ADVERTISEMENT

ಹೊಸ ಆಕರ್ಷಣೆ ಲೆಹೆಂಗಾ ಶರ್ಟ್‌

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:30 IST
Last Updated 2 ಸೆಪ್ಟೆಂಬರ್ 2018, 19:30 IST
ಕಾಜೋಲ್‌
ಕಾಜೋಲ್‌   

ಮದುವೆ, ರಿಸೆಪ್ಟನ್‌ನಂತಹ ಅದ್ಧೂರಿ ಸಮಾರಂಭಗಳಿಗೆ ಲೆಹೆಂಗಾ ತೊಡುವುದು ಈಚೆಗೆ ಫ್ಯಾಷನ್‌ ಆಗಿದೆ. ಮುತ್ತು, ಹರಳುಗಳು ಅಥವಾ ವಿನ್ಯಾಸಗಳಿಂದ ಶ್ರೀಮಂತವಾಗಿರುವ ಈ ಡ್ರೆಸ್‌ಗಳು ಯುವತಿಯರಿಗೆ ಅಚ್ಚುಮೆಚ್ಚು. ಲೆಹೆಂಗಾ ಅಂದಾಗ ಕಣ್ಸೆಳೆಯುವ ವಿನ್ಯಾಸದ ಸ್ಕರ್ಟ್‌ ಹಾಗೂ ಬ್ಲೌಸ್‌, ವಿಶೇಷ ವಿನ್ಯಾಸದ ದುಪ್ಪಟ್ಟಾ ಇದ್ದೇ ಇರಬೇಕು.

ಆದರೆ ಲೆಹೆಂಗಾಕ್ಕೆ ಬ್ಲೌಸ್‌ ತೊಡುವುದು ಹಳೆ ಫ್ಯಾಷನ್‌ ಆಗಿದ್ದು, ಬ್ಲೌಸ್‌ ಬದಲಿಗೆ ಈಗ ಶರ್ಟ್‌ ಬಂದಿದೆ. ಅದ್ಧೂರಿ ವಿನ್ಯಾಸದ ಸ್ಕರ್ಟ್‌ ಮೇಲೆ ಸಾದಾ, ಸರಳ ವಿನ್ಯಾಸದ ಶರ್ಟ್‌. ಬಾಲಿವುಡ್‌ನಲ್ಲಿ ಈಗಾಗಲೇ ಈ ಟ್ರೆಂಡ್‌ ಆರಂಭವಾಗಿದ್ದು, ಯುವತಿಯರು ಆಗಲೇ ಅನುಕರಣೆ ಮಾಡತೊಡಗಿದ್ದಾರೆ. ಇದು ಹೆಚ್ಚು ಸುದ್ದಿಯಾಗಿದ್ದು ಬಾಲಿವುಡ್‌ ನಟಿ ಕಾಜೋಲ್‌ ಅವರಿಂದ.

ಕಾಜೋಲ್‌ ಅಭಿನಯದ ‘ಹೆಲಿಕಾಪ್ಟರ್‌ ಈಲಾ’ ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು,ಚಿತ್ರದ ಪ್ರಚಾರ ಕಾರ್ಯದಲ್ಲಿ ಕಾಜೋಲ್‌ ತೊಡಗಿಸಿಕೊಂಡಿದ್ದಾರೆ. ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಗೆ ಗುರುತಾದವರು ಈ ನಟಿ. ನಟನೆಯಿಂದ ಕೊಂಚ ಕಾಲ ದೂರವಾಗಿದ್ದರೂ ಇಂತಹ ಹೊಸ ಫ್ಯಾಷನ್‌ ಟ್ರೆಂಡ್‌ಗಳಿಂದ ಆಗಾಗ ಸುದ್ದಿಯಲ್ಲಿರುತ್ತಿದ್ದರು. ಈಚೆಗೆ ಹೊಸ ಚಿತ್ರದ ಪ್ರಚಾರದಲ್ಲಿ ಶರ್ಟ್‌ ಲೆಹೆಂಗಾ ತೊಟ್ಟು ಮಿಂಚಿದ್ದು, ಅವರ ಡ್ರೆಸ್‌ನಿಂದಲೇ ಸುದ್ದಿಯಾಗಿದ್ದರು.

ADVERTISEMENT

ಲೆಹೆಂಗಾ ಸ್ಕರ್ಟ್‌ ಅತ್ಯಾಕರ್ಷಕವಾಗಿ ಕಾಣುವಲ್ಲಿ ಬ್ಲೌಸ್‌ ಪಾತ್ರವೂ ಮುಖ್ಯ. ಈಚೆಗೆಸೀರೆ, ಲೆಹೆಂಗಾಗಳಲ್ಲಿ ಬ್ಲೌಸ್‌ಗಳ ವಿಧ ವಿಧ ವಿನ್ಯಾಸ ಆಯ್ಕೆಗಳಿಗೂ ಮಹಿಳೆಯರು ಪ್ರಾಮುಖ್ಯತೆ ಕೊಡುತ್ತಿದ್ದರು. ಲೆಹೆಂಗಾ ಬಣ್ಣಕ್ಕೆ ತಕ್ಕಂತೆಬ್ಲೌಸ್‌ಗಳಿಗೆ ಆಕರ್ಷಕವಾಗಿ ವಿನ್ಯಾಸ ಹಾಗೂ ಕುಸುರಿ ಮಾಡಿಸಿಕೊಳ್ಳುತ್ತಿದ್ದರು.ಉದ್ದ ತೋಳಿನ ಬ್ಲೌಸ್, ಮುಕ್ಕಾಲು ತೋಳಿನ ಬ್ಲೌಸ್‌, ಡೀಪ್ ನೆಕ್, ವಿ– ನೆಕ್...ಹೀಗೆ ನಾನಾ ವಿಧದಲ್ಲಿ ಬ್ಲೌಸ್‌ ಹೊಲಿಸಿಕೊಳ್ಳುವುದು ಫ್ಯಾಷನ್‌ ಆಗಿತ್ತು.

ಈಗ ಈಟ್ರೆಂಡ್‌ಗೆ ಮತ್ತೊಂದು ಸೇರ್ಪಡೆ ಲೆಹೆಂಗಾ ಶರ್ಟ್‌. ಕಾಲರ್‌ ನೆಕ್‌ ಇರುವ ಈ ಶರ್ಟ್‌ಗಳು ಲೆಹೆಂಗಾಕ್ಕೆ ಅಂದ ಕಾಣುವುದರ ಜೊತೆಗೆ ಗುಂಪಿನಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ಆದರೆ ಈ ರೀತಿ ಲೆಹೆಂಗಾಗಳು ಮದುವೆಯಂತಹ ಅದ್ದೂರಿ ಕಾರ್ಯಕ್ರಮಗಳಿಗೆ ಸರಿಹೊಂದುವುದಿಲ್ಲ. ಗೆಟ್‌ ಟುಗೆದರ್‌ ಪಾರ್ಟಿ, ರಿಸೆಪ್ಷನ್‌, ಮೆಹಂದಿ ಮೊದಲಾದ ಕಾರ್ಯಕ್ರಮಗಳಿಗೆ ಇದು ಸರಿಹೊಂದುತ್ತವೆ. ಸ್ಟೈಲಿಷ್‌ ಆಗಿ ಕಾಣಬೇಕು ಎಂದು ಬಯಸುವವರು ಹೀಗೆ ಲೆಹೆಂಗಾ ಧರಿಸಿ ಮಿಂಚಬಹುದು.

ಲೆಹೆಂಗಾ ಸ್ಕರ್ಟ್‌ ಆಯ್ಕೆ ಮಾಡಿಕೊಂಡ ಬಳಿಕ, ಅದೇ ಬಣ್ಣದ ಸಿಲ್ಕ್ ಬಟ್ಟೆ ಅಥವಾ ಕಾಟನ್‌ ಬಟ್ಟೆಗಳಿಂದ ಶರ್ಟ್‌ ಹೊಲಿಸಿಕೊಳ್ಳಬೇಕು. ಶರ್ಟ್‌ಗಳನ್ನು ಇನ್‌ಶರ್ಟ್‌ ಮಾಡಿದರಷ್ಟೇ ಚಂದ ಕಾಣುತ್ತದೆ. ಇದಲ್ಲದೇ ದುಪ್ಪಟ್ಟಾ ತೊಡುವ ರಗಳೆಯೂ ಇಲ್ಲ.

ಲೆಹೆಂಗಾವನ್ನು ಒಂದೋ, ಎರಡೋ ಬಾರಿ ತೊಟ್ಟು ಮನೆಯ ಕಪಾಟಿನಲ್ಲಿಟ್ಟವರು, ಮೂಲೆಗಿಟ್ಟವರು, ಆ ಲೆಹೆಂಗಾ ಸ್ಕರ್ಟ್‌ಗೆಅದೇ ಬಣ್ಣದಸಾದಾ ಶರ್ಟ್‌ ಹೊಂದಿಸಿಕೊಂಡು ತೊಡಬಹುದು. ಕಾಟನ್‌, ಕಾಟನ್‌ ಸಿಲ್ಕ್‌, ಖಾದಿ ಹಾಗೂ ಜೂಟ್‌ ಸಿಲ್ಕ್‌ಗಳ ಸ್ಕರ್ಟ್‌ ತೊಟ್ಟಿದ್ದಾಗ, ಅದಕ್ಕೆ ಉದ್ದುದ್ದ ಗೆರೆಗಳುಳ್ಳ ಅಥವಾ ಪ್ರಿಂಟೆಡ್‌ ವಿನ್ಯಾಸದ ಶರ್ಟ್‌ಗಳು ಚಂದ ಕಾಣುತ್ತವೆ.

ಈ ರೀತಿ ಲೆಹೆಂಗಾ ತೊಟ್ಟಾಗ ಆಭರಣದ ಬಗ್ಗೆಯೂ ಚಿಂತಿಸಬೇಕಾಗಿಲ್ಲ. ಕಿವಿಗೆ ಹ್ಯಾಗಿಂಗ್ಸ್‌ ಅಥವಾ ಜುಮುಕಿ ತೊಟ್ಟು ಕೂದಲನ್ನು ಗಾಳಿಗೆ ಹಾರಿಬಿಟ್ಟರೆ ಚಂದ ಕಾಣುತ್ತದೆ.ಕತ್ತಿಗೆ ಬೇಕಾದಲ್ಲಿ ಚೋಕರ್ಸ್‌ ತೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.