಜನಜಂಗುಳಿ, ಇದೆನಪ್ಪಾ ನಮ್ಮ ಮನೆಮುಂದೆ ಜನ, ಎಂದು ತನ್ನಷ್ಟಕ್ಕೆ ತಾನೇ ದಡಬಡಾಯಿಸುತ್ತ ಒಳಹೊಕ್ಕಾಗ ಗಾಬರಿ ಅಚ್ಚರಿಯೊಂದಿಗೆ ಕಿರುಚುತ್ತಾನೆ. ತನ್ನ ಅಕ್ಕರೆಯ ತಾಯಿ ರಕ್ತದ ಮಡುವಿನಲ್ಲಿ, ಮೃತಪಟ್ಟಿದ್ದರೆ, ಮಧು ಕೊನೆಯ ಕ್ಷಣಕ್ಕಾಗಿ ಜೀವ ಬಿಡುವ ಸ್ಥಿತಿಯಲ್ಲಿ ದೇವಸೂರನಿಗೆ ಏನನ್ನೋ ಹೇಳಲು ಪ್ರಯತ್ನಿಸುತಿದ್ದಳು. ನಿನ್ನ ಒಳ್ಳೆತನ ಯಾರಿಗೂ ಬೇಡವಾಗಿದೆ ನೀ ಇಲ್ಲಿಂದ ಓಡು ತಪ್ಪಿಸಿಕೋ, ನಿನ್ನನ್ನು ಹೆಣ ಮಾಡಲು ದೊಡ್ಡ ಜಾಲ ಹೆಣೆದಿದ್ದಾರೆ, ಓಡು ತಪ್ಪಿಸಿಕೋ ಎನ್ನುತ್ತ ಕುತ್ತಿಗೆ ಚೆಲ್ಲುತ್ತಾಳೆ. ಅದೇ ಹೊತ್ತಿಗೆ ಪೋಲೀಸರು ಬಂದವರೇ ದೇವಸೂರ ನಿಮ್ಮ ಮೇಲೆ ಕೊಲೆ ,ಕಳ್ಳತನ, ಅಪಹರಣ ಕೇಸು ದಾಖಲಾಗಿವೆ ಅದಕ್ಕೆ ನಿನ್ನನ್ನು ಅರೆಸ್ಟ ಮಾಡುತ್ತಿದ್ದೇವೆ, ಎನ್ನುತ್ತ ಕೋಳನ್ನು ತೊಡಿಸುವರು.

ಪಾಳುಬಿದ್ದ ವಾಗಣಗೇರಿ ಕೋಟೆಯ ಬಾಗಿಲಿಗೆ ದೇವಸೂರ ಪ್ರಜ್ಞಾಹೀನ ಸ್ಥಿತಿಯಲ್ಲಿ ನೇತಾಡುತ್ತಿದ್ದಾನೆ.ಗಿರಿಯಪ್ಪ,ಮಾಂತಯ್ಯ,ಪೂಜಾರಿ ಬಸಯ್ಯ,ಶೆಟ್ಟಿ ಮಲ್ಲಪ್ಪನಂತ ಊರ ಹಾಳು ಮಾಡೋ ಅರ್ಧ ಊರಾನೇ ಸೇರಿತ್ತು. ಏನಲೇ ತಿರಬೋಕಿ ನನ್ನ ಮಗನೇ ನಿನಗೆ ನಮ್ಮೂರೇ ಬೇಕಿತ್ತೇನ, ಇದನ್ನೆಲ್ಲಾ ಮಾಡಾಕ, ನೀನೇನ ಹೀರೋ ಅಂದ್ಕೊಂಡಿ ಏನ ಮಗನ , ಎನ್ನುತ್ತ ಗುಂಟೂರ ಖಾರದ ಪುಡಿಯನ್ನೆರಚಿ ಬಾರಕೋಲಿನಿಂದ ಹೊಡೆಯುವನು. ಮತ್ತೊಬ್ಬ ನೀನು ಉದ್ಧಾರ ಮಾಡಾಕ ನಮ್ಮೂರ ಬೇಕನ್ಲಾ ಹಲಕಟ್ ಸೂ..ಮಗನ ಎನ್ನುತ್ತ ಬಿಸಿನೀರು ಗೊಜ್ಜಿ ಹೊಡೆಯುವನು. ಮಗದೊಬ್ಬ ಏನಲೇ ದಿಕ್ಕಿಲ್ಲದ ಪರದೇಶಿ, ಆಶ್ರಯ ಕೊಟ್ರ ನಮ್ಮನ್ನ ಆಳ್ತಿಯ. ನಮ್ಮ ಹೊಟ್ಟಿ ಮೇಲೆ ಕಲ್ಲು ಹಾಕ್ತಿಯಾ ಮಗನೆ ಎನ್ನುತ್ತ ಕಲ್ಲು ಹೊಡೆಯುನು. ಈಗ ಕೇಳು ನಿಮ್ಮವ್ವಳನ್ನು ಕೊಲೆ ಮಾಡಿದ್ದು ನಾವೇ, ಅವಳ ಮೊಂಡುತನನೇ ಅವಳನ್ನು ಕೊಲೆ ಮಾಡುವಂಗಾಯ್ತು, ನಮಗೆ ಸಹಕರಿಸಲಿಲ್ಲ ಅವಳು !,ಅವಳ ಉಬ್ಬು ತಗ್ಗಿನ ಸೌಂದರ್ಯ ಇತ್ತಲ್ಲ ಅದೂ ಅದೂ ಗಹಗಹಿಸಿ ನಗುತ್ತ, ಅದೇ ಹೊತ್ನಲ್ಲಿ ಉಪದೇಶ ಮಾಡಲು ಬಂದ ನಿನ್ನ ಹೆಂಡತಿಯನ್ನೂ ಮುಗಿಸಿದ್ವಿ. ಏನಕಿಸಿತೀಯೋ ಭೋಸಡಿ ಮಗನೇ ಎನ್ನುತ್ತ ಎಲ್ಲರೂ ಏಕಕಾಲದಲ್ಲಿ ಹೊಡೆಯುವರು. ಹೀಗೆ ಆಳಿಗೊಂದು ಕಲ್ಲು ಎನ್ನುವಂತೆ ಊರಿಗೆ ಉಪಕಾರ ಮಾಡಲು ಹೋದ ದೇವಸೂರನ ಸ್ಥಿತಿ ಕಂಡು ಮರುಗುವ ಜನ ಮನೆಗಳಲ್ಲಿ ಮೂಲೆಗುಂಪಾಗಿದ್ದರು. ಕಟ್ಟುಮಸ್ತಾದ ದೇವಸೂರನ ದೇಹ ಸರಪಳಿಗಳ ಬಂಧನದ ಮೂಸೆಯಲ್ಲಿ ಬಂಧಿಯಾಗಿತ್ತು. ಇನ್ನೇನು ಸಾಯಿಸುವ ಕೊನೆಯ ಕ್ಷಣದಲ್ಲಿ ಗಿರಿಯಪ್ಪ ನಾಡಪಿಸ್ತೂಲನ್ನು ಹಿಡಿದು ಗುರಿಯಿಟ್ಟು ಹೊಡೆಯುವುದೊಂದೇ ಬಾಕಿ, ಮರೆಯಲ್ಲಿ ನಿಂತು ಎಲ್ಲವನ್ನೂ ಗಮನಿಸುತಿದ್ದ ಟೈಸನ್, ತನ್ನ ಯಜಮಾನನನ್ನು ಉಳಿಸಿಕೊಳ್ಳುವ ಹವಣಿಕೆಯಿಂದ, ಹುಲಿಯಂತೆ ಘರ್ಜಿಸುತ್ತಾ, ಆರ್ಭಟಿಸುತ್ತಾ, ಗಿರಿಯಪ್ಪನ ಮೇಲೆ ನೆಗೆದು ಒಂದೇ ಹೊಡೆತದಲ್ಲಿ ಆತನ ಗಂಟಲನ್ನು ಸೀಳುತ್ತದೆ. ಈ ಆಕಸ್ಮಿಕ ದಾಳಿಯಿಂದ ಬೆಚ್ಚಿದ ಜನ ದಿಕ್ಕುಪಾಲಾಗಿ ಓಡುತ್ತಾರೆ. ಕೋಟೆಯ ಅಳಿದುಳಿದ ಗೋಡೆಗಳ ಸಹಾಯದಿಂದ ಕೋಟೆಯ ಬಾಗಿಲಿನ ಮೇಲೆ ಹಾರಿ ತನ್ನ ಯಜಮಾನನ ಕೈಗೆ ಕಟ್ಟಿದ ಸರಪಳಿಗಳನ್ನು ತನ್ನ ಮೊನಚಾದ ಹಲ್ಲುಗಳಿಂದ ತುಂಡರಿಸುತ್ತದೆ. ನಿಯತ್ತಿಗೆ ಹೆಸರಾದವ ಅಂದ್ರೆ ನನೀನ. ಟೈಸನ್, ಅಟ್ಯಾಕ್ ಮಾಡು, ಕಚ್ಚು. ಅಂತಾ ತನ್ನ ಸಾಕು ನಾಯಿ ಟೈಸನ್ ನನ್ನು ಹುರಿದುಂಬಿಸುತ್ತಿದ್ದ. ತನ್ನ ಕೈಗಳು ಮುಕ್ತವಾಗುತಿದ್ದಂತೆ, ಕೈಚಳಕ ತೋರಿಸಿಬಿಟ್ಟಿದ್ದ. ಒಬ್ಬೊಬ್ಬರನ್ನು ಹಿಡಿದು ಯಮಲೋಕದ ದಾರಿ ಕಾಣಿಸುತಿದ್ದ. ಕೊನೆಗೂ ನಿಯತ್ತು ಅಂದರೆ ನಾಯಿಗೆ ಮಾತ್ರ ಇರುತ್ತದೆ ಎಂಬುದನ್ನು ಆತ ಸಾಕಿದ ನಾಯಿ (ಟೈಸನ್) ಆತನ ಪ್ರಾಣ ಉಳಿಸಿತ್ತು. ಅಷ್ಟರಲ್ಲಿ ಊರಜನಕ್ಕೆ ಸತ್ಯ ಗೊತ್ತಾಗಿದ್ದೇ ತಡ ಕೈಯಲ್ಲಿ ಬಡಿಗೆ, ಕುಡುಗೋಲು, ಕತ್ತಿ, ಗುರಾಣಿ, ಹಿಡಿದು ಯುದ್ಧಕ್ಕೆ ಬರುವ ಸೈನಿಕರಂತೆ ಬರುತ್ತಿರುವುದು ದೂರದಿಂದಲೇ ನೋಡಿದ ದೇವಸೂರ ಮುಗುಳ್ನಗುತಿದ್ದ, ಆತನ ಸಹಪಾಠಿ ಟೈಸನ್ ಜೊಲ್ಲು ಸೋರಿಸುತ್ತಲೇ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.