ADVERTISEMENT

ಕಾರು ಖರೀದಿಗೆ ‘ಸುಗ್ಗಿಕಾಲ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 19:45 IST
Last Updated 12 ಡಿಸೆಂಬರ್ 2018, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇನ್ನೇನು ಕೆಲ ದಿನಗಳಲ್ಲಿ ಡಿಸೆಂಬರ್‌ ಜತೆಗೆ ಈ ವರ್ಷವೂ ಮುಗಿಯಲಿದೆ. ಆದರೆ ವರ್ಷದ ಕೊನೆಯನ್ನು ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲು ಹಲವು ಕಾರು ಮಾರಾಟಗಾರರು ಈ ತಿಂಗಳಲ್ಲಿ ಅತ್ಯಧಿಕ ರಿಯಾಯಿತಿ, ಕೊಡುಗೆಗಳನ್ನು ಘೋಷಿಸಿದ್ದಾರೆ.

ಡಿಸೆಂಬರ್‌ ಬಂತೆಂದರೆ ಬಹುತೇಕ ವಾಹನ ಮಾರಾಟಗಾರರು ರಿಯಾಯಿತಿಯ ಮಳೆಯನ್ನೇ ಸುರಿಸುತ್ತಾರೆ. ಈ ವರ್ಷವೂ ಅದು ಮುಂದುವರೆದಿದೆ. ವಾಹನಗಳ ಮಾರಾಟದ ಗುರಿ ತಲುಪಲು, ದಾಸ್ತಾನಿನಲ್ಲಿರುವ ವಾಹನಗಳನ್ನು ಖಾಲಿ ಮಾಡಲು ಹಾಗೂ 2019ರ ಹೊಸ ಮಾದರಿ ವಾಹನಗಳ ಮಾರುಕಟ್ಟೆ ಪ್ರವೇಶಕ್ಕೆ ದಾರಿ ಮಾಡಿಕೊಡಲು ಇದು ಅವರಿಗೆ ಸುಗ್ಗಿಯ ಕಾಲ.

‌ಹಾಗಾಗಿ ಡಿಸೆಂಬರ್‌ ತಿಂಗಳನ್ನು ‘ಆಟೊಮೊಬೈಲ್‌ ಇಂಡಸ್ಟ್ರಿ’ ಹಬ್ಬದಂತೆ ಆಚರಿಸುತ್ತದೆ. ಈ ಅವಧಿಯಲ್ಲಿಯೇ ಅದರ ಶೇ 50ರಷ್ಟು ವಾಹನಗಳು ಮಾರಾಟವಾಗುತ್ತವೆ. ವಿವಿಧ ವಾಹನ ಬ್ರ್ಯಾಂಡ್‌ಗಳು ಪೈಪೋಟಿಯ ಮೇಲೆ ರಿಯಾಯಿತಿಗಳನ್ನು ಈ ಸಂದರ್ಭದಲ್ಲಿ ಘೋಷಿಸಿವೆ. ನೀವೇನಾದರೂ ಕಾರು ಖರೀದಿಸಲು ಚಿಂತಿಸಿದ್ದರೆ, ವಾಹನ ಮಾರಾಟ ಮಳಿಗೆಗಳಿಗೆ ಈ ಅವಧಿಯಲ್ಲಿ ಭೇಟಿ ನೀಡುವುದನ್ನು ಮರೆಯಬೇಡಿ.

ADVERTISEMENT

ಸಾಮಾನ್ಯವಾಗಿ ಕಾರು ನಿರ್ಮಾಣ ಕಂಪನಿಗಳು ಜನವರಿ 1ರಿಂದ ತಮ್ಮ ಹೊಸ ಕಾರುಗಳ ಬೆಲೆಯನ್ನು ಹೆಚ್ಚಿಸುತ್ತವೆ. ಹೀಗಾಗಿ ಹೊಸ ಕಾರು ಖರೀದಿಸುವವರಿಗೆ ಡಿಸೆಂಬರ್‌ ಸರಿಯಾದ ಸಮಯ ಎನ್ನುವುದು ಕಾರು ಡೀಲರ್‌ಗಳ ಅಭಿಪ್ರಾಯ. ‌

