ADVERTISEMENT

ರೇಸಿಂಗ್‌ | ಪಿಇಎಸ್‌ ರಾಕಿಂಗ್‌: ಓಡುವ ಕುದುರೆಗೆ ವೇಗದ ಸಾರಥಿ

ಸಂತೋಷ ಜಿಗಳಿಕೊಪ್ಪ
Published 1 ಮಾರ್ಚ್ 2020, 19:30 IST
Last Updated 1 ಮಾರ್ಚ್ 2020, 19:30 IST
ರೇಸಿಂಗ್‌ನಲ್ಲಿ ‘ಟೀಮ್ ಹಯ’ ತಂಡದ ಕಾರು
ರೇಸಿಂಗ್‌ನಲ್ಲಿ ‘ಟೀಮ್ ಹಯ’ ತಂಡದ ಕಾರು   

ಉಬ್ಬು–ತಗ್ಗಿನ ಪ್ರ ದೇಶ, ಕಚ್ಚಾ ಹಾಗೂ ಡಾಂಬರ್ ಟ್ರ್ಯಾಕ್‌ನಲ್ಲಿ ಜೋರಾದ ಸದ್ದು ಮಾಡುತ್ತ ತಾ ಮುಂದು ನಾ ಮುಂದು ಎನ್ನುತ್ತಲೇ ಜಿದ್ದಿಗೆ ಬಿದ್ದವರ ರೀತಿಯಲ್ಲಿ ಕಾರುಗಳು ಹೊರಟರೆ, ಇಡೀ ಪ್ರದೇಶದಲ್ಲೆಲ್ಲ ಜನರ ಚಪ್ಪಾಳೆ ಸದ್ದು ಮುಗಿಲು ಮುಟ್ಟಿರುತ್ತದೆ. ಅದರ ಜೊತೆಗೆ ಕುತೂಹಲವೂ ಇಮ್ಮಡಿಗೊಂಡಿರುತ್ತಿದೆ. ಇದು ಪ್ರತಿ ಕಾರ್‌ ರೇಸಿಂಗ್‌ನಲ್ಲಿ. ಇಂಥ ರೇಸಿಂಗ್‌ನಲ್ಲಿ ಯಾವುದೋ ಕಂಪನಿ ತಯಾರಿಸಿರುವ ಕಾರುಗಳನ್ನು, ಇನ್ನಾರು ಸ್ಪರ್ಧಿಗಳು ಓಡಿಸುತ್ತಾರೆ.

ಆದರೆ, ಬೆಂಗಳೂರಿನ ಪಿಇಎಸ್‌ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳ ‘ಟೀಮ್‌ ಹಯ‘ ತಂಡ, ಪ್ರತಿ ವರ್ಷ ತಾವೇ ಹೊಸ ಹೊಸ ವಿನ್ಯಾಸಗಳ ರೇಸ್‌ ಕಾರುಗಳನ್ನು ಸಿದ್ಧಪಡಿಸಿ, ಅದೇ ಕಾರುಗಳಲ್ಲೇ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತ್ತಿದೆ.

ಪ್ರಸಕ್ತ ವರ್ಷದ ಆರಂಭದಲ್ಲಿ ಕೊಯಮತ್ತೂರಿನಲ್ಲಿ ಆಯೋಜಿಸಿದ್ದ ‘ಫಾರ್ಮುಲಾ ಭಾರತ 2020’ ಕಾರ್‌ ರೇಸ್‌ನಲ್ಲಿ ಭಾಗವಹಿಸಿದ್ದ ‘ಟೀಮ್ ಹಯ’ ತಂಡ ರಾಷ್ಟ್ರಮಟ್ಟದಲ್ಲಿ 5ನೇ ಸ್ಥಾನ ಪಡೆದಿದೆ. ಎಂಜಿನಿಯರಿಂಗ್ ವಿದ್ಯಾರ್ಥಿ ಆಗಿರುವ ತಂಡದ ಚಾಲಕ ಮೊಹಮ್ಮದ್ ಸಾದಿ ದೇಶದ ‘ನಂಬರ್ ಒನ್ ಚಾಲಕ’ ಪಟ್ಟ ಅಲಂಕರಿಸಿದ್ದು ತಂಡಕ್ಕೆ ಬಲ ಬಂದಂತಾಗಿದೆ. ಈ ಸ್ಪರ್ಧೆಯಲ್ಲಿ ದೇಶದ 56 ತಂಡಗಳು ಭಾಗವಹಿಸಿದ್ದವು.

ADVERTISEMENT

ಇದೇ ಫೆ. 6ರಿಂದ 10ರವರೆಗೆ ಪುಣೆಯಲ್ಲಿ ಹಮ್ಮಿಕೊಂಡಿದ್ದ‘ಸ್ಟೂಡೆಂಟ್ ಇಂಡಿಯಾ–2020’ ಆಫ್ ದಿ ರೋಡ್ ರೇಸ್‌ನಲ್ಲೂ ‘ಟೀಮ್ ಹಯ’ ಭಾಗವಹಿಸಿತ್ತು. ಇದರಲ್ಲಿ ತಂಡಕ್ಕೆ ಮೊದಲ ಸ್ಥಾನ ಲಭಿಸಿದೆ.

ಸಾಧನೆ ಬಗ್ಗೆ ‘ಮೆಟ್ರೊ’ ಜೊತೆ ಮಾತನಾಡಿದ ಸಾದಿ, ‘ಎದುರಾಳಿ ತಂಡಗಳಿಗೆ ಪೈಪೋಟಿ ನೀಡಿ ಕಾರು ಓಡಿಸಿದ್ದೆ. ಹೆಚ್ಚಿನ ಅಂಕಗಳನ್ನು ಸಂಪಾದಿಸಿದೆ. ನೆರೆದಿದ್ದ ಪ್ರೇಕ್ಷಕರೆಲ್ಲರೂ ನನ್ನ ಬಳಿ ಬಂದು ಶುಭಾಶಯ ಕೋರಿ, ಅಭಿನಂದಿಸಿದರು. ಆ ಕ್ಷಣ ಮರೆಯಲಾಗದು’ ಎನ್ನುತ್ತಾರೆ.

