ADVERTISEMENT

ಬಳಸಿದ ಕಾರು ಕೊಳ್ಳುವ ಮುನ್ನ

ಜಯಸಿಂಹ ಆರ್.
Published 6 ಜನವರಿ 2016, 19:53 IST
Last Updated 6 ಜನವರಿ 2016, 19:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಮ್ಮಲ್ಲಿ ಬಳಸಿದ ಕಾರುಗಳ ಮಾರುಕಟ್ಟೆ ಬಹಳ ಜೋರಾಗಿದೆ. ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ತಮ್ಮ ಓಡಾಟಕ್ಕೆ ಎಂದು ಒಂದು ಕಾರು ಕೊಳ್ಳುವವರ ಸಾಲು ದೊಡ್ಡದಿದೆ. ಕನಿಷ್ಠ ಒಂದೆರಡು ವರ್ಷಗಳ ಬಳಕೆಗಾದರೂ ಸೆಕೆಂಡ್‌ ಹಾಂಡೆಲ್‌ ಕಾರು ಕೊಳ್ಳಬೇಕೆನ್ನುವವರೂ ಸಾಕಷ್ಟು ಮಂದಿ ಇದ್ದಾರೆ.

ಅಂಥವರ ಮುಂದೆ ಈಗ ದೊಡ್ಡ ಆಯ್ಕೆಗಳಿವೆ. ಒಂದು ಖಾಸಗಿ ಡೀಲರ್‌ಗಳದ್ದು, ಎರಡನೆಯದ್ದು ಅಧಿಕೃತ ಡೀಲರ್‌ಗಳೇ ಮಾರಾಟ ಮಾಡುವ ಬಳಸಿದ ಕಾರ್‌ಗಳದ್ದು, ಕೊನೆಯದಾಗಿ ಒಎಲ್‌ಎಕ್ಸ್, ಕ್ವಿಕರ್‌ನಂತಹ ಆನ್‌ಲೈನ್ ತಾಣಗಳು.

ಬಳಸಿದ ಕಾರು ಕೊಳ್ಳುವಾಗ ಗರಿಷ್ಠ ಪ್ರಮಾಣದಲ್ಲಿ ಚೌಕಾಸಿ ಮಾಡಿ ಬೆಲೆ ಇಳಿಸುವುದು ಎಂದಿಗೂ ಬುದ್ಧಿವಂತಿಕೆಯ ಅರ್ಥಾತ್ ಲಾಭದ ಕ್ರಮ. ಮಾರುವವರು ಹೇಳುವ ಬೆಲೆ ತೆತ್ತು ಬಂದರೆ ಖಂಡಿತ ಟೋಪಿ ಬಿದ್ದಿರುತ್ತೇವೆ.

ಅಧಿಕೃತ ಡೀಲರ್‌ಗಳ ಬಳಿ ಬಳಸಿದ ಕಾರು ಕೊಳ್ಳುವಾಗ ಚೌಕಾಸಿಗೆ ಅವಕಾಶ ಇರುವುದಿಲ್ಲ. ಚೌಕಾಸಿ ಮಾಡಿದರೂ ಅದರಿಂದ ಗಿಟ್ಟುವ ಲಾಭ ದೊಡ್ಡದೇನೂ ಆಗಿರುವುದಿಲ್ಲ. ಆದರೆ ಖಾಸಗಿ ಡೀಲರ್‌ಗಳು ಮತ್ತು ಮಾಲೀಕರಿಂದಲೇ ನೇರವಾಗಿ ಖರೀದಿ ಮಾಡುವಾಗ ಚೌಕಾಸಿಗೆ ಸಾಕಷ್ಟು ಅವಕಾಶವಿರುತ್ತದೆ.

