ADVERTISEMENT

ಆಹಾರ ಹಣದುಬ್ಬರ ಕುಸಿತ

​ಪ್ರಜಾವಾಣಿ ವಾರ್ತೆ
Published 30 ಜೂನ್ 2011, 19:30 IST
Last Updated 30 ಜೂನ್ 2011, 19:30 IST
ಆಹಾರ ಹಣದುಬ್ಬರ ಕುಸಿತ
ಆಹಾರ ಹಣದುಬ್ಬರ ಕುಸಿತ   

ನವದೆಹಲಿ (ಪಿಟಿಐ): ತರಕಾರಿ, ಬೇಳೆಕಾಳು ಮತ್ತು ಆಲೂಗಡ್ಡೆ ಅಗ್ಗವಾದ ಕಾರಣಕ್ಕೆ ಜೂನ್ 18ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರವು ಶೇ 7.7ಕ್ಕೆ ಇಳಿದಿದ್ದು, ಗ್ರಾಹಕರು ಮತ್ತು  ಯೋಜನೆಗಳ ನೀತಿ ನಿರೂಪಕರಿಗೆ ಕೊಂಚ ಮಟ್ಟಿಗೆ ಸಮಾಧಾನ ತಂದಿದೆ.

 ಸಗಟು ಬೆಲೆ ಸೂಚ್ಯಂಕ ಆಧರಿಸಿ ಅಳೆಯಲಾಗುವ ಆಹಾರ ಹಣದುಬ್ಬರವು, ಹಿಂದಿನ ವಾರ ಶೇ 9.13ರಷ್ಟಿತ್ತು. 2010ರ ಇದೇ ಅವಧಿಯಲ್ಲಿ ಇದು ಶೇ 20ರಷ್ಟು ದಾಖಲಾಗಿತ್ತು.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಈ 7 ದಿನಗಳ ಪರಾಮರ್ಶೆ ಅವಧಿಯಲ್ಲಿ ತರಕಾರಿಗಳು ಶೇ 10, ಬೇಳೆಕಾಳು ಶೇ 9.50, ಆಲೂಗಡ್ಡೆ ಶೇ 2.39ರಷ್ಟು ಅಗ್ಗವಾಗಿವೆ.  ಇತರ ಆಹಾರ ಪದಾರ್ಥಗಳ ಬೆಲೆ ಮಟ್ಟ ದುಬಾರಿ ಮಟ್ಟದಲ್ಲಿಯೇ ಇದ್ದರೂ, ಈ ನಿರ್ದಿಷ್ಟ ವಾರದಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವು ಮೇ 7ಕ್ಕೆ ಕೊನೆಗೊಂಡ ವಾರಾಂತ್ಯದ ನಂತರ (ಒಂದೂವರೆ ತಿಂಗಳ) ಅತಿ ಕಡಿಮೆ ಪ್ರಮಾಣದಲ್ಲಿ ಇದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯು ವಾರದಿಂದ ವಾರಕ್ಕೆ ಶೇ 1.35ರಷ್ಟು ಕಡಿಮೆಯಾಗಿರುವುದು ನಾಲ್ಕೂವರೆ ತಿಂಗಳಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಇದೆ. ಫೆಬ್ರುವರಿ ಮೊದಲ ವಾರದಲ್ಲಿ ಇದು ಶೇ 2ರಷ್ಟು ಕಡಿಮೆಯಾಗಿತ್ತು.

ಜೂನ್ 18ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಹಣ್ಣುಗಳ ಬೆಲೆ ಶೇ 24.76, ಮೊಟ್ಟೆ, ಮಾಂಸ ಮತ್ತು ಮೀನು ಶೇ 10.32, ಈರುಳ್ಳಿ ಶೇ 16.08 ಮತ್ತು ದವಸಧಾನ್ಯಗಳು ಶೇ 4.76ರಷ್ಟು ತುಟ್ಟಿಯಾಗಿವೆ. ಸರ್ಕಾರ ಇತ್ತೀಚೆಗೆ ಡೀಸೆಲ್, ಸೀಮೆಎಣ್ಣೆ ಬೆಲೆ ಹೆಚ್ಚಿಸಿರುವುದೂ ಇಲ್ಲಿ ಪ್ರತಿಫಲನಗೊಂಡಿದ್ದು, ಇಂಧನ ಮತ್ತು ವಿದ್ಯುತ್ ವರ್ಷದಿಂದ ವರ್ಷಕ್ಕೆ ಶೇ 12.98ರಷ್ಟು ತುಟ್ಟಿಯಾಗಿವೆ. ಮುಂಬರುವ ದಿನಗಳಲ್ಲಿ ಸಮಗ್ರ ಹಣದುಬ್ಬರವು ಆಹಾರ ಪದಾರ್ಥಗಳ ಬೆಲೆ ಏರಿಕೆಗಿಂತ ಜಾಗತಿಕ ಸರಕುಗಳ ಬೆಲೆಗಳನ್ನೆ ಹೆಚ್ಚಾಗಿ ಅವಲಂಬಿಸಿರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಅಭಿಪ್ರಾಯಪಟ್ಟಿದೆ.

ಹಿಂದಿನ ವರ್ಷ ಆಹಾರ ಬೆಲೆ ಏರಿಕೆಯು ಎರಡಂಕಿಯಲ್ಲಿ ಮುಂದುವರೆದಿತ್ತು. ಈ ವರ್ಷದ ಮಾರ್ಚ್ ತಿಂಗಳಿನಿಂದೀಚೆಗೆ  ಇಳಿಕೆ ದಾಖಲಿಸಿದ್ದರೂ ಮೇ ತಿಂಗಳ ಮಧ್ಯಭಾಗದಿಂದ ಮತ್ತೆ ಏರಿಕೆ ದಾಖಲಿಸತೊಡಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.