‘ನಂಬರ್ ಒನ್ ಚಾಲಕ’ ಘೋಷಣೆಗೂ ಮುನ್ನವೇ ಜನರೆಲ್ಲರೂ ನನ್ನ ಚಾಲನೆಯನ್ನು ಮೆಚ್ಚಿಕೊಂಡಿದ್ದರು. ಈ ಅನುಭವ ಮತ್ತಷ್ಟು ಸಾಧನೆಗೆ ಸ್ಫೂರ್ತಿ ಆಗಿದೆ’ ಎಂದು ಅವರು ಹೇಳುತ್ತಾರೆ.

ತಂಡದ ನಾಯಕ ರಾಹುಲ್, ‘ಸುಮಾರು 50ಕ್ಕೂ ಹೆಚ್ಚು ಮಂದಿ ನಮ್ಮ ಸಾಧನೆಯ ಹಿಂದಿದ್ದಾರೆ. ಅವರೆಲ್ಲರ ಪರಿಶ್ರಮ ಹಾಗೂ ಹೊಸ ಆಲೋಚನೆಗಳೇ ನಮ್ಮ ಗೆಲುವಿಗೆ ಕಾರಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರುಗಳನ್ನು ಸಿದ್ಧಪಡಿಸುವ ಆಲೋಚನೆ ಇದೆ’ ಎನ್ನುತ್ತಾರೆ.‘ಟೀಮ್ ಹಯ’ ತಂಡಕ್ಕೆ ಡಾ. ರಾಜೇಶ್ ಮತ್ತಿವಣ್ಣನ್ ಸಲಹೆಗಾರರಾಗಿದ್ದಾರೆ.

ಪ್ರತಿ ವರ್ಷ ಹೊಸ ಕಾರು!

‘ಅಲ್ಯೂಮಿನಿಯಂ, ಪೈಪ್, ರಾಡ್, ಮೋಟರ್... ಹೀಗೆ ಸ್ಥಳೀಯವಾಗಿ ಸಿಗುವ ಹಲವು ವಸ್ತುಗಳನ್ನು ಬಳಸಿಕೊಂಡು ಕಾರು ಸಿದ್ಧಪಡಿಸಿದ್ದೇವೆ. ವಿನ್ಯಾಸ, ವಸ್ತುಗಳ ಜೋಡಣೆ ಹಾಗೂ ಪರೀಕ್ಷೆಗೆಂದು ಸಾಕಷ್ಟು ವಿದ್ಯಾರ್ಥಿಗಳು ಕೆಲಸ ಮಾಡುತ್ತಾರೆ’ ಎಂದು ತಂಡದ ಮತ್ತೊಬ್ಬ ನಾಯಕ ಕೀರ್ತಿರಾಜ್ ಹೇಳುತ್ತಾರೆ.

‘ಒಂದು ವರ್ಷ ಬಳಸಿದ ಕಾರನ್ನು ಮತ್ತೊಮ್ಮೆ ಬಳಸುವುದಿಲ್ಲ. ಪ್ರತಿ ವರ್ಷವೂ ಹೊಸ ಕಾರನ್ನೇ ಸಿದ್ಧಪಡಿಸುತ್ತೇವೆ. ಈ ವರ್ಷ ₹23.75 ಲಕ್ಷ ಖರ್ಚು ಮಾಡಿ ಎರಡು ಕಾರುಗಳನ್ನು ತಯಾರಿಸಿದ್ದೇವೆ. ಇವುಗಳ ವಿನ್ಯಾಸಗಳೂ ಸ್ಪರ್ಧೆಯಲ್ಲಿ ಗಮನ ಸೆಳೆದಿದೆ. ಕಾರು ಹಾಗೂ ಚಾಲಕನ ಸಾಮರ್ಥ್ಯವೇ ಸ್ಪರ್ಧೆಯಲ್ಲಿ ಗೆಲುವು ತಂದುಕೊಡುತ್ತದೆ’ ಎಂದು ಹೇಳುತ್ತಾರೆ.

‘ಒಮ್ಮೆ ಜೋಡಿಸಿದ ಕಾರನ್ನು ಪುನಃ ಬಿಚ್ಚುವುದಿಲ್ಲ. ಟ್ರಕ್‌ ಮೂಲಕವೇ ಕಾರುಗಳನ್ನು ಸ್ಪರ್ಧೆ ಜಾಗದವರೆಗೂ ಕೊಂಡೊಯ್ಯುತ್ತೇವೆ. ಸ್ಪರ್ಧೆ ಆರಂಭಕ್ಕೂ ಮುನ್ನ ಸಾಕಷ್ಟು ಬಾರಿ ಕಾರುಗಳನ್ನು ಪರೀಕ್ಷಿಸಲಾಗುತ್ತದೆ’ ಎಂದು ತಿಳಿಸುತ್ತಾರೆ.

*****

ವಿದ್ಯಾರ್ಥಿಗಳನ್ನು ಅವರ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸುವ ಕೆಲಸ ಸದಾ ಮಾಡುತ್ತೇವೆ. ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳ ಕಾರು ತಯಾರಿಕೆಗೂ ನೆರವು ನೀಡಿದ್ದೇವೆ.

– ಡಾ. ಎಂ.ಆರ್‌. ದೊರೆಸ್ವಾಮಿ, ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.