‘ವರ್ಷಾಂತ್ಯದಲ್ಲಿ ಹೊಸ ಕಾರನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಆದರೆ ಡಿಸೆಂಬರ್‌ ಕಳೆಯುತ್ತಿದ್ದಂತೆ ಆ ಕಾರು ಕಳೆದ ವರ್ಷದ (2018) ‘ಮಾಡೆಲ್‌’ ಎಂದು ಗುರುತಿಸಿಕೊಳ್ಳುತ್ತದೆ. ಆದರೆ ಇದು ಸಮಸ್ಯೆಯೇ ಅಲ್ಲ. ಸಾಮಾನ್ಯವಾಗಿ ಕಾರನ್ನು ತ್ವರಿತವಾಗಿ ಮಾರುವುದಿಲ್ಲ. ಹಾಗಾಗಿ ಈ ಬಗ್ಗೆ ಯೋಚಿಸುವ ಅಗತ್ಯವಿಲ್ಲ’ ಎನ್ನುತ್ತಾರೆ ಕೆಲ ಡೀಲರ್‌ಗಳು.

‘ಒಂದು ವೇಳೆ ಕಾರನ್ನು ಜನವರಿ ಮತ್ತು ಆನಂತರ ಖರೀದಿಸುವುದಾದರೆ ರಿಯಾಯಿತಿ ಸೌಲಭ್ಯ ಕಳೆದುಕೊಳ್ಳಬೇಕಾಗುತ್ತದೆ. ಜತೆಗೆ ಕಾರಿನ ಬೆಲೆಯೂ ಹೆಚ್ಚಾಗಿರುತ್ತದೆ. ಆದರೆ ಜನವರಿಯಲ್ಲಿ ಕಾರಿನ ತಯಾರಿ ಮತ್ತು ನೋಂದಣಿ ಆಗಿದ್ದರೆ ಸಹಜವಾಗಿಯೇ ಅದರ ಮರು ಮಾರಾಟದ ಬೆಲೆ ಸ್ವಲ್ಪ ಹೆಚ್ಚಿರುತ್ತದೆ’ ಎಂಬುದು ಅವರ ಅನುಭವದ ಮಾತುಗಳು.

ಈ ಕುರಿತ ಸಾಧಕ, ಬಾಧಕಗಳ ಬಗ್ಗೆ ತಜ್ಞರು ‘ಮೆಟ್ರೊ’ದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.‌

ಕಾರು ದತ್ತಾಂಶ ತಜ್ಞ ನಿತಿನ್‌ ಪ್ರಕಾರ, ‘ಕಾರನ್ನು ದೀರ್ಘಾವಧಿ ನಿಮ್ಮ ಬಳಿಯೇ ಇಟ್ಟುಕೊಳ್ಳುವುದಿದ್ದರೆ ಅದರ ಖರೀದಿಗೆ ಡಿಸೆಂಬರ್‌ ಉತ್ತಮ ಮಾಸ. ಕಾರನ್ನು ಐದು ವರ್ಷಗಳೊಳಗೆ ಮರು ಮಾರಾಟ ಮಾಡಲು ಬಯಸುವಂತಹ ಗ್ರಾಹಕರು ಜನವರಿಯಲ್ಲಿ ಅದರ ಖರೀದಿಗೆ ಮುಂದಾಗುವುದು ಸೂಕ್ತ’ ಎನ್ನುತ್ತಾರೆ.

