ADVERTISEMENT

‘ಫೇಮ್‌–2’ ತಗ್ಗಿಸುವುದೇ ದ್ವಿಚಕ್ರ ವಾಹನ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 19:46 IST
Last Updated 16 ಏಪ್ರಿಲ್ 2019, 19:46 IST
avan
avan   

ಕೇಂದ್ರ ಸರ್ಕಾರದ ‘ಫೇಮ್‌–2’ ಯೋಜನೆಯಿಂದ ದ್ವಿಚಕ್ರವಾಹನ ತಯಾರಕರು ಹೆಚ್ಚು ಸಮಸ್ಯೆ ಎದುರಿಸಲಿದ್ದಾರೆ ಎನ್ನುವುದು ಜಾಗತಿಕ ವಿಶ್ಲೇಷಕ ಸಂಸ್ಥೆ ಕ್ರಿಸಿಲ್‌ ಅಭಿಪ್ರಾಯ.

ಫೇಮ್‌–2 ಯೋಜನೆಯಲ್ಲಿ ಸಬ್ಸಿಡಿ ಪಡೆಯಲು ಬಸ್‌, ಪ್ರಯಾಣಿಕ ವಾಹನ, ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳಿಗೆ ಕೇಂದ್ರ ಸರ್ಕಾರ ಕೆಲವು ನಿಬಂಧನೆಗಳನ್ನು ವಿಧಿಸಿದೆ. ಅದರಂತೆ ದ್ವಿಚಕ್ರ ವಾಹನ ತಯಾರಕರಿಗೆ ಸಬ್ಸಿಡಿ ಪಡೆಯಲು ಸಮಸ್ಯೆಯಾಗಲಿದೆ ಎಂದಿದೆ.

2015ರಲ್ಲಿ ಫೇಮ್‌ ಇಂಡಿಯಾಗೆ ಚಾಲನೆ ನೀಡಲಾಗಿತ್ತು. ಅದರಂತೆ, 2015ರ ಏಪ್ರಿಲ್‌ 1 ರಿಂದ 2019ರ ಮಾರ್ಚ್‌ 31ರವರೆಗೆ ಕಾರ್ಯಾಚರಣೆ ನಡೆಸುತ್ತಿರುವ ವಾಹನಗಳಿಗೆ ಫೇಮ್‌–1ರಲ್ಲಿ ಸಬ್ಸಿಡಿ ದೊರೆತಿದೆ. ಇದರಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಸಂಖ್ಯೆಯೇ ಶೇ 90ರಷ್ಟಿದೆ.

ADVERTISEMENT

ಫೇಮ್‌–1ರಲ್ಲಿ ಬರುತ್ತಿದ್ದ ಸ್ಕೂಟರ್‌ಗಳ ಬ್ಯಾಟರಿ ಗಾತ್ರ 1.5 ಕಿವಾಟ್‌ ಇತ್ತು (ಸರಾಸರಿ ಸಬ್ಸಿಡಿ ₹ 15 ಸಾವಿರ). ಆ ಸಬ್ಸಿಡಿಯನ್ನು ₹ 2 ಸಾವಿರದಿಂದ ₹ 7 ಸಾವಿರಕ್ಕೆ ಇಳಿಸಲಾಗಿದೆ.

ಫೇಮ್‌–2ನಲ್ಲಿ ಸಬ್ಸಿಡಿ ಪಡೆಯಬೇಕಾದರೆ, ಕಂಪನಿಗಳು ಬ್ಯಾಟರಿ ಗಾತ್ರ, ಇಂಧನ ದಕ್ಷತೆ, ಗರಿಷ್ಠ ವೇಗ, ಬ್ಯಾಟರಿಯ ಬಾಳಿಕೆ ಅವಧಿಯ ಬಗ್ಗೆ ಗಮನ ನೀಡಬೇಕಾಗುತ್ತದೆ.

ಶೇ 50ರಷ್ಟು ಸ್ಥಳೀಯ ತಯಾರಿಕೆಯ ಅಗತ್ಯವಿರುವುದು ಬಿಡಿಭಾಗಗಳ ತಯಾರಕರಿಗೆ ಅಡ್ಡಿಯಾಗಲಿದೆ. ಮೇಲ್ದರ್ಜೆಗೇರಿಸುವುದು ಮತ್ತು ಸ್ಥಳೀಯ ತಯಾರಿಕೆಯು ಇ–ಸ್ಕೂಟರ್‌ಗಳ ವೆಚ್ಚದಲ್ಲಿ ಏರಿಕೆಗೆ ಕಾರಣವಾಗಲಿದ್ದು, ಬೇಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿದೆ.

ಫೇಮ್‌–2 ನಿಬಂಧನೆಗಳಿಗೆ ಅನುಗುಣವಾಗಿ ಸ್ಕೂಟರ್‌ಗಳನ್ನು ತಯಾರಿಸಿ ಮಾರುಕಟ್ಟಗೆ ಬಿಡಲು ಕಂಪನಿಗಳಿಗೆಸಮಯವಂತೂ ಹಿಡಿಯಲಿದೆ.

‘ಸಬ್ಸಿಡಿ ತಗ್ಗಿಸಿದರೆ ಮಾರಾಟಕ್ಕೆ ಪೆಟ್ಟು’

‘ಮೂರು ವರ್ಷಗಳಲ್ಲಿ 10 ಲಕ್ಷ ಇ–ವಾಹನಗಳನ್ನು ಮಾರಾಟ ಮಾಡುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದು ಸಾಧ್ಯವಾಗಲು ಒಂದು ನಿರ್ದಿಷ್ಟ ಅವಧಿಯವರೆಗೆ ಜನರಿಗೆ ಸಬ್ಸಿಡಿಯನ್ನು ಮುಂದುವರಿಸಬೇಕಾಗುತ್ತದೆ. ಇಂತಹ ವಾಹನಗಳನ್ನು ಜನಸಾಮಾನ್ಯರು ಖರೀದಿಸಲು ಶಕ್ತವಾಗುವಂತೆ ನೋಡಿಕೊಳ್ಳುವುದರ ಮೇಲೆ ಮಾರಾಟವು ಅವಲಂಬಿಸಿರುತ್ತದೆ. ಸಬ್ಸಿಡಿ ತಗ್ಗಿಸುವುದರಿಂದ ದ್ವಿಚಕ್ರ ವಾಹನ ಮಾರಾಟದಲ್ಲಿ ಇಳಿಕೆಯಾಗಲಿದೆ. ಸದ್ಯ 1.2 ಲಕ್ಷದಷ್ಟು ಮಾರಾಟವಾಗುತ್ತಿದ್ದು, ಮಾರಾಟದಲ್ಲಿ ಶೇ 50ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಅವನ್‌ ಮೋಟರ್ಸ್‌ನ ವಹಿವಾಟು ಮುಖ್ಯಸ್ಥ ಪಂಕಜ್‌ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

‘ಭಾರತದಲ್ಲಿಯೇ ತಯಾರಿಕೆ ಅಭಿಯಾನಕ್ಕೆ ಉತ್ತೇಜನ ನೀಡಲು ಸ್ಥಳೀಯವಾಗಿ ತಯಾರಿಕೆಗೆ ‘ಫೇಮ್‌–2’ನಲ್ಲಿ ಆದ್ಯತೆ ನೀಡಲಾಗಿದೆ. ಇದು ಉತ್ತಮ ನಿರ್ಧಾರ. ಇದನ್ನು ಹಂತ ಹಂತವಾಗಿ ಮುಂದಿನ ಒಂದು ವರ್ಷದಲ್ಲಿ ಜಾರಿಗೆ ತರಬೇಕು. ಏಕೆಂದರೆ, ತಯಾರಕರಿಗೆ ತಮ್ಮ ಉತ್ಪನ್ನಗಳನ್ನು ವೆಚ್ಚದ ಹೊರೆಯಾಗದಂತೆ ಸ್ಥಳೀಯವಾಗಿ ತಯಾರಿಸಲು ಸಮಯಾವಕಾಶ ಬೇಕಾಗುತ್ತದೆ.

‘ಫೇಮ್‌–2’ನಲ್ಲಿ ಹೇಳಿರುವ ನಿಬಂಧನೆಗಳಿಂದ ವಿದ್ಯುತ್‌ ಚಾಲಿತ ವಾಹನಗಳ ಬೆಲೆ ದುಪ್ಪಟ್ಟಾಗಲಿದೆ. ಇದರಿಂದ ಗ್ರಾಹಕರ ಮೇಲೆ ಹೊರೆಯಾಗದಂತೆ ನೋಡಿಕೊಳ್ಳಲು ಬಲಿಷ್ಠವಾದ ಹಣಕಾಸು ನೀತಿಯೊಂದನ್ನು ಪರಿಚಯಿಸುವ ಅಗತ್ಯವಿದೆ’ ಎಂದು ಪಂಕಜ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.