ADVERTISEMENT

ಆರ್ಥಿಕ ಸುಧಾರಣಾ ಕ್ರಮ ಚಿದಂಬರಂ ಮಾತುಕತೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST
ಆರ್ಥಿಕ ಸುಧಾರಣಾ ಕ್ರಮ  ಚಿದಂಬರಂ ಮಾತುಕತೆ
ಆರ್ಥಿಕ ಸುಧಾರಣಾ ಕ್ರಮ ಚಿದಂಬರಂ ಮಾತುಕತೆ   

ಮುಂಬೈ (ಪಿಟಿಐ): ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಶನಿವಾರ ಇಲ್ಲಿ ಭಾರತೀಯ ರಿವರ್ಸ್ ಬ್ಯಾಂಕ್ (ಆರ್‌ಬಿಐ) ಮತ್ತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಹಿರಿಯ ಅಧಿಕಾರಿಗಳ ಜತೆ ಆರ್ಥಿಕ ಸುಧಾರಣಾ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ (ಆಗಸ್ಟ್ 1) ನಂತರ ಮೊದಲ ಬಾರಿಗೆ ಮುಂಬೈಗೆ ಭೇಟಿ ನೀಡಿದ ಅವರು, `ಆರ್‌ಬಿಐ~ ಗವರ್ನರ್ ಡಿ. ಸುಬ್ಬರಾವ್,  ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅರವಿಂದ್ ಮಯರಾಂ, ಡಿ.ಕೆ. ಮಿತ್ತಲ್ ಮತ್ತು ಜಂಟಿ ಕಾರ್ಯದರ್ಶಿ ಅನೂಪ್‌ವಾಧ್ವಾನ್ ಜತೆಗೆ ಕಳೆದ ಮೂರು ವಾರಗಳಿಂದ ಸರ್ಕಾರ ತೆಗೆದುಕೊಂಡಿರುವ ಸರಣಿ ಆರ್ಥಿಕ ಸುಧಾರಣಾ  ಕ್ರಮಗಳ ಕುರಿತು ಮಾತುಕತೆ ನಡೆಸಿದರು.

ಅಕ್ಟೋಬರ್ 30ರಂದು `ಆರ್‌ಬಿಐ~ ಅರ್ಧವಾರ್ಷಿಕ ಹಣಕಾಸು ನೀತಿ ಪ್ರಕಟಿಸಲಿದ್ದು, ಈ ಹಿನ್ನೆಲೆಯಲ್ಲಿ ಚಿದಂಬರಂ ನಡೆಸಿದ ಸಭೆ ಮಹತ್ವ ಪಡೆದುಕೊಂಡಿದೆ. `ಆರ್‌ಬಿಐ~  ಅಧಿಕಾರಿಗಳ ಜತೆಗಿನ ಮಾತುಕತೆ ನಂತರ,  ಚಿದಂಬರಂ `ಸೆಬಿ~ ಕಚೇರಿಗೆ ಭೇಟಿ ನೀಡಿ ನಿರ್ದೇಶಕ ಮಂಡಳಿ ಜತೆ ಚರ್ಚೆ ನಡೆಸಿದರು.

ಚಿಲ್ಲರೆ, ವಿಮಾನಯಾನ, ವಿಮೆ ಮತ್ತು ಪಿಂಚಣಿ ವಲಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮಿತಿ ಹೆಚ್ಚಿಸಲಾಗಿದ್ದು, ಇದರಿಂದ ಸಾಂಸ್ಥಿಕ ಹೂಡಿಕೆದಾರರ ಚಟುವಟಿಕೆ ಹೆಚ್ಚಿದೆ. ಇದರ ಜತೆಗೆ ತೆರಿಗೆ ತಪ್ಪಿಸುವ ಪ್ರವೃತ್ತಿ ತಡೆ ಸಾಮಾನ್ಯ ನಿಯಮಕ್ಕೆ (ಜಿಎಎಆರ್) ಸಂಬಂಧಿಸಿದಂತೆ ಪಾರ್ಥಸಾರಥಿ ಶೋಮ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ಅಂತಿಮ ವರದಿ ಸಲ್ಲಿಸಿದೆ.  ಈ ಎಲ್ಲ ಸಂಗತಿಗಳ ಕುರಿತು ಚಿದಂಬರಂ  `ಸೆಬಿ~ ನಿರ್ದೇಶಕ ಮಂಡಳಿ ಜತೆ ಮಾತುಕತೆ ನಡೆಸಿದರು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಜತೆಗೂ ಚಿದಂಬರಂ ಚರ್ಚೆ ನಡೆಸಿದ್ದು, `ಜಿಎಎಆರ್~ ಮೂಲಕ ಜಾರಿಗೊಳಿಸಲು ಉದ್ದೇಶಿಸಿದ್ದ  `ಮರು ತೆರಿಗೆ~ ಮುಂದೂಡುವ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.