‘ಡೀಲರ್‌ಗಳು ಸಾಮಾನ್ಯವಾಗಿ ತಮ್ಮ ದಾಸ್ತಾನಿನಲ್ಲಿರುವ ಕಾರುಗಳನ್ನು ಖಾಲಿ ಮಾಡಲು ಬಯಸುತ್ತಾರೆ. ಜನವರಿಗೆ ಹೊಸ ಕಾರುಗಳು ಬರುವುದರಿಂದ ಹಿಂದಿನ ವರ್ಷದ ಕಾರುಗಳನ್ನು ಅವರು ಖಾಲಿ ಮಾಡಲು ಒತ್ತು ನೀಡುತ್ತಾರೆ. ಹಾಗಾಗಿ ಅವರು ಡಿಸೆಂಬರ್‌ನಲ್ಲಿ ಹೆಚ್ಚು ರಿಯಾಯಿತಿ ಘೋಷಿಸುತ್ತಾರೆ. ಇದು ಗ್ರಾಹಕರಿಗೂ ಮತ್ತು ಡೀಲರ್‌ಗೂ ಅನುಕೂಲಕರ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಆರ್‌ಎನ್‌ಎಸ್‌ ಮೋಟಾರ್ಸ್‌ನ ಉಪಾಧ್ಯಕ್ಷ ಪರಿಕ್ಷಿತ್‌ ಎಸ್‌. ಭಟ್‌ ಪ್ರಕಾರ, ‘ಡಿಸೆಂಬರ್‌ನಲ್ಲಿಯೇ ಶೇ 50ರಷ್ಟು ಕಾರುಗಳು ಮಾರಾಟವಾಗುತ್ತವೆ. ಹೊಸ ವರ್ಷ ಬಂದರೂ ಕಾರಿನ ಟೈರ್‌, ಬೊನೆಟ್‌, ಸೀಟ್‌ ಮತ್ತಿತರವು ಅವೇ ಇರುತ್ತವೆ. ಹಾಗಾಗಿ ಡಿಸೆಂಬರ್‌ನಲ್ಲಿ ಖರೀದಿಸಿ, ರಿಯಾಯಿತಿ ಸೌಲಭ್ಯ ಪಡೆಯುವುದು ಒಳ್ಳೆಯದು’ ಎಂದು ಸಲಹೆ ನೀಡುತ್ತಾರೆ.

‘ಹುಂಡೈ ಕಾರುಗಳ ಮೇಲೆ ₹ 40 ಸಾವಿರದಿಂದ ₹ 1.5 ಲಕ್ಷದವರೆಗೂ ವರ್ಷಾಂತ್ಯದ ರಿಯಾಯಿತಿ ಘೋಷಿಸಿದೆ. ವೇತನದಾರರು ಗ್ರಾಂಡ್‌ ಐ10, ಸ್ಯಾಂಟ್ರೊ ಮತ್ತು ಐ20 ಕಾರುಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ’ ಎನ್ನುತ್ತಾರೆ ಅದ್ವೈತ್‌ ಹುಂಡೈ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌ ವಿಭಾಗದ ನಿರ್ದೇಶಕ ಎಲ್‌.ಎನ್‌. ಅಜಯ್‌ ಸಿಂಗ್‌.

ಸುಜುಕಿ ವಾಹನಗಳ ಪೈಕಿ ‘ವ್ಯಾಗನ್‌ ಆರ್‌’ಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಮಾರುತಿ ಸುಜುಕಿ ಮಾರಾಟಗಾರರು. ಮಾರುತಿ ಸುಜುಕಿ, ಹುಂಡೈ, ಹೋಂಡ, ಟೊಯೋಟ, ಫೋರ್ಡ್‌, ಟಾಟಾ, ಪೋಲ್ಸ್‌ ವ್ಯಾಗನ್‌ ಸೇರಿದಂತೆ ಹಲವು ಕಾರುಗಳ ಮಾರಾಟದ ಮೇಲೆ ವರ್ಷಾಂತ್ಯದ ರಿಯಾಯಿತಿ ಮತ್ತು ಕೊಡುಗೆ ಸೌಲಭ್ಯಗಳಿವೆ.

ಕಾರಿನ ಡೀಲರ್‌ಗಳು ತ್ರೈಮಾಸಿಕ ಮಾರಾಟದ ಗುರಿಯ ಪ್ರಗತಿಯನ್ನೂ ಸಾಧಿಸಬೇಕಿದೆ. ಅದಕ್ಕಾಗಿ ಮಾರ್ಚ್‌, ಜೂನ್‌, ಸೆಪ್ಟೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಆಕರ್ಷಕ ರಿಯಾಯಿತಿಗಳನ್ನು ಘೋಷಿಸುತ್ತಾರೆ.