ಬಳಸಿದ ಕಾರುಗಳನ್ನು ಕೊಳ್ಳುವಾಗ ಕೇವಲ ಅದರ ಬೆಲೆ, ಸುಸ್ಥಿಯಲ್ಲಿರುವ ದೇಹ, ಓಡೊ ಮೀಟರ್‌ ರೀಡಿಂಗ್‌ಗಳನ್ನು ನೋಡಿದರೆ ಸಾಲದು. ಬೆಲೆ ಚೌಕಾಸಿಗೆ ಬಿಟ್ಟದ್ದು. ದೇಹ ಬಣ್ಣ ಕಳೆದುಕೊಂಡಿದ್ದರೂ, ತಗ್ಗು ಹೋಗಿದ್ದರೂ (ಸಣ್ಣ ಪ್ರಮಾಣದ್ದು) ಅಲ್ಲಲ್ಲಿ ತುಕ್ಕು ಹಿಡಿದಿದ್ದರೂ ಅದನ್ನೆಲ್ಲಾ ಸರಿ ಪಡಿಸಲು 25 ಸಾವಿರದಿಂದ 30 ಸಾವಿರ ರೂಪಾಯಿ ಸಾಲುತ್ತದೆ. ಇದೂ ಒಂದು ಚೌಕಾಸಿಯ ಅಂಶವೇ. ಆದರೆ ಬಳಸಿದ ಕಾರು ಕೊಳ್ಳುವ ಮುನ್ನ ಇದಕ್ಕಿಂತಲೂ ತೀರಾ ಗಮನ ಕೊಡಬೇಕಾದ ಮತ್ತೂ ಹಲವು ಅಂಶಗಳಿವೆ.

ಚೌಕಾಸಿ ಆರಂಭಿಸುವ ಮುನ್ನ ಕಾರಿನ ಎಂಜಿನ್ ಆನ್ ಮಾಡಿ, ಕಾರನ್ನು ಚಲಾಯಿಸಿ ನೋಡುವುದು ಉತ್ತಮ.

ಎಂಜಿನ್ ಮತ್ತು ಕ್ಲಚ್
ಕಾರನ್ನು ಪರೀಕ್ಷಿಸಲು ಕನಿಷ್ಠ ಇಬ್ಬರಾದರೂ ಹೋಗುವುದು ಒಳಿತು. ಉತ್ತಮವಾಗಿ ನಿರ್ವಹಣೆ ಮಾಡಿರುವ ಕಾರಿನ ಎಂಜಿನ್ ಒಂದೇ ಬಾರಿಗೆ ಆನ್‌ ಆಗಬೇಕು. ಅಂದರೆ ಮೊದಲ ಕ್ರಾಂಕ್‌ಗೇ ಎಂಜಿನ್‌ಗೆ ಜೀವ ಬರಬೇಕು.

ಐಡಲ್ ಮೋಡ್‌ನಲ್ಲಿ ಕಾರಿನ ಎಂಜಿನ್ ಅನ್ನು ತುಸು ಹೊತ್ತು (ಒಂದೆರಡು ನಿಮಿಷ) ಬಿಡಬೇಕು. ಪೆಟ್ರೋಲ್ ಮತ್ತು ಡೀಸೆಲ್, ಹಾಗೆಯೇ ಟರ್ಬೊ ಮತ್ತು ನಾನ್ ಟರ್ಬೊ ಎಂಜಿನ್ ಕಾರುಗಳಿಗೂ ಇದೇ ನಿಯಮ ಅನ್ವಯವಾಗುತ್ತದೆ. ಕಾರನ್ನು ಸಾಕಷ್ಟು ದಿನ ಓಡಿಸದೇ ಇದ್ದಲ್ಲಿ ಮೊದಲ ಒಂದೆರಡು ನಿಮಿಷ ಕಾರಿನ ಎಕ್ಸಾಸ್ಟ್ ಪೈಪ್‌ನಿಂದ (ಸೈಲೆನ್ಸರ್) ಬಿಳಿ ಹೊಗೆ ಬರುತ್ತದೆ. ಒಂದೆರಡು ನಿಮಿಷಗಳ ನಂತರ ಅದು ನಿಂತು ಹೋಗಬೇಕು.

ನಿಲ್ಲಲಿಲ್ಲ ಅಂದರೆ ಕಾರಿನ ಎಂಜಿನ್‌ನಲ್ಲಿ ತುಸು ಸಮಸ್ಯೆ ಇದೆ ಎಂದರ್ಥ. ಇದನ್ನೆಲ್ಲಾ ಪರೀಕ್ಷಿಸಲು ನಿಮ್ಮ ಗೆಳೆಯರೋ ಅಥವಾ ಸಂಬಂಧಿಯೋ ಕಾರಿನ ಹಿಂದೆ ನಿಲ್ಲುವುದು ಉತ್ತಮ.

ನಂತರ ಕಾರನ್ನು ಚಲಾಯಿಸಬೇಕು. ಕಾರಿನ ತುಂಬಾ ಪ್ರಯಾಣಿಕರಿದ್ದರೆ ಸೂಕ್ತ. ಸಾಮಾನ್ಯ ಸಪಾಟು ರಸ್ತೆಯಲ್ಲಿ ಕಾರು ಚಲಾಯಿಸಿ ನೋಡಿ. ಎಲ್ಲಾ ಗಿಯರ್‌ಗಳನ್ನು ಬದಲಿಸಿ ನೋಡಿ. ಪ್ರತೀ ಗಿಯರ್‌ನಲ್ಲೂ ಪೂರಾ ಥ್ರೋಟಲ್ (ಎಕ್ಸಿಲೇಟರ್) ಒತ್ತಿ ನೋಡಿ. ಟಾಕೊ ಮೀಟರ್‌ನಲ್ಲಿ ಎಂಜಿನ್ ವೇಗ ಹೆಚ್ಚಿದಂತೆ ಕಾರಿನ ವೇಗವೂ ಹೆಚ್ಚಬೇಕು. ಒಂದೆರಡು ಬಾರಿ ಈ ಪರೀಕ್ಷೆಯನ್ನು ಪುನರಾವರ್ತಿಸಿ. ಪ್ರತಿ ಗಿಯರ್‌ನಲ್ಲೂ ಎಂಜಿನ್ ವೇಗ ಮತ್ತು ಕಾರಿನ ವೇಗದಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದರೆ ಕಾರಿನ ಕ್ಲಚ್‌ಪ್ಲೇಟ್‌ ಹಾಳಾಗಿದೆ ಎಂದರ್ಥ.

ಇದನ್ನು ದೃಢಪಡಿಸಿಕೊಳ್ಳಲು ಮತ್ತೊಂದೆರಡು ಪರೀಕ್ಷೆಗಳನ್ನು ಮಾಡುವುದು ಸೂಕ್ತ. ರಸ್ತೆಯಲ್ಲಿರುವ ಭಾರಿ ಹಂಪ್‌ ಏರುವಾಗ ಕಾರನ್ನು ಸಂಪೂರ್ಣ ನಿಲ್ಲಿಸಿ, ನಂತರ ಹಂಪ್ ಏರಿಸಲು ಪ್ರಯತ್ನಿಸಿ. ಹೆಚ್ಚು ಎಕ್ಸಿಲೇಟರ್‌ ಒತ್ತದೆ ಅರ್ಧ ಬಿಟ್ಟ ಕ್ಲಚ್‌ನಲ್ಲಿ ಕಾರು ಏರಿದರೆ, ಕ್ಲಚ್‌ನಲ್ಲಿ ಸಮಸ್ಯೆ ಇಲ್ಲ ಎಂದರ್ಥ.

