ADVERTISEMENT

ಹೊಸ ವರ್ಷಕ್ಕೆ ಆಧುನಿಕ ಕಾರುಗಳು

ರಾಹುಲ ಬೆಳಗಲಿ
Published 20 ಡಿಸೆಂಬರ್ 2018, 5:04 IST
Last Updated 20 ಡಿಸೆಂಬರ್ 2018, 5:04 IST
ಮಹೀಂದ್ರಾ ಎಸ್‌ 201
ಮಹೀಂದ್ರಾ ಎಸ್‌ 201   

2018 ನೇ ವರ್ಷದ ಕೊನೆಯಲ್ಲಿದ್ದೇವೆ. 2019, ಹೊಸವರ್ಷವನ್ನು ಸ್ವಾಗತಿಸಲು ಆಟೊಮೊಬೈಲ್ ಕ್ಷೇತ್ರ ಸಜ್ಜಾಗುತ್ತಿದೆ. ಕಳೆದ ವರ್ಷ ಕಾರು ಖರೀದಿ ಮಿಸ್ ಆಗಿದೆ, ಮುಂದಿನ ವರ್ಷವಾದರೂ ಹೊಸ ವಿನ್ಯಾಸದ, ಅತ್ಯಾಧುನಿಕ ಸೌಲಭ್ಯವುಳ್ಳ ಕಾರನ್ನು ಕೊಳ್ಳಲೇಬೇಕೆಂದು ರೆಸಲ್ಯೂಷನ್ ಮಾಡುವವರಿಗೇನೂ ಕೊರತೆಯಿಲ್ಲ.

ಹೀಗೆ ಹೊಸ ವಿನ್ಯಾಸ, ಹೊಸ ಮಾದರಿಯ ಕಾರುಗಳನ್ನು ನಿರೀಕ್ಷಿಸುತ್ತಿರುವವರನ್ನು ಆಟೊಮೊಬೈಲ್ ಕ್ಷೇತ್ರ ನಿರಾಶೆಗೊಳಿಸುತ್ತಿಲ್ಲ. 2019ರ ಜನವರಿಯಿಂದ ಮಾರ್ಚ್‌ವರೆಗೆ ವಿಶ್ವದ ಹಲವು ಪ್ರತಿಷ್ಠಿತ ಕಂಪನಿಗಳು ನವ ನವೀನ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಕಾತುರದಲ್ಲಿವೆ.

ಗ್ರಾಹಕರ ಮನಗೆಲ್ಲಲೆಂದೇ ಕಂಪನಿಯ ತಜ್ಞ ವಿನ್ಯಾಸಕಾರರು, ನುರಿತ ಸಿಬ್ಬಂದಿ ಹೊಸ ವಿನ್ಯಾಸದ ಕಾರುಗಳ ನಿರ್ಮಾಣಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ಕಾರು ಚಾಲನೆ ಮಾಡುವ ಗ್ರಾಹಕರ ಮೊಗದಲ್ಲಿ ಸಂತಸ, ನೆಮ್ಮದಿ ಮತ್ತು ನಿರಾತಂಕದ ಭಾವ ಮೂಡಿದರೆ, ಅವರೆಲ್ಲರ ಶ್ರಮ ಸಾರ್ಥಕ.

ADVERTISEMENT

ಈಗಾಗಲೇ ನಿಸಾನ್, ಜಾಗ್ವಾರ್, ಮಾರುತಿ ಸೇರಿದಂತೆ ವಿವಿಧ ಕಂಪನಿಗಳು, ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ಹೊಸ ಮಾದರಿಯ ಕಾರುಗಳ ಟೆಸ್ಟ್ ಡ್ರೈವ್ ಮತ್ತು ವಿನ್ಯಾಸ ಲಾಂಚ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂಥ ಮಾದರಿಯ ಕಾರುಗಳ ತಯಾರಿಕೆಗಾಗಿ ಹೊಸ ತಂಡವನ್ನೇ ರಚಿಸಿವೆ. ಕೆಲವು ಕಡೆ, ಇವುಗಳ ಪ್ರದರ್ಶನವನ್ನು ಏರ್ಪಡಿಸಿ, ಹೊಸ ಕಾರುಗಳಲ್ಲಿರುವ ಸೌಲಭ್ಯಗಳು, ತಂತ್ರಜ್ಞಾನಗಳ ವಿಷಯವನ್ನು ಮಾಧ್ಯಮಗಳ ಮೂಲಕ ಗ್ರಾಹಕರನ್ನು ತಲುಪಿಸುವ ಪ್ರಯತ್ನ ಮಾಡಿವೆ.

