ವಾಷಿಂಗ್ಟನ್ (ಪಿಟಿಐ): ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟು ಉಲ್ಬಣಗೊಂಡಿರುವುದು ಮತ್ತು ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಆರ್ಥಿಕ ವೃದ್ಧಿ ದರ (ಜಿಡಿಪಿ) ಕುಸಿಯುತ್ತಿರುವುದರಿಂದ 2012-13ನೇ ಸಾಲಿನಲ್ಲಿ ಜಾಗತಿಕ ಆರ್ಥಿಕತೆಯು ಶೇ 2.5ಕ್ಕೆ ಕುಸಿತ ಕಾಣಲಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.
ಈ ವರ್ಷಾಂತ್ಯಕ್ಕೆ ಜಾಗತಿಕ ಆರ್ಥಿಕತೆಯು ಶೇ 3.6ಕ್ಕೆ ಚೇತರಿಸಿಕೊಳ್ಳಲಿದೆ ಎಂದು ವಿಶ್ವಬ್ಯಾಂಕ್ ಈ ಮೊದಲು ಹೇಳಿತ್ತು. ಆದರೆ, ಅಂತರರಾಷ್ಟ್ರೀಯ ಸಂಗತಿಗಳು ಪ್ರತಿಕೂಲವಾಗಿರುವ ಹಿನ್ನೆಲೆಯಲ್ಲಿ, ಗರಿಷ್ಠ ವರಮಾನ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವೃದ್ಧಿ ದರ ಗಣನೀಯವಾಗಿ ಕುಸಿಯಲಿದೆ. ಸದ್ಯ ಇಡೀ ಜಗತ್ತು ಅತ್ಯಂತ ಕ್ಲಿಷ್ಠಕರ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿದೆ ಎಂದು ತನ್ನ `ಜಾಗತಿಕ ಆರ್ಥಿಕ ಮುನ್ನೋಟ~ ವರದಿಯಲ್ಲಿ ತಿಳಿಸಿದೆ.
ಪ್ರವರ್ಧಮಾನಕ್ಕೆ ಬರುತ್ತಿರುವ ಹಲವು ದೇಶಗಳಲ್ಲಿ ಸಾಲದ ಮೇಲಿನ ಬಡ್ಡಿ ದರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿದೆ. ಹಣದುಬ್ಬರ, ಕೈಗಾರಿಕೆ ಪ್ರಗತಿ ಕುಸಿತದಿಂದ ಷೇರುಪೇಟೆಗಳಲ್ಲಿ ತೀವ್ರ ಏರಿಳಿತ ಮುಂದುವರೆದಿದೆ. ಹೊಸ ಹೂಡಿಕೆಗಳು ತಗ್ಗಿವೆ. ಭಾರತ, ರಷ್ಯಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಆರ್ಥಿಕ ಪ್ರಗತಿಯು ಕುಂಠಿತವಾಗುತ್ತಿದೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.