ವಾಷಿಂಗ್ಟನ್ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ (2015–16) ಭಾರತ ಶೇ 7.5ರಷ್ಟು ಜಿಡಿಪಿ ಪ್ರಗತಿ ಸಾಧಿಸಲಿದ್ದು, ಚೀನಾವನ್ನೂ ಹಿಂದಿಕ್ಕಲಿದೆ. ಈ ಮೂಲಕ ಮೊಟ್ಟ ಮೊದಲಿಗೆ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಗೆ ಬರಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
2015–16ರಲ್ಲಿ ಜಿಡಿಪಿ ಪ್ರಗತಿ ಶೇ 7.5ರಷ್ಟನ್ನು ಅಂದಾಜು ಮಾಡಲಾಗಿದೆ. ಈ ಪ್ರಗತಿ ಸಾಧ್ಯವಾದರೆ ವಿಶ್ವ ಬ್ಯಾಂಕ್‌ನ ಪ್ರಮುಖ ಅರ್ಥ ವ್ಯವಸ್ಥೆಗಳ ಪ್ರಗತಿ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆದುಕೊಳ್ಳಲಿದೆ ಎಂದು ವಿಶ್ವ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಹಿರಿಯ ಉಪಾಧ್ಯಕ್ಷ ಕೌಶಿಕ್ ಬಸು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಆರ್ಥಿಕ ಮುನ್ನೋಟದ (ಜಿಇಪಿ) ವರದಿಯನ್ನು ಗುರುವಾರ ಇಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಶೇ 4.4ರಷ್ಟು ಪ್ರಮಾಣದಲ್ಲಿ ಪ್ರಗತಿ ಕಾಣುವ ಅಂದಾಜಿದೆ. 2016ರಲ್ಲಿ ಶೇ 5.2ರಷ್ಟು ಮತ್ತು 2017ರಲ್ಲಿ ಶೇ 5.4ರ ದರದಲ್ಲಿ ಪ್ರಗತಿ ಸಾಧಿಸಲಿವೆ ಎಂದು ವರದಿ ತಿಳಿಸಿದೆ.
ಚೀನಾದ ಆರ್ಥಿಕತೆ ಮಂದಗತಿ ಬೆಳವಣಿಗೆ ಕಾಣುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟಕೊಂಡು ನೋಡುವುದಾದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7.1ರಷ್ಟು ಜಿಡಿಪಿ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ. ಅದೇ, ಭಾರತದ ಅರ್ಥ ವ್ಯವಸ್ಥೆಯನ್ನು ಗಮನಿಸಿದರೆ, ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಸುಧಾ ರಣಾ ಕ್ರಮಗಳು ಉತ್ತೇಜನಕಾರಿಯಾಗಿವೆ.
ಹಾಗೂ ಕಚ್ಚಾತೈಲ ಬೆಲೆ ಇಳಿಮುಖವಾಗಿರುವುದೂ ಸಹ ಅರ್ಥವ್ಯವಸ್ಥೆಯ ಆತಂಕವನ್ನು ಕಡಿಮೆ ಮಾಡಿದೆ. ಈ ಅಂಶಗಳು ಉತ್ತಮ ಆರ್ಥಿಕ ಪ್ರಗತಿಯ ವಿಶ್ವಾಸವನ್ನು ಮೂಡಿಸಿವೆ. ಇದರಿಂದ 2015–16ನೇ ಹಣಕಾಸು ವರ್ಷದಲ್ಲಿಯೇ ಶೇ 7.5ರಷ್ಟು ಜಿಡಿಪಿ ಸಾಧ್ಯವಾಗಲಿದೆ ಎಂದು ವರದಿ ವಿಶ್ವಾಸ ವ್ಯಕ್ತಪಡಿಸಿದೆ.