ಕೆಲವು ಕಂಪನಿಗಳು ವರ್ಷದ ಆರಂಭದಲ್ಲೇ ಅಂದರೆ ಜನವರಿಯ ಮೊದಲ ಅಥವಾ ಕೊನೆಯ ವಾರದಲ್ಲಿ ತನ್ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ನಿಲ್ಲಿಸಲಿವೆ. ಹೊಸ ವರ್ಷಾಚರಣೆಯ ಜತೆಗೆ, ನೂತನ ಕಾರು ಲೋಕಾರ್ಪಣೆಯನ್ನೂ ನಡೆಸಲು ಯೋಚನೆ ರೂಪಿಸಿವೆ. ಇನ್ನು ಕೆಲ ಕಂಪನಿಗಳು, ಪ್ರತಿಸ್ಪರ್ಧಿಗಳ ಚಟುವಟಿಕೆಗಳನ್ನು ಗಮನಿಸಿ, ಫೆಬ್ರುವರಿ, ಮಾರ್ಚ್, ಜೂನ್ ಅಥವಾ ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿವೆ. ಒಟ್ಟಾರೆ ಗ್ರಾಹಕರ ನಿರೀಕ್ಷೆ ಮತ್ತು ಬಯಕೆ ಅನುಸಾರ ಸಿದ್ಧಪಡಿಸಲಾದ ಬಹುತೇಕ ಕಾರುಗಳಲ್ಲಿ ಎಲ್ಲ ತರಹದ ಅತ್ಯುಧನಿಕ ಸೌಕರ್ಯಗಳನ್ನು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಕಂಪನಿಗಳು ಮಾಡಿವೆ.

ಜಾಗ್ವಾರ್ ಐ–ಪೇಸ್‌

ಹೊಸ ವರ್ಷದಲ್ಲಿ ಬಿಡುಗಡೆಯಾಗಲಿರುವ ಕಾರುಗಳಲ್ಲಿ ವಿನ್ಯಾಸ, ಮೈಲೇಜ್, ಸೌಕರ್ಯ, ದರ ಸೇರಿದಂತೆ ಎಲ್ಲ ವಿಷಯದಲ್ಲೂ ಪ್ರತಿಸ್ಪರ್ಧೆ, ಪೈಪೋಟಿ ಇರುತ್ತದೆ. ಆಸಕ್ತಿಕರ ಸಂಗತಿಯೆಂದರೆ, ಕಾರುಗಳ ಆಯ್ಕೆ ವಿಷಯದಲ್ಲಿ ಗ್ರಾಹಕರು ಕೆಲ ಹೊತ್ತು ಇಕ್ಕಟ್ಟು ಸ್ಥಿತಿ ಎದುರಿಸಿದರೆ ಅಚ್ಚರಿಪಡಬೇಕಿಲ್ಲ. ಯಾವುದು ಚೆಂದ? ಯಾವುದು ಹೆಚ್ಚು ಸೊಗಸು? ಯಾವುದರಲ್ಲಿ ಏನು ಸೌಕರ್ಯ...ಹೀಗೆ ಹತ್ತು ಹಲವು ಪ್ರಶ್ನೆಗಳು ಅವರಿಗೆ ಕಾಡದೇ ಇರುವುದಿಲ್ಲ.

