ADVERTISEMENT

ಯಾವ ಕಾರಿಗೆ ಎಷ್ಟು ರಿಯಾಯಿತಿ?

​ಪ್ರಜಾವಾಣಿ ವಾರ್ತೆ
Published 11 ಮೇ 2016, 19:44 IST
Last Updated 11 ಮೇ 2016, 19:44 IST
ಯಾವ ಕಾರಿಗೆ  ಎಷ್ಟು ರಿಯಾಯಿತಿ?
ಯಾವ ಕಾರಿಗೆ ಎಷ್ಟು ರಿಯಾಯಿತಿ?   

ಹೊಸ ಆರ್ಥಿಕ ವರ್ಷ ವಾಹನ ಮಾರುಕಟ್ಟೆಯಲ್ಲೂ ಸಾಕಷ್ಟು ಅವಕಾಶಗಳು ಗರಿಗೆದರುವ ಕಾಲ. ಅದರಲ್ಲೂ ಕಾರು ಖರೀದಿಸಲು ಬಯಸುವ ಮಂದಿಗಂತೂ ಹೆಚ್ಚೆಚ್ಚು ಅವಕಾಶಗಳು, ಆಯ್ಕೆಗಳು ಎದುರು ಇರುತ್ತವೆ.

ಕಾರುಗಳ ಮೇಲೆ ರಿಯಾಯಿತಿ ನೀಡುವ ಕಾಲವೂ ಇದೆನ್ನಬಹುದು. ಈ ಕಾಲವನ್ನೇ ಎದುರು ನೋಡುವ ಗ್ರಾಹಕರು ಹೊಸ ಕಾರುಗಳನ್ನು ಕೊಂಡುಕೊಳ್ಳುವ ಆಲೋಚನೆ, ತಯಾರಿಯನ್ನೂ ಮಾಡಿರುತ್ತಾರೆ.

ಅದಕ್ಕೆಂದೇ ಖರೀದಿ ಮಾಡುವ ಮುನ್ನ ಸದ್ಯ ಮಾರುಕಟ್ಟೆಯಲ್ಲಿರುವ ಈ ವರ್ಷದ ಹ್ಯಾಚ್‌ಬ್ಯಾಕ್, ಸೆಡಾನ್‌, ಎಸ್‌ಯುವಿ ಹಾಗೂ ಎಂಪಿವಿಗಳಲ್ಲಿನ ಉತ್ತಮ ಆಯ್ಕಗಳ ಕುರಿತು ಒಮ್ಮೆ ತಿಳಿದುಕೊಳ್ಳುವುದು ಒಳ್ಳೆಯದು.

ಯಾವ ಯಾವ ಕಾರಿನ ಮೇಲೆ ಎಷ್ಟೆಷ್ಟು ರಿಯಾಯಿತಿ, ಯಾವುದು ಕೊಂಡರೆ ಬಜೆಟ್‌ಗೆ, ಅವಶ್ಯಕತೆಗೆ ಹೊಂದುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಖರೀದಿಗೆ ಮುಂದಾದರೆ ಹಣಕ್ಕೆ ತಕ್ಕ ಒಳ್ಳೆ ಕಾರು ನಿಮ್ಮ ಮನೆ ಸೇರುವುದು ಖಚಿತ.

ಅಂದ ಹಾಗೆ ಈ ವರ್ಷ, ಅಂದರೆ 2016ರ ಆರ್ಥಿಕ ವರ್ಷದಲ್ಲಿ ಯಾವ್ಯಾವ ಕಾರಿಗೆ ಎಷ್ಟೆಷ್ಟು ರಿಯಾಯಿತಿಯನ್ನು ಕಾರು ಕಂಪೆನಿಗಳು ಘೋಷಿಸಿವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಈ ರಿಯಾಯಿತಿ ದರಗಳು ಒಂದೊಂದು ನಗರದಲ್ಲಿ ಒಂದೊಂದು ರೀತಿ ಇರಬಹುದು.

ಮರ್ಸಿಡಿಸ್ ಎ ಕ್ಲಾಸ್: ಮರ್ಸಿಡಿಸ್‌ನ ಸ್ಟೈಲಿಶ್ ಹ್ಯಾಚ್‌ಬ್ಯಾಕ್‌ ಆಗಿರುವ ಎ ಕ್ಲಾಸ್, ಇತ್ತೀಚೆಗೆ ಹೆಚ್ಚು ಸೌಲಭ್ಯಗಳೊಂದಿಗೆ ಒಂದಿಷ್ಟು ಮಾರ್ಪಾಡುಗಳನ್ನು ಮಾಡಿಕೊಂಡು ಗ್ರಾಹಕರ ಮುಂದೆ ಬಂದಿದೆ.

