ADVERTISEMENT

ಅಂಕೆಗೆ ಸಿಗದ ಸೈನಿಕ ಹುಳುವಿನ ಬಾಧೆ

ಸಾವಿರಾರು ಎಕರೆಯಲ್ಲಿ ಬೆಳೆ ನಾಶ: ಆತಂಕದಲ್ಲಿ ರೈತರು

ಡಿ.ಶ್ರೀನಿವಾಸ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ಅಂಕೆಗೆ ಸಿಗದ ಸೈನಿಕ ಹುಳುವಿನ ಬಾಧೆ
ಅಂಕೆಗೆ ಸಿಗದ ಸೈನಿಕ ಹುಳುವಿನ ಬಾಧೆ   

ಜಗಳೂರು: ಸತತ ಮೂರು ವರ್ಷಗಳ ಬರದಿಂದ ಕಂಗೆಟ್ಟಿದ್ದ ತಾಲ್ಲೂಕಿನಲ್ಲಿ ಈ ಬಾರಿ ಸಮೃದ್ಧ ಮಳೆಯಿಂದಾಗಿ ಉತ್ತಮ ಇಳುವರಿಯ ನಿರೀಕ್ಷೆ ಮೂಡಿತ್ತು. ಈ ಸಮಯದಲ್ಲೇ ಬೆಳೆಗಳ ಮೇಲೆ ಸೈನಿಕ ಹುಳುಗಳ ಬಾಧೆ ಬರಸಿಡಿಲಿನಂತೆ ಎರಗಿದೆ.

ರಾತ್ರೋರಾತ್ರಿ ಬೆಳೆಗಳ ಮೇಲೆ ದಾಳಿಯಿಟ್ಟಿರುವ ಹುಳುಗಳ ಹಾವಳಿಯಿಂದ ಈ ಭಾಗದ ರೈತರಲ್ಲಿ ಹಬ್ಬದ ಸಡಗರ ಮರೆಯಾಗಿದ್ದು, ಆತಂಕ ಮನೆಮಾಡಿದೆ. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿರುವ ಎಲ್ಲ ರೀತಿಯ ಬೆಳೆಗಳ ಮೇಲೂ ಈ ಹುಳುಗಳು ದಾಳಿ ನಡೆಸಿವೆ.

ದಿನ ಬೆಳಗಾಗುವುದರ ಒಳಗೆ ದ್ವಿಗುಣಗೊಳ್ಳುತ್ತಿರುವ ಹುಳುಗಳು ಗ್ರಾಮಗಳ ಗಡಿಗಳನ್ನು ದಾಟುತ್ತ ಜಮೀನುಗಳಿಗೆ ಮುತ್ತಿಗೆ ಹಾಕುತ್ತಿವೆ.

ADVERTISEMENT

ಸಮೃದ್ಧವಾಗಿ ಬೆಳೆದಿರುವ ಮೆಕ್ಕೆಜೋಳ, ಶೇಂಗಾ, ರಾಗಿ ಮುಂತಾದ ಬೆಳೆಗಳ ಎಲೆ ಮತ್ತು ಕಾಂಡಗಳನ್ನು ಬುಡದಿಂದ ತುದಿಯವರೆಗೆ ಒಂದೇ ದಿನದಲ್ಲಿ ತಿಂದು ಹಾಕುತ್ತಿದ್ದು, ರೈತರು ಮತ್ತು ಕೃಷಿ ತಜ್ಞರಿಗೆ ಸವಾಲಾಗಿ ಪರಿಣಮಿಸಿವೆ.

ತಾಲ್ಲೂಕಿನ ಬಿಳಿಚೋಡು ಹೋಬಳಿಯ ಪಲ್ಲಾಗಟ್ಟೆ, ಅಸಗೋಡು, ಧರಂಪುರ, ಓಬಳಾಪುರ, ಮರಿಕುಂಟೆ, ಗೋಡೆ, ದಿದ್ದಿಗಿ, ಹುಚ್ಚಂಗಿಪುರ, ಪಾಲನಾಯಕನ ಕೋಟೆ, ಕಲ್ಲಳ್ಳಿ, ಉರ್ಲಕಟ್ಟೆ ವ್ಯಾಪ್ತಿಯ ಹೊಲಗಳಲ್ಲಿ ಹುಳು ಬಾಧೆ ಕಾಣಿಸಿಕೊಂಡು ಸಾವಿರಾರು ಎಕರೆಯಲ್ಲಿನ ಬೆಳೆಯನ್ನು ಮುಕ್ಕುತ್ತಿವೆ.

ಪಕ್ಕದ ಸೊಕ್ಕೆ ಹೋಬಳಿ ಮತ್ತು ಕಸಬಾ ಹೋಬಳಿಗೂ ಸೈನಿಕ ಹುಳುಗಳ ದಾಳಿ ವಿಸ್ತರಿಸುತ್ತಿದ್ದು, ರೈತರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

‘ಮೆಕ್ಕೆಜೋಳ ಮತ್ತು ಶೇಂಗಾ ಬೆಳೆ ಕಣ್ಣು ಕುಕ್ಕುವಂತಿತ್ತು. ಎರಡು ದಿನಗಳ ಹಿಂದೆ ಏಕಾಏಕಿ ಹುಳುಗಳು ಹೊಲವನ್ನೆಲ್ಲಾ ಮುತ್ತಿಕೊಂಡು ಎಲೆಗಳನ್ನು ಸಂಪೂರ್ಣ ತಿಂದು ಹಾಕಿವೆ. ಕೃಷಿ ಅಧಿಕಾರಿಗಳು ಹೇಳಿದ ಔಷಧಿ ಹೊಡೆದರೂ ಪ್ರಯೋಜನವಾಗಿಲ್ಲ.

ಅಪರೂಪಕ್ಕೆ ಒಳ್ಳೆಯ ಮಳೆ ಬಂದಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಸಾಲ ಮೈಮೇಲೆ ಬರುವಂತಾಗಿದೆ’ ಎಂದು ತಾಲ್ಲೂಕಿನ ಅಸಗೋಡು ಧರಂಪುರ ಗ್ರಾಮದ ರೈತ ಶೇಖರಪ್ಪ ‘ಪ್ರಜಾವಾಣಿ’ಯೊಂದಿಗೆ ಆತಂಕ ವ್ಯಕ್ತಪಡಿಸಿದರು.

**

‘ಹರಡದಂತೆ ಎಚ್ಚರಿಕೆ ವಹಿಸಿ’

‘ಜಿಲ್ಲೆಯಲ್ಲಿ ಲದ್ದಿ ಅಥವಾ ಸೈನಿಕ ಹುಳು ಹಾವಳಿ ಕಂಡು ಬಂದಿದೆ. ಹುಳು ಸಂತತಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತದೆ. ನಿಯಂತ್ರಣಕ್ಕಾಗಿ ಬೆಲ್ಲವನ್ನು ಪುಡಿಮಾಡಿ ನೀರು ಮತ್ತು ಮೊನೊಕ್ರೊಟೋಪಾಸ್‌ ಮಿಶ್ರಣ ಮಾಡಿ 50 ಕೆ.ಜಿ ನೆಲ್ಲುಹೊಟ್ಟು ಸೇರಿಸಿ ಹದಕ್ಕೆ ಕಲೆಸಬೇಕು. ಗಾಳಿಯಾಡದ ಡ್ರಮ್‌ನಲ್ಲಿ 24 ಗಂಟೆ ಇಡಬೇಕು. ಹೀಗೆ ತಯಾರಿಸಿದ ಮಿಶ್ರಣವನ್ನು ಸಂಜೆ 4 ಗಂಟೆಯ ನಂತರ ಹೊಲದಲ್ಲಿ ಎರಚಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಟಿ. ಬಸಣ್ಣ ರೈತರಿಗೆ ಸಲಹೆ ನೀಡಿದ್ದಾರೆ.

ಹುಳುಗಳು ಹೊಲದಿಂದ ಹೊಲಕ್ಕೆ ಹೋಗುವುದನ್ನು ನಿಯಂತ್ರಿಸಲು ಹೊಲದ ಸುತ್ತಲೂ ಬದು ತೆಗೆಯಬೇಕು. ಅದರಲ್ಲಿ ಫೆನ್ವಲರೇಟ್‌ ಅಥವಾ ಮ್ಯಾಲಥಿಯಾನ್‌ ಹುಡಿ ಹಾಕಬೇಕು. ಹೆಲಿಕೋವೆರ್ಪ ಕೀಟ ಕಂಡುಬಂದಲ್ಲಿ ಎಮಮೆಕ್ಟಿನ್ ಬೆನ್ಜೊಟ್‌ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ಸಮೀಪದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.