ಹೀಗೆ ಹೊಸ ವರ್ಷದಲ್ಲಿ ಮಾರುಕಟ್ಟೆಗೆ ಇಳಿಯಲಿರುವ ಕೆಲ ಕಾರುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಮಾರುಕಟ್ಟೆಗೆ ಬರುವ ಮುನ್ನವೇ ಸಾಕಷ್ಟು ಸದ್ದು ಮಾಡಿದೆ. 2018ರ ಆಟೊ ಎಕ್ಸ್‌ಪೋದಲ್ಲಿ ಗಮನ ಸೆಳೆದ ಟಾಟಾಎಚ್5ಎಕ್ಸ್ ಮಾದರಿ ಪರಿಕಲ್ಪನೆ ಆಧರಿಸಿರುವ ಈ ಕಾರು ಆಕರ್ಷಕ ವಿನ್ಯಾಸ ಹೊಂದಿದೆ. ಅಲ್ಲದೇ ಹಲವು ನೂತನ ಸೌಲಭ್ಯ ಒಳಗೊಂಡಿದೆ. ಬಾಹ್ಯವಾಗಿ ಸ್ಟೋರ್ಟ್ಸ್ ಕಾರಿನಂತೆ ಕಂಡರೆ, ಆಂತರಿಕವಾಗಿ ಉತ್ತಮ ಆಸನ ವ್ಯವಸ್ಥೆಯಿಂದ ಗಮನ ಸೆಳೆಯುತ್ತದೆ. 2.0 ಕೈರೋಟೆಕ್ ಡೀಸೆಲ್ ಎಂಜಿನ್ ಸಾಮರ್ಥ್ಯದ ಟಾಟಾ ಹ್ಯಾರಿಯರ್, ಎಲ್ಇಡಿ ಹೆಡ್‌ಲ್ಯಾಂಪ್, ಟಚ್‌ಸ್ಕ್ರೀನ್ ಇನ್ಫೊಟೇನ್‌ಮೆಂಟ್ ಸಾಧನ ಅಲ್ಲದೇ ಹತ್ತು ಹಲವು ತಂತ್ರಜ್ಞಾನದ ಸೌಕರ್ಯದಿಂದ ಆಕರ್ಷಿಸುತ್ತದೆ. ಅಂದ ಹಾಗೆ, ಇದರ ದರ ₹ 13 ರಿಂದ ₹ 18 ಲಕ್ಷ ಆಗಬಹುದು.

ನಿಸ್ಸಾನ್ ಕಿಕ್ಸ್

ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಿಸ್ಸಾನ್ ಕಿಕ್ಸ್, ಭಾರತೀಯ ಮಾರುಕಟ್ಟೆಗೆ ಹಲವು ವೈಶಿಷ್ಟ್ಯಗಳೊಂದಿಗೆ ಪರಿಚಯವಾಗಲಿದೆ. ಹ್ಯುಂಡೈ ಕ್ರೇಟಾ ಮತ್ತು ರೇನಾಲ್ಟ್ ಕ್ಯಾಪ್ಟರ್ ಮಾದರಿಯ ವಾಹನಗಳಿಗೆ ಸ್ಪರ್ಧೆ ಒಡ್ಡುವಂತೆ ರೂಪಿಸಲಾಗಿರುವ ಈ ಕಾರು ಚೆನ್ನೈನ ನಿಸ್ಸಾನ್ ವಿನ್ಯಾಸ ಕೇಂದ್ರದಲ್ಲಿ ಸಿದ್ಧಗೊಂಡಿದೆ. ಇತರೆ ವಾಹನಗಳಿಗೆ ಹೋಲಿಸಿದರೆ ಇದು ಕೊಂಚ ದೊಡ್ಡದು. 4384 ಮಿ.ಮೀ. ಎತ್ತರ, 1813 ಮಿ.ಮೀ. ಅಗಲ ಮತ್ತು 1656 ಮಿ.ಮೀ. ಎತ್ತರವಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡನ್ನೂ ಹೊಂದಿರುವುದು ಇದರ ವಿಶೇಷ. ಇದರ ದರ ₹ 10 ಲಕ್ಷದಿಂದ ₹ 15 ಲಕ್ಷ ಆಗಬಹುದೆಂದು ಅಂದಾಜಿಸಲಾಗಿದೆ.

