ADVERTISEMENT

‘ಮಿಸೆಸ್‌ ಇಂಡಿಯಾ’ಗೆ ಮಗ ಡಯಟಿಷಿಯನ್!

ಮಾನಸ ಬಿ.ಆರ್‌
Published 18 ಫೆಬ್ರುವರಿ 2019, 19:46 IST
Last Updated 18 ಫೆಬ್ರುವರಿ 2019, 19:46 IST
ಕಾಜಲ್ ಭಾಟಿಯಾ
ಕಾಜಲ್ ಭಾಟಿಯಾ   

40 ವರ್ಷ ತುಂಬಿರುವ ಖುಷಿಗೆ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದೆ. ಆ ದಿನ ಮನಸ್ಸಿನಲ್ಲಿ ಏನೋ ತಳಮಳ, ಗೊಂದಲ. ಲೈಫ್‌ ಇಷ್ಟೇನಾ ಎನ್ನಿಸಿಬಿಟ್ಟಿತ್ತು. ಇಷ್ಟು ವರ್ಷ ನಾನು ಮಾಡಿದ ಸಾಧನೆಯಾದರೂ ಏನು ಎಂದು ಹೊರಳಿ ನೋಡಿದರೆ ಕೇವಲ ಶೂನ್ಯ ಆವರಿಸಿತು..

ಒಂದಿಷ್ಟು ದಿನ ಅದೇ ಗುಂಗಿನಲ್ಲಿ ಕಳೆದೆ. ಒಮ್ಮೆ ನನ್ನ ವಾಟ್ಸ್‌ಆ್ಯಪ್‌ಗೆ ಬಂದ ಜಾಹೀರಾತಿನ ಪೋಸ್ಟರ್‌ ಒಂದನ್ನು ನೋಡಿದೆ. ಆಗ ಮನಸ್ಸಿಗೆ ಏನೋ ಹಿತ ಅನಿಸಿತು. ನನ್ನ ಪತಿ ಬಳಿ ಹೇಳಿಕೊಂಡೆ. ಅವರು ನೋಡೋಣ ಏನಾಗುತ್ತೋ ಟ್ರೈ ಮಾಡಿಬಿಡು ಎಂದು ಧೈರ್ಯ ಹೇಳಿದರು.

ನಾನು ಚಿಕ್ಕವಳಿಂದಲೂ ಫ್ಯಾಷನ್‌ ಬಗ್ಗೆ ಅತೀವ ಕಾಳಜಿ ಹೊಂದಿದ್ದೆ. ಪಿಯುಸಿ ಮುಗಿಸಿದ ತಕ್ಷಣವೇ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್ ಆಯ್ಕೆ ಮಾಡಿಕೊಂಡೆ. ಮುಂಬೈಗೆ ಹೋಗಿ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದೆ. ಆದರೆ ಮನೆಯಲ್ಲಿ ಮದುವೆ ಮಾಡಿಕೋ. ಆನಂತರ ಬೇಕಾದರೆ ಏನಾದರೂ ಮಾಡು ಎಂದರು. ನಾನೂ ಬೇರೆ ದಾರಿ ಕಾಣದೇ ಒಪ್ಪಿಕೊಂಡೆ.

ADVERTISEMENT

ಮದುವೆ ನಂತರ ಫ್ಯಾಷನ್‌ ಜಗತ್ತಿನಿಂದ ದೂರವಿರುವಂತೆ ಸಂಬಂಧಿಕರು ಹೇಳಿದರು. ಗೊಂದಲಗಳ ನಡುವೆ ನನ್ನ ಕನಸು ನನಸಾಗದೇ ಉಳಿದುಹೋಯಿತು.

ದೊಡ್ಡ ಮಗನಿಗೆ ಈಗ 20 ವರ್ಷ, ಸಣ್ಣವನಿಗೆ 13 ವರ್ಷ. 42ರ ವಯಸ್ಸಿನಲ್ಲಿ ನನ್ನನ್ನು ಫ್ಯಾಷನ್ ಜಗತ್ತು ಒಪ್ಪಿಕೊಳ್ಳಬಹುದೇ ಎಂಬ ಗೊಂದಲಗಳು ಇದ್ದವು. ಆದರೆ ಪತಿಯ ಸಹಾಯದಿಂದ ಆರಂಭದ ತೊಡಕುಗಳನ್ನು ಸುಲಭವಾಗಿ ಮೀರಿದೆ.

ಯಾವುದೇ ತಯಾರಿ ಇಲ್ಲದೇ, ಡಯಟ್‌, ವ್ಯಾಯಾಮ ಏನೂ ಇಲ್ಲದೆಯೇ ‘ಮಿಸೆಸ್‌ ಕರ್ನಾಟಕ’ ಪೆಜೆಂಟ್‌ನಲ್ಲಿ ಪಾಲ್ಗೊಂಡೆ. ಫೈನಲ್‌ ಕೂಡ ತಲುಪಿದೆ. ಇದೆಲ್ಲಾ ಸಾಧ್ಯವಾಗಿದ್ದು ನನ್ನ ಫ್ಯಾಷನ್‌ ಪ್ರಜ್ಞೆಯಿಂದ.

ನಾನು ಮದುವೆ, ಮಕ್ಕಳು ಎಂದು ಕಳೆದುಹೋಗಿದ್ದರೂ ನನ್ನಲ್ಲಿದ್ದ ಫ್ಯಾಷನ್‌ ಪ್ರಜ್ಞೆ ಮಾತ್ರ ದೂರ ಆಗಿರಲಿಲ್ಲ. ದೇಹದ ಆಕಾರ ಹಾಳಾಗದಂತೆ ಕಾಳಜಿ ವಹಿಸಿದ್ದೆ. ಬಿಡುವು ಸಿಕ್ಕಾಗ ಡಾನ್ಸ್‌, ಅಲ್ಪ ಸ್ವಲ್ಪ ವರ್ಕೌಟ್‌, ಚಿಕ್ಕ ಮಟ್ಟದ ಡಯಟ್‌ ಮಾಡುತ್ತಿದ್ದೆ. ಇದೆಲ್ಲಾ ನನ್ನನ್ನು ಕಾಪಾಡಿತು.ಆದರೆ ಫೈನಲ್‌ಗೆ ಆಯ್ಕೆಯಾದ ಮೇಲೆ ಸ್ವಲ್ಪ ತಲೆ ಕೆಡಿಸಿಕೊಳ್ಳಲೇಬೇಕಾಯಿತು. ನಿದ್ದೆ ಚೆನ್ನಾಗಿ ಮಾಡಿದೆ. ನೀರು ಹೆಚ್ಚು ಕುಡಿಯುತ್ತಿದ್ದೆ, ವರ್ಕ್ಔಟ್‌ಗೆ ಸೇರಿಕೊಂಡೆ, ಜುಂಬಾ, ಯೋಗ, ಸೈಕ್ಲಿಂಗ್‌ ಕೂಡ ಮಾಡುತ್ತಿದ್ದೆ. ಮಗ ಹಾಕಿಕೊಟ್ಟ ಡಯಟ್‌ ಚಾರ್ಟ್‌ನಿಂದ ಆರು ಕೆ.ಜಿ. ತೂಕ ಇಳಿಸಿಕೊಂಡೆ.

ಮಿಸೆಸ್‌ ಕರ್ನಾಟಕದಿಂದ ಮಿಸೆಸ್‌ ಇಂಡಿಯಾ ಗೆದ್ದುಕೊಂಡೆ. ಆ ನಂತರ ಮಿಸೆಸ್‌ ಚಾರ್ಮಿಂಗ್‌
ಏಷ್ಯಾ ಇಂಟರ್‌ನ್ಯಾಷನಲ್‌ ಕೂಡ ನನ್ನ ಮುಡಿ ಸೇರಿಕೊಂಡಿತು. ಕೇವಲ 10 ತಿಂಗಳಿನಲ್ಲಿಯೇ ನಾನು ಸಂಪೂರ್ಣವಾಗಿ ಬದಲಾದೆ. 2017ಕ್ಕೆ ನಾನು ಕೇವಲ ಗೃಹಿಣಿ ಅಷ್ಟೇ... 2018ರಲ್ಲಿ ಮಿಸೆಸ್‌ ಕರ್ನಾಟಕ ಶೋ ನಡೆಯಿತು. ಅಲ್ಲಿಂದ ನಾನು ಸೆಲೆಬ್ರಿಟಿಯಾಗಿ ಬದಲಾಗಿಬಿಟ್ಟೆ.

ಇದೆಲ್ಲಾ ಈಗಲೂ ಕನಸು ಎಂದೇ ಅನ್ನಿಸುತ್ತದೆ. 20 ವರ್ಷದ ಮಗ ಇದ್ದರೂ ನಾನು ಇದನ್ನೆಲ್ಲಾ ಮಾಡಲು ಸಾಧ್ಯವಾಗಿದ್ದು ಖುಷಿಯಾಗುತ್ತದೆ. ಎಲ್ಲಿಯೂ ನಾನು ಟ್ರೈನಿಂಗ್‌ ತೆಗೆದು ಕೊಳ್ಳಲಿಲ್ಲ. ವಾಕ್ ಹೇಗೆ ಮಾಡಬೇಕು, ವೇದಿಕೆಯಲ್ಲಿ ಹೇಗೆ ಮಾತನಾಡಬೇಕು. ನಡವಳಿಕೆ ಹೇಗಿರಬೇಕು, ಸ್ಟೈಲ್‌ ಎಲ್ಲವನ್ನೂ ನಾನೇ ಗೂಗಲ್‌ ಹಾಗೂ ಸ್ನೇಹಿತರ ಸಹಾಯದಿಂದ ಕಲಿತುಕೊಂಡೆ.

ಫ್ಯಾಷನ್‌ನಲ್ಲಿ ನನ್ನದೇ ಆದ ಬ್ರ್ಯಾಂಡ್ ಬಿಡುಗಡೆ ಮಾಡಬೇಕು. ಬಟ್ಟೆಗಳಿಗೆ ಡಿಸೈನ್‌ ಮಾಡುವುದರಲ್ಲಿ ಮೊದಲಿನಿಂದಲೂ ನನಗೆ ಆಸಕ್ತಿ. ಬಿಡುವು ಮಾಡಿಕೊಂಡು ಈ ಕ್ಷೇತ್ರದಲ್ಲಿಯೇ ಮುಂದುವರಿಯುವ ಆಸೆ ಇದೆ.

ಸಮಾಜ ಸೇವೆ ಮಾಡುವ ಹಾದಿಯಲ್ಲಿ ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದೇನೆ. ಗೃಹಿಣಿ ಎಂದರೆ ಮನೆ ನೋಡಿಕೊಂಡು, ಮಕ್ಕಳು ನೋಡಿಕೊಂಡು ಇದ್ದುಬಿಡುವುದು ಅಲ್ಲ. ಅದರ ಜೊತೆ ನಮ್ಮ ಅಭಿರುಚಿ ಉಳಿಸಿಕೊಂಡು ಹೋದರೆ..ಮುಂದೊಂದು ದಿನ ಅವಕಾಶ ಸಿಕ್ಕಾಗ ಗೆಲ್ಲಬಹುದು ಎಂಬುದಕ್ಕೆ ನಾನೇ ಉದಾಹರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.