ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪೆನಿ ‘ಇನ್ಫೊಸಿಸ್’ ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್–ಡಿಸೆಂಬರ್) ಮಾರುಕಟ್ಟೆ ನಿರೀಕ್ಷೆಗಿಂತ ಉತ್ತಮ ಪ್ರಗತಿ ಸಾಧಿಸಿದೆ.
ಬೆಂಗಳೂರು ಮೂಲದ ಕಂಪೆನಿಯ ನಿವ್ವಳ ಲಾಭ ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿ ₹3,250 ಕೋಟಿಗಳಿಂದ ₹3,465 ಕೋಟಿಗಳಿಗೆ ಅಂದರೆ ಶೇ 6.6ರಷ್ಟು ಏರಿಕೆಯಾಗಿದೆ.
ಆಡಳಿತದಲ್ಲಿ ಹೊಸತನ ಮತ್ತು ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಉತ್ತೇಜನಕಾರಿ ಫಲಿತಾಂಶ ಬಂದಿದೆ. ಸ್ಥಿರವಾದ ಲಾಭದಾಯಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಕಂಪೆನಿ ಸಿಇಒ ವಿಶಾಲ್ ಸಿಕ್ಕಾ ತಿಳಿಸಿದರು.
ವರಮಾನ ವೃದ್ಧಿ: ಕಂಪೆನಿಯ ವರಮಾನವೂ ಈ ಅವಧಿಯಲ್ಲಿ ಶೇ 15ರಷ್ಟು ಹೆಚ್ಚಿದ್ದು, ₹13,796 ಕೋಟಿಗಳಿಂದ ₹15,902 ಕೋಟಿಗಳಿಗೆ ಏರಿಕೆಯಾಗಿದೆ.
ಜುಲೈ–ಸೆಪ್ಟೆಂಬರ್‌ನಲ್ಲಿ ನಿವ್ವಳ ಲಾಭ ₹3,398 ಕೋಟಿಗಳಷ್ಟಿತ್ತು. ಎರಡನೇ ತ್ರೈಮಾಸಿಕದಲ್ಲಿ ವರಮಾನ ಶೇ 1.7ರಷ್ಟು ಪ್ರಗತಿ ಕಂಡು, ₹15,635 ಕೋಟಿಗಳಷ್ಟಾಗಿತ್ತು.
ಕಂಪೆನಿಯ ಒಟ್ಟು ವರಮಾನದಲ್ಲಿ ಶೇ 63ರಷ್ಟು ಪಾಲು ಉತ್ತರ ಅಮೆರಿಕದಿಂದ ಬಂದಿದೆ. ಯೂರೋಪ್ ಶೇ 23.2 ಮತ್ತು ಭಾರತ ಶೇ 2.8ರಷ್ಟು ಕೊಡುಗೆ ನೀಡಿವೆ.
ಕಂಪೆನಿಯ ಮಾರಾಟವು ಮಾರ್ಚ್ 31ರ ಅಂತ್ಯಕ್ಕೆ ಡಾಲರ್ ಮೌಲ್ಯದಲ್ಲಿ ಶೇ 8.9 ರಿಂದ ಶೇ 9.3ರಷ್ಟು ಪ್ರಗತಿ ಸಾಧಿಸುವ ಅಂದಾಜು ಮಾಡಲಾಗಿದೆ. ಕಳೆದ ವರ್ಷ ಶೇ 6.4 ರಿಂದ ಶೇ 8.4ರಷ್ಟಿತ್ತು.
ಸಿಬ್ಬಂದಿ ನಿರ್ಗಮನ ಪ್ರಮಾಣ ಇಳಿಕೆ: ಕಂಪೆನಿ ಬಿಟ್ಟು ಹೋಗುವ ಸಿಬ್ಬಂದಿ ಪ್ರಮಾಣ ತಗ್ಗಿದೆ. 2014ರ ಡಿಸೆಂಬರ್‌ನಲ್ಲಿ ಶೇ 21ರಷ್ಟಿದ್ದ ಪ್ರಮಾಣವು 2015ರ ಸೆಪ್ಟೆಂಬರ್‌ನಲ್ಲಿ ಶೇ 19.9ಕ್ಕೆ ಮತ್ತು ಮೂರನೇ ತ್ರೈಮಾಸಿಕದಲ್ಲಿ ಶೇ 18ಕ್ಕೆ ಇಳಿಕೆಯಾಗಿದೆ.
ಷೇರು ಮೌಲ್ಯ ಏರಿಕೆ: 3ನೇ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ದಿಂದ ಕಂಪೆನಿಯ ಷೇರುಗಳು ಶೇ 5ರಷ್ಟು ಏರಿಕೆ ಕಂಡು, ಪ್ರತಿ ಷೇರಿನ ಬೆಲೆ ₹ 1,135ರಂತೆ ವಹಿವಾಟು ನಡೆಸಿತು.
‘ಇನ್ಫಿ’ಗೆ ಸಚಿವರ ಪತ್ನಿ: ಟೀಕೆ
ನವದೆಹಲಿ (ಪಿಟಿಐ): ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ಪತ್ನಿ ಡಾ. ಪುನಿತಾ ಕುಮಾರ್ ಸಿನ್ಹಾ ಅವರನ್ನು ಇನ್ಫೊಸಿಸ್ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರನ್ನಾಗಿ ಗುರುವಾರ ನೇಮಕ ಮಾಡಲಾಗಿದೆ.
ಇನ್ಫೊಸಿಸ್‌ನ ಈ ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ಕೇಳಿಬಂದಿವೆ.
ಹಲವಾರು ಹಣಕಾಸು ಸಂಸ್ಥೆಗಳಿಗೆ ಸಲಹೆಗಾರ ರಾಗಿರುವ ಅವರು ಸ್ವಂತ ಕಂಪೆನಿಯನ್ನೂ ಹೊಂದಿ ದ್ದಾರೆ. ಇನ್ಫೊಸಿಸ್ 2014–15ರ ವಾರ್ಷಿಕ ವರದಿಯ ಅನ್ವಯ ಸ್ವತಂತ್ರ ನಿರ್ದೇಶಕರಿಗೆ ಪ್ರತಿ ವರ್ಷ ಒಂದು ಕೋಟಿ ರೂಪಾಯಿ ಗೌರವಧನ ನೀಡಲಾಗುತ್ತಿದೆ.
ಕೇಂದ್ರ ಸಚಿವರೊಬ್ಬರ ಪತ್ನಿಯನ್ನು ಲಾಭದಾಯಕ ಹುದ್ದೆಗೆ ನೇಮಕ ಮಾಡಿರುವುದು ಹಿತಾಸಕ್ತಿ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಟ್ವೀಟ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.