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಮರ್ಸಿಡಿಸ್‌ನ ಅತಿ ಚಿಕ್ಕ ಕಾರು ತನ್ನ ‘ಪ್ರೈಸ್‌ ಟು ಸೈಝ್ ರೇಷಿಯೊ’ ದಿಂದಾಗಿ ಅಷ್ಟಾಗಿ ಪ್ರಸಿದ್ಧಿಯಾಗಿರಲಿಲ್ಲ. ಆದರೆ ಮಾರ್ಪಾಡಿನೊಂದಿಗೆ ಹ್ಯಾಚ್‌ಬಾಕ್ ಇದೀಗ ಸುಮಾರು 2.5 ಲಕ್ಷ ರಿಯಾಯಿತಿಯೊಂದಿಗೆ ಲಭ್ಯವಾಗಲಿದೆ.

ಹ್ಯುಂಡೈ ಇಯಾನ್: ಹ್ಯುಂಡೈನಲ್ಲಿ ಸದ್ಯಕ್ಕೆ ಅತಿ ಚಿಕ್ಕದೆಂದರೆ ಇಯಾನ್. ಸ್ಟೈಲಿಶ್ ಲುಕ್ ಹೊಂದಿರುವ ಈ ಕಾರಿಗೆ ಈ ಬಾರಿ 20,000 ರೂಪಾಯಿಯ ರಿಯಾಯಿತಿ ನೀಡುತ್ತಿದ್ದು, ವಿನಿಮಯಕ್ಕೆ 10,000 ರೂಪಾಯಿಯ ಎಕ್ಸ್‌ಚೇಂಜ್ ಬೋನಸ್ ಕೂಡ ಇದೆ.

ಟಾಟಾ ನ್ಯಾನೋ: ಮ್ಯಾನ್ಯುಯಲ್ ಗೇರ್‌ಬಾಕ್ಸ್‌ ಹೊಂದಿರುವ ನ್ಯಾನೊ ಕಾರಿನ ಮೇಲೆ ಸದ್ಯಕ್ಕೆ ಸುಮಾರು 15,000 ರೂಪಾಯಿವರೆಗೂ ರಿಯಾಯಿತಿ ಘೋಷಿಸಲಾಗಿದೆ, ಇದಕ್ಕೂ ಎಕ್ಸ್‌ಚೇಂಜ್ ಬೋನಸ್ 20,000 ರೂಪಾಯಿಗಳಷ್ಟಿದೆ. ಮಿತವ್ಯಯದ ಕಾರೆಂದು ಕರೆಸಿಕೊಳ್ಳುವ ನ್ಯಾನೊ ಸಿಎನ್‌ಜಿ ಹೆಚ್ಚು ಮಾರಾಟವಾಗುತ್ತಿದ್ದು, 50,000ರೂಪಾಯಿ ರಿಯಾಯಿತಿಯನ್ನು ಹೊಂದಿರಲಿದೆ.

ಹ್ಯುಂಡೈ ಐ 20: ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಪ್ರಬಲ ಪೈಪೋಟಿ ಹೊಂದಿರುವ ಕಾರೆಂದರೆ ಹ್ಯುಂಡೈ ಐ 20. ಹೋಂಡಾ ಜಾಝ್ ಹಾಗೂ ಮಾರುತಿ ಬಲೆನೊದ ಪ್ರತಿಸ್ಪರ್ಧಿಯಾಗಿ ಮುನ್ನಡೆದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ ಎರಡರಲ್ಲೂ ಲಭ್ಯವಿರುವ ಐ20ಗೆ 20,000 ರೂಪಾಯಿ ರಿಯಾಯಿತಿ ಇರಲಿದೆ.

ಔಡಿ ಕ್ಯೂ 5: ಕೆಲ ಸಮಯದ ಹಿಂದಷ್ಟೇ ಪರಿಷ್ಕ್ರತಗೊಂಡ ಕ್ಯೂ 5 ಈ ಹಿಂದಿಗಿಂತ ಅಷ್ಟೇನೂ ಭಿನ್ನವಾಗಿ ಕಾಣುತ್ತಿಲ್ಲ. ಔಡಿಯ ಅತಿ ನಂಬಿಕಾರ್ಹವಾದ ಈ ಎಸ್‌ಯುವಿ ಕೆಲವು ದಿನಗಳವರೆಗೆ ಮಾರಾಟದಲ್ಲಿದ್ದು, ಈ ವರ್ಷದ ಕೊನೆಗೆ ಅದು ಬದಲಿಯಾಗಲಿದೆ. ಬಿಎಂಡಬ್ಲ್ಯು ಎಕ್ಸ್‌ 3 ಹಾಗೂ ಲ್ಯಾಂಡ್‌ ರೋವರ್‌ ಡಿಸ್ಕವರಿ ಸ್ಪೋರ್ಟ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ.

ಸದ್ಯಕ್ಕೆ 2.0 ಲೀಟರ್‌ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ ಲಭ್ಯವಿದೆ. ಡೀಲರ್‌ಗಳು ಲಭ್ಯತೆ ಮತ್ತು ಸ್ಥಳದ ಆಧಾರದ ಮೇಲೆ ಸುಮಾರು ನಾಲ್ಕು ಲಕ್ಷ ರೂಪಾಯಿವರೆಗೂ ರಿಯಾಯಿತಿ ಘೋಷಿಸಿದ್ದಾರೆ.

ಬಿಎಂಡಬ್ಲ್ಯು ಎಕ್ಸ್ 3: ಕ್ಯೂ 5 ಮತ್ತು ಡಿಸ್ಕವರಿ ಸ್ಪೋರ್ಟ್‌ನ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿದೆ ಬಿಎಂಡಬ್ಲ್ಯು ಎಕ್ಸ್‌ 3 ಎಸ್‌ಯುವಿ. ಇತ್ತೀಚೆಗೆ ಬಿಡುಗಡೆಗೊಂಡ ಎಕ್ಸ್‌1ಗೂ ದೊಡ್ಡದು ಹಾಗೂ ಎಕ್ಸ್‌5ಗೂ ಚಿಕ್ ಗಾತ್ರದಲ್ಲಿದ್ದು, ಜಾಗದಲ್ಲಿ ಎಸ್‌ಯುವಿನಂತೆ ಹಾಗೂ ಸೆಡಾನ್‌ ರೀತಿಯ ಪುಟ್ಟ ಕಾರಿನ ನಡುವಣ ಸಮತೋಲನದಂತೆ ಕಾಣಿಸುತ್ತದೆ. ಇದೇ ಕಾರಣ ನಮ್ಮ ಭಾರತೀಯ ರಸ್ತೆಗೆ ಇದು ಸೂಕ್ತವಾದಂತೆಯೂ ಇದೆ. ಫನ್ ಟು ಡ್ರೈವ್ ಎಸ್‌ಯುವಿ ಇದಾಗಿದ್ದು ಡೀಸೆಲ್ ಎಂಜಿನ್‌ನಲ್ಲಿ ಲಭ್ಯ. ಡೀಲರ್‌ಗಳು ಕೆಲವು ಎಕ್ಸ್‌ 3 ಮಾಡೆಲ್‌ಗಳ ಮೇಲೆ ನಾಲ್ಕು ಲಕ್ಷ ರಿಯಾಯಿತಿ ನೀಡುತ್ತಿದ್ದಾರೆ.

ಮರ್ಸಿಡಿಸ್ ಜಿಎಲ್‌ಇ 350ಡಿ: ಎಂ ಕ್ಲಾಸ್ ಎಸ್‌ಯುವಿಯನ್ನು ಮರ್ಸಿಡಿಸ್ ಪರಿಷ್ಕ್ರತಗೊಳಿಸಿದ್ದು, ಅದೇ ಬದಲಾವಣೆಗಳಿಂದ ಜಿಎಲ್‌ಇ ಎಂದು ಮರುನಾಮಕರಣ ಮಾಡಿದೆ. ಮನರಂಜನೆ, ಸಂಪರ್ಕ ಹಾಗೂ ವೇಗದ ಗಿಯರ್‌ ಬಾಕ್ಸ್‌ನೊಂದಿಗೆ ಜಿಎಲ್‌ಇ ಎರಡು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಜಿಎಲ್‌ಇ 250ಡಿ ಮೇಲೆ ಯಾವುದೇ ರಿಯಾಯಿತಿ ಇಲ್ಲ. ಹೆಚ್ಚು ಶಕ್ತಿಯ ಜಿಎಲ್‌ಇ 350ಡಿ ಮೇಲೆ ಕನಿಷ್ಠ ಎರಡು ಲಕ್ಷದ ರಿಯಾಯಿತಿ ಪಡೆದುಕೊಳ್ಳಬಹುದು.

