ADVERTISEMENT

`ಆರ್ಸೆಲರ್ ಮಿತ್ತಲ್'ಗೆ 78ಕೋಟಿ ಡಾಲರ್ ನಷ್ಟ

2ನೇ ತ್ರೈಮಾಸಿಕ; ಉಕ್ಕು ಮಾರಾಟ ಕುಸಿತ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ನವದೆಹಲಿ(ಪಿಟಿಐ): ಉಕ್ಕು ತಯಾರಿಕೆ ಕ್ಷೇತ್ರದಲ್ಲಿ ವಿಶ್ವದಲ್ಲೇ ಅತಿದೊಡ್ಡ ಕಂಪೆನಿ ಎನಿಸಿಕೊಂಡಿರುವ, ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಒಡೆತನದ  `ಆರ್ಸೆಲರ್ ಮಿತ್ತಲ್' ಕಂಪೆನಿ ಈ ಸಾಲಿನ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ನಿವ್ವಳ 78 ಕೋಟಿ ಅಮೆರಿಕನ್ ಡಾಲರ್(ಸುಮಾರು ರೂ4680 ಕೋಟಿ)ಗಳಷ್ಟು ನಷ್ಟ ಅನುಭವಿಸಿದೆ.

ವರ್ಷದ ಪ್ರಥಮಾರ್ಧದಲ್ಲಿ ಉಕ್ಕು ಮಾರಾಟ ತಗ್ಗಿದ್ದರಿಂದ ಹಾಗೂ ಸರಕಿಗೆ ನಿಗದಿಪಡಿಸಿದ ಲಾಭ ಪ್ರಮಾಣವೂ ಕಡಿಮೆ ಇದ್ದುದರಿಂದ ನಷ್ಟ ಅನುಭವಿಸಬೇಕಾಯಿತು ಎಂದು ಹೇಳಿರುವ ಕಂಪೆನಿ, ವರ್ಷದ ದ್ವಿತೀಯಾರ್ಧ ಸುಧಾರಿಸಿಕೊಂಡು ಉತ್ತಮ ಸಾಧನೆ ತೋರುವ ವಿಶ್ವಾಸ ವ್ಯಕ್ತಪಡಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ `ಆರ್ಸೆಲರ್ ಮಿತ್ತಲ್' ಕಂಪೆನಿ 101.6 ಕೋಟಿ ಡಾಲರ್(ಸುಮಾರು ರೂ5588 ಕೋಟಿ) ನಿವ್ವಳ ಲಾಭ ಗಳಿಸಿದ್ದಿತು.

`2013ನೇ ಸಾಲಿನ ಎರಡನೇ ತ್ರೈಮಾಸಿಕ (ಏಪ್ರಿಲ್-ಜೂನ್) ಅವಧಿಯಲ್ಲಿ ಜಾಗತಿಕ ಉಕ್ಕು ಮಾರುಕಟ್ಟೆ ಪರಿಸ್ಥಿತಿ ಅಷ್ಟೇನೂ ಅನುಕೂಲಕಾರಿಯಾಗಿರಲಿಲ್ಲ' ಎಂದಿರುವ ಕಂಪೆನಿ ಅಧ್ಯಕ್ಷ ಲಕ್ಷ್ಮಿ ಮಿತ್ತಲ್, ಮುಂಬರುವ ತ್ರೈಮಾಸಿಕಗಳು ಆಶಾದಾಯಕವಾಗಿವೆ ಎಂದಿದ್ದಾರೆ.

ಯೂರೋಪ್ ಉಕ್ಕು ಮಾರುಕಟ್ಟೆ ಈ ವರ್ಷದ ದ್ವಿತೀಯಾರ್ಧದಲ್ಲಿ ಹೆಚ್ಚಿನ ಬೇಡಿಕೆ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಹಾಗಾಗಿ ಸಕಾರಾತ್ಮಕ ಫಲಿತಾಂಶವನ್ನು 4ನೇ ತ್ರೈಮಾಸಿಕದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ನಿರೀಕ್ಷಿಸಬಹುದಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.