ADVERTISEMENT

ಪರೋಪಕಾರಿ ಕುರಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 2 ಫೆಬ್ರುವರಿ 2019, 20:00 IST
Last Updated 2 ಫೆಬ್ರುವರಿ 2019, 20:00 IST
   

ಒಂದು ಗ್ರಾಮದಲ್ಲಿ ಶ್ರೀಮಂತ ವ್ಯಕ್ತಿಯೊಬ್ಬನಿದ್ದ. ಆತನು ತನ್ನ ಜಮೀನಿನಲ್ಲಿ ವಿವಿಧ ರೀತಿಯ ಪ್ರಾಣಿ, ಪಕ್ಷಿಗಳನ್ನು ಸಾಕಿಕೊಂಡಿದ್ದ. ಅವುಗಳಲ್ಲಿ ಒಂದು ಕುರಿ ಮತ್ತು ಒಂದು ಕುದುರೆಯೂ ಇತ್ತು. ಆ ವ್ಯಕ್ತಿ ಕುದುರೆ ಮತ್ತು ಕುರಿಯನ್ನು ಇತರ ಪ್ರಾಣಿಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ.

ಒಂದು ದಿನ ಅವನು ಸಾಕಿದ್ದ ಕುದುರೆ ಹಾಗೂ ಕುರಿ, ಗೆಳೆಯರ ಜೊತೆ ಆಟ ಆಡಲು ಅರಣ್ಯ ಪ್ರದೇಶಕ್ಕೆ ಹೋಗಿದ್ದವು. ಬಹಳ ಹೊತ್ತು ಆಟವಾಡಿದ್ದರಿಂದ ಕುರಿಗೆ ದಣಿವಾಯಿತು. ಕುದರೆಯು ಸಹ ದಣಿದು ಮರದ ಕೆಳಗೆ ಕುಳಿತುಕೊಂಡಿತು. ಕುರಿಯು ತನ್ನ ಮಿತ್ರರಾದ ಹಕ್ಕಿಗಳು ಇನ್ನೂ ಹಾರಾಡುತ್ತಿರುವುದನ್ನು ನೋಡಿತು. ತನಗೂ ಹಕ್ಕಿಗಳಂತೆ ಹಾರಾಡಲು ಸಾಧ್ಯವಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಯೋಚಿಸಲು ಆರಂಭಿಸಿತು. ಹೀಗೆ ಯೋಚನೆಯಲ್ಲಿ ತೊಡಗಿದ್ದ ಕುರಿಯನ್ನು ನೋಡಿದ ಕುದುರೆಯು, ‘ಗೆಳೆಯ, ಯಾವ ಯೋಚನೆಯಲ್ಲಿ ಮುಳುಗಿದ್ದೀಯ’ ಎಂದು ಕೇಳಿತು. ‘ಗೆಳೆಯರಾದ ನವಿಲು, ಹದ್ದು, ಗರುಡ ಹಾಗೂ ಗಿಳಿಯ ಹಾಗೆ ನನಗೂ ಆಕಾಶದಲ್ಲಿ ಹಾರುವ ಆಸೆಯಾಗಿದೆ’ ಎಂದಿತು ಕುರಿ. ‘ನೋಡು ಗೆಳೆಯ, ನಮಗೆ ಬಲಿಷ್ಠವಾದ ಕಾಲುಗಳಿರುವುದರಿಂದ ನಾವು ಓಡಬಲ್ಲೆವು, ಜಿಗಿಯಬಲ್ಲೆವು. ಆಕಾಶದಲ್ಲಿ ಹಾರಲು ನಮಗೆ ದೇವರು ರೆಕ್ಕೆಗಳನ್ನು ಕೊಟ್ಟಿಲ್ಲವಲ್ಲಾ. ಆದ್ದರಿಂದ ಆಕಾಶದಲ್ಲಿ ಹಾರಾಡುವ ಕನಸನ್ನು ಬಿಟ್ಟುಬಿಡು, ಈಗ ಓಡೋಡಿ ಮನೆಯ ಕಡೆ ಹೋಗೋಣ ಬಾ’ ಎಂದಿತು ಕುದುರೆ. ಎರಡೂ ಪ್ರಾಣಿಗಳು ಮನೆ ಕಡೆಗೆ ಓಡ ತೋಡಗಿದವು.

ಎಡೆಬಿಡದ ಓಟದಲ್ಲಿ ಕುದುರೆಯು ಮುಂದೆ ಸಾಗಿತು. ಇನ್ನೇನು ಮನೆಗೆ ತಲುಪಬೇಕು ಎನ್ನುವಷ್ಟರಲ್ಲಿ ಕುದುರೆಯು ಆಯ ತಪ್ಪಿ ಗುಂಡಿಗೆ ಬಿದ್ದಿತು. ಅದರ ಕಾಲಿಗೆ ತೀವ್ರವಾದ ಏಟಾಗಿ ನರಳಲು ಆರಂಭಿಸಿತು.

ADVERTISEMENT

ಕುದುರೆಯು ಬಿದ್ದು ಏಟುಮಾಡಿಕೊಂಡ ವಿಚಾರ ಶ್ರೀಮಂತನಿಗೆ ತಿಳಿಯಿತು. ಆತ ಕೂಡಲೇ ಪಶು ವೈದ್ಯರನ್ನು ಕರೆಸಿದನು. ವೈದ್ಯರು ಕುದುರೆಯನ್ನು ಪರೀಕ್ಷಿಸಿದ ಬಳಿಕ, ‘ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಮೂರು ದಿನ ಉಪಚಾರ ಮಾಡಿ ನೋಡೋಣ. ಕಾಲು ಸರಿಯಾಗದಿದ್ದರೆ ಕುದುರೆಯನ್ನು ಕೊಲ್ಲಬೇಕಾಗುತ್ತದೆ’ ಎಂದು ಹೇಳಿ ಹೋದರು.