ಟೊಯೊಟಾ ಫಾರ್ಚ್ಯೂನರ್: ಒರಟು ಎಸ್‌ಯುವಿಯಂತೆ ಕಾಣುವ ಫಾರ್ಚೂನರ್‌ ಹೊಸ ಫೋರ್ಡ್ ಎಂಡೀವರ್, ಶೆವರ್ಲೆ ಟ್ರೇಲ್‌ಬ್ಲೇಝರ್‌ ಮತ್ತು ಪಜೇರೋ ಸ್ಪೋರ್ಟ್ಸ್‌ಗೆ ನೇರಸ್ಪರ್ಧಿಯಾಗಿದೆ. 2.5 ಅಥವಾ 3 ಲೀಟರ್‌ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಟಾಪ್ ಸ್ಪೆಕ್ 4X4 ಆಟೊಮೆಟಿಕ್ ಕೂಡ ಸೌಲಭ್ಯ ಕೂಡ ಇದ್ದು, ಸುಮಾರು 75,000 ರೂಪಾಯಿವರೆಗೂ ರಿಯಾಯಿತಿ ಇದೆ. ಇನ್ನಿತರ ವಿಭಾಗಗಳು ಲಭ್ಯತೆ ಆಧಾರದ ಮೇಲೆ 50,000 ರೂಪಾಯಿವರೆಗೂ ರಿಯಾಯಿತಿ ಪಡೆಯಲಿವೆ.

ಶೆವರ್ಲೆ ಎಂಜಾಯ್: ಒಳಾಂಗಣದಲ್ಲಿ ಕೆಲವು ಬದಲಾವಣೆ ಮಾಡಿಕೊಂಡ ಶವರ್ಲೆ ಇದೀಗ ಕ್ರೂಝ್ ರೀತಿಯ ಸ್ಟೀರಿಂಗ್ ವೀಲ್‌ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಈ ಎಂಜಾಯ್ ಎಂಪಿವಿಗೆ 55,000ರೂಪಾಯಿವರೆಗೂ ರಿಯಾಯಿತಿ ದೊರಕಲಿದೆ.

ಸ್ಕೋಡಾ ರ್‍್ಯಾಪಿಡ್: ಸ್ಕೋಡಾದ ಪ್ರವೇಶ ಹಂತದ ಸೆಡಾನ್ ಆಗಿರುವ ರ್‍್ಯಾಪಿಡ್, ಕೆಲವೇ ತಿಂಗಳುಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಲಿದೆ. ಸದ್ಯಕ್ಕೆ ಇರುವ ಸ್ಟಾಕ್ ಅನ್ನು ತಳ್ಳಲು ಡೀಲರ್‌ಗಳು ಪ್ರಯತ್ನಿಸುತ್ತಿದ್ದು, ಇದೇ ಕಾರಣಕ್ಕೆ ರ್‍್ಯಾಪಿಡ್ ಮೇಲೆ ಸಾಕಷ್ಟು ರಿಯಾಯ್ತಿಯೂ ಸಿಗುವ ಅವಕಾಶಗಳಿವೆ. ಪೆಟ್ರೋಲ್ ಹಾಗೂ ಡೀಸೆಲ್, ಎರಡೂ ಮಾದರಿಗಳಲ್ಲಿ ಸುಮಾರು 1 ಲಕ್ಷದವರೆಗೂ ನಗದು ರಿಯಾಯಿತಿಯನ್ನು ಪಡೆಯಬಹುದಾಗಿದೆ

ನಿಸ್ಸಾನ್ ಸನ್ನಿ: ಒಳಾಂಗಣ ವಿನ್ಯಾಸ ಹಾಗೂ ಎಂಜಿನ್ ಕಾರ್ಯಕ್ಷಮತೆಯಿಂದ ಸ್ಪರ್ಧೆಗೆ ಒಡ್ಡಿಕೊಳ್ಳಲು ನಿಸ್ಸಾನ್ ತಯಾರಾಗಿದೆ. ವಿಶಾಲ ಕ್ಯಾಬಿನ್ ಹಾಗೂ 1.5 ಲೀಟರ್‌ ಡೀಸೆಲ್ ಎಂಜಿನ್ ಇದರ ಪ್ಲಸ್ ಪಾಯಿಂಟ್ ಆಗಿದ್ದು, ಆಟೊಮೆಟಿಕ್ ಗೇರ್ ಬಾಕ್ಸ್‌ನ ಆಯ್ಕೆ ಇರಲಿದೆ. ಸನ್ನಿಗೆ ಕೆಲವೆಡೆ ಸುಮಾರು 65,000 ರೂಪಾಯಿವರೆಗೂ ರಿಯಾಯಿತಿ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT