ADVERTISEMENT

ಆದಾಯ ತೆರಿಗೆ ವಂಚನೆ: ವಿಶೇಷ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ನವದೆಹಲಿ (ಪಿಟಿಐ): ತೆರಿಗೆ ತಪ್ಪಿಸುವವರ ವಿರುದ್ಧ ಕ್ರಮಕೈಗೊಳ್ಳುವುದನ್ನು ತೀವ್ರಗೊಳಿಸಲು ನಿರ್ಧರಿಸಿರುವ ಆದಾಯ ತೆರಿಗೆ ಇಲಾಖೆಯು,  ಎರಡು ತಿಂಗಳ ಕಾಲ ವಿಶೇಷ ಕಾರ್ಯಾಚರಣೆ  ಹಮ್ಮಿಕೊಳ್ಳಲಿದೆ.

ಗರಿಷ್ಠ ಮೊತ್ತದ ವಹಿವಾಟಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ತೆರಿಗೆ ಅಧಿಕಾರಿಗಳು ತೆರಿಗೆದಾರರ ಕಚೇರಿ ಅಥವಾ ಮನೆಗೆ ಭೇಟಿ ನೀಡಿ ಅವರ ಆದಾಯದ ಮೂಲದ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

ಹೂಡಿಕೆ, ಠೇವಣಿ ಮತ್ತು ವೆಚ್ಚಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸದವರು ಮತ್ತು ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ನೀಡದವರ ವಹಿವಾಟನ್ನು ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ನೇರ ತೆರಿಗೆ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ನಿರ್ದೇಶನದ ಅನ್ವಯ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.

ಆಸ್ತಿ, ವಾಹನ, ಷೇರು, ಬಾಂಡ್ ಖರೀದಿ, ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿನ ಸ್ಥಿರ ಠೇವಣಿ ಮುಂತಾದ ವಹಿವಾಟು ಆದಾಯ ತೆರಿಗೆ ಇಲಾಖೆಯ ಪರಾಮರ್ಶೆಗೆ ಒಳಪಡಲಿದೆ.ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐ.ಟಿ ರಿಟರ್ನ್ಸ್) ಸಲ್ಲಿಸಿದ ಸಂದರ್ಭದಲ್ಲಿ ತಮ್ಮ ಆದಾಯದ ಮೂಲಗಳ ವಿವರ ನೀಡಿರುವುದನ್ನೂ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

ಎರಡು ತಿಂಗಳ ಕಾಲ ನಡೆಯಲಿರುವ ಈ ವಿಶೇಷ ಕಾರ್ಯಾಚರಣೆ ಫಲವಾಗಿ ತೆರಿಗೆ ಸಂಗ್ರಹ ಹೆಚ್ಚುವ ನಿರೀಕ್ಷೆ ಇದೆ.  ವಿತ್ತೀಯ ಕೊರತೆಯು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 4.6ರಷ್ಟು ಮೀರಬಾರದು ಎನ್ನುವ ಬಜೆಟ್ ಗುರಿ ಈಡೇರದ ಹಿನ್ನೆಲೆಯಲ್ಲಿ, ಉದ್ಭವಿಸಿರುವ ವಿತ್ತೀಯ ಕೊರತೆಯ ಅಂತರವನ್ನೂ ಇದು ತಗ್ಗಿಸಲಿದೆ.ವಿಶೇಷ ಕಾರ್ಯಾಚರಣೆ ಅಂಗವಾಗಿ ನೋಟಿಸ್ ಪಡೆಯುವವರು ತಮ್ಮ `ಪ್ಯಾನ್~ ಸಂಖ್ಯೆಯ ವಿವರ ನೀಡಬೇಕು. `ಪ್ಯಾನ್~ ಹೊಂದದವರು ಅದಕ್ಕಾಗಿ ತಕ್ಷಣ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ಸೂಚಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.