ADVERTISEMENT

ಅಗತ್ಯ ಸರಕುಗಳ ಆಮದು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಸಣ್ಣ ಉದ್ದಿಮೆಗಳು ಮತ್ತು ಕೃಷಿಕರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡಬಹುದಾದ ಸೂಕ್ಷ್ಮ ಅಗತ್ಯ ಸರಕುಗಳ ಆಮದು ಪ್ರಮಾಣವು ಈ ವರ್ಷದ ಏಪ್ರಿಲ್ - ಜುಲೈ ಅವಧಿಯಲ್ಲಿ ಶೇ 38ರಷ್ಟು ಹೆಚ್ಚಳಗೊಂಡಿದೆ.

ದೇಶದ ಅರ್ಥ ವ್ಯವಸ್ಥೆಯು ಎರಡಂಕಿಯ ಹಣದುಬ್ಬರದ ಸಂಕಷ್ಟ ಎದುರಿಸುತ್ತಿರುವಾಗ, ಈ ಆಮದು ಸರಕುಗಳ ಪ್ರಮಾಣವೂ ಹೆಚ್ಚಳಗೊಂಡಿದೆ. ಅದರಲ್ಲೂ ವಿಶೇಷವಾಗಿ ಖಾದ್ಯತೈಲ, ಹಣ್ಣು ಮತ್ತು ತರಕಾರಿಗಳ ಆಮದು ಏರಿಕೆಯಾಗಿದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದಲೇ ಹೆಚ್ಚಾಗಿ ಈ ಸರಕುಗಳನ್ನು ತರಿಸಿಕೊಳ್ಳಲಾಗಿದೆ.

2011-12ನೇ ಸಾಲಿನ ಮೊದಲ ನಾಲ್ಕು ತಿಂಗಳಲ್ಲಿ ಆಮದು ಮಾಡಿಕೊಂಡಿರುವ ಸರಕುಗಳ ಮೊತ್ತವು  ರೂ 31,692 ಕೋಟಿಗಳಷ್ಟಾಗಿದೆ.  ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ಮೊತ್ತವು ರೂ 23,039 ಕೋಟಿಗಳಷ್ಟಿತ್ತು.ಖಾದ್ಯ ತೈಲದ ಆಮದು (್ಙ 8,764 ಕೋಟಿ) ಗರಿಷ್ಠ ಪ್ರಮಾಣದ ಹೆಚ್ಚಳ (ಶೇ 63ರಷ್ಟು) ದಾಖಲಿಸಿದೆ. ಖಾದ್ಯ ತೈಲ ಬಳಕೆಯ ಅತಿ ದೊಡ್ಡ ದೇಶವಾಗಿರುವ ಭಾರತ, ಗರಿಷ್ಠ ಪ್ರಮಾಣದಲ್ಲಿಯೂ ಆಮದು ಮಾಡಿಕೊಳ್ಳುತ್ತದೆ. ಹಣ್ಣು, ತರಕಾರಿ ಆಮದು ಶೇ 45ರಷ್ಟು (್ಙ 3,153 ಕೋಟಿ) ಮತ್ತು ಸಂಬಾರ ಪದಾರ್ಥಗಳು ಶೇ 58ರಷ್ಟು (್ಙ 477 ಕೋಟಿ) ಹೆಚ್ಚಳಗೊಂಡಿವೆ.

ಸಣ್ಣ ಕೈಗಾರಿಕೆಗಳು ತಯಾರಿಸುವ ಕೊಡೆ, ಬೀಗ, ಮಕ್ಕಳ ಆಟಿಕೆ ಸಾಮಾನು, ಗಾಜಿನ ಪದಾರ್ಥಗಳ ಆಮದು ಶೇ 50ರಷ್ಟು (್ಙ 660 ಕೋಟಿ) ಏರಿಕೆಯಾಗಿದೆ.

ಹಾಲು, ಚಹ ಮತ್ತು ಕಾಫಿ ಆಮದು ಪ್ರಮಾಣ ಮಾತ್ರ ಕಡಿಮೆಯಾಗಿದೆ. ಸಮೃದ್ಧ ಫಸಲಿನ ಕಾರಣಕ್ಕೆ ಆಹಾರ ಧಾನ್ಯಗಳ ಆಮದು ಕೂಡ ಶೇ 92ರಷ್ಟು ಕಡಿಮೆಯಾಗಿದೆ.

ಇಂಡೋನೇಷ್ಯಾ, ಚೀನಾ, ಮಲೇಷ್ಯಾ, ಅರ್ಜೆಂಟೀನಾ, ಜರ್ಮನಿ, ದಕ್ಷಿಣ ಕೊರಿಯಾ, ಅಮೆರಿಕ, ಕೆನಡಾ, ಜಪಾನ್, ಥಾಯ್ಲೆಂಡ್‌ನ ಆಮದು ಪ್ರಮಾಣ ಹೆಚ್ಚಳಗೊಂಡಿದ್ದರೆ, ಮ್ಯಾನ್ಮಾರ್ ಮತ್ತು ಆಸ್ಟ್ರೇಲಿಯಾದ ಆಮದು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.