ADVERTISEMENT

ಅಮೆರಿಕ ಷೇರುಪೇಟೆಯ ವಿಚಾರಣೆ ಎದುರಿಸಲಿರುವ ಚಂದಾ ಕೊಚ್ಚರ್‌

ಪಿಟಿಐ
Published 10 ಜೂನ್ 2018, 19:30 IST
Last Updated 10 ಜೂನ್ 2018, 19:30 IST

ನವದೆಹಲಿ: ಸಾಲ ಮಂಜೂರಾತಿಯಲ್ಲಿ ಲೋಪ ಎಸಗಿರುವ ಆರೋಪ ಎದುರಿಸುತ್ತಿರುವ ಐಸಿಐಸಿಐ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚರ್‌ ಅವರು, ಅಮೆರಿಕದ ಷೇರುಪೇಟೆಯ (ಎಸ್‌ಇಸಿ) ವಿಚಾರಣೆಗೂ ಗುರಿಯಾಗುವ ಸಾಧ್ಯತೆ ಇದೆ.

ಐಸಿಐಸಿಐ ಬ್ಯಾಂಕ್‌ನ ಷೇರುಗಳು ಅಮೆರಿಕದ ಷೇರು‍ಪೇಟೆಯಲ್ಲಿ ವಹಿವಾಟು ನಡೆಸುತ್ತಿರುವುದರಿಂದ ಅಲ್ಲಿನ ಷೇರುಪೇಟೆ ನಿಯಂತ್ರಣ ಸಂಸ್ಥೆಯಾಗಿರುವ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಕಮಿಷನ್‌ (ಎಸ್‌ಇಸಿ), ಭಾರತದ ಷೇರುಪೇಟೆ ನಿಯಂತ್ರಣ ಸಂಸ್ಥೆಯಿಂದ (ಸೆಬಿ) ಹೆಚ್ಚುವರಿ ಮಾಹಿತಿ ಕೇಳಲಿದೆ.

ವಿಡಿಯೊಕಾನ್‌ ಸಮೂಹಕ್ಕೆ 2012ರಲ್ಲಿ ₹ 3,250 ಕೋಟಿ ಸಾಲ ನೀಡಿಕೆಯಲ್ಲಿ ಹಿತಾಸಕ್ತಿ ಸಂಘರ್ಷ, ಸ್ವಜನ ಪಕ್ಷಪಾತ ಮತ್ತು ಪರಸ್ಪರ ಕೊಡು–ತೆಗೆದುಕೊಳ್ಳುವ ವ್ಯವಹಾರ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ADVERTISEMENT

ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕಂಪನಿ ವ್ಯವಹಾರ ಸಚಿವಾಲಯ ಈ ಆರೋಪಗಳನ್ನು ಪರಿಶೀಲಿಸುತ್ತಿವೆ. ಸಿಬಿಐ, ಈಗಾಗಲೇ ಚಂದಾ ಕೊಚ್ಚರ್‌ ಅವರ ಪತಿ ದೀಪಕ್‌ ಕೊಚ್ಚರ್‌ ಮತ್ತು ಇತರರ ವಿರುದ್ಧ ಪೂರ್ವಭಾವಿ ವಿಚಾರಣೆಗೆ ಚಾಲನೆ ನೀಡಿದೆ. ದೀಪಕ್‌ ಅವರ ಸೋದರನನ್ನು ಏಪ್ರಿಲ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು.

ಬ್ಯಾಂಕ್‌ ಮಂಜೂರು ಮಾಡಿದ ಸಾಲಗಳಿಗೆ ಪ್ರತಿಯಾಗಿ ದೀಪಕ್‌ ಕೊಚ್ಚರ್‌ ಅವರು ಸಾಲಗಾರರಿಂದ ಹಣಕಾಸಿನ ಪ್ರಯೋಜನ ಪಡೆದಿರುವ ಆರೋಪಗಳಿವೆ.

ಇವೆಲ್ಲವುಗಳ ಜತೆಗೆ, ದೀಪಕ್‌ ಒಡೆತನದ ಎನ್‌ಯುಪವರ್‌ ಸಂಸ್ಥೆಯು ಮಾರಿಷಸ್‌ನ ಫಸ್ಟ್‌ಲ್ಯಾಂಡ್‌ ಹೋಲ್ಡಿಂಗ್ಸ್‌ನಿಂದ ₹ 325 ಕೋಟಿಗಳಷ್ಟು ಬಂಡವಾಳ ನೆರವು ಪಡೆದಿದೆ ಎನ್ನುವ ಆರೋಪವೂ ಇದೆ. ಎಸ್ಸಾರ್‌ ಗ್ರೂಪ್‌ನ ಸಹ ಸ್ಥಾಪಕ ರವಿ ರೂಯಿಯಾ ಅವರ ಅಳಿಯ ನಿಶಾಂತ್‌ ಕನೊಡಿಯಾ ಅವರ ಒಡೆತನಕ್ಕೆ ಈ ಸಂಸ್ಥೆ ಸೇರಿದೆ. ಫಸ್ಟ್‌ಲ್ಯಾಂಡ್‌ ಹೋಲ್ಡಿಂಗ್ಸ್‌ನಲ್ಲಿ ತನ್ನ ಯಾವುದೇ ವಹಿವಾಟು ಇಲ್ಲ ಎಂದು ಎಸ್ಸಾರ್‌ ಸಮೂಹ ಹೇಳಿಕೊಂಡಿದೆ.

ಸಿಇಒ ಚಂದಾ ಅವರ ವಿರುದ್ಧದ ಆರೋಪಗಳ ಕುರಿತು ಐಸಿಐಸಿಐ ಬ್ಯಾಂಕ್‌, ಸ್ವತಂತ್ರ ತನಿಖೆಗೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.