ಮಹೀಂದ್ರಾ ಎಸ್201

ಸ್ಸಾಂಗ್‌ವ್ಯೊಂಗ್ ಟಿವೊಲಿಯಿಂದ ತಂತ್ರಜ್ಞಾನದಿಂದ ಸ್ಫೂರ್ತಿ ಪಡೆದಿರುವ ಮಹೀಂದ್ರಾ ಎಸ್201 ಸಂಚಲನ ಮಾಡುವುದಂತೂ ನಿಶ್ಚಿತ. ಫೋರ್ಡ್‌ ಎಕೊಸ್ಫೋರ್ಟ್, ಟಾಟಾ ನೆಕ್ಸಾನ್, ವಿಟಾರಾ ಬ್ರೆಜ್ಜಾಗೆ ಪ್ರತಿಸ್ಪರ್ಧಿಯಾದ ಈ ಕಾರು ಮಾರ್ಚ್‌ ವೇಳೆಗೆ ಭಾರತೀಯ ಮಾರುಕಟ್ಟೆಗೆ ಪರಿಚಯವಾಗುವ ಸಾಧ್ಯತೆಯಿದೆ. ಮಹೀಂದ್ರಾದ ಕಂಪನಿಯ ವಿಶಾಲ ಕುಟುಂಬದಲ್ಲಿ ಹೊಸ ಸದಸ್ಯನ ರೂಪದಲ್ಲಿ ಸೇರ್ಪಡೆಯಾಗಲಿರುವ ಮಹೀಂದ್ರಾ ಎಸ್201 ದೊಡ್ಡ ಹೆಡ್‌ಲ್ಯಾಂಪ್, ಪ್ರೊಜೆಕ್ಟರ್ ಲೆನ್ಸ್, ಟಚ್‌ಸ್ಕ್ರೀನ್ ಇನ್ಫೊಟೇನ್ಮೆಂಟ್ ಸಾಧನ, ಬಹುಸಾಮರ್ಥ್ಯದ ಸ್ಟೀರಿಂಗ್ ಮುಂತಾದವು ಒಳಗೊಂಡಿದೆ. ಇದರ ದರ ₹ 7 ₹ 10 ಲಕ್ಷ.

ಎಲೆಕ್ಟ್ರಿಕ್ ಜಾಗ್ವಾರ್ ಐ–ಪೇಸ್

ನಾರ್ವೆ ದೇಶದಲ್ಲಿ 2019ರ ವರ್ಷದ ಕಾರು ಎಂಬ ಕೀರ್ತಿಗೆ ಪಾತ್ರವಾಗಿರುವ ಎಲೆಕ್ಟ್ರಿಕ್ ಜಾಗ್ವಾರ್‌ ಐ–ಪೇಸ್ ಜಾಗತಿಕ ಮಟ್ಟದಲ್ಲಿ 30 ಪ್ರಶಸ್ತಿಗಳನ್ನು ಗಳಿಸಿದೆ. ಜರ್ಮನಿಯಲ್ಲೂ ವರ್ಷದ ಕಾರು ಎಂದು ಪರಿಗಣಿಸಲಾಗಿರುವ ಜಾಗ್ವಾರ್ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ಕಾರು ಶ್ರೇಷ್ಠ ಸ್ಥಾನ ಪಡೆಯಲು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ವೋಲ್ವೊ ವಿ60, ನಿಸ್ಸಾನ್ ಲೀಫ್ ಮತ್ತು ಫೋರ್ಡ್‌ ಫೋಕಸ್‌ಗೆ ತೀವ್ರ ಪೈಪೋಟಿ ನೀಡಿ ತೀರ್ಪುಗಾರರು ಮತ್ತು ಮಾಧ್ಯಮಪ್ರತಿನಿಧಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಎಲೆಕ್ಟ್ರಿಕ್ ವಾಹನ ಸಿದ್ಧಪಡಿಸುವ ಪ್ರಯತ್ನದಲ್ಲಿ ಯಶಸ್ಸು ಗಳಿಸಿರುವ ಜಾಗ್ವಾರ್ ಸಂಸ್ಥೆಯು ಯಶಸ್ವಿಯಾಗಿದ್ದು, ಅತ್ಯುತ್ತಮ ಕಾರು ಪರಿಚಯಿಸಿದೆ. ಈ ಕಾರಿನ ವಿನ್ಯಾಸ, ನಿರ್ವಹಣೆ ಸುಗಮವಾಗಿದ್ದು, ಚಾಲನೆಯು ಹಿತವಾಗಿದೆ. ವರ್ಷದ ಕಾರು ಆಯ್ಕೆ ಮಾಡುವಲ್ಲಿ ತುಂಬಾ ಯೋಚಿಸುತ್ತೇವೆ. ಆದರೆ ಜಾಗ್ವಾರ್ ಎಲೆಕ್ಟಿಕ್ ಕಾರನ್ನು ವರ್ಷದ ವಾಹನವೆಂದು ಆಯ್ಕೆ ಮಾಡುವಾಗ ಯಾವುದೇ ಗೊಂದಲ ಇರಲಿಲ್ಲ’ ಎಂದು ನಾರ್ವೆಯ ವರ್ಷದ ಕಾರು ತೀರ್ಪುಗಾರರಲ್ಲಿ ಒಬ್ಬರಾದ ಎಸ್ಪೆನ್ ಸ್ಟೆನ್‌ಸ್ರುಡ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.