ADVERTISEMENT

ಆರೋಗ್ಯ ವಿಮೆ: ಉಳಿಕೆ ಮೊತ್ತ ಸರ್ಕಾರಕ್ಕೆ ವಾಪಸ್ ಪ್ರಸ್ತಾವ

ಪಿಟಿಐ
Published 3 ಮೇ 2018, 19:26 IST
Last Updated 3 ಮೇ 2018, 19:26 IST

ನವದೆಹಲಿ: ಆಯುಷ್ಮಾನ್‌ ಭಾರತ್‌ ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆಯಲ್ಲಿ (ಎನ್‌ಎಚ್‌ಪಿಎಂ) ವಿಮಾ ಕಂಪನಿಗಳು ವಿತರಿಸಿದ ಆರೋಗ್ಯ ವಿಮೆ ಮೊತ್ತವು (ಕ್ಲೇಮ್‌) ಸರ್ಕಾರ ಪಾವತಿಸಿದ ಕಂತಿನ ಮೊತ್ತಕ್ಕಿಂತ ಕಡಿಮೆ ಇದ್ದರೆ ಉಳಿಕೆ ಹಣವನ್ನು ಕಡ್ಡಾಯವಾಗಿ ವಾಪಸ್‌ ನೀಡಬೇಕು ಎಂಬ ಪ್ರಸ್ತಾವವನ್ನು ಕೇಂದ್ರ ಆರೋಗ್ಯ ಇಲಾಖೆ ಮುಂದಿಟ್ಟಿದೆ.

ಉದಾಹರಣೆಗೆ, ಸರ್ಕಾರವು ವಿಮಾ ಕಂತಿನ ರೂಪದಲ್ಲಿ ₹ 100 ಪಾವತಿಸಿರುತ್ತದೆ ಎಂದುಕೊಳ್ಳೋಣ. ದೇಶದಾದ್ಯಂತ ಜನರು ಪಡೆದುಕೊಂಡ ವಿಮೆ ಮೊತ್ತ ₹50 ಮಾತ್ರ ಆಗಿದ್ದರೆ, ₹35 ಅನ್ನು ವಿಮಾ ಕಂಪನಿಯು ಸರ್ಕಾರಕ್ಕೆ ವಾಪಸ್‌ ನೀಡಬೇಕು. ₹15ರಷ್ಟನ್ನು ಶುಲ್ಕವಾಗಿ ಉಳಿಸಿಕೊಳ್ಳಬಹುದು.

ಪ್ರಮುಖ ವಿಮಾ ಕಂಪನಿಗಳು ಮತ್ತು ಆಸ್ಪತ್ರೆಗಳ ಪ್ರತಿನಿಧಿಗಳ ಜತೆಗೆ ಈ ಪ್ರಸ್ತಾವವನ್ನು ಚರ್ಚಿಸಲಾಗಿದೆ. ‘ಎನ್‌ಎಚ್‌ಪಿಎಂ’ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಇದೇ ಒಂದರಂದು ಅಧಿಕಾರ ವಹಿಸಿಕೊಂಡ ಇಂದು ಭೂಷಣ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ADVERTISEMENT

‘ಸರ್ಕಾರ ಪಾವತಿಸಿದ ಮೊತ್ತವು ವಿಮಾ ಕಂಪನಿಗಳು ನೀಡಿದ ವಿಮೆ ಹಣದ ಶೇ 85ಕ್ಕಿಂತ ಕಡಿಮೆ ಇದ್ದರೆ ಉಳಿಕೆ ಹಣವನ್ನು ಹಿಂದಿರುಗಿಸಬೇಕು ಎಂಬ ಪ್ರಸ್ತಾವ ಇದೆ. ವಿಮಾ ಕಂಪನಿಗಳು ಅತಿಯಾದ ಲಾಭ ಗಳಿಸುವುದನ್ನು ಇದು ತಡೆಯುತ್ತದೆ’ ಎಂದು ಭೂಷಣ್‌ ಹೇಳಿದ್ದಾರೆ.

ಜಗತ್ತಿನ ಅತ್ಯಂತ ದೊಡ್ಡ ಆರೋಗ್ಯ ರಕ್ಷಣಾ ಯೋಜನೆ ಎಂದು ಹೇಳಲಾಗುತ್ತಿರುವ ‘ಎನ್‌ಎಚ್‌ಪಿಎಂ’ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ₹5 ಲಕ್ಷ ವಿಮೆ ಒದಗಿಸಲಾಗುವುದು. ಬಡ ಮತ್ತು ದುರ್ಬಲ ವರ್ಗಗಳಿಗೆ ಸೇರಿದ 10 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಯೋಜನೆಯಿಂದ ಪ್ರಯೋಜನ ಆಗಲಿದೆ ಎಂದು ಲೆಕ್ಕ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.