ನವದೆಹಲಿ(ಐಎಎನ್‌ಎಸ್): ವಿಶ್ವದಲ್ಲೇ ಅತಿ ಹೆಚ್ಚು ಉಕ್ಕು ತಯಾರಿಸುವ `ಆರ್ಸೆಲರ್ ಮಿತ್ತಲ್~ ಕಂಪೆನಿ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ 3ನೇ ತ್ರೈಮಾಸಿಕದಲ್ಲಿ 70.90 ಕೋಟಿ ಡಾಲರ್(ರೂ. 3828 ಕೋಟಿ) ನಿವ್ವಳ ನಷ್ಟ ಅನುಭವಿಸಿದೆ.
2012ರ 2ನೇ ತ್ರೈಮಾಸಿಕದಲ್ಲಿ 95.90 ಕೋಟಿ ಡಾಲರ್(ರೂ. 5178 ಕೋಟಿ) ನಿವ್ವಳ ಲಾಭ ಗಳಿಸಿದ್ದ ಕಂಪೆನಿ, ನಂತರದ ಮೂರು ತಿಂಗಳಲ್ಲಿ ನಷ್ಟ ಕಾಣುವಂತಾಗಿದೆ.
ವಿಶ್ವದ ಕೆಲವು ದೇಶಗಳಲ್ಲಿನ ಆರ್ಥಿಕ ಹಿಂಜರಿತ ಪರಿಣಾಮವಾಗಿ, ಅದರಲ್ಲೂ ಚೀನಾದಲ್ಲಿನ ಮಂದಗತಿ ಪ್ರಗತಿಯಿಂದಾಗಿ ವಹಿವಾಟು ತಗ್ಗಿತು. ಕಬ್ಬಿಣದ ಅದಿರು ಬೆಲೆಯೂ ಕಡಿಮೆ ಆಗಿದೆ. ಇದೆಲ್ಲ ಅಂಶವೂ ನಷ್ಟಕ್ಕೆ ಕಾರಣವಾಯಿತು ಎಂದು ಲುಕ್ಸೆಂಬರ್ಗ್ ಮೂಲದ ಉಕ್ಕು ಕಂಪೆನಿ ಹೇಳಿದೆ.
2012ನೇ ಸಾಲಿನ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕಂಪೆನಿ 1972 ಕೋಟಿ ಡಾಲರ್(ರೂ. 1.06 ಲಕ್ಷ ಕೋಟಿ) ಮೌಲ್ಯದ ಉಕ್ಕು ಉತ್ಪನ್ನಗಳನ್ನಷ್ಟೇ ಮಾರಾಟ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆರ್ಸೆಲರ್ ಮಿತ್ತಲ್ ಉಕ್ಕು ಮಾರಾಟದಿಂದ ಒಟ್ಟು 2421 ಕೋಟಿ ಡಾಲರ್(ರೂ. 1.31 ಲಕ್ಷ ಕೋಟಿ) ವರಮಾನ ಗಳಿಸಿದ್ದಿತು.
`2012ರಲ್ಲಿನ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಚೀನಾದಲ್ಲಿನ ಋಣಾತ್ಮಕ ಪರಿಸ್ಥಿತಿ ನಮ್ಮ ಕಂಪೆನಿಯ 3ನೇ ತ್ರೈಮಾಸಿಕದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಈಗಿನ ಸಂದರ್ಭ ಭಾರಿ ಸವಾಲಿನದಾಗಿದೆ.
ಇದೇ ಪರಿಸ್ಥಿತಿ 4ನೇ ತ್ರೈಮಾಸಿಕದಲ್ಲೂ ಮುಂದುವರಿಯಬಹುದು~ ಎಂದು ಆರ್ಸೆಲರ್ ಮಿತ್ತಲ್ ಸಮೂಹದ ಅಧ್ಯಕ್ಷ ಲಕ್ಷ್ಮಿ ಎನ್.ಮಿತ್ತಲ್ ಪ್ರತಿಕ್ರಿಯಿಸಿದ್ದಾರೆ.
ಇಂಥ ಸವಾಲಿನ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ನಗದು ಸಾಲದ ಪ್ರಮಾಣ ತಗ್ಗಿಸಿಕೊಳ್ಳಬೇಕಿದೆ. ಸ್ಥಿರಾಸ್ತಿಗಳನ್ನು ನಗದಾಗಿ ಪರಿವರ್ತಿಸಿಕೊಳ್ಳಬೇಕಿದೆ. ಉಕ್ಕು ತಯಾರಿಕೆ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳಬೇಕಿದೆ ಎಂದು ಅವರು ಕಂಪೆನಿ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ವಿವರ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.