ADVERTISEMENT

ಆ್ಯಂಟಿಕ್ ಆಭರಣ ಪ್ರಿಯೆ ರಾಧಿಕಾ

Radhika kumaraswami-jewels

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 19:30 IST
Last Updated 6 ಸೆಪ್ಟೆಂಬರ್ 2018, 19:30 IST
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ   

ಸುವರ್ಣ ಪುತ್ಥಳಿಯೊಂದು ಜೀವ ತಳೆದು ಹಂಸ ನಡಿಗೆಯಲ್ಲಿ ಮುಗುಳುನಗೆ ಚೆಲ್ಲುತ್ತಾ ನಮ್ಮೆದುರು ಬಂದು ನಿಂತಂತೆ ಭಾಸವಾಗುತ್ತಿತ್ತು ಆ ಕ್ಷಣ... ಬಂಗಾರ ಬಣ್ಣದ ರೇಷ್ಮೆ ಸೀರೆಗೊಪ್ಪುವ ರವಿಕೆ ಉಟ್ಟು, ಅದಕ್ಕೆ ತಕ್ಕಂತೆ ಬಂಗಾರದೊಡವೆ ತೊಟ್ಟ ನಟಿ ರಾಧಿಕಾ ಕುಮಾರಸ್ವಾಮಿ ಎದುರುಗೊಂಡಾಗ ಒಂದೆರಡು ಸೆಕೆಂಡ್ ಬಂಗಾರದ ಗೊಂಬೆ ಎದುರಾದಂತೆ ಭಾಸವಾಯಿತು.

ಅಷ್ಟೊಂದು ಚಿನ್ನದ ಒಡವೆ ತೊಟ್ಟು ರಾಧಿಕಾ ತಯಾರಾಗಿದ್ದು ಯಾವುದೇ ಸಿನಿಮಾಕ್ಕಲ್ಲ, ಜ್ಯುವೆಲ್ಸ್‌ ಆಫ್ ಇಂಡಿಯಾಕ್ಕೆ!. ತಮ್ಮ ಬಹುದಿನಗಳ ಕನಸು ನನಸಾದ ಖುಷಿಯಲ್ಲಿದ್ದರು ಅವರು. ಜ್ಯುವೆಲ್ಸ್ ಆಫ್ ಇಂಡಿಯಾ ಪ್ರತಿ ಆಭರಣ ಮೇಳ ಮಾಡುವಾಗ ನಗರದಲ್ಲೆಡೆ ಹಾಕುವ ಹೋರ್ಡಿಂಗ್ಸ್‌ ನೋಡಿ, ತಾನೂ ಒಂದಲ್ಲ ಒಂದು ಆಭರಣ ಮಳಿಗೆಗೆ ರಾಯಭಾರಿಯಾಗಬೇಕು, ಆ ರೂಪದರ್ಶಿಗಳಂತೆ ಫೋಟೊಶೂಟ್ ಮಾಡಿಸಿಕೊಳ್ಳಬೇಕೆಂಬ ರಾಧಿಕಾ ಆಸೆ ಕೊನೆಗೂ ಈಡೇರಿದೆ.

ಈ ಬಾರಿಯ ಜ್ಯುವೆಲ್ಸ್ ಆಫ್ ಇಂಡಿಯಾಕ್ಕೆ ರಾಯಭಾರಿಯಾಗಿರುವ ಅವರು ಆಭರಣಗಳ ಮೇಲಿನ ತಮ್ಮ ಮೋಹವನ್ನು ಹಂಚಿಕೊಂಡರು.

ADVERTISEMENT

‘ಮೊದಲಿಗೆ ಜ್ಯುವೆಲ್ಸ್ ಆಫ್ ಇಂಡಿಯಾದವರು ನನಗೆ ಕರೆ ಮಾಡಿ ರಾಯಭಾರಿ ಆಗುವ ವಿಷಯ ತಿಳಿಸಿದಾಗ ಒಂದು ಕ್ಷಣ ನಂಬಲಾಗಲಿಲ್ಲ. ನಂತರ ಮಾತನಾಡಲು ಕರೆಸಿ, ಒಪ್ಪಿಕೊಂಡೆ. ನನಗಂತೂ ಬಹುದಿನಗಳ ಕನಸು ನನಸಾದ ಖುಷಿ. 2005ರಿಂದ ಜ್ಯುವೆಲ್ಸ್‌ ಆಫ್ ಇಂಡಿಯಾ ಮೇಳ ನಡೆಸುತ್ತಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಕನ್ನಡದ ನಟಿಯರಾದ ಪ್ರಿಯಾಮಣಿ, ರಚಿತಾ ರಾಮ್ ಅವರೆಲ್ಲಾ ಇದಕ್ಕೆ ರಾಯಭಾರಿಯಾಗಿದ್ದರು. ಈ ಬಾರಿ ನಾನು ರಾಯಭಾರಿ’ ಎಂದು ಕಣ್ಣುಮಿಟುಕಿಸಿ ನಕ್ಕರು ರಾಧಿಕಾ.

‘ಫೋಟೊಶೂಟ್‌ಗಾಗಿ ಜ್ಯುವೆಲ್ಸ್ ಆಫ್ ಇಂಡಿಯಾದ ಸಂದೀಪ್ ಬೇಕಲ್ ಮತ್ತು ತಂಡ 20ಕ್ಕೂ ಹೆಚ್ಚು ವಿವಿಧ ವಿನ್ಯಾಸದ ಆಭರಣಗಳನ್ನು ತಂದಿತ್ತು. ಅವುಗಳನ್ನೆಲ್ಲಾ ಧರಿಸಿ ಫೋಟೊಶೂಟ್ ಮಾಡಿಸಿದ್ದು ಹೊಸ ಅನುಭವ ನೀಡಿತು. ನನಗೆ ಆಭರಣಗಳೆಂದರೆ ಇಷ್ಟವೇ. ಅದರಲ್ಲೂ ದೊಡ್ಡ ಜುಮುಕಿಗಳು ನನ್ನ ಫೇವರಿಟ್. ಅವುಗಳನ್ನೇ ಹೆಚ್ಚಾಗಿ ಧರಿಸಿ ಅಭ್ಯಾಸವಿದ್ದ ನನಗೆ ದೊಡ್ಡ ಹಾರಗಳು, ಆ್ಯಂಟಿಕ್ ವಿನ್ಯಾಸದ ದೊಡ್ಡ ಆಭರಣಗಳು ಅಷ್ಟಾಗಿ ಒಪ್ಪುವುದಿಲ್ಲವೆಂದೇ ಭಾವಿಸಿದ್ದೆ. ಆದರೆ, ಫೋಟೊಶೂಟ್‌ಗಾಗಿ ಆ್ಯಂಟಿಕ್ ಆಭರಣ ಧರಿಸಿದಾಗ ನಿಜಕ್ಕೂ ನಾನು ಇಷ್ಟು ಚೆಂದ ಕಾಣಿಸ್ತೀನಾ ಅಂತ ನನಗೇ ಆಶ್ಚರ್ಯವಾಯಿತು. ನಾನಂತೂ ಇಂದಿನಿಂದಲೇ ಆ್ಯಂಟಿಕ್ ಆಭರಣ ಪ್ರಿಯೆ ಆಗಿಬಿಟ್ಟಿದ್ದೇನೆ’ ಎಂದು ತಮ್ಮ ಬದಲಾದ ಆಭರಣ ಅಭಿರುಚಿ ಬಿಚ್ಚಿಟ್ಟರು ಅವರು.

‘ಇದುವರೆಗೆ ನಾನಾಗಲೀ, ನನ್ನ ತಾಯಿಯಾಗಲೀ ಯಾವುದೇ ಆಭರಣ ಮೇಳಕ್ಕೆ ಹೋಗಿಲ್ಲ. ಆದರೆ, ಈ ಬಾರಿ ಜ್ಯುವೆಲ್ಸ್ ಆಫ್ ಇಂಡಿಯಾದ ಪ್ರೀಮಿಯರ್ ಜ್ಯುವೆಲರಿ ಪ್ರದರ್ಶನಕ್ಕೆ ಖಂಡಿತಾ ಭೇಟಿ ಕೊಡ್ತೀನಿ. ಇಲ್ಲಿ 140ಕ್ಕೂ ಹೆಚ್ಚು ಆಭರಣ ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದು, ವಿವಿಧ ರಾಜ್ಯದ ವಿವಿಧ ವಿನ್ಯಾಸದ ಬಂಗಾರದೊಡವೆಗಳ ಪ್ರದರ್ಶನ ಮತ್ತು ಮಾರಾಟವಿದೆ. ನನಗೊಪ್ಪುವ ಆಭರಣಗಳನ್ನು ಇಲ್ಲಿ ಖರೀದಿಸುತ್ತೇನೆ’ ಎಂದು ಮಾಹಿತಿ ನೀಡಿದರು.

‘ನನ್ನ ಆಯ್ಕೆ, ಅಭಿರುಚಿ ಬಗ್ಗೆ ಅಮ್ಮನಿಗೆ ಮೆಚ್ಚುಗೆ ಇದೆ. ಆದರೆ, ಬಂಗಾರ ಜಾಸ್ತಿ ಇರಬೇಕು ಅನ್ನೋದು ಅವರ ಕಂಡೀಷನ್. ಅಲಂಕಾರ ಪ್ರಿಯೆ ಹೆಣ್ಣಿಗೆ ಆಭರಣಗಳು ಸೌಂದರ್ಯವರ್ಧಕಗಳಷ್ಟೇ ಅಲ್ಲ, ಆಪತ್ಕಾಲಕ್ಕೆ ಒದಗುವ ಬಂಧುವೂ ಹೌದು ಅನ್ನೋದು ನನ್ನ ನಂಬಿಕೆ. ನನಗೆ ಮತ್ತು ಅಮ್ಮನಿಗೆ ಆಭರಣಗಳ ಮೋಹ ಇದ್ದಿದ್ದೇ. ಆದರೆ, ಮಗಳು ಶಮಿಕಾ ಕುಮಾರಸ್ವಾಮಿ ಮಾತ್ರ ಇದಕ್ಕೆ ಸ್ವಲ್ಪ ವಿರುದ್ಧ. ಅವಳದ್ದು ಟಾಮ್ ಬಾಯ್ ರೀತಿಯ ಸ್ವಭಾವ. ಹಾಗಾಗಿ, ನಿತ್ಯ ಸಣ್ಣ ಕಿವಿಯೋಲೆ ಮಾತ್ರ ಧರಿಸುತ್ತಾಳೆ. ಒಮ್ಮೊಮ್ಮೆ ಅದನ್ನೂ ಹಾಕಲು ಇಷ್ಟಪಡೋದಿಲ್ಲ. ಮೊನ್ನೆ ಕೃಷ್ಣ ಜನ್ಮಾಷ್ಟಮಿ ದಿನ ಯಶೋದೆಯಂತೆ ಅಲಂಕರಿಸಿಕೊಂಡಾಗ ಇಷ್ಟಪಟ್ಟು ಆಭರಣ ಧರಿಸಿದ್ದಳು’ ಎನ್ನುತ್ತಾ ಮಾತು ಮುಗಿಸಿದರು ರಾಧಿಕಾ.

ಜ್ಯುವೆಲ್ಸ್‌ ಆಫ್ ಇಂಡಿಯಾ ಆಭರಣ ಮೇಳ: ಅಕ್ಟೋಬರ್ 26ರಿಂದ 29ರ ತನಕ. ಸ್ಥಳ: ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನ, ಯು.ಬಿ.ಸಿಟಿ ಎದುರು, ಉಚಿತ ಪ್ರವೇಶ

ಅಜ್ಜಿ ಕೊಟ್ಟ ಮೊದಲ ಒಡವೆ

‘ನಾನು ಚಿಕ್ಕವಳಿದ್ದಾಗ ನಮ್ಮಜ್ಜಿ ನನಗೆ ಪುಟ್ಟ ಕಿವಿಯೋಲೆ ಉಡುಗೊರೆಯಾಗಿ ಕೊಟ್ಟಿದ್ದರು. ಅದುವೇ ನಾನು ಧರಿಸಿದ ಮೊದಲ ಚಿನ್ನದೊಡವೆ. ಈಗಲೂ ಅದನ್ನು ನಾನು ಜೋಪಾನವಾಗಿಟ್ಟುಕೊಂಡಿರುವೆ. ಆಗಾಗ ಅದನ್ನು ಧರಿಸಿ ಖುಷಿಪಡುತ್ತೇನೆ’

–ರಾಧಿಕಾ ಕುಮಾರಸ್ವಾಮಿ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.