ADVERTISEMENT

ಆಹಾರ ಹಣದುಬ್ಬರ ಇನ್ನಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2011, 19:30 IST
Last Updated 3 ನವೆಂಬರ್ 2011, 19:30 IST
ಆಹಾರ ಹಣದುಬ್ಬರ ಇನ್ನಷ್ಟು ಏರಿಕೆ
ಆಹಾರ ಹಣದುಬ್ಬರ ಇನ್ನಷ್ಟು ಏರಿಕೆ   

ನವದೆಹಲಿ (ಪಿಟಿಐ): ಆಹಾರ ಧಾನ್ಯಗಳ ಬೆಲೆ ಏರಿಕೆಯು ಅಕ್ಟೋಬರ್ 22ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಶೇ 12.21ರಷ್ಟಾಗಿದ್ದು, 9 ತಿಂಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ತಲುಪಿದೆ.

ತರಕಾರಿ, ಬೇಳೆಕಾಳು ಮತ್ತು ಹಾಲು   ತುಟ್ಟಿಯಾಗಿರುವುದರಿಂದ ಆಹಾರ ಹಣದುಬ್ಬರವು ಹಿಂದಿನ ವಾರದ ಶೇ 11.43ಕ್ಕೆ ಹೋಲಿಸಿದರೆ  ಶೇ 0.78ರಷ್ಟು ಏರಿಕೆ ದಾಖಲಿಸಿದೆ.  ಕಳೆದ ವರ್ಷದ ಇದೇ ಅವಧಿಯಲ್ಲಿ  ಶೇ 13.55ರಷ್ಟು ಮತ್ತು  ಈ ವರ್ಷದ ಜನವರಿ 29ರಲ್ಲಿ  ಶೇ 12.94ರಷ್ಟಿತ್ತು.

ಪ್ರಣವ್ ಆತಂಕ: ಇದೊಂದು ತುಂಬ ಕಳವಳಕಾರಿ ಬೆಳವಣಿಗೆ. ಬೆಲೆಗಳು ಇನ್ನಷ್ಟು ಹೆಚ್ಚಬಹುದು. ಆಹಾರ ಹಣದುಬ್ಬರವು ಎರಡಂಕಿಯ ಅಪಾಯಕಾರಿ ಹಂತ ದಾಟಿ ಮುನ್ನಡೆಯುತ್ತಿದೆ. ಹಬ್ಬ ಹರಿದಿನಗಳಲ್ಲಿ ಬೇಡಿಕೆ ಹೆಚ್ಚಿದ ಕಾರಣಕ್ಕೆ ಹಣದುಬ್ಬರ ಗರಿಷ್ಠ ಮಟ್ಟದ ಏರಿಕೆ ಕಂಡಿದ್ದರೂ, ಒಟ್ಟಾರೆ ವಿದ್ಯಮಾನವು ಕಳವಳಕಾರಿಯಾಗಿದೆ  ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, ತರಕಾರಿ ಶೇ 29, ಬೇಳೆಕಾಳು, ಹಣ್ಣು ಮತ್ತು  ಹಾಲು ಶೇ 12ರಷ್ಟು ತುಟ್ಟಿಯಾಗಿವೆ. ಮೊಟ್ಟೆ, ಮಾಂಸ ಮತ್ತು ಮೀನು ಕೂಡ ಶೇ 13ರಷ್ಟು ದುಬಾರಿಯಾಗಿವೆ.  ಈರುಳ್ಳಿ ಶೇ 20, ಗೋಧಿ ಶೇ 1.54ರಷ್ಟು ಅಗ್ಗವಾಗಿವೆ.

ವಾರದ ಆಧಾರದಲ್ಲಿ, ಒಟ್ಟಾರೆ ಪ್ರಾಥಮಿಕ ಸರಕುಗಳ ಹಣದುಬ್ಬರವು ಶೇ 12.08ರಷ್ಟು ಏರಿಕೆಯಾಗಿದೆ. ಸಗಟು ಬೆಲೆ ಸೂಚ್ಯಂಕದಲ್ಲಿ ಪ್ರಾಥಮಿಕ ಸರಕುಗಳು ಶೇ 20ರಷ್ಟು ಪಾಲು ಹೊಂದಿವೆ.

ನಾರು, ಎಣ್ಣೆ ಬೀಜ ಮತ್ತು ಖನಿಜ ಸೇರಿದಂತೆ ಆಹಾರೇತರ ಸರಕುಗಳ ಹಣದುಬ್ಬರವು ಶೇ 6.43ರಷ್ಟಾಗಿದೆ. ಇದು ಅಕ್ಟೋಬರ್ 15ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಶೇ 7.67ರಷ್ಟಿತ್ತು.

ಇಂಧನ ಮತ್ತು ವಿದ್ಯುತ್ ಹಣದುಬ್ಬರವು ಹಿಂದಿನ ವಾರದ ಶೇ 14.70ಕ್ಕೆ ಹೋಲಿಸಿದರೆ ಶೇ 14.50ರಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.