ಬಹಳ ನಿಧಾನವಾಗಿಯಾದರೂ ಸಹ ಜಾಗತಿಕ ಆರ್ಥಿಕತೆಯಲ್ಲಿ ಬದಲಾವಣೆ ಆಗಲಿದೆ. ಉತ್ತಮ ಜಿಡಿಪಿ ಪ್ರಗತಿ ಮೂಲಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಚೀನಾ, ಇದೀಗ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ. ಅದರ ಜಿಡಿಪಿ ಪ್ರಗತಿಯೂ ಇಳಿಮುಖವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 7.1ರಷ್ಟು ಜಿಡಿಪಿ ಪ್ರಗತಿ ಕಾಣುವ ಪ್ರಯತ್ನ ನಡೆಸಿದೆ. ಬ್ರೆಜಿಲ್‌ನಲ್ಲಿ ಭ್ರಷ್ಟಾಚಾರ ಹಗರಣಗಳು ಆರ್ಥಿಕ ಹಿನ್ನಡೆಗೆ ಕಾರಣವಾಗುತ್ತಿವೆ ಎಂದು ಬಸು ವಿವರಿಸಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಸ್ಥಿರತೆ: ಭಾರತದ ಆರ್ಥ ವ್ಯವಸ್ಥೆಯ ಚೇತರಿಕೆ ಮತ್ತು ಗರಿಷ್ಠ ಆದಾಯ ಹೊಂದಿರುವ ದೇಶಗಳ ಬೆಂಬಲದಿಂದ ಈ ವರ್ಷ ದಕ್ಷಿಣ ಏಷ್ಯಾದಲ್ಲಿ ಜಿಡಿಪಿ ಪ್ರಗತಿ ಶೇ 7.1ರಷ್ಟು ಸ್ಥಿರವಾದ ಮಾರ್ಗದಲ್ಲೇ ಸಾಗಲಿದೆ ಎಂದು ವರದಿ ಹೇಳಿದೆ.
ತೈಲ ಬೆಲೆ ಇಳಿಕೆ ಪ್ರಭಾವ: ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆ, ದಕ್ಷಿಣ ಏಷ್ಯಾ ದೇಶಗಳ ಆರ್ಥಿಕ ಅಭಿವೃದ್ಧಿ ಮತ್ತು ಚಾಲ್ತಿ ಖಾತೆ ಕೊರತೆಯ (ಆಮದು-ರಫ್ತು ಅಂತರ) ಬೆಳವಣಿಗೆಗೆ ಮುಖ್ಯ ಕಾರಣವಾಗಿವೆ.
ಬಂಡವಾಳ ಆಕರ್ಷಣೆ: ಭಾರತದಲ್ಲಿ ವ್ಯಾಪಾರ–ವಹಿವಾಟು ನಡೆಸಲು ಪೂರಕ ವಾತಾವರಣ ಸೃಷ್ಟಿಸುವುದು ಮತ್ತು ಹೂಡಿಕೆದಾರರ ವಿಶ್ವಾಸ ಗಳಿಸಿಕೊಂಡಿರುವುದರಿಂದ ದೇಶಕ್ಕೆ ಹೆಚ್ಚು ಬಂಡವಾಳ ಹರಿದುಬರಲಿದೆ. ಇದು ಜಿಡಿಪಿಯನ್ನು ಶೇ 7.5ಕ್ಕೇರಿಸಲು ನೆರವಾಗಲಿದೆ ಎಂದು ವರದಿ ವಿವರಿಸಿದೆ.
2015ರಲ್ಲಿ ಹೊಸ ಸವಾಲುಗಳು: ಕಚ್ಚಾತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಕಡಿಮೆ ಆಗಿರುವುದರಿಂದ, ಅಭಿವೃದ್ಧಿ ಹೊಂದುತ್ತಿರುವ ದೇಶಗಳು 2015ರಲ್ಲಿ ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ, ಸಾಲದ ಮೇಲೆ ಗರಿಷ್ಠ ಬಡ್ಡಿದರ ವಿಧಿಸಬೇಕಾಗುತ್ತದೆ ಎಂದು ವಿಶ್ವಬ್ಯಾಂಕ್ ಮುನ್ನೋಟ ವರದಿಯು ಗಮನ ಸೆಳೆದಿದೆ.
*
ಜಿಡಿಪಿ ಪ್ರಗತಿ
7.5% 2015–16 ರಲ್ಲಿ ಭಾರತದ ನಿರೀಕ್ಷೆ
7.1% 2015–16 ರಲ್ಲಿ ಚೀನಾದ ನಿರೀಕ್ಷೆ
7.1% 2015–16 ರಲ್ಲಿ ಒಟ್ಟಾರೆ ದಕ್ಷಿಣ ಏಷ್ಯಾದ ಪ್ರಗತಿ ನಿರೀಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.