ADVERTISEMENT

ಅಗ್ರಿಟೆಕ್ 2011 ಆರಂಭ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಬೆಂಗಳೂರು:ಕೃಷಿ ಉತ್ಪನ್ನಗಳು, ಕೃಷಿ ಸಲಕರಣೆಗಳು ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ಪ್ರದರ್ಶನ ಮೇಳ `ಅಗ್ರಿಟೆಕ್ ಇಂಡಿಯಾ 2011~ ಇಲ್ಲಿನ ಅರಮನೆ ಮೈದಾನದ `ಗಾಯತ್ರಿ ವಿಹಾರ~ದಲ್ಲಿ ಶುಕ್ರವಾರ ಆರಂಭವಾಯಿತು.

ಹಾಲೆಂಡ್, ಶ್ರೀಲಂಕಾ, ಭೂತಾನ್, ನೇಪಾಳ, ಬಾಂಗ್ಲಾದೇಶ ಸೇರಿದಂತೆ 16 ದೇಶಗಳ ಪ್ರತಿನಿಧಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಬೇರೆ ಬೇರೆ ರಾಜ್ಯಗಳ ರೈತ ಪ್ರತಿನಿಧಿಗಳು, ಧಾನ್ಯಗಳು ಮತ್ತು ಎಣ್ಣೆ ಕಾಳುಗಳ ಪ್ರದರ್ಶನವನ್ನು `ಗ್ರೇನ್ ಟೆಕ್ ಇಂಡಿಯಾ 2011~ ಎಂದು ಹೆಸರಿಸಲಾಗಿದೆ. ಆಹಾರ ಮತ್ತು ಪಾನೀಯ ಉತ್ಪನ್ನಗಳು, ಆಹಾರ ಸಂಸ್ಕರಣ ಯಂತ್ರಗಳ ಪ್ರದರ್ಶನವನ್ನು `ಫುಡೆಕ್ಸ್ 2011~ ಎಂದು ಹೆರಿಸಲಾಗಿದೆ.

ಪಶುಸಂಗೋಪನೆಗೆ ಅಗತ್ಯವಿರುವ ಉಪಕರಣಗಳು ಮತ್ತು ಪಶು ಉತ್ಪನ್ನಗಳ ಪ್ರದರ್ಶನವನ್ನು `ಡೈರಿ ಟೆಕ್ 2011~ ಎಂದು ಹೆಸರಿಸಲಾಗಿದೆ. ಆಂಧ್ರಪ್ರದೇಶ, ಛತ್ತೀಸ್‌ಗಡ, ಮೇಘಾಲಯ, ಕರ್ನಾಟಕ, ದೆಹಲಿ ಸರ್ಕಾರಗಳ ತೋಟಗಾರಿಕಾ ಇಲಾಖೆಗಳ ವಿವಿಧ ಸುಧಾರಿತ ತಳಿಗಳ ಪ್ರದರ್ಶನವೂ ಇದೆ.

ಕರ್ನಾಟಕ ಮೂಲದ ಕೃಷಿ ಉಪಕರಣಗಳ ತಯಾರಿಕಾ ಸಂಸ್ಥೆ ಅಗ್ರಿಮಾರ್ಟ್‌ನ ಮಳಿಗೆಯಲ್ಲಿ ಕಳೆ ತೆಗೆಯುವ ಯಂತ್ರ, ಕೀಟನಾಶಕ ಸಿಂಪರಣೆ ಮಾಡುವ ಯಂತ್ರ ಸೇರಿದಂತೆ 50ಕ್ಕೂ ಹೆಚ್ಚಿನ ಕೃಷಿ ಉಪಕರಣಗಳನ್ನು ಪ್ರದರ್ಶಿಸಲಾಗಿದೆ.

ಕೇಂದ್ರ ಕೃಷಿ ಇಲಾಖೆಯ ಅಧೀನ ಕಾರ್ಯದರ್ಶಿ ಸಾಧನಾ ಖನ್ನಾ, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಉಪ ಪ್ರಧಾನ ವ್ಯವಸ್ಥಾಪಕ ಆರ್. ರವೀಂದ್ರ ಮೇಳಕ್ಕೆ ಭೇಟಿ ನೀಡಿದರು. ಈ ಮೇಳ ಇದೇ ಭಾನುವಾರದವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.