ADVERTISEMENT

ಅನಪೇಕ್ಷಿತ ಕರೆ ಕಿರಿಕಿರಿ ರದ್ದು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಟೆಲಿ ಮಾರುಕಟ್ಟೆ ಕಂಪೆನಿಗಳಿಂದ ಬರುವ ಅನಪೇಕ್ಷಿತ ವಾಣಿಜ್ಯ ಕರೆ ಮತ್ತು ಎಸ್‌ಎಂಎಸ್‌ಗಳಿಗೆ   ತೆರೆ ಬೀಳಲಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅನಪೇಕ್ಷಿತ ಕರೆ ನಿಷೇಧ ಜಾರಿಗೊಳಿಸಿದೆ.

ಈಗಾಗಲೇ ಅನಪೇಕ್ಷಿತ ಕರೆ ನಿಷೇಧಕ್ಕಾಗಿ ರಾಷ್ಟ್ರೀಯ ಗ್ರಾಹಕ ಆದ್ಯತಾ ನೋಂದಣಿಯಲ್ಲಿ (ಎನ್‌ಸಿಪಿಆರ್) `ಸಂಪೂರ್ಣ ಕರೆ ನಿಷೇಧ~ ವಿಭಾಗದಲ್ಲಿ ನೋಂದಾಯಿಸಿಕೊಂಡಿರುವ ಗ್ರಾಹಕರಿಗೆ ಇನ್ನು ಮುಂದೆ ಯಾವುದೇ ವಾಣಿಜ್ಯ ಕರೆಗಳು, ಎಸ್‌ಎಂಎಸ್‌ಗಳು ಬರುವುದಿಲ್ಲ. `ಟ್ರಾಯ್~ ನಿಬಂಧನೆಗಳನ್ನು ಉಲ್ಲಂಘಿಸಿ ಕಂಪೆನಿಗಳು ಕರೆ ಮಾಡಿದರೆ ಕನಿಷ್ಠ ರೂ25 ಸಾವಿರದಿಂದ ಗರಿಷ್ಠ ರೂ2.5 ಲಕ್ಷದವರೆಗೆ ದಂಡ ತೆತ್ತಬೇಕಾಗುತ್ತದೆ.

ಎಸ್‌ಎಂಎಸ್‌ಗೂ ಮಿತಿ: ಅನಪೇಕ್ಷಿತ ಕರೆ ನಿಷೇಧದ ಜತೆಗೆ  ಎಸ್‌ಎಂಎಸ್ ಮಿತಿ ಕೂಡ ಜಾರಿಯಾಗಿದೆ. ಇಂದಿನಿಂದ ಗ್ರಾಹಕರು ಒಂದು ಸಿಮ್‌ಕಾರ್ಡ್‌ನಿಂದ ದಿನವೊಂದಕ್ಕೆ 100 ಎಸ್‌ಎಂಎಸ್‌ಗಳನ್ನು ಮಾತ್ರ ಕಳುಹಿಸಬಹುದು. ದೂರವಾಣಿ ಸೇವಾ ಸಂಸ್ಥೆಗಳು ಸೋಮವಾರ ಮಧ್ಯರಾತ್ರಿಯಿಂದಲೇ ಈ ಮಿತಿಯನ್ನೂ ಜಾರಿಗೊಳಿಸಲು ಕ್ರಮ ಕೈಗೊಂಡಿವೆ.

ಬ್ಯಾಂಕಿಂಗ್, ಹಣಕಾಸು ಸೇವೆಗಳು, ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ ಸೇರಿದಂತೆ  ವಾಣಿಜ್ಯ ಕರೆಗಳನ್ನು ಎಂಟು ವಿಭಾಗಗಳಲ್ಲಿ `ಟ್ರಾಯ್~ ಗುರುತಿಸಿದೆ. ಗ್ರಾಹಕರು ತಮಗೆ ಇಷ್ಟವಾದ ಸೇವೆಗಳನ್ನು ಮಾತ್ರ ಪಡೆಯುವ ಉಳಿದವುಗಳ ಮೇಲೆ ನಿಷೇಧ ಹೇರುವ ಅವಕಾಶವೂ ಇದೆ.

ಯಾವುದೇ ವಾಣಿಜ್ಯ ಕರೆ ಎಸ್‌ಎಂಎಸ್ ಬೇಡದಿದ್ದಲ್ಲಿ  ‘START0 ಎಂದು ಟೈಪ್ ಮಾಡಿ 1909ಕ್ಕೆ ಎಸ್‌ಎಂಎಸ್ ಕಳುಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.