ಏರದಿದ್ದರೆ, ದಬಾಯಿಸಿ ನೋಡಿ. ಕ್ಲಚ್‌ ಬರ್ನ್ ಆಗುವ ಕಟು ವಾಸನೆ ಮೂಗಿಗೆ ಬಡಿಯುತ್ತದೆ. ಜತೆಗೆ ಒಂದು ಏರು ದಾರಿಯನ್ನು ಸಮೀಪಿಸಿ. ಏರಿನ ಅರ್ಧದಲ್ಲಿ ನಿಲ್ಲಿಸಿ ಹಂಪ್‌ ಏರುವಾಗ ಮಾಡಿದಂತೆಯೇ ಮಾಡಿ. ಕಾರು ಸರಾಗವಾಗಿ ಆಫ್‌ ಕ್ಲಚ್‌ನಲ್ಲೇ ಏರದಿದ್ದರೆ ಕ್ಲಚ್‌ಪ್ಲೇಟ್‌ ಬರ್ನ್ ಆಗಿದೆ ಎಂದರ್ಥ. ಇದನ್ನು ಸರಿ ಪಡಿಸಲು ಆಯಾ ಕಾರನ್ನು ಆಧರಿಸಿ 7ರಿಂದ 15 ಸಾವಿರದವರೆಗೂ ಖರ್ಚು ಆಗುತ್ತದೆ. ಕಾರಿನ ಬೆಲೆಯಲ್ಲಿ ಅಷ್ಟು ಸಾವಿರವನ್ನು ಇಳಿಸುವುದು ಒಳಿತು. ಇಲ್ಲದಿದ್ದರೆ ಕೊಂಡ ಮೇಲೆ ಅಷ್ಟು ದುಡ್ಡನ್ನು ಖರ್ಚು ಮಾಡಬೇಕಾಗುತ್ತದೆ.

ಎಲ್ಲಾ ಗಿಯರ್‌ಗಳಲ್ಲೂ ಕಾರಿನ ಎಕ್ಸಿಲೇಟರ್‌ ಅನ್ನು ಪೂರಾ ಒತ್ತಿ ಓಡಿಸಿದಾಗ ಕಾರು ಸರಾಗವಾಗಿ ಮುನ್ನುಗ್ಗಬೇಕು. ಆಗ ಸೈಲೆನ್ಸರ್‌ನಲ್ಲಿ ಕಪ್ಪು ಹೊಗೆ ಬಂದರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಅದು ಟ್ಯೂನಿಂಗ್ ಸಮಸ್ಯೆ. ಸುಲಭವಾಗಿ ಸರಿಪಡಿಸಬಹುದು.

ಆದರೆ ಅಂತಹ ಸಂದರ್ಭದಲ್ಲಿ ಬಿಳಿ ಹೊಗೆ ಬರಬಾರದು. ಬಿಳಿ ಹೊಗೆ ಬರುತ್ತಿದ್ದರೆ ಎಂಜಿನ್‌ನ ಹೆಡ್‌ ಗಾಸ್ಕೆಟ್, ವಾಲ್ವ್ ಇನ್‌ಲೆಟ್‌ಗಳು ಹಾಳಾಗಿವೆ ಎಂದರ್ಥ. ಜತೆಗೆ ಪಿಸ್ಟನ್ ಮತ್ತು ಪಿಸ್ಟನ್‌ ರಿಂಗ್‌ಗಳೂ ಹಾಳಾಗಿರುವ ಸಾಧ್ಯತೆ ಇರುತ್ತದೆ. ಇದು ಒಳ್ಳೆಯ ಲಕ್ಷಣ ಅಲ್ಲ. ಈ ಬಿಳಿ ಹೊಗೆಯ ಜತೆ ದಟ್ಟ ನೀಲಿ ಹೊಗೆ ಬರುತ್ತಿದ್ದರೆ ಎಂಜಿನ್ ಸಂಪೂರ್ಣ ಹಾಳಾಗಿದೆ ಎಂದೇ ಅರ್ಥ. ಪಿಸ್ಟನ್‌ ರಿಂಗ್ ಮತ್ತು ಪಿಸ್ಟನ್‌ ಸವೆದು, ಬರ್ನ್ ಆಗಿದ್ದರೆ ಸಿಲಿಂಡರ್‌ ಒಳಗೆ ಎಂಜಿನ್ ಆಯಿಲ್ ಹರಿದು, ಅದು ಸುಟ್ಟಾಗ ನೀಲಿ ಹೊಗೆ ಬರುತ್ತದೆ. ಇದರಿಂದ ಕಾರಿನ ಪಿಕ್‌ಅಪ್‌, ವೇಗ ಮೈಲೇಜ್ ಎಲ್ಲವೂ ಸಂಪೂರ್ಣ ತೀರಾ ಕಡಿಮೆ ಆಗಿರುತ್ತದೆ.

ಅಂತಹ ಕಾರುಗಳನ್ನು ಕೊಳ್ಳದಿರುವುದೇ ಒಳ್ಳೆಯದು. ಇಲ್ಲದಿದ್ದರೆ ಕನಿಷ್ಠ 40 ಸಾವಿರದಿಂದ 70 ಸಾವಿರ ರೂಪಾಯಿಗಳವರೆಗಾದರೂ ಅದರ ಬೆಲೆಯನ್ನು ಇಳಿಸಬೇಕು. ಆಗ ಮಾತ್ರ ಅದು ಲಾಭ.

ಕಡಿಮೆ ಕಿಲೋ ಮೀಟರ್‌ ಓಡಿದೆ ಎಂದ ಮಾತ್ರಕ್ಕೆ ಕಾರಿನ ಎಂಜಿನ್‌ ಸುಸ್ಥಿತಿಯಲ್ಲಿ ಇದೆ ಎನ್ನುವುದು ಅಕ್ಷರಶಃ ಸುಳ್ಳು.
ನಿಗದಿತ ಅವಧಿ ಮತ್ತು ದೂರ ಕ್ರಮಿಸಿದಾಗ ಸರ್ವಿಸ್ ಮಾಡಿಸದೆ, ಎಂಜಿನ್ ಆಯಿಲ್ ಬದಲಿಸದೆ ಕಾರು ಚಲಾಯಿಸಿದ್ದರೆ ಎಂಜಿನ್ ಖಂಡಿತ ಹಾಳಾಗಿರುತ್ತದೆ. ಕಾಲಕಾಲಕ್ಕೆ ಎಂಜಿನ್ ಆಯಿಲ್ ಬದಲಿಸಿ ಉತ್ತಮವಾಗಿ ನಿರ್ವಹಣೆ ಮಾಡಿದ ಕಾರುಗಳು ಒಂದೆರಡು ಲಕ್ಷ ಕಿ.ಮೀ ಓಡಿದ್ದರೂ ಅವುಗಳ ಎಂಜಿನ್ ಉತ್ತಮವಾಗೇ ಇರುತ್ತದೆ. ಹೊಸ ಕಾರುಗಳ ವಿಚಾರದಲ್ಲಿ ಈ ನಿಯಮವನ್ನು ತುಸು ಸಡಿಲಿಸಬಹುದು. ಆದರೆ ಎಂಜಿನ್‌ ಹಾಳಾಗಿದ್ದರೆ ಚೌಕಾಸಿ ಮಾಡುವುದಂತೂ ಉತ್ತಮವಾದ ನಡೆ.

ಇನ್ನು ಕಾರಿನ ಎಸಿ ಆನ್ ಮಾಡಿ ಕಾರಿನ ವೇಗ ಹೆಚ್ಚಿಸಲು ಪ್ರಯತ್ನಿಸಿ. ಎಸಿ ಬಂದ್ ಆಗಿದ್ದಾಗ ವರ್ತಿಸಿದಂತೆಯೇ, ಅಂದರೆ ಅಷ್ಟೇ ಸರಾಗವಾಗಿ ಮತ್ತು ಕ್ಷಿಪ್ರವಾಗಿ ಕಾರು ವೇಗ ಪಡೆದುಕೊಳ್ಳಬೇಕು. ಆಗ ಅದರ ಎಂಜಿನ್ ಸುಸ್ಥಿತಿಯಲ್ಲಿದೆ ಎಂದರ್ಥ. ಬದಲಿಗೆ ಕಾರು ವೇಗ ಪಡೆದುಕೊಳ್ಳಲು ಕೊಸರಾಡಿದರೆ ಅದರ ಎಂಜಿನ್‌ ಸಾಕಷ್ಟು ಓಡಿದೆ ಎಂದರ್ಥ. ಆದರೆ ತಕ್ಷಣದಲ್ಲಿ ಅದರಿಂದ ಹೆಚ್ಚಿನ ತೊಂದರೆ ಏನಿಲ್ಲ.

ಇನ್ನು ಕಾರಿನ ಎಫ್‌ಸಿ ಅರ್ಥಾತ್ ಫಿಟ್‌ನೆಸ್ ಸರ್ಟಿಫಿಕೇಟ್ ಚಾಲ್ತಿಯಲ್ಲಿರಬೇಕು. 15 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಕಾರುಗಳನ್ನು ಕೊಳ್ಳುವಾಗ ಇದನ್ನು ಗಮನಿಸುವುದು ಒಳಿತು. ಎಫ್‌ಸಿ ಇಲ್ಲದ ಕಾರುಗಳನ್ನು, ವಾಹನಗಳನ್ನು ರಸ್ತೆಗೆ ಇಳಿಸುವುದು ದಂಡಾರ್ಹ ಅಪರಾಧ. ಎಫ್‌ಸಿ ರದ್ದಾಗಿರುವುದರಿಂದ ಒಂದೆರಡು ಸಾವಿರದಷ್ಟು ಬೆಲೆ ಇಳಿಸಬಹುದು ಅಥವಾ ನಗಣ್ಯ ಎಂದು ಬಿಡಬಹುದು.

ಆದರೆ ಗಮನಿಸಲೇಬೇಕಾದ ಅಂಶವೆಂದರೆ ವಿಮೆಯದ್ದು. ಕಾರಿಗೆ ಕನಿಷ್ಠ ಥರ್ಡ್ ಪಾರ್ಟಿ ವಿಮೆಯಾದರೂ ಚಾಲ್ತಿಯಲ್ಲಿರಬೇಕು. ವಿಮೆಯ ದಾಖಲೆಗಳನ್ನು ಪರಿಶೀಲಿಸಿ ಅದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕನಿಷ್ಠ ಥರ್ಡ್ ಪಾರ್ಟಿ ವಿಮೆಯ ಪ್ರೀಮಿಯಂ ಹಣದಷ್ಟು ಮೊತ್ತವನ್ನು ಕಾರಿನ ಮಾರಾಟ ಬೆಲೆಯಿಂದ ಇಳಿಸುವುದು ಒಳಿತು.

ಬಳಸಿದ ಕಾರನ್ನು ಕೊಳ್ಳುವಾಗ ಕನಿಷ್ಠ ಇಷ್ಟನ್ನಾದರೂ ಪರೀಕ್ಷಿಸಲೇ ಬೇಕು. ನಿಮಗೆ ಇದು ತಿಳಿಯದಿದ್ದರೆ ಕನಿಷ್ಠ ಕಾರನ್ನು ಚಲಾಯಿಸಿ ಅನುಭವ ಇರುವವರನ್ನಾದರೂ ಜತೆಯಲ್ಲಿ ಕರೆದುಕೊಂಡು ಹೋಗುವುದು ಒಳಿತು. ಇವುಗಳನ್ನೆಲ್ಲಾ ಪರೀಕ್ಷಿಸಿ, ಲೆಕ್ಕ ಹಾಕಿ ನೋಡಿ. ಆ ಕಾರು ಕೊಳ್ಳುವುದು ಲಾಭ ಎನಿಸಿದರೆ ಮಾತ್ರ ಕೊಳ್ಳಿ. ಇಲ್ಲದಿದ್ದರೆ ಬೇರೊಂದು ಕಾರನ್ನು ಹುಡುಕುವುದೇ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.