ವೈದ್ಯರು ನೀಡಿದ ಸಲಹೆಯನ್ನು ಸಮೀಪದಲ್ಲೇ ಇದ್ದ ಕುರಿಯು ಕೇಳಿಸಿಕೊಂಡಿತು. ಎರಡು ದಿನಗಳು ಕಳೆದರೂ ಕುದುರೆ ಚೇತರಿಸಿಕೊಳ್ಳಲಿಲ್ಲ. ಎದ್ದು ನಿಲ್ಲಲೂ ಅದಕ್ಕೆ ಸಾಧ್ಯವಾಗಲಿಲ್ಲ. ಮೂರನೆಯ ದಿನ ಕುರಿಯು ಕುದುರೆಯ ಬಳಿಬಂದು, ‘ಬೇಗನೆ ಎದ್ದೇಳು, ಇಲ್ಲದಿದ್ದಲ್ಲಿ ಇಂದು ನಿನ್ನನ್ನು ಕೊಲ್ಲುತ್ತಾರೆ. ವೈದ್ಯರು ಬರುವ ಸಮಯವಾಗುತ್ತಿದೆ. ಅವರು ಬರುವುದರೊಳಗೆ ಎದ್ದು ನಿಲ್ಲದಿದ್ದರೆ ನಿನ್ನನ್ನು ಕೋಲ್ಲುತ್ತಾರೆ. ಏಳು ಏಳು...’ ಎಂದು ಅಂಗಲಾಚಿತು. ಕುದುರೆಯು ತನ್ನೆಲ್ಲ ಶಕ್ತಿಯನ್ನು ಬಳಸಿಕೊಂಡು ಕಷ್ಟಪಟ್ಟು ಎದ್ದು ನಿಂತಿತು. ಅದೇ ಸಮಯಕ್ಕೆ ಸರಿಯಾಗಿ ಕುದುರೆಯ ಧಣಿ ಮತ್ತು ಪಶುವೈದ್ಯರು ಅಲ್ಲಿಗೆ ಬಂದರು. ಕುದುರೆ ಎದ್ದು ನಿಂತಿರುವುದನ್ನು ನೋಡಿ ಧಣಿಗೆ ಸಂತಸವಾಯಿತು. ಅವರು, ‘ಕುದುರೆಯ ಜೀವ ಉಳಿಸಿದಿರಿ ಬಹಳ ಉಪಕಾರ ಆಯಿತು’ ಎಂದು ಪಶು ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದರು. ಜೊತೆಗೆ, ‘ಇಂದು ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಹೋಗಬೇಕು’ ಎಂದು ಒತ್ತಾಯಿಸಿದರು. ವೈದ್ಯರು ಅದಕ್ಕೆ ಒಪ್ಪಿದರು.

ಶ್ರೀಮಂತ ಧಣಿಯು ತನ್ನ ಮನೆಯ ಅಡುಗೆಯವರನ್ನು ಕರೆದು, ಕುರಿಯನ್ನು ಕಡಿದು ಪಶು ವೈದ್ಯರಿಗಾಗಿ ವಿಶೇಷ ಮಾಂಸಾಹಾರ ತಯಾರಿಸುವಂತೆ ಸೂಚಿಸಿದರು. ಆ ಮಾತನ್ನು ಪಶು ವೈದ್ಯರು ಕೇಳಿಸಿಕೊಂಡರು. ಕುರಿ ಮತ್ತು ಕುದುರೆಯ ನಡುವಿನ ಸ್ನೇಹವನ್ನು ಅರಿತಿದ್ದ ಪಶುವೈದ್ಯರಿಗೆ ಕುರಿಯನ್ನು ಕಡಿಯುವುದು ಸರಿ ಎನಿಸಲಿಲ್ಲ. ಅವರು ಧಣಿಯನ್ನು ಕರೆದು, ‘ಕುರಿ ಮತ್ತು ಕುದುರೆ ಒಂದೇ ಜೀವ ಎರಡು ದೇಹವಾಗಿವೆ. ಗಾಯಗೊಂಡಿದ್ದ ಕುದುರೆಯು ಎದ್ದು ನಿಲ್ಲಲು ಕುರಿಯ ಪ್ರಚೋದನೆಯ ಮಾತುಗಳೇ ಕಾರಣ’ ಎಂದು ತಿಳಿಸಿದರು. ಆ ಮಾತನ್ನು ಕೇಳಿ ಧಣಿಗೆ ಅತೀವ ಸಂತೋಷವಾಯಿತು. ಇನ್ನು ಮುಂದೆ ಯಾವ ಪ್ರಾಣಿಯನ್ನೂ ಕೊಲ್ಲಬಾರದು ಎಂದು ಸೂಚನೆ ನೀಡಿದರಲ್ಲದೆ, ಎಲ್ಲರೊಡನೆಯೂ ಸ್ನೇಹ–ಪ್ರೀತಿಯಿಂದ ಬಾಳಬೇಕು ಎಂದು ಪ್ರಾಣಿಗಳಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.