ADVERTISEMENT

ಆಸ್ಪತ್ರೆಗಳಿಗೆ ಸೇವಾ ತೆರಿಗೆ: ಸಾಮಾನ್ಯರಿಗೆ ತೊಂದರೆ ಇಲ್ಲ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 18:30 IST
Last Updated 8 ಮಾರ್ಚ್ 2011, 18:30 IST

ನವದೆಹಲಿ (ಪಿಟಿಐ): ಆರೋಗ್ಯ ರಕ್ಷಣೆ ಸೇವೆಗಳ ಮೇಲೆ ಶೇ 5ರಷ್ಟು ಸೇವಾ ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ಆಲೋಚನೆಯು ಜನಸಾಮಾನ್ಯರಿಗೆ ಯಾವುದೇ ಬಗೆಯಲ್ಲಿಯೂ ತೊಂದರೆ ಉಂಟು ಮಾಡಲಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

‘25ಕ್ಕಿಂತ ಹೆಚ್ಚಿನ ಹಾಸಿಗೆಗಳನ್ನು ಒಳಗೊಂಡ ಕೇಂದ್ರೀಕೃತ ಏರ್‌ಕಂಡೀಷನ್ (ಸೆಂಟ್ರಲಿ ಎಸಿ) ಸೌಲಭ್ಯ ಹೊಂದಿರುವ ಖಾಸಗಿ ಆಸ್ಪತ್ರೆಗಳನ್ನು ಮಾತ್ರ ಈ ಸೇವಾ ತೆರಿಗೆ ವ್ಯಾಪ್ತಿಗೆ ತರಲಾಗುತ್ತಿದೆ. ಆರೋಗ್ಯ ಸೇವೆಯನ್ನು ತೆರಿಗೆ ಜಾಲಕ್ಕೆ ತರುವುದು ನಮ್ಮ ಉದ್ದೇಶವಾಗಿದೆ. ಇದರಿಂದ ಶ್ರೀಸಾಮಾನ್ಯರಿಗೆ ಯಾವುದೇ ಅನಾನುಕೂಲ ಆಗಲಾರದು’ಎಂದು ಕೇಂದ್ರೀಯ ಅಬಕಾರಿ ಮತ್ತು ಸೀಮಾಸುಂಕ ಮಂಡಳಿ ಅಧ್ಯಕ್ಷ  ಎಸ್. ಡಿ. ಮಜುಂದಾರ್ ಅಭಿಪ್ರಾಯಪಟ್ಟಿದ್ದಾರೆ. 

 ಬಜೆಟ್‌ಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.ಕಾಯಿಲೆಪೀಡಿತರನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಅತ್ಯಾಧುನಿಕ ಸೌಲಭ್ಯಗಳ ಖಾಸಗಿ ಆಸ್ಪತ್ರೆಗಳಲ್ಲಿನ ಎಲ್ಲ ಬಗೆಯ ಸೇವೆಗಳ ಮೇಲೆ ಶೇ 5ರಷ್ಟು ಸೇವಾ ತೆರಿಗೆ ವಿಧಿಸಲು 2011-12ನೇ ಸಾಲಿನ ಮುಂಗಡ ಪತ್ರದಲ್ಲಿ ಉದ್ದೇಶಿಸಲಾಗಿದೆ. ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳು (ಮುನಸಿಪಾಲ್ಟಿ) ನಿರ್ವಹಿಸುವ ಆಸ್ಪತ್ರೆಗಳನ್ನು ಈ ತೆರಿಗೆ ವ್ಯಾಪ್ತಿಗೆ ತರಲಾಗಿಲ್ಲ.

ಕೈಬಿಡಲು ಒತ್ತಾಯ: ಇದೊಂದು ‘ದುರ್ಗತಿಯ ತೆರಿಗೆ’ ಎಂದು ಟೀಕಿಸಿರುವ ಖಾಸಗಿ ಆಸ್ಪತ್ರೆಗಳು, ಉದ್ದೇಶಿತ ಪ್ರಸ್ತಾವ ಕೈಬಿಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.ತನ್ನ ನಾಗರಿಕರ ಸಂಕಟವನ್ನೇ ವರಮಾನ ಮೂಲವನ್ನಾಗಿ ಮಾಡಿಕೊಂಡಿರುವ ಸರ್ಕಾರದ ನಿರ್ಧಾರವು, ಈ ಹಿಂದೆ ಬ್ರಿಟಿಷರು ಮುಗ್ಧ ನಾಗರಿಕರ ಮೇಲೆ ‘ಉಪ್ಪಿನ ತೆರಿಗೆ’ ಹೇರಿದ್ದನ್ನು ನೆನಪಿಸುತ್ತದೆ. ಇದೊಂದು 21ನೇ ಶತಮಾನದ ಉಪ್ಪಿನ ತೆರಿಗೆ ಮತ್ತು ಅನಾರೋಗ್ಯಕರ ತೆರಿಗೆಯೂ ಆಗಿದೆ ಎಂದು ಖಾಸಗಿ ಆಸ್ಪತ್ರೆಗಳು ಟೀಕಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.