ADVERTISEMENT

ಅಸ್ಥಿರತೆ ಭೀತಿ: ಅಸೋಚಾಂ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ದೇಶೀಯ ಬೇಡಿಕೆ ಆರ್ಥಿಕತೆಗೆ ಬಲ ನೀಡಿದರೂ, ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಯೂರೋಪ್ ಸಾಲದ ಬಿಕ್ಕಟ್ಟು  ಕಳವಳಕಾರಿ ವಿದ್ಯಮಾನವಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಹೇಳಿದೆ.

`ಕಾರ್ಪೊರೇಟ್ ಕಂಪೆನಿಗಳ ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕ ಅವಧಿಯ ಹಣಕಾಸು ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಜಾಗತಿಕ ಸಂಗತಿಗಳು ಕಂಪೆನಿಗಳ ಪ್ರಗತಿಯ ಮೇಲೆ ಪರಿಣಾಮ ಬೀರಿವೆ ಎಂದು `ಅಸೋಚಾಂ~ ಹೇಳಿದೆ.

ದೇಶೀಯ ಮಟ್ಟದಲ್ಲಿ ಬಡ್ಡಿ ದರ ಏರಿಕೆ, ಹಣದುಬ್ಬರ ಹೆಚ್ಚಳ ಸೇರಿದಂತೆ ಹಲವು ಸಂಗತಿಗಳು ಆರ್ಥಿಕ ವೃದ್ಧಿ ದರದ ಮೇಲೆ ಪರಿಣಾಮ ಬೀರಿವೆ. ಆದರೆ, ಬೇಡಿಕೆ ಉತ್ತಮವಾಗಿರುವುದರಿಂದ ಮಾರುಕಟ್ಟೆ ಸ್ಥಿರವಾಗಿದೆ. ಆದರೆ, ಜಾಗತಿಕ ವಿದ್ಯಮಾನಗಳು ನಿರಂತರ ಒತ್ತಡ ಹೇರುತ್ತಿವೆ ಎಂದಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 2010ರಿಂದ  ಇಲ್ಲಿಯವರೆಗೆ ಸಾಲದ ಮೇಲಿನ ಮೂಲ ಬಡ್ಡಿ ದರವನ್ನು ಶೇ 3.75ರಷ್ಟು ಹೆಚ್ಚಿಸಿದೆ. ಕೇಂದ್ರೀಯ ಬ್ಯಾಂಕ್‌ನ ಅಲ್ಪಾವಧಿ ಬಡ್ಡಿ ದರಗಳ ಏರಿಕೆಯಿಂದ ಕೈಗಾರಿಕೆ, ತಯಾರಿಕೆ ಕ್ಷೇತ್ರದ ಪ್ರಗತಿ ಕುಂಠಿತವಾಗಿದೆ. ಇದರಿಂದ ಹೊಸ ಹೂಡಿಕೆಗಳು ಹರಿದು ಬರುತ್ತಿಲ್ಲ. ಹಲವು ಪ್ರಸ್ತಾವಿತ ಹೂಡಿಕೆಗಳು ನೆನೆಗುದಿಗೆ ಬಿದ್ದಿವೆ. ರಿಯಲ್ ಎಸ್ಟೇಟ್, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಸರಕುಗಳು (ಎಫ್‌ಎಂಸಿಜಿ), ವಾಹನ ಉದ್ಯಮ ಸೇರಿದಂತೆ ಹಲವು ರಂಗಗಳ ಪ್ರಗತಿ ಇಳಿಕೆಯಾಗಿದೆ ಎಂದು  `ಅಸೋಚಾಂ~ನ ಪ್ರಧಾನ ಕಾರ್ಯದರ್ಶಿ ಡಿ.ಎಸ್ ರಾವತ್ ಹೇಳಿದ್ದಾರೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಭಾರತದ ಉದ್ಯಮದ ರಂಗದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದ ಕಚ್ಚಾ ಸರಕುಗಳ ಆಮದು ದರ ಹೆಚ್ಚಿದೆ. ಕಳೆದ ಎರಡು ತಿಂಗಳಲ್ಲಿ ರೂಪಾಯಿ ಮೌಲ್ಯ ಶೇ 12ರಷ್ಟು ಇಳಿಕೆಯಾಗಿದೆ ಎಂದೂ  ರಾವತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.