ಮಾರುತಿ ಸುಜುಕಿ

ಮಾರುತಿ ಸುಜುಕಿಯು ತನ್ನ ಅತ್ಯಧಿಕ ಮಾರಾಟದ ‘ಬಲೆನೊ’ ಕಾರುಗಳ ಖರೀದಿಯ ಮೇಲೆ ₹ 22 ಸಾವಿರ ರಿಯಾಯಿತಿ ಘೋಷಿಸಿದೆ. ಜತೆಗೆ ಹಳೆ ಕಾರಿನ ಎಕ್ಸ್‌ಚೇಂಜ್‌ ಬೋನಸ್‌ ₹ 15,000 ನೀಡುತ್ತಿದೆ. ಇದರಿಂದ ಬಲೆನೊ ಕಾರಿನ ಆರಂಭಿಕ ದರ ₹ 5.15 ಲಕ್ಷಕ್ಕಿಳಿದಿದೆ. ಜತೆಗೆ ‘ವ್ಯಾಗನ್‌ ಆರ್‌’ ಖರೀದಿಗೆ ₹ 30 ಸಾವಿರದವರೆಗೆ ರಿಯಾಯಿತಿ ಹಾಗೂ ಎಕ್ಸ್‌ಚೇಂಜ್‌ ಬೋನಸ್‌ ಕೂಡ ನೀಡಲಾಗುತ್ತಿದೆ.

ಟಾಟಾ ಮೋಟರ್ಸ್‌

ಟಾಟಾ ಮೋಟಾರ್ಸ್‌ ಎಸ್‌ಯುವಿ ನೆಕ್ಸಾನ್‌ ಖರೀದಿಗೆ ₹ 15 ಸಾವಿರ ಎಕ್ಸ್‌ಚೇಂಜ್‌ ಬೋನಸ್‌, ಎಸ್‌ಯುವಿ ಹೆಕ್ಸಾ ಖರೀದಿ ಮೇಲೆ ₹ 50,000 ರಿಯಾಯಿತಿ ಇದೆ. ಇದರ ಜತೆಗೆ ₹35,000 ಮೊತ್ತದವರೆಗಿನ ವಿವಿಧ ಕೊಡುಗೆಗಳೂ ದೊರೆಯಲಿವೆ.

ಟೊಯೋಟ

ಟೊಯೋಟದ ಯಾರಿಸ್‌ ಮತ್ತು ಕೊರೊಲಾ ಅಲ್ಟಿಸ್‌ ಖರೀದಿಯ ಮೇಲೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ.

ಹುಂಡೈ

‘ಎಕ್ಸೆಂಟ್‌’ ಕಾರುಗಳಿಗೆ ₹ 60 ಸಾವಿರದವರೆಗೂ ರಿಯಾಯಿತಿಯನ್ನು ಹುಂಡೈ ಘೋಷಿಸಿದೆ. ಬೇಸ್‌ ಮಾಡೆಲ್‌ ‘ಎಕ್ಸೆಂಟ್‌ ಇ’ (ಮೆಟಾಲಿಕ್‌) ₹5.66 ಲಕ್ಷ (ಎಕ್ಸ್‌ ಶೋರೂಮ್‌)ದಿಂದ ₹ 5.05 ಲಕ್ಷಕ್ಕೆ ಇಳಿದಿದೆ. ‘ವರ್ನಾ’ ಕಾರು ಖರೀದಿದಾರರಿಗೆ ₹ 50 ಸಾವಿರದವರೆಗೆ ಪ್ರಯೋಜನಗಳು ದೊರೆಯಲಿವೆ.

ಫೋರ್ಡ್‌

ಫೋರ್ಡ್‌ ‘ಫಿಗೊ’ ಕಾರಿನ ಬೆಲೆ ಮೇಲೆ ₹ 60 ಸಾವಿರ ರಿಯಾಯಿತಿಯನ್ನು ಫೋರ್ಡ್‌ ಮಾರಾಟಗಾರರು ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.