ADVERTISEMENT

ಸೌಂದರ್ಯ: ರಾತ್ರಿ ಮಲಗುವ ಮುನ್ನ ಈ ತಪ್ಪು ಮಾಡದಿರಿ...

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 19:31 IST
Last Updated 4 ನವೆಂಬರ್ 2021, 19:31 IST
beautiful girl wearing a towel on head front of mirror and washing her face with organic face wash.Girl wearing towel on head and washing face.
beautiful girl wearing a towel on head front of mirror and washing her face with organic face wash.Girl wearing towel on head and washing face.   

ಸದಾ ಹೊಳೆಯುವ, ಕಾಂತಿಯಿಂದ ಕೂಡಿದ ತ್ವಚೆ ತಮ್ಮದಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಇತ್ತೀಚೆಗೆ ಜನರಲ್ಲಿ ಚರ್ಮದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಒಣ–ಶುಷ್ಕ ಚರ್ಮ, ಕಾಂತಿ ರಹಿತ ಚರ್ಮ, ನೆರಿಗೆ ಮೂಡುವುದು, ಕಲೆ, ಮೊಡವೆ ಉಂಟಾಗುವುದು ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಚರ್ಮದ ಸೌಂದರ್ಯಕ್ಕೆ ನೂರಾರು ಮಾರ್ಗಗಳನ್ನು ಅನುಸರಿಸಿದರೂ ಕಾಂತಿ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಅದಕ್ಕೆ ನಾವು ಅನುಸರಿಸುವ ಮಾರ್ಗಗಳೂ ಕಾರಣವಾಗಿರಬಹುದು. ಅದರಲ್ಲೂ ರಾತ್ರಿ ವೇಳೆ ನಾವು ಪಾಲಿಸುವ ಕೆಲವು ಕ್ರಮಗಳು ನಮ್ಮ ಚರ್ಮಕ್ಕೆ ಹಾನಿ ಉಂಟು ಮಾಡಬಹುದು.

ವಿಟಮಿನ್ ಸಿ ಸಿರಮ್‌ ಹಚ್ಚಿಕೊಳ್ಳುವುದು

ವಿಟಮಿನ್ ಸಿ ಸಿರಮ್‌ ಅನ್ನು ತ್ವಚೆಗೆ ಹಚ್ಚಿಕೊಳ್ಳುವ ಮೂಲಕ ಅಂದವನ್ನ ಹೆಚ್ಚಿಸಿಕೊಳ್ಳಲು ಬಯಸುವವರು ಹಲವರು. ಆದರೆ ರಾತ್ರಿ ವೇಳೆ ವಿಟಮಿನ್ ಸಿ ಬಳಕೆ ತಪ್ಪು. ಹಗಲಿನ ವೇಳೆ ಸೂರ್ಯನ ಕಿರಣಗಳು ನೇರವಾಗಿ ಚರ್ಮಕ್ಕೆ ತಾಕುತ್ತಿರುತ್ತದೆ. ಅಲ್ಲದೇ ವಿಟಮಿನ್ ಸಿ ಸಿರಮ್‌ನಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಿದ್ದು ಇದನ್ನು ಹಗಲಿನ ವೇಳೆ ಹಚ್ಚಿಕೊಳ್ಳುವುದರಿಂದ ಚರ್ಮವನ್ನು ಬಿಸಿಲಿನ ಶಾಖದಿಂದ ರಕ್ಷಿಸಬಹುದಲ್ಲದೇ ರ‍್ಯಾಡಿಕಲ್ಸ್‌ಗಳನ್ನು ಸ್ವಚ್ಛಗೊಳಿಸುತ್ತವೆ.

ADVERTISEMENT

ಮುಖ ತೊಳೆಯದೇ ಇರುವುದು

ಹಗಲಿನ ವೇಳೆ ದೂಳು, ಎಣ್ಣೆಯಂಶ, ಮೇಕಪ್‌ ಹಾಗೂ ಮಾಲಿನ್ಯಕಾರಕ ಅಂಶಗಳು ಮುಖದ ತ್ವಚೆಯ ಮೇಲೆ ಹರಡಿಕೊಂಡಿರುತ್ತವೆ. ಆ ಕಾರಣಕ್ಕೆ ರಾತ್ರಿ ಮುಖ ತೊಳೆಯದೇ ಮಲಗಬಾರದು. ಮುಖ ತೊಳೆಯದೇ ಮಲಗುವುದರಿಂದ ಚರ್ಮದಲ್ಲಿ ಕಿರಿಕಿರಿ, ಕಜ್ಜಿ, ತುರಿಕೆ, ಫ್ರಿ ರ‍್ಯಾಡಿಕಲ್‌ಗಳಿಗೆ ಹಾನಿಯಾಗುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಇದರಿಂದ ಬೇಗನೆ ವಯಸ್ಸಾದಂತೆ ಕಾಣುವುದು, ಕಪ್ಪು ಕಲೆಗಳು, ಮುಖದ ಮೇಲೆ ಗೆರೆ, ನೆರಿಗೆ ಮೂಡುವುದು ಮುಂತಾದ ಸಮಸ್ಯೆಗಳು ಕಾಣಿಸಬಹುದು. ಮುಖ ತೊಳೆಯದೇ ಮಲಗುವುದರಿಂದ ಮೊಡವೆಗಳು ಕಾಣಿಸಿಕೊಳ್ಳಬಹುದು. ಅಲ್ಲದೇ ಮೇಕಪ್‌ ತೆಗೆಯದೇ ಮಲಗುವುದರಿಂದ ಕಣ್ಣಿಗೂ ಹಾನಿಯಾಗುವ ಸಾಧ್ಯತೆ ಹೆಚ್ಚು. ಕಣ್ಣಿನ ಅಲರ್ಜಿ, ತುರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚು.

ರಾತ್ರಿ ವೇಳೆ 30 ಸೆಕೆಂಡುಗಳ ಕಾಲ ಬಿಸಿನೀರಿನಿಂದ ಮುಖ ತೊಳೆದುಕೊಳ್ಳಬೇಕು. ಮುಖ ತೊಳೆಯುವಾಗ ಸೌಮ್ಯವಾದ ಕ್ಲೇನ್ಸರ್‌ನಿಂದ ತೊಳೆಯಬೇಕು. ಪರಿಮಳ ರಹಿತ ಕ್ಲೆನ್ಸರ್ ಬಳಕೆ ಉತ್ತಮ. ಇದರಿಂದ ತುರಿಕೆ ಹಾಗೂ ಚರ್ಮ ಒಣಗುವುದನ್ನು ತಪ್ಪಿಸಬಹುದು.

ಮಾಯಿಶ್ಚರೈಸರ್ ಆಯ್ಕೆಯ ಮುನ್ನ

ಚರ್ಮ ತೇವಾಂಶರಹಿತವಾಗಿದ್ದು ಚರ್ಮದ ಸುತ್ತಲಿನ ಭಾಗವು ಒಣಗಿ ಬಿಸಿ ಹಿಡಿದಂತಿದ್ದರೆ ಚರ್ಮದಲ್ಲಿ ಎಣ್ಣೆಯಂಶ ಹೆಚ್ಚು ಉತ್ಪತ್ತಿಯಾಗಿ ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಚರ್ಮದ ಡೀಹೈಡ್ರೇರಷನ್‌ನಿಂದ ಚರ್ಮ ಕೆಂಪಾಗುವುದು, ಸೂಕ್ಷ್ಮತೆಯನ್ನು ಕಳೆದುಕೊಳ್ಳುವುದು, ಕಿರಿಕಿರಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆ ಕಾರಣಕ್ಕೆ ಚರ್ಮವನ್ನು ತೇವಾಂಶಭರಿತವಾಗಿಸಲು ಮಾಯಿಶ್ಚರೈಸರ್ ಬಳಕೆ ಉತ್ತಮ. ಮಾಯಿಶ್ಚರೈಸರ್ ಬಳಕೆಯಿಂದ ಚರ್ಮಕ್ಕೆ ಹಲವು ಬಗೆಯ ಉಪಯೋಗಗಳಿವೆ.
ಅದರಲ್ಲೂ ಚಳಿಗಾಲದಲ್ಲಿ ಚರ್ಮ ಕೆಂಪಾಗಿ ಸೀಳಿದಂತಿರುತ್ತದೆ. ಇದರ ನಿವಾರಣೆಗೆ ಮಾಯಿಶ್ಚರೈಸರ್ ಕ್ರೀಮ್‌ಗಳನ್ನು ಹಚ್ಚಿಕೊಳ್ಳಬೇಕು.

ಮುಖದ ಮೇಲೆ ಬಲ ಪ್ರಯೋಗ

ಮುಖ ತೊಳೆಯುವಾಗ ಕ್ರೀಮ್ ಬಳಸುವಾಗ ಮುಖವನ್ನು ಗಟ್ಟಿಯಾಗಿ ಉಜ್ಜಬಾರದು. ಮುಖ ಸ್ವಚ್ಛವಾಗುವವರೆಗೂ ಚೆನ್ನಾಗಿ ಎರಡೆರಡು ಬಾರಿ ನಿಧಾನಕ್ಕೆ ತೊಳೆಯಿರಿ. ಚರ್ಮದ ಒಳಗೆ ನೈಸರ್ಗಿಕ ಎಣ್ಣೆಯಂಶ ಇದ್ದು ಅವು ನೇರವಾಗಿ ವಾತಾವರಣದಲ್ಲಿರವ ಮಾಲಿನ್ಯಕಾರಕ ಅಂಶಗಳು ಚರ್ಮದ ಒಳ ಭಾಗಕ್ಕೆ ತಾಕದಂತೆ ತಡೆಯಬಹುದು.

ಅಸಮರ್ಪಕ ನಿದ್ದೆ

ರಾತ್ರಿ ವೇಳೆ ಸರಿಯಾಗಿ ನಿದ್ದೆ ಮಾಡದೇ ಇರುವುದು ಚರ್ಮದ ಮೇಲೆ ನೇರವಾಗಿ ಪರಿಣಾಮ ಬೀರದೇ ಇದ್ದರೂ ಅದರ ಪರಿಣಾಮ ಚರ್ಮಕ್ಕೆ ಆಗುವುದು ಖಂಡಿತ. ತಡ ರಾತ್ರಿವರೆಗೆ ಟಿವಿ ಅಥವಾ ಮೊಬೈಲ್ ನೋಡುತ್ತಾ ಮಲಗುವುದರಿಂದ ಚರ್ಮಕ್ಕೆ ಹೆಚ್ಚು ಹಾನಿ ಉಂಟಾಗುತ್ತದೆ. ಅಲ್ಲದೇ ಇದರಿಂದ ನಿದ್ದೆಗೂ ತೊಂದರೆ ಉಂಟಾಗುತ್ತದೆ. ಅಧ್ಯಯನವೊಂದರ ಪ್ರಕಾರ ನಿದ್ದೆಯ ಕೊರತೆಯಿಂದ ಬೇಗನೆ ವಯಸ್ಸಾದಂತೆ ಕಾಣುವುದು, ಮುಖದ ಚರ್ಮದಲ್ಲಿ ನೆರಿಗೆ ಮೂಡುವುದು, ಚರ್ಮ ಕಳೆಗುಂದುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಆ ಕಾರಣಕ್ಕೆ ಚರ್ಮದ ಆರೋಗ್ಯಕ್ಕೆ ದಿನದಲ್ಲಿ 8 ಗಂಟೆಗಳ ನಿದ್ದೆ ಅವಶ್ಯ. ಮಲಗಿರುವಾಗ ಚರ್ಮದಲ್ಲಿ ರಕ್ತಸಂಚಲನ ಹೆಚ್ಚುತ್ತದೆ. ಇದು ಕೊಲಾಜನ್ ಮರುಉತ್ಪತ್ತಿಗೆ ಸಹಾಯ ಮಾಡುತ್ತದೆ, ಅಲ್ಲದೇ ವಾತಾವರಣದ ಕಲುಷಿತದಿಂದ ಚರ್ಮಕ್ಕೆ ಉಂಟಾದ ಹಾನಿಯನ್ನೂ ತಪ್ಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.