ADVERTISEMENT

ಅಚ್ಚರಿ ಮೂಡಿಸಿದ ಆರ್‌ಬಿಐ ನೀತಿ

ಬಡ್ಡಿ ದರದಲ್ಲಿ ಯಥಾಸ್ಥಿತಿ; ಉದ್ಯಮ ವಲಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST
ಅಚ್ಚರಿ ಮೂಡಿಸಿದ ಆರ್‌ಬಿಐ ನೀತಿ
ಅಚ್ಚರಿ ಮೂಡಿಸಿದ ಆರ್‌ಬಿಐ ನೀತಿ   

ಮುಂಬೈ (ಪಿಟಿಐ): ಹೂಡಿಕೆದಾರರಿಗೆ, ಉದ್ಯಮಿಗಳಿಗೆ, ಆರ್ಥಿಕ ತಜ್ಞರಿಗೆ ಅನಿ­ರೀಕ್ಷಿತ ಅಚ್ಚರಿ ನೀಡಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಬುಧ­ವಾರ ಪ್ರಕಟಿಸಿದ ಮಧ್ಯಂ­ತರ ತ್ರೈಮಾಸಿಕ ಹಣಕಾಸು ನೀತಿಯಲ್ಲಿ ಬಡ್ಡಿ ದರದಲ್ಲಿ ಯಾವುದೇ ವ್ಯತ್ಯಾಸ ತರದೆ ಯಥಾಸ್ಥಿತಿ ಕಾಯ್ದು­ಕೊಂಡಿದೆ.

‘ಆರ್‌ಬಿಐ’ ಕ್ರಮದಿಂದ ಉದ್ಯಮ ವಲಯ ನಿಟ್ಟುಸಿರು ಬಿಟ್ಟಿದೆ. ದೇಶದ ಪ್ರಮುಖ ವಾಣಿಜ್ಯೋದ್ಯಮ ಸಂಸ್ಥೆ­ಗಳು, ರಿಯಲ್‌ ಎಸ್ಟೇಟ್‌ ಕಂಪೆನಿಗಳು, ಬ್ಯಾಂಕು­ಗಳು ಈ ಅನಿರೀಕ್ಷಿತ ನಡೆಯನ್ನು ಸ್ವಾಗತಿಸಿವೆ. ‘ಸದ್ಯಕ್ಕಂತೂ ಬಡ್ಡಿ ದರ ಪರಿಷ್ಕರಣೆ ಇಲ್ಲ. ಠೇವಣಿ ಬಡ್ಡಿ ದರ­ದಲ್ಲೂ ಕಡಿತ ಮಾಡುವುದಿಲ್ಲ’ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ)  ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಸ್ಪಷ್ಟಪಡಿ­ಸಿದ್ದಾರೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ (ಡಬ್ಲ್ಯುಪಿಐ) ದರ ನವೆಂಬರ್‌ನಲ್ಲಿ 14 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡ ಹಿನ್ನೆಲೆಯಲ್ಲಿ, ‘ಆರ್‌ಬಿಐ’ ಈ ಬಾರಿ ಖಂಡಿತ ಬಡ್ಡಿ ದರ ಏರಿಕೆ ಮಾಡ­­ಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದರು. ಆದರೆ, ಗವರ್ನರ್‌ ರಘುರಾಂ ರಾಜನ್‌ ‘ರೆಪೊ’ ದರದಲ್ಲಿ  ಯಾವುದೇ ವ್ಯತ್ಯಾಸ ಮಾಡದೆ ಶೇ 7.75ರಷ್ಟು ಯಥಾಸ್ಥಿತಿ ಉಳಿಸಿ­ಕೊಂ­ಡಿ­ದ್ದಾರೆ. ಶೇ 4ರಷ್ಟಿದ್ದ ನಗದು ಮೀಸಲು ಅನುಪಾತದಲ್ಲಿ ಯಾವುದೇ ವ್ಯತ್ಯಾಸ­ವಾಗಿಲ್ಲ.  
                                                                                                                                                        
ಲೋಪ ಸರಿಪಡಿಸಿ

‘ಹಣದುಬ್ಬರ ‘ಆರ್‌ಬಿಐ’ ಅಂದಾಜು ಮಾಡಿರುವ ಹಿತಕರ ಮಟ್ಟಕ್ಕಿಂತಲೂ ಹೆಚ್ಚಿದೆ. ಇದನ್ನು ತಗ್ಗಿಸಲು ಪೂರೈಕೆ  ಭಾಗದಲ್ಲಿನ ಲೋಪಗಳನ್ನು ಸರಿಪಡಿ­ಸಬೇಕು. ಉಗ್ರಾಣ, ಶೈತ್ಯಾಗಾರ, ಧಾನ್ಯ ಸಂಗ್ರಹ ಸೌಲಭ್ಯಗಳನ್ನು ಸುಧಾರಿ­ಸಬೇಕು. ಬಾಹ್ಯ ಸಂಗತಿಗಳಿಂದ ದೇಶದ ಹಣ­ಕಾಸು ಮಾರು­ಕಟ್ಟೆ­ಯಲ್ಲಿ ಬಿಕ್ಕಟ್ಟು ಮುಂದುವರಿದಿದೆ. ‘ಜಿಡಿಪಿ’ ಪ್ರಗತಿ ಕುಸಿದಿದೆ. ಸರ್ಕಾರ ವೆಚ್ಚ ಕಡಿತಕ್ಕೆ ಮುಂದಾದರೆ ‘ಜಿಡಿಪಿ’ ತನ್ನಿಂದ ತಾನೇ ಚೇತರಿಸಿಕೊಳ್ಳಲಿದೆ’ ಎಂದು ರಘುರಾಂ ರಾಜನ್‌ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

‘ಹಣದುಬ್ಬರ ಮತ್ತು ಆರ್ಥಿಕ ಪ್ರಗತಿ ನಡುವೆ ಸಮತೋಲನ ಕಾಯ್ದು­ಕೊಳ್ಳುವಂತೆ ‘ಆರ್‌ಬಿಐ’ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ’ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ  ಪ್ರಧಾನ ನಿರ್ದೇಶಕ ಚಂದ್ರಜಿತ್‌ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.     

‘ಆರ್‌ಬಿಐ’ ನಡೆ ಉದ್ಯಮ ವಲಯಕ್ಕೆ ಸಂತಸ ತಂದಿದ್ದು, ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ’ ಎಂದು ಭಾರ­ತೀಯ ವಾಣಿಜ್ಯೋದ್ಯಮ ಮಹಾಸಂಘ­ಗಳ ಒಕ್ಕೂಟದ (ಫಿಕ್ಕಿ) ಅಧ್ಯಕ್ಷೆ ನೈನಾ ಲಾಲ್‌ ಕಿದ್ವಾಯಿ ಪ್ರತಿಕ್ರಿಯಿಸಿದ್ದಾರೆ.

‘ಆರ್‌ಬಿಐ’ ಸಕಾರಾತ್ಮಕ ನಡೆಯಿಂದ ಈಗ ಬ್ಯಾಂಕುಗಳು ಬಡ್ಡಿ ದರ ಕಡಿತ ಸಾಧ್ಯತೆ ಕುರಿತು ಚಿಂತಿಸಬಹುದು. ಇದರಿಂದ ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನ ಲಭಿಸಲಿದೆ’ ಎಂದು ‘ಅಸೋಚಾಂ’ ಅಧ್ಯಕ್ಷ ರಾಣಾ ಕಪೂರ್‌ ಅಭಿಪ್ರಾಯಪಟ್ಟಿದ್ದಾರೆ.

‘ಇದು ಆರ್‌ಬಿಐನ ದಿಟ್ಟ ಹೆಜ್ಜೆ. ಈ ಕ್ರಮವನ್ನು ನಾವು ಸ್ವಾಗತಿಸುತ್ತೇವೆ’ ಎಂದು ‘ಡಿಎಲ್‌­ಎಫ್‌’ನ ಕಾರ್ಯ­ನಿರ್ವಾಹಕ ನಿರ್ದೇ­ಶಕ ರಾಜೀವ್‌ ತಲ್ವಾರ್‌ ಹೇಳಿದ್ದಾರೆ.

‘ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದು­ಕೊಂ­ಡಿರುವುದು ಆರ್ಥಿಕ ವೃದ್ಧಿಗೆ ಚೇತರಿಕೆ ನೀಡಲಿದೆ. ಇದು ಅತ್ಯುತ್ತಮ ನಿರ್ಧಾರ’ ಎಂದು ಕೇಂದ್ರ ಯೋಜನಾ ಆಯೋಗದ ಉಪಾ­ಧ್ಯಕ್ಷ ಮೊಂಟೆಕ್‌ ಸಿಂಗ್‌ ಅಹ್ಲು­ವಾಲಿಯಾ ಅಭಿಪ್ರಾಯ­ಪಟ್ಟಿದ್ದಾರೆ.

ಮುಂದಿನ ಹಣಕಾಸು ನೀತಿ ಜನವರಿ 28ರಂದು ಪ್ರಕಟಗೊಳ್ಳಲಿದೆ.

‘ಸಕಾಲವಲ್ಲ’
ಮುಂಬೈ (ಪಿಟಿಐ):
ಚಾಲ್ತಿ ಖಾತೆ ಕೊರತೆ (ಸಿಎಡಿ) ತಗ್ಗಿಸಲು ಹೇರಿದ್ದ ನಿರ್ಬಂಧಗಳನ್ನು ವಾಪಸ್‌ ಪಡೆಯಲು ಇದು ಸಕಾಲವಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.

‘ಪ್ರಸಕ್ತ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ‘ಸಿಎಡಿ’ ‘ಜಿಡಿಪಿ’ಯ ಶೇ 1.8ಕ್ಕೆ ತಗ್ಗಿದೆ. ಆದರೆ, ನಿಯಂತ್ರಣ ಕ್ರಮಗಳನ್ನು ವಾಪಸ್‌ ಪಡೆಯಲು ಇನ್ನೂ ಸಮಯವಾಗಿಲ್ಲ.  ಇಷ್ಟು ಬೇಗ ನಿಯಂತ್ರಣ ಕ್ರಮಗಳನ್ನು ವಾಪಸ್‌ ಪಡೆದರೆ, ಹಣಕಾಸು ಮಾರುಕಟ್ಟೆ­ಯಲ್ಲಿ ಮತ್ತೆ ಅಸ್ಥಿರತೆ ಮೂಡುತ್ತದೆ. ಆದರೆ, ರಫ್ತು ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಚಿನ್ನದ ಆಮದು ಮೇಲಿನ ನಿಯಂತ್ರಣ ಹಿಂಪಡೆಯುವ ಕುರಿತು ಪರಿಶೀಲಿಸಲಾ­ಗುವುದು’ ಎಂದು ಗವರ್ನರ್‌ ರಘುರಾಂ